Thursday, June 13, 2024

ಸತ್ಯ | ನ್ಯಾಯ |ಧರ್ಮ

ಸಂಪರ್ಕ ಕ್ರಾಂತಿಯ ಹರಿಕಾರ ರಾಜೀವ ಗಾಂಧಿ

‘ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕದ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವಶಾಸ್ತ್ರ, ರಾಜಕೀಯ ಅಥವಾ ಇತಿಹಾಸದ ಪುಸ್ತಕಗಳು ಅಲ್ಲಿರಲಿಲ್ಲ. ಆ ಜಾಗವನ್ನು ಸಂಗೀತದ ಆಸಕ್ತಿ ತುಂಬಿತ್ತು’.ಹೀಗೆಂದು ಮಾಜಿ ಪ್ರಧಾನಿ ರಾಜೀವ ಗಾಂಧಿಯವರನ್ನು ಅವರ ಜನ್ಮದಿನದ ಅಂಗವಾಗಿ ಉದ್ಯಾವರ ನಾಗೇಶ್ ಕುಮಾರ್ ಸ್ಮರಿಸಿದ್ದಾರೆ.

ರಾಜೀವ  ಗಾಂಧಿ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಈ ದೇಶದ ಐಟಿ ಕ್ಷೇತ್ರ. ತಾನು ಪ್ರಧಾನಿಯಾಗಿ ಈ ದೇಶದ ಹೊಣೆಯನ್ನು ಹೊತ್ತ ಸಂದರ್ಭ. ಅದು ಅತ್ಯಂತ ಅಸಹನೀಯ ಹೊತ್ತು. ಪ್ರಧಾನಿಯಾಗಿದ್ದ ತಾಯಿ ಇಂದಿರಾ ಗಾಂಧಿ ತನ್ನದೇ ಅಂಗರಕ್ಷಕರ ಗುಂಡಿಗೆ ಬಲಿಯಾದ ಹೊತ್ತು ಅನಿವಾರ್ಯವಾಗಿ ಪ್ರಧಾನಿ ಹುದ್ದೆಯನ್ನು ವಹಿಸಿ ಕೊಂಡರು. ಆ ನಂತರ ಅವರು ಕಂಡ ಕನಸು ಮಾತ್ರ ಅದು ದೇಶದ ದಿಕ್ಕನ್ನೇ ಬದಲಾಯಿಸುವಂತದ್ದು. ದೇಶವನ್ನು ಇಪ್ಪತ್ತನೇ ಶತಮಾನಕ್ಕೆ ಒಯ್ಯುವುದಕ್ಕಾಗಿ ಸಜ್ಜು ಮಾಡುವ ಗುರುತರ ಜವಾಬ್ದಾರಿ ಅವರದ್ದಾಗಿತ್ತು.ವಿದೇಶದಲ್ಲಿ ಸೇವೆ ಮಾಡುತ್ತಿದ್ದ ಸ್ಯಾಮ್ ಪಿತ್ರೋಡ ಅನ್ನುವ ತಂತ್ರಜ್ಞನನ್ನು ಭಾರತಕ್ಕೆ ಕರೆಸಿಕೊಂಡು ಸಿ ಡಾಟ್ ತಂತ್ರಜ್ಞಾನದ ಮೂಲಕ  ಐಟಿ ಕ್ಷೇತವನ್ನು ಅಭಿವೃದ್ದಿ ಪಡಿಸಲು ಹೆಣಗಿದರು. ಇಂದು ಡಿಜಿಟಲ್ ಇಂಡಿಯಾ ಎಂದು ಬೊಬ್ಬಿಡುವ ಸರಕಾರಗಳು ಇದಕ್ಕೆ ಓ ನಾಮ ಬರೆದವರು ರಾಜೀವ ಗಾಂಧಿ ಎನ್ನುವುದನ್ನು‌ ಹೇಳಲು ಜಾಣ ಮರೆವು ತೋರುತ್ತಾರೆ .

 ಶ್ರೀ ರಾಜೀವ ಗಾಂಧಿಯವರು 40ರ ವಯಸ್ಸಿನಲ್ಲಿ ಭಾರತ ದೇಶದ ಪ್ರಧಾನಿಯಾದರು. ಅದು ವಿಶ್ವದ ಸರಕಾರಗಳ ಅತ್ಯಂತ ಕಿರಿಯ  ಆಡಳಿತ ಮುಖ್ಯಸ್ಥರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಷ್ಟೆ ಅಲ್ಲದೆ ನೆಹರೂ ಕುಟುಂಬದ ಮೂರನೇ ತಲೆ ಮಾರಿನ ಪ್ರಧಾನಿ. ಅಜ್ಜ ಪಂಡಿತ್ ಜವಾಹರ್ ಲಾಲ್ ನೆಹರೂರವರು 58ನೇ ವಯಸಿನಲ್ಲಿ  ಪ್ರಧಾನಿಯಾದರೆ, ತಾಯಿ ಇಂದಿರಾ ಗಾಂಧಿ 48 ವಯಸ್ಸಿನಲ್ಲಿ ಪ್ರಧಾನಿಯಾಗಿದ್ದರು.

 ಶ್ರೀ ರಾಜೀವ ಗಾಂಧಿ

ರಾಷ್ಟ್ರದಲ್ಲಿ ಯುವ ಪೀಳಿಗೆಯ ಐಕಾನ್ ಆಗಿದ್ದ ರಾಜೀವ ಗಾಂಧಿಯವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶವನ್ನು ಪಡೆದರು. ತಾಯಿಯ ಮರಣದ ಸಂದಿಗ್ಧ ಕಾಲದಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಾಜೀವ ಗಾಂಧಿ ತಾಯಿಯ ಶೋಕಾಚರಣೆ ಪೂರ್ಣಗೊಂಡ ಕೂಡಲೆ ಹೊಸ ಜನಾದೇಶಕ್ಕಾಗಿ ಲೋಕ ಸಭಾ ಚುನಾವಣೆಗೆ ಆದೇಶ ನೀಡಿದರು. ಅದರ ಫಲವಾಗಿ ಕಾಂಗ್ರೆಸ್ ಪಕ್ಷ 508 ಲೋಕ ಸಭಾ ಸ್ಥಾನಗಳಲ್ಲಿ401 ಸ್ಥಾನವನ್ನು ಪಡೆಯಿತು ಮತ್ತು ಈ ತನಕದ ಚುನಾವಣೆಗಳಿಗಿಂತ  ಕಾಂಗ್ರೆಸ್ ಹೆಚ್ಚಿನ ಪ್ರತಿಶತ ಮತವನ್ನು ಪಡೆಯಿತು.

ಶ್ರೀ  ರಾಜೀವ ಗಾಂಧಿಯವರ ಬಗ್ಗೆ ವಿಶೇಷವಾಗಿ  ಹೇಳುವುದಾದರೆ, ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರ ಎರಡೂ ಸಮಯದಲ್ಲೂ ನಾಲ್ಕು ದಶಕಗಳು ಭಾರತಕ್ಕೆ ಸೇವೆ ಸಲ್ಲಿಸಿದ ರಾಜಕೀಯ ಕುಟುಂಬಕ್ಕೆ ಸೇರಿದ್ದರೂ ಅವರು ರಾಜಕೀಯಕ್ಕೆ ಸೇರಿದ್ದು ತಡವಾಗಿ ಮತ್ತು ಇಷ್ಟವಿಲ್ಲದೆ.

ಶ್ರೀ  ರಾಜೀವ ಗಾಂಧಿ

ರಾಜೀವ್ ಗಾಂಧಿ ಅವರು ಆಗಸ್ಟ್ 20, 1944ರಲ್ಲಿ ಬಾಂಬೆಯಲ್ಲಿ ಜನಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಅವರಿಗೆ ಕೇವಲ ಮೂರು ವರ್ಷ ಹಾಗೂ ಆಗ ಅವರ ತಾತ ಪ್ರಧಾನ ಮಂತ್ರಿಯಾಗಿದ್ದರು. ಅವರ ಕುಟುಂಬ ನವ ದೆಹಲಿಯಿಂದ ಲಕ್ನೋಗೆ ಸ್ಥಳಾಂತರಗೊಂಡಿತ್ತು. ಅವರ ತಂದೆ ಫಿರೋಜ್ ಗಾಂಧಿ ಸಂಸತ್ ಸದಸ್ಯರಾಗಿದ್ದರು ಹಾಗೂ ನಿರ್ಭಯ ಮತ್ತು ಪರಿಶ್ರಮದ ಸಂಸದೀಯ ಪಟು ಎಂಬ ಹೆಸರನ್ನೂ ಪಡೆದಿದ್ದರು.

ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯವರ ಆತಿಥ್ಯಕಾರಿಣಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೀನ್ ಮೂರ್ತಿ ಭವನದಲ್ಲಿ ತಮ್ಮ ತಾತನೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ರಾಜೀವ ಗಾಂಧಿ ಕಳೆದರು. ಡೆಹ್ರಾಡೂನ್ ನಲ್ಲಿ  ಕೆಲಕಾಲ  ವ್ಯಾಸಂಗ ಮಾಡಿದರು. ನಂತರ ಹಿಮಾಲಯದ ತಪ್ಪಲಿನ ಡೂನ್ ವಸತಿ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರು. ಅಲ್ಲಿ ಅವರು ತಮ್ಮ ಜೀವನದ ಅನೇಕ ಆಪ್ತಮಿತ್ರರನ್ನು ಸಂಪಾದಿಸಿದರು. ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ಸಹ ಇದೇ ಶಾಲೆಗೆ ಸೇರಿದರು.

ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ, ಶ್ರೀ ರಾಜೀವ್ ಗಾಂಧಿಯವರು ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿಗೆ ಸೇರಿದರು. ಆದರೆ, ನಂತರ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿಗೆ ಸ್ಥಳಾಂತರಗೊಂಡರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು.

ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕದ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವಶಾಸ್ತ್ರ, ರಾಜಕೀಯ ಅಥವಾ ಇತಿಹಾಸ ಪುಸ್ತಕಗಳು ಅಲ್ಲಿರಲಿಲ್ಲ. ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ಅವರು ಪಾಶ್ಚಿಮಾತ್ಯ ಮತ್ತು ಹಿಂದೂಸ್ತಾನಿ, ಶಾಸ್ತ್ರೀಯ ಹಾಗೆಯೇ ಆಧುನಿಕ ಸಂಗೀತವನ್ನು ತುಂಬಾ ಇಷ್ಟಪಡುತ್ತಿದ್ದರು. ಛಾಯಾಗ್ರಹಣ ಮತ್ತು ಹವ್ಯಾಸಿ ರೇಡಿಯೊದಲ್ಲಿ ಅವರಿಗೆ ವಿಶೇಷ ಆಸಕ್ತಿ ಇತ್ತು.

ಅವರಿಗೆ ತುಂಬಾ ಖುಷಿ ಕೊಡುತ್ತಿದ್ದ ಸಂಗತಿ ಎಂದರೆ ಫ್ಲೈಯಿಂಗ್. ಇಂಗ್ಲೆಂಡ್ ನಿಂದ  ತಾಯ್ನಾಡಿಗೆ ಹಿಂದಿರುಗಿದ ನಂತರ ಅವರು ದೆಹಲಿ ಫ್ಲೈಯಿಂಗ್ ಕ್ಲಬ್ ನ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು ಹಾಗೂ ಕಮರ್ಷಿಯಲ್ ಪೈಲೆಟ್ ಲೈಸನ್ಸ್ ಪಡೆದರು. ಬಳಿಕ ಅವರು ಭಾರತದ ದೇಶೀಯ ವಿಮಾನ ಸಂಸ್ಥೆ ಇಂಡಿಯನ್ ಏರ್ ಲೈನ್ಸ್ ನಲ್ಲಿ ಪೈಲೆಟ್ ಆದರು.

ಕೇಂಬ್ರಿಡ್ಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಇಂಗ್ಲಿಷ್ ಅಧ್ಯಯನ ಮಾಡುತ್ತಿದ್ದ ಇಟೆಲಿಯ ಸೋನಿಯಾ ಮೈನೋ ಅವರನ್ನು ರಾಜೀವ್ ಭೇಟಿಯಾದರು. ಭೇಟಿ ವಿವಾಹದಲ್ಲಿ ಸುಖಾಂತ್ಯವಾಯಿತು. ಬಳಿಕ ನವ ದೆಹಲಿಯಲ್ಲಿ  ಇಂದಿರಾಗಾಂಧಿ ಅವರ ನಿವಾಸದಲ್ಲಿ ನೆಲೆಸಿದ ಆವರಿಗೆ ರಾಹುಲ್ ಮತ್ತು ಪ್ರಿಯಾಂಕ ಎಂಬ ಮಕ್ಕಳಿರುವುದು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.

imege- fpj web desk

1980ರಲ್ಲಿ ಅವರ ಸೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾದ ನಂತರ ಸನ್ನಿವೇಶ ಬದಲಾಯಿತು. ರಾಜಕೀಯ ರಂಗ ಪ್ರವೇಶಿಸಿ ತಾಯಿಯವರಿಗೆ ನೆರವು ನೀಡುವಂತೆ ಶ್ರೀ ಗಾಂಧಿ ಅವರಿಗೆ ಒತ್ತಡಗಳು ಬಂದವು. ನಂತರ ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳು ಎದುರಾದವು. ಮೊದಲಿಗೆ ಈ ಒತ್ತಡಗಳಿಗೆ ಅವರು ಪ್ರತಿರೋಧ ವ್ಯಕ್ತಪಡಿಸಿದ್ದರೂ ಬಳಿಕ ಅವರ ಸಿದ್ಧಾಂತಗಳಿಗೆ  ತಲೆ ಬಾಗಿದರು. ತಮ್ಮ ಸೋದರನ ಸಾವಿನಿಂದ ತೆರವಾದ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು.

 ನವೆಂಬರ್ 1982ರಲ್ಲಿ ಭಾರತವು ಏಷ್ಯನ್ ಕ್ರೀಡಾಕೂಟದ ಆತಿಥ್ಯ ವಹಿಸಿದಾಗ, ಕೆಲವು ವರ್ಷಗಳ ಹಿಂದೆಯೇ ಕ್ರೀಡಾಂಗಣ ನಿರ್ಮಾಣ ಹಾಗೂ ಇತರೆ ಮೂಲಸೌಕರ್ಯಗಳ ವ್ಯವಸ್ಥೆಗೆ ಕೈಗೊಂಡ ಬದ್ಧತೆಯನ್ನು ಪೂರೈಸಲಾಯಿತು. ಸಕಾಲದಲ್ಲಿ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸುವ ಹೊಣೆಯನ್ನು ರಾಜೀವ್ ಗಾಂಧಿ ಅವರಿಗೆ ವಹಿಸಲಾಯಿತು. ಯಾವುದೇ ಅಡೆತಡೆ ಮತ್ತು ಗೊಂದಲಗಳಿಲ್ಲದೇ ಕ್ರೀಡಾಕೂಟಗಳನ್ನು ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು. ಈ ಸವಾಲಿನ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ತಮ್ಮ ಸಾಮರ್ಥ್ಯ ಮತ್ತು ಸುಗಮ ಸಮನ್ವಯತೆಯನ್ನು ಸಾಬೀತು ಮಾಡಿ ತಮ್ಮ ಮೊದಲ ನಾಯಕತ್ವವನ್ನು ಪ್ರದರ್ಶಿಸಿದರು. ಇದೇ ವೇಳೆ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸಮಾನತೆಯೊಂದಿಗೆ ಪಕ್ಷದ ಸಂಘಟನೆಯನ್ನು ಕ್ರಮ ಬದ್ಧಗೊಳಿಸಿದರು. ಈ ಎಲ್ಲ ನಾಯಕತ್ವ ಗುಣಗಳು ಅವರನ್ನು ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನೆಡೆಸುವ ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಯಿತು.

ಶ್ರೀ ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಈ ಎರಡು ಮಹತ್ವದ ಹುದ್ದೆಗಳ ಅಧಿಕಾರ ಪಡೆದಿದ್ದು ದುರಂತದ ಸನ್ನಿವೇಶದಲ್ಲಿ. 31ನೇ ಅಕ್ಟೋಬರ್, 1984ರಲ್ಲಿ ತಮ್ಮ ತಾಯಿಯವರ ಬರ್ಬರ ಹತ್ಯೆ ನಂತರ ಅವರು ವೈಯಕ್ತಿಕ ದು:ಖ ಮತ್ತು ರಾಷ್ಟ್ರದ ಹೊಣೆಯನ್ನು ಸಮತೋಲನ, ಘನತೆ ಮತ್ತು ಸಂಯಮದಿಂದ ನಿಭಾಯಿಸಿದರು.

ಸುದೀರ್ಘ ಚುನಾವಣಾ ಪ್ರಚಾರದ ವೇಳೆ, ಶ್ರೀ ಗಾಂಧಿ ಅವರು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದಣಿವಿಲ್ಲದೇ ಪ್ರವಾಸ ಮಾಡಿದರು. ಅವರು ಭೂಮಿ ಸುತ್ತಳತೆಯ ಒಂದೂವರೆ ಪಟ್ಟುವಿಗೆ ಸಮನಾದ ಅಂತರವನ್ನು ವ್ಯಾಪಿಸಿ ಬಹುತೇಕ ಸ್ಥಳಗಳಲ್ಲಿ 250ಕ್ಕೂ ಸಭೆಗಳನ್ನು ಉದ್ದೇಶಿಸಿ ಮಾತನಾಡಿ, ಲಕ್ಷಾಂತರ ಮಂದಿಯನ್ನು ಭೇಟಿ ಮಾಡಿದರು.

imege- the week desk

ಪ್ರಧಾನಿಯಾಗಿದ್ದಾಗ ದೇಶದಲ್ಲಿ ಐಟಿ ಉದ್ಯಮ, ದೂರ ಸಂಪರ್ಕ  ಕ್ರಾಂತಿ ಮಾಡಿದ ಖ್ಯಾತಿ ರಾಜೀವ ಗಾಂಧಿ ಅವರಿಗೆ ಸಲ್ಲುತ್ತದೆ. ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತ. ರಾಜೀವ ಗಾಂಧಿಯವರು ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರನ್ನು ಭಾರತದ ಫಾದರ್‌ ಆಫ್‌ ಐಟಿ ಮತ್ತು ಟೆಲಿಕಮ್ಯುನಿಕೇಷನ್‌ ಕ್ರಾಂತಿ ಹರಿಕಾರ ಎಂದು ಗುರುತಿಸುವುದು ಅವರ ದೂರದರ್ಶಿತ್ವಕ್ಕೆ ಸಲ್ಲುವ ಗೌರವ ಎಂದೇ ಭಾವಿಸಬೇಕು.

ರಾಜೀವ್ ದೇಶದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲವರ್ಧನೆ, ನವೋದಯ ಶಾಲೆಗಳ ನಿರ್ಮಾಣ, ಕಂಪ್ಯೂಟರೀಕರಣ, ಟೆಲಿಕಮ್ಯೂನಿಕೇಷನ್‌ ನಲ್ಲಿ ಕ್ರಾಂತಿ ಮಾಡಿದ್ದರು. ಯುವ ಜನತೆಯ ಮೇಲೆ ಅಪಾರವಾದ ನಂಬಿಕೆ ಇಟ್ಟ ರಾಜೀವ್ ಗಾಂಧಿಯವರು ಯುವ ಜನತೆ ರಾಜಕೀಯ ತೀರ್ಮಾನವನ್ನು ಕೈಗೊಳ್ಳಬೇಕು ಅನ್ನುವ ಅವರ ನಂಬಿಕೆಯಂತೆ‌ ಆ ತನಕ  ಇದ್ದ ಮತದಾನದ ಹಕ್ಕನ್ನು 21 ವರ್ಷದಿಂದ 18 ಕ್ಕೆ ಇಳಿಸಿದರು. ಈ ಹೊತ್ತು ನಿಂತು ಆಲೋಚಿಸುತ್ತಿರುವಾಗ ಅವರ ಈ ತೀರ್ಮಾನ ಮತ್ತು ಐಟಿ ಕ್ರಾಂತಿಯೇ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಯಿತೋ‌ ಎಂಬ ಸಂಶಯ ಕಾಡುತ್ತಿದೆ. 

ರಾಜೀವ ಗಾಂಧಿಯವರ ಪ್ರಧಾನ ಮಂತ್ರಿ ಅಧಿಕಾರಾವಧಿಯು (1984-1989) ಭಾರತವನ್ನು ಸಶಕ್ತವಾಗಿ ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಸ್ಸಾಂ, ತ್ರಿಪುರಾ, ತಮಿಳುನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಏಕಾಂಗಿಯಾಗಿ ಪರಿಹರಿಸಿದ್ದರು. ರಾಜೀವ್ ಗಾಂಧಿ ಆಳ್ವಿಕೆಯ ಲಕ್ಷಣಗಳೆಂದರೆ ಅಭಿವೃದ್ಧಿ, ಏಕತೆ, ಶಾಂತಿ ಮತ್ತು ಕೋಮು ಸೌಹಾರ್ದತೆ. ಅವರು ರಾಜಕೀಯದಲ್ಲಿ ನೈತಿಕ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಡುತ್ತಿದ್ದರು. ಶ್ರೀ ಲಂಕಾ ತಮಿಳರ ಸಮಸ್ಯೆಯ ಬಗ್ಗೆ ಅವರು ತೆಗೆದು ಕೊಂಡ ನಿಲುವಿನಿಂದಾಗಿ ಎಲ್ಟಿಟಿಇ ಅವರ ಮೇಲೆ ದ್ಷೇಷ ಕಾರಲು ಪ್ರಾರಂಭಿಸಿತು  ಅದರ ಫಲಶ್ರುತಿಯೇ  1991 ಲೋಕ ಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ‌ ತಮಿಳುನಾಡಿನ  ಶ್ರೀ ಪೆರಂಬುದೂರಿನಲ್ಲಿ ಮೇ 21ರಂದು  ಭಾಗವಹಿಸುತ್ತಿರುವಾಗ ಮಾನವ ಬಾಂಬಿಗೆ ಬಲಿಯಾದರು. ಅಲ್ಲಿಗೆ ಭಾರತವನ್ನು  ಇಪ್ಪತ್ತನೇ ಶತಮಾನಕ್ಕೆ ಕೊಂಡೊಯ್ಯವ ಕನಸೊಂದು ಕಮರಿತು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಉದ್ಯಾವರ ನಾಗೇಶ ಕುಮಾರ್
ರಂಗ ಕರ್ಮಿ

Related Articles

ಇತ್ತೀಚಿನ ಸುದ್ದಿಗಳು