Sunday, June 23, 2024

ಸತ್ಯ | ನ್ಯಾಯ |ಧರ್ಮ

ಸಂಸ್ಕೃತ ಕಲಿಸುವ ದಲಿತ ಶಿಕ್ಷಕರಿಗೆ ಮೇಲ್ಜಾತಿ ಶಿಕ್ಷಕರಿಂದ ತಾರತಮ್ಯ!

ರಾಮ ಜನ್ಮಭೂಮಿ ಉತ್ತರಪ್ರದೇಶದಲ್ಲಿ ಮಾನವೀಯತೆಯ ಮರೆಯಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಒಂದು ಘಟತೆ ನಡೆದಿದ್ದು, ಈ ಮೇಲಿನ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ.

‘ಯೋಗಿ ಆಡಳಿತದ ಸರ್ಕಾರದಲ್ಲಿ ಎಲ್ಲಾ ಹಿಂದೂಗಳು ಸುರಕ್ಷಿತವಾಗಿದ್ದಾರೆ. ಹಿಂದೂ ನಾವೆಲ್ಲ ಒಂದು, ರಾಮ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ’ ಎಂಬ ಸಾಲು ಸಾಲು ಘೋಷಣೆಗಳು, ಬರಹಗಳು ಮತ್ತು ವಾದಗಳು ಕಾಣಬಹುದು. ಆದರೆ ವಾಸ್ತವವಾಗಿ ಉತ್ತರಪ್ರದೇಶದಲ್ಲಿ ಹಾಗಿಲ್ಲ. ದಿನಬೆಳಗಾದರೆ ಮಹಿಳೆಯರ ವಿರುದ್ಧ ದೌರ್ಜನ್ಯ, ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ, ಅಲ್ಪಸಂಖ್ಯಾತರ ಮೇಲಿನ ದ್ವೇಷ ಭಾಷಣಗಳೇ ತುಂಬಿ ತುಳುಕುತ್ತಿದೆ‌.

ಹೌದು, ಇಂತಹದ್ದೇ ಒಂದು ಜಾತಿ ತಾರತಮ್ಯ ಪ್ರಕರಣ ಈಗ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಸಂಸ್ಕೃತ ಕಲಿಸುವ ದಲಿತ ಶಿಕ್ಷಕರಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಮೇಲ್ಜಾತಿಯ ಶಿಕ್ಷಕರು ತಾರತಮ್ಯ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಕಾಲೇಜಿನ ಕ್ಷತ್ರಿಯ ಸಮುದಾಯದ ಶಿಕ್ಷಕರು ಪ್ರತ್ಯೇಕ ಗುಂಪನ್ನು ರಚಿಸಿಕೊಂಡು ನಿರಂತರವಾಗಿ ತಮ್ಮ ಮೇಲೆ ಜಾತಿ ಸಂಬಂಧಿ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಸಿಟಿ ಇಂಟರ್ ಕಾಲೇಜಿನ ದಲಿತ ಶಿಕ್ಷಕ ಅಭಯ್ ಕುಮಾರ್ ಕೋರಿ ಆರೋಪಿಸಿದ್ದಾರೆ. ಈ ಕುರಿತು ಶಿಕ್ಷಕ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ನ್ಯೂಸ್ ಕ್ಲಿಕ್ ವರದಿ ಮಾಡಿದೆ.

ಸಂಸ್ಕೃತ ಕಲಿಸುವುದು ಮೇಲ್ಜಾತಿಯವರ ಜನ್ಮಸಿದ್ಧ ಹಕ್ಕೇ? ದಲಿತರು ಏಕೆ ಸಂಸ್ಕೃತವನ್ನು ಕಲಿಸಬಾರದು? ನಾನು ಸಂಸ್ಕೃತವನ್ನು ಕಲಿಸಿದ್ದಕ್ಕಾಗಿ ನನಗೆ ನನ್ನ ಸಹ-ಸಿಬ್ಬಂದಿ ಮತ್ತು ಪ್ರಾಂಶುಪಾಲರು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ದಲಿತ ಕುಟುಂಬದಲ್ಲಿ, ಅದರಲ್ಲೂ ಭಾರತದ ಹೃದಯಭಾಗವಾದ ಉತ್ತರಪ್ರದೇಶದ ದಲಿತನಾಗಿ ಜನಿಸಿರುವುದು ಶಾಪವಾಗಿದೆ ಎಂದು ಕೋರಿ ನ್ಯೂಸ್‌ಕ್ಲಿಕ್‌ಗೆ ತಿಳಿಸಿದರು.

“ನಾನು ಸಿಟಿ ಇಂಟರ್ ಕಾಲೇಜಿಗೆ ಸೇರಿದಾಗಿನಿಂದ, ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದೇನೆ. ಸಂಸ್ಕೃತದ ಪದವೀಧರನಾದ ನಾನು ಸಾಮಾನ್ಯವಾಗಿ ಹಳದಿ ಕುರ್ತಾ, ಕೇಸರಿ ಧೋತಿ ಮತ್ತು ತಲೆಗೂದಲನ್ನು ಬಿಟ್ಟಿದ್ದೇನೆ. ಈ ಜನರು (ಪ್ರಾಂಶುಪಾಲರು ಮತ್ತು ಸಹೋದ್ಯೋಗಿಗಳು) ನನ್ನ ಬಟ್ಟೆಗಳನ್ನು ವಿರೋಧಿಸಿದರು. ನೆಲದ ಮೇಲೆ ಕುಳಿತುಕೊಳ್ಳಲು ಹೇಳಿದರು, ನೀನು ಕೆಳಜಾತಿಯವನಾಗಿದ್ದರೂ, ನಮಗೆ ಸರಿಸಮಾನವಾಗಿ ಬದುಕಲು ಪ್ರಯತ್ನಿಸುತ್ತಿಯಾ, ಇದನ್ನು ಪ್ರಯತ್ನಿಸಬೇಡ” ಎಂದು ಕೀಳಾಗಿ ನೋಡಿದ್ದಾರೆ ಎಂದು ದಲಿತ ಶಿಕ್ಷಕರು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮೇಲ್ಜಾತಿಯ ಶಿಕ್ಷಕರು ತಮ್ಮ ಜಡೆಯನ್ನು ಕತ್ತರಿಸಿ ಹೊಡೆದಿದ್ದಾರೆ ಎಂದು ಅಭಯ್ ಕುಮಾರ್ ಕೋರಿ ಆರೋಪಿಸಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಸಹ ಆರೋಪಿಸಿದರು.

“ಕ್ಷತ್ರಿಯ ಸಮುದಾಯದ ಐವರು ಶಿಕ್ಷಕರು, ನನ್ನ ಕೈಯಿಂದ ಸಂಸ್ಕೃತ ಪುಸ್ತಕಗಳನ್ನು ಕಸಿದುಕೊಂಡು, ವಿದ್ಯಾರ್ಥಿಗಳ ಮುಂದೆಯೇ ನನ್ನನ್ನು ಥಳಿಸಿದರು, ಘಟನೆಯ ನಂತರ, ನಾನು ಅನೇಕ ದಿನಗಳವರೆಗೆ ಕಾಲೇಜಿಗೆ ಹೋಗಲಿಲ್ಲ, ನಂತರ ಕಾಲೇಜಿಗೆ ಮತ್ತೆ ಭೇಟಿ ನೀಡಿದಾಗ ಅವರ ವರ್ತನೆ ಹಾಗೆಯೇ ಇತ್ತು. ಇವೆಲ್ಲವನ್ನೂ ಗಮನಿಸಿದ ನಾನು ಪರಿಸ್ಥಿತಿ ಹದಗೆಡುತ್ತಿದೆ ಎಂದು ಜಿಲ್ಲಾ ಅಧಿಕಾರಿಗಳಿಗೆ ದೂರು ದಾಖಲಿಸಿದ್ದೇನೆ,” ಎಂದು ಅವರು ಹೇಳಿದರು.

ಆದರೆ, ಶಾಲೆಯ ಪ್ರಾಂಶುಪಾಲರಾದ ಎಸ್‌ಸಿ ಗೌತಮ್, ಶಿಕ್ಷಕ ಅಭಯ್ ಕುಮಾರ್ ಕೋರಿಯವರ ಆರೋಪ ಮತ್ತು ಹೇಳಿಕೆಗಳನ್ನು ತಳ್ಳಿಹಾಕಿ ಮಾತನಾಡಿದ ಅವರು, “ಅಭಯ್ ಕುಮಾರ್ ಕೋರಿ ವಿದ್ಯಾರ್ಥಿನಿಯರನ್ನು ನಿಂದಿಸಿ, ಥಳಿಸಿದ ಕಾರಣಕ್ಕಾಗಿ ಶಾಲೆಯ ಆಡಳಿತ ಮಂಡಳಿ ಅವರನ್ನು ಅಮಾನತುಗೊಳಿದೆ. ಅವರ ಚಾರಿತ್ರ್ಯ ಸರಿಯಾಗಿಲ್ಲ, ಅವರನ್ನು ಮರುಸೇರ್ಪಡೆಗೊಳಿಸಲಾಗಿದ್ದರು. ಅವರ ವಿರುದ್ಧ ತನಿಖೆ ಇನ್ನೂ ಬಾಕಿ ಉಳಿದಿರುವುದರಿಂದ ಸಹಿ ಹಾಕಲು ಪ್ರತ್ಯೇಕ ರಿಜಿಸ್ಟರ್ ಇರಿಸಲಾಗಿದೆ ಎಂದು ಪ್ರಾಂಶುಪಾಲರು ನ್ಯೂಸ್‌ಕ್ಲಿಕ್‌ಗೆ ತಿಳಿಸಿದರು.

ಇದೇ ವೇಳೆ ಪ್ರಾಂಶುಪಾಲರು ಮಾಡಿರುವ ಆರೋಪಗಳು ಆಧಾರ ರಹಿತ ಮತ್ತು ಕಪೋಲಕಲ್ಪಿತ ಎಂದು ದಲಿತ ಶಿಕ್ಷಕ ಕೋರಿ ಹೇಳಿದ್ದಾರೆ.

“2021ರಲ್ಲಿ ನನ್ನ ವಿರುದ್ಧ ಶಾಲಾ ಆಡಳಿತ ಮಂಡಳಿಯಿಂದ ಸುಳ್ಳು ಹಲ್ಲೆ ಪ್ರಕರಣವನ್ನು ದಾಖಲಿಸಲಾಗಿದೆ. ನನ್ನನ್ನು ತಿಂಗಳುಗಟ್ಟಲೆ ಅಮಾನತುಗೊಳಿಸಲಾಯಿತು, ಆದರೆ ಎಲ್ಲಾ ಆರೋಪಗಳನ್ನು ತೆರವುಗೊಳಿಸಲಾಗಿದೆ ಮತ್ತು ಸಂಪೂರ್ಣ ತನಿಖೆಯ ನಂತರ ಕಾಲೇಜಿಗೆ ಜಿಲ್ಲಾ ಇನ್ಸ್‌ಪೆಕ್ಟರ್ ನನ್ನನ್ನು ಮತ್ತೆ ಅಧಿಕೃತವಾಗಿ ಸೇರ್ಪಡೆ ಮಾಡಿದರು.” ಎಂದು ದಲಿತ ಶಿಕ್ಷಕ ಕೋರಿ ಹೇಳಿದ್ದಾರೆ.

ಗ್ರೌಂಡ್ ರಿಯಾಲಿಟಿ ತಿಳಿಯಲು NewsClick ಜಿಲ್ಲಾ ಇನ್‌ಸ್ಪೆಕ್ಟರ್ ಆಫ್ ಸ್ಕೂಲ್ಸ್ ಒಪಿ ತ್ರಿಪಾಠಿ ಅವರನ್ನು ಸಂಪರ್ಕಿಸಿದಾಗ ಅವರು, “ನಗರ ಇಂಟರ್ ಕಾಲೇಜಿನ ಶಿಕ್ಷಕ ಅಭಯ್ ಕುಮಾರ್ ಕೋರಿ ಶಾಲೆಯ ಶಿಕ್ಷಕರ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶಾಲೆಯ ಆಡಳಿತದಿಂದ ವರದಿಯನ್ನು ಕೋರಲಾಗಿದ್ದು, ಸಮಸ್ಯೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ದಲಿತರ ವಿರುದ್ಧ ಹೆಚ್ಚುತ್ತಿರುವ ಘಟನೆಯ ಕುರಿತು ಪ್ರತಿಕ್ರಿಯಿಸಿದ ಗೋರಖ್‌ಪುರದ ಡಿಡಿಯು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೈರಾಮ್ ಪಾಂಡೆ, “ಉತ್ತರ ಪ್ರದೇಶದಲ್ಲಿ ಜಾತಿ ತಾರತಮ್ಯದ ಪ್ರಕರಣ ಹೊಸದೇನಲ್ಲ. ಪ್ರತಿದಿನ ಇಂತಹ ಘಟನೆಗಳು ವರದಿಯಾಗುತ್ತವೆ. ಇಂತಹ ಘಟನೆಗಳ ಹಿಂದಿನ ಸಮಸ್ಯೆಯೇ, ಮೇಲ್ಜಾತಿ ಸಮುದಾಯಗಳ ಜನರು ದಲಿತರನ್ನು ಮನುಷ್ಯರನ್ನಾಗಿ ಪರಿಗಣಿಸದೇ ಇರುವುದು.” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು