Thursday, December 25, 2025

ಸತ್ಯ | ನ್ಯಾಯ |ಧರ್ಮ

’45’ ಚಿತ್ರ ವಿಮರ್ಶೆ: ಅರ್ಜುನ್ ಜನ್ಯ ಎಂಬ ಮಾಂತ್ರಿಕನ ‘ಮಾಸ್’ ಅವತಾರ; ಉಪ್ಪಿ-ಶಿವಣ್ಣನ ಜುಗಲ್‌ಬಂದಿಗೆ ಸ್ಯಾಂಡಲ್‌ವುಡ್ ಫಿದಾ!

“..ಒಂದೇ ಮಾತಲ್ಲಿ ಹೇಳಬೇಕೆಂದರೆ, ’45’ ಕೇವಲ ಸಿನಿಮಾ ಅಲ್ಲ; ಇದೊಂದು ಸ್ಟೈಲ್, ಫಿಲಾಸಫಿ ಮತ್ತು ಮಾಸ್ ಅಂಶಗಳ ಮಹಾಸಂಗಮ..” ಸಿನಿ ವಿಮರ್ಶಕ ನಿತಿನ್ ಕೃಷ್ಣ ಅವರ ಕಣ್ಣಲ್ಲಿ ಕಂಡ “45” ತಪ್ಪದೇ ಓದಿ

ಸಿನೆಮಾ: 45
ನಿರ್ದೇಶನ: ಅರ್ಜುನ್ ಜನ್ಯ
ತಾರಾಗಣ: ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಕೌಸ್ತುಭ ಮಣಿ.

ಕನ್ನಡ ಚಿತ್ರರಂಗದಲ್ಲಿ (KFI) ವಿಪರೀತ ಕುತೂಹಲ ಕೆರಳಿಸಿದ್ದ ಸಿನಿಮಾ ’45’. ಕರುನಾಡ ಚಕ್ರವರ್ತಿ ಶಿವಣ್ಣ, ರಿಯಲ್ ಸ್ಟಾರ್ ಉಪ್ಪಿ ಮತ್ತು ಮಾಡರ್ನ್ ಮ್ಯಾವರಿಕ್ ರಾಜ್ ಬಿ. ಶೆಟ್ಟಿ ಒಂದೇ ಫ್ರೇಮ್‌ನಲ್ಲಿ ಬರುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಮುಗಿಲು ಮುಟ್ಟಿತ್ತು. ಸಂಗೀತ ನಿರ್ದೇಶಕನಾಗಿ ಗೆದ್ದಿದ್ದ ಅರ್ಜುನ್ ಜನ್ಯ, ನಿರ್ದೇಶಕನಾಗಿ ಆ ‘ಮ್ಯಾಜಿಕ್’ ಉಳಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಒಂದೇ ಮಾತಲ್ಲಿ ಹೇಳಬೇಕೆಂದರೆ, ’45’ ಕೇವಲ ಸಿನಿಮಾ ಅಲ್ಲ; ಇದೊಂದು ಸ್ಟೈಲ್, ಫಿಲಾಸಫಿ ಮತ್ತು ಮಾಸ್ ಅಂಶಗಳ ಮಹಾಸಂಗಮ.

ಕ್ಲೈಮ್ಯಾಕ್ಸ್ ಹಿಂದಿನ ಆ ಸಣ್ಣ ಎಡವಟ್ಟು ಬಿಟ್ಟರೆ, ಇದೊಂದು ಪಕ್ಕಾ ಪೈಸಾ ವಸೂಲ್ ಎಂಟರ್‌ಟೈನರ್!

ಕಥಾವಸ್ತು: ಹೇಳಲು ಸಿಂಪಲ್ – ಆದರೂ ನೋಡಲು “ಸ್ಮಾರ್ಟ್” ಮತ್ತು “ಕಾಂಪ್ಲಿಕೇಟೆಡ್” :
ಐಟಿ ಟೆಕ್ಕಿ ವಿನಯ್ (ರಾಜ್ ಬಿ. ಶೆಟ್ಟಿ) – ಒಂದು ಸಾಮಾನ್ಯ ಮಧ್ಯಮವರ್ಗದ ಯುವಕ. ಅವನ ಜೀವನವೂ ಅವನಂತೆ, ‘ಕೋಡ್’ನಂತೆ, ನೇರವಾಗಿಯೇ ಹೋಗುತ್ತಿರೋದರ ನಡುವೆ ಸಂಭವಿಸುವ ಒಂದು ಸಣ್ಣ ಅಪಘಾತ ಅವನ ಬದುಕಿನ ಸೂತ್ರವನ್ನೇ ಬದಲಿಸುತ್ತದೆ.

ಈ ಒಂದು ‘ಸಣ್ಣ’ ತಪ್ಪು, ಅವನ ಜೀವಕ್ಕೆ, ಆತ್ಮಕ್ಕೆ, ಅದಕ್ಕಿಂತಲೂ ಹೆಚ್ಚು ಅವನ ಬುದ್ಧಿ – ನೆಮ್ಮದಿಗೆ ಎಷ್ಟು ದೊಡ್ಡ ಬೆಲೆ ಕಟ್ಟಬೇಕಾಗಿ ಬರುತ್ತದೆ ಎಂಬುದೇ ‘45’ ಚಿತ್ರದ ನಾಭಿ.

ಕಥೆ ಸರಳವಾದರೂ ಅದನ್ನು ಪ್ರಸ್ತುತಪಡಿಸುವ ರೀತಿ ಅತ್ಯಂತ ವಿಭಿನ್ನ. ಉಪೇಂದ್ರರ ಥೇಟ್ ಶೈಲಿಯ ನೆನಪನ್ನು ತರುವಷ್ಟು ಕ್ಯಾಚಿ ಸ್ಕ್ರೀನ್‌ಪ್ಲೇ, ತತ್ತ್ವ ಮತ್ತು ತಮಾಷೆಯ ಸಮನ್ವಯ ಈ ಚಿತ್ರದಲ್ಲಿ ಗಟ್ಟಿಯಾಗಿ ಕಂಡುಬರುತ್ತದೆ.

ರಾಯಪ್ಪನ ಪಾತ್ರದರಿ ಉಪೇಂದ್ರ ಅವರ ಕೆಂಗಣ್ಣಿಗೆ, ಟೆಕ್ಕಿ ವಿನಯ್ ಏಕೆ ಗುರಿಯಾದ? ರಾಯಪ್ಪನಿಂಗ ತಪ್ಪಿಸಿಕೊಳ್ಳಲು ಟೆಕ್ಕಿ ವಿನಯ್ ಏನೆಲ್ಲಾ ಮಾಡುತ್ತಾನೆ!?
ಯಾರು ಈ ಶಿವಪ್ಪ (ಶಿವರಾಜ್ ಕುಮಾರ್)!? ಈ ಕತೆಗೂ ಗರುಡ ಪುರಾಣಕ್ಕೂ ಏನು ಸಂಬಂಧ!?

ಈ ಎಲ್ಲ ಪ್ರಶ್ನೆಗಳೂ ಪ್ರೇಕ್ಷಕರ ಮೈ ನೆವಿರೇಳುವಷ್ಟು ಕುತೂಹಲ ಮೂಡಿಸುತ್ತವೆ, ಆದರೆ ಅವಕ್ಕೆ ಉತ್ತರ ಸಿಗುವುದು ಸಿನಿಮಾ ಹಾಲಿನ ಒಳಗೆ ಮಾತ್ರ!

ಕ್ಯಾಪ್ಟನ್ ಆಫ್ ದಿ ಶಿಪ್: ಅರ್ಜುನ್ ಜನ್ಯ
ಇದು ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನದ ಸಿನಿಮಾ ಎಂದು ಯಾರೂ ಊಹಿಸಲು ಕೂಡ ಸಾಧ್ಯವಿಲ್ಲ. ಸಂಗೀತ ನಿರ್ದೇಶನದಿಂದ ಆಕ್ಷನ್ ಕಟ್ ಹೇಳಲು ಇಳಿದಿರುವ ಜನ್ಯ, ಈ ಚಿತ್ರದ “ರಿಯಲ್ ಹೀರೋ”. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ ಮತ್ತು ಹಿನ್ನೆಲೆ ಸಂಗೀತ – ಹೀಗೆ ಎಲ್ಲವನ್ನೂ ಹೆಗಲ ಮೇಲೆ ಹೊತ್ತುಕೊಂಡಿರುವ ಅವರು, ಮೂವರು ಘಟಾನುಘಟಿ ಸ್ಟಾರ್‌ಗಳ ಇಮೇಜ್ ಅನ್ನು ಬ್ಯಾಲೆನ್ಸ್ ಮಾಡಿರುವ ರೀತಿ ನಿಜಕ್ಕೂ ಅದ್ಭುತ.

ಪ್ರತಿ ಸನ್ನಿವೇಶದಲ್ಲೂ ಅವರ ಸೆನ್ಸ್ ಆಫ್ ಟೈಮಿಂಗ್, ಸೌಂಡ್‌ಸ್ಕೇಪ್‌ಗಳ ಮ್ಯಾಜಿಕ್, ಮತ್ತು ತಾತ್ವಿಕ ಡೈಲಾಗ್‌ಗಳ ಗಾಢತೆ – ಎಲ್ಲವೂ ಆಳವಾಗಿ ತಟ್ಟುತ್ತದೆ.

ನಿರ್ಮಾಪಕ ರಾಮೇಶ್ ರೆಡ್ಡಿಯ ವೈಭವದ ನಿರ್ಮಾಣ:
ಸೂರಜ್ ಪ್ರೊಡಕ್ಷನ್‌ನ ಅಡಿಯಲ್ಲಿ ರಾಮೇಶ್ ರೆಡ್ಡಿ ನಿರ್ಮಿಸಿರುವ ಈ ಸಿನಿಮಾ, ಪ್ರತಿ ಫ್ರೇಮ್ನಲ್ಲೂ ಆರ್ಥಿಕ ಶಕ್ತಿ ಮತ್ತು ಕಲಾತ್ಮಕ ನೈಪುಣ್ಯ ಎದುರಾಗುತ್ತದೆ.

ಹೈಸ್ಕೇಲ್ ಆಕ್ಷನ್ ಸೀಕ್ವೆನ್ಸ್‌ಗಳಿಂದ ಹಿಡಿದು, ಕ್ಲಾಸ್ ಮತ್ತು ವೈಭವದ ಸೆಟ್ ಡಿಸೈನ್ಗಳವರೆಗೆ – ಎಲ್ಲವೂ ಅಚ್ಚಳಿಯಾದ ಉತ್ಪಾದನಾ ಮೌಲ್ಯಗಳೊಂದಿಗೆ ಮೂಡಿ ಬಂದಿವೆ.

ಶಿವಣ್ಣ ಮತ್ತು ಉಪ್ಪಿ ಮುಖಾಮುಖಿಯಾಗುವ ಸನ್ನಿವೇಶಗಳಲ್ಲಿ ಲೈಟಿಂಗ್ ಮತ್ತು ಸೆಟ್‌ನ ಡ್ರಾಮಾಟಿಕ್ ಮೂಡ್ ಸಿನಿಮಾ ನೋಡುತ್ತಿರುವ ಪ್ರೇಕ್ಷಕರನ್ನು ಮೆಸ್ಮೆರೈಜ್ ಮಾಡುತ್ತದೆ.

ರಾಮೇಶ್ ರೆಡ್ಡಿ ಅವರ ನಿರ್ಮಾಣ ತಂತ್ರದಲ್ಲಿ ಖರ್ಚು ಕಾಣುವುದಿಲ್ಲ, ಕಲೆ ಕಾಣುತ್ತದೆ.

ಅಭಿನಯ: ದಿಗ್ಗಜರ ದರ್ಬಾರ್
ಉಪೇಂದ್ರ: ರಿಯಲ್ ಶೋ ಸ್ಟೀಲರ್
ನೇರವಾಗಿ ಹೇಳಬೇಕೆಂದರೆ, ಇಡೀ ಸಿನಿಮಾವನ್ನು ಆವರಿಸಿಕೊಳ್ಳುವುದು ರಿಯಲ್ ಸ್ಟಾರ್ ಉಪೇಂದ್ರ!

ಶಿವಣ್ಣನಂತಹ ಲೆಜೆಂಡ್ ಪಕ್ಕದಲ್ಲಿ ನಿಂತು ಸ್ಕ್ರೀನ್ ಪ್ರೆಸೆನ್ಸ್‌ನಲ್ಲಿ ಡಾಮಿನೇಟ್ ಮಾಡುವುದು ಸುಲಭದ ಮಾತಲ್ಲ. ‘ಜೈಲರ್’ ಸಿನಿಮಾದಲ್ಲಿ ರಜಿನಿಕಾಂತ್ ಎದುರೇ ಸ್ಕ್ರೀನ್ ಡಾಮಿನೆಟ್ ಮಾಡಿ ನಿಂತು ನಟಿಸಿ ತೋರಿಸಿದವರು ಶಿವಣ್ಣ,

ಆದರೆ ಇಲ್ಲಿ ‘ರಾಯಪ್ಪ’ನಾಗಿ ಉಪ್ಪಿ ಅಕ್ಷರಶಃ ಅಬ್ಬರಿಸಿದ್ದಾರೆ. ಅವರ ಎಂಟ್ರಿ ಸೀನ್, ‘ರೋಸಿ’ ನಾಯಿಯ ಜೊತೆಗಿನ ದೃಶ್ಯಗಳು, ತಮಿಳು ನಟರು ಜಾಫರ್ ಸಾದಿಕ್ ಮತ್ತು ಮೊಟ್ಟ ರಾಜೇಂದ್ರನ್  ಜೊತೆಗಿನ ಕಾಂಬಿನೇಷನ್ ಸೀನ್‌ಗಳು ಥಿಯೇಟರ್‌ನಲ್ಲಿ ಶಿಳ್ಳೆ ಗಿಟ್ಟಿಸುತ್ತವೆ. “ರಿಯಲ್ ಸ್ಟಾರ್” ಯಾರು ಎಂಬುದನ್ನು ಉಪ್ಪಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ರಾಜ್ ಬಿ. ಶೆಟ್ಟಿ: ಕಥೆಯ ಬೆನ್ನೆಲುಬು
‘ವಿನಯ್’ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ. ಶೆಟ್ಟಿ ಚಿತ್ರದ ಕಥೆಯ ಕೇಂದ್ರಬಿಂದು. ಇಡೀ ಕಥೆ ಸಾಗುವುದೇ ಇವರ ಸುತ್ತ. ಹಿರಿಯ ನಟರ ಎದುರು ನಿಂತು, ತಮ್ಮ ಪಾತ್ರದ ತೂಕವನ್ನು ಕಾಪಾಡಿಕೊಳ್ಳುವಲ್ಲಿ ರಾಜ್ ಗೆದ್ದಿದ್ದಾರೆ.

ಇಲ್ಲಿ ರಾಜ್ ಬಿ. ಶೆಟ್ಟಿ ಪ್ರತಿ ಪ್ರೇಕ್ಷಕನ ದೃಷ್ಟಿಕೋನ.
ಇಡೀ ಸಿನಿಮಾ ಭಯಬೀತನಾಗಿ ಓಡುವ ರಾಜ್. ಬಿ. ತನ್ನ ಪ್ರೇಯಸಿಗೋಸ್ಕರ ಮಾಡುವ ಒಂದು ಫೈಟ್,
‘ಗರುಡ ಗಮನ ವೃಷಭ ವಾಹನ’ ಸಿನಿಮಾದ ರೆಫರೆನ್ಸ್ ಮತ್ತು ಬಿಜಿಎಂ (BGM) ಬರುವ ಆ ಸೋಲೋ ಫೈಟ್ ಸೀನ್ ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದು.

ಶಿವಣ್ಣ: ದಿ ‘ರಿಯಲ್’ ಪ್ರೊಟ್ಯಾಗನಿಸ್ಟ್

ಶಿವಣ್ಣ ಎಂದರೆ ಲಾಂಗು ಮಚ್ಚು ಎಂದುಕೊಂಡವರಿಗೆ ಇಲ್ಲಿ ಸರ್ಪ್ರೈಸ್ ಇದೆ. ಇಲ್ಲಿ ಅವರು ಫೆರೋಶಿಯಸ್ ಆಗಿಲ್ಲ, ಬದಲಾಗಿ ಫಿಲಾಸಫಿಕಲ್ ಆಗಿದ್ದಾರೆ! ಶಾಂತವಾಗಿ, ಬೌದ್ಧಿಕವಾಗಿ (Intellectual) ಯೋಚಿಸುವ ಶಿವಣ್ಣನ ಪಾತ್ರವೇ ಕಥೆಯ ನಿಜವಾದ ಆತ್ಮ. ಉಪ್ಪಿಯ ಆರ್ಭಟಕ್ಕೆ ಶಿವಣ್ಣನ ಈ ಕ್ಲಾಸಿ ಮತ್ತು ಆ ಕ್ಲಾಸ್ ಒಳಗಿನ ಮಾಸ್ ಲುಕ್ ಸರಿಯಾದ ಕೌಂಟರ್ ಕೊಡುತ್ತದೆ.

ರಾಜ್ ಬಿ ಮತ್ತು ಶಿವಣ್ಣನ ಕಂಬಿನೆಷನ್ ಸೀನ್ಸ್, ಉಪ್ಪಿ ಶಿವಣ್ಣನ ಮುಖಮುಖಿ, ಅದ್ಭುತವಾಗಿ ಮೂಡಿಬಂದಿದೆ.

ಇಷ್ಟೇ ಅಲ್ಲದೆ, ಪ್ರೀ ಕ್ಲೈಮ್ಯಾಕ್ಸ್ ನಲ್ಲಿನ ಶಿವಣ್ಣನ ರುಧ್ರತಂಡವ, ಹೊಸ ಶಿವಣ್ಣನನ್ನು ಪರಿಚಯಿಸುತ್ತದೆ!

ಟೆಕ್ನಿಕಲ್ ಮತ್ತು ನಾಸ್ಟಾಲ್ಜಿಯಾ
ಚಿತ್ರದ ತೆರೆ ಹಿಂದಿನ ಹೀರೋಗಳು ಎಂದರೆ ಸಿನಿಮಾಟೋಗ್ರಫರ್ ಸತ್ಯ ಹೆಗ್ಡೆ ಮತ್ತು ಪೋಸ್ಟ್ ಪ್ರೊಡಕ್ಷನ್ ಕಲರ್ ಗ್ರೇಡಿಂಗ್ ನಡೆಸಿದ ಪತಾಜ್ ಕಲರ್ ಬಾರ್ ಸಂಸ್ಥೆ. ಕಲರ್ ಗ್ರೇಡಿಂಗ್ ದೇಶದ ಅತ್ಯುತ್ತಮ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತಿದೆ. ಉಪ್ಪಿ ಬರುವ ದೃಶ್ಯಗಳಿಗೆ ಒಂದು ಥೀಮ್ ಕಲರ್ ಇಟ್ಟು, ಇದಕ್ಕೆ ವಿತರೆಕದ ಥೀಮ್ ಶಿವಣ್ಣನಿಗಿಟ್ಟು, ಇಬ್ಬರು ಮುಖಾಮುಖಿಯಾದಾಗ ಆ ಇಬ್ಬರ ಥೀಮ್’ಗಳನ್ನು ಸಾಂಬಾಲಿಸಿ ಮರ್ಜ್ ಮಾಡಿರುವ ರೀತಿ ಬ್ರಿಲಿಯೆಂಟ್!

ಇನ್ನು ‘ಓಂ’ ಸಿನಿಮಾದ ರೆಫರೆನ್ಸ್, ಶಿವಣ್ಣ ಮತ್ತು ರಾಜ್ ಬಿ ಶೆಟ್ಟಿ ನಡುವೆ ಬರುವ ‘ಲಾಂಗ್’ ಕುರಿತಾದ ಮಾತುಕತೆಗಳು, ಮತ್ತು ಶಿವಣ್ಣ-ಉಪ್ಪಿ ಮುಖಾಮುಖಿಯಾಗುವ ದೃಶ್ಯಗಳು ಅಭಿಮಾನಿಗಳಿಗೆ ಹಬ್ಬವೋ ಹಬ್ಬ!

ಕಾಸ್ಟ್ಯೂಮ್ ಡಿಸೈನ್ – ಪುಟ್ಟರಾಜು ಅವರ ಕಲೆ :
ಉಪ್ಪಿಯ ಲುಕ್ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಕಾಸ್ಟ್ಯೂಮ್ ಡಿಸೈನರ್ ಪುಟ್ಟರಾಜು ಅವರು ಮಾಡಿದ ಕೆಲಸ ಚಿತ್ರದ ಸ್ಟೈಲ್ ಫ್ಯಾಕ್ಟರ್‌ನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

ರಾಯಪ್ಪನ ಉಗ್ರ ವ್ಯಕ್ತಿತ್ವಕ್ಕೆ ತಕ್ಕ ರೀತಿಯ ಲೆದರ್ ಜಾಕೆಟ್, ಮೆಟಾಲಿಕ್ ಆಕ್ಸೆಸರಿ, ಮತ್ತು ಕ್ಲಾಸಿಕ್ ಸನ್‌ಗ್ಲಾಸ್‌ಗಳ ಕಂಬಿನೇಷನ್ ಉಪ್ಪಿಯನ್ನು “ಅರ್ಬನ್ ಗ್ಯಾಂಗ್’ಸ್ಟರ್ ” ಆಗಿ ತೋರಿಸುತ್ತದೆ.

ಶಿವಣ್ಣನ ಮ್ಯೂಟೆಡ್ ಕೋರಿಯನ್ ಜೊತೆಗಿನ ಟ್ರೇಡಿಷನಲ್ ಅಟ್ಟೈರ್ ಹಾಗೂ ರಾಜ್ ಬಿ. ಶೆಟ್ಟಿಯ ಫಾರ್ಮಲ್ಸ್ ಪಾತ್ರದ ಕುತೂಹಲವನ್ನು ಬಲಪಡಿಸುತ್ತವೆ. ಎಲ್ಲ ಪಾತ್ರಗಳ ಉಡುಪಿನಲ್ಲಿ ಒಂದು ಕಥೆ ಇದೆ ಎಂದರೆ ಅದು ಪುಟ್ಟರಾಜು ಅವರ ವಿನ್ಯಾಸ ಮತ್ತು ಅರ್ಜುನ್ ಜನ್ಯ ರವರ ಮಾಡರ್ನ್ ಟಚ್ ನೀಡುವ ಬಲವಾದ ಕಲಾತ್ಮಕ ದೃಷ್ಟಿಯಿಂದಲೇ ಸರಿ.

ಮೈನಸ್ ಪಾಯಿಂಟ್ ಯಾವುದು?
ಸಿನಿಮಾ ಅದ್ಭುತವಾಗಿ ಸಾಗುವಾಗ ಸ್ಪೀಡ್ ಬ್ರೇಕರ್ ಆಗುವುದು “ಪ್ರಿ-ಕ್ಲೈಮ್ಯಾಕ್ಸ್” (Pre-climax). ಕೊನೆಯ 15-20 ನಿಮಿಷಗಳ ಆ ಫೈಟ್ ದೃಶ್ಯ ಸಾಮಾನ್ಯ ಪ್ರೇಕ್ಷಕನ ಸಹನೆ ಪರೀಕ್ಷಿಸುತ್ತದೆ. ಇಲ್ಲಿನ ವಿಎಫ್‌ಎಕ್ಸ್ (VFX) ಕೆಲಸ ತುಂಬಾನೇ ಕಳಪೆಯಾಗಿದೆ ಮತ್ತು ಅನಗತ್ಯವಾಗಿ ಎಳೆಯಲಾಗಿದೆ ಎನಿಸುತ್ತದೆ. ಶಿವಣ್ಣನ ಅಭಿಮಾನಿಗಳಿಗೆ ಈ ಫೈಟ್ ಇಷ್ಟವಾಗಬಹುದು, ಆದರೆ ಕಾಮನ್ ಆಡಿಯನ್ಸ್‌ಗೆ ಇದು ಸಿನಿಮಾದ ‘ಲ್ಯಾಗ್’ ಎನಿಸುವುದು ಸುಳ್ಳಲ್ಲ.

ಒಟ್ಟಾರೆ:
ಆ ಕೊನೆಯ 20 ನಿಮಿಷದ ಪ್ರಿ-ಕ್ಲೈಮ್ಯಾಕ್ಸ್ ಅನ್ನು ಸ್ವಲ್ಪ ತಿದ್ದಿದ್ದರೆ, ’45’ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಕಮರ್ಷಿಯಲ್ ಮಲ್ಟಿ-ಸ್ಟಾರರ್ ಸಿನಿಮಾ ಆಗಿರುತ್ತಿತ್ತು. ಆದರೂ ಚಿಂತೆಯಿಲ್ಲ, ಉಪ್ಪಿಯ ಸ್ಟೈಲ್, ರಗಡ್ ಲುಕ್, ಶಿವಣ್ಣನ ಕ್ಲಾಸ್ ಜೊತೆಗಿನ ಮಾಸ್ ಮಿಶ್ರಣ ಮತ್ತು ರಾಜ್ ಬಿ. ಶೆಟ್ಟಿಯ ಕನ್ಫ್ಯೂಸ್ಡ್ ಫಿಲೊಸೋಫಿಕಲ್ ಆಂಗಲ್ ಹಾಗೂ ಅರ್ಜುನ್ ಜನ್ಯರ ಚೊಚ್ಚಲ ನಿರ್ದೇಶನದ ತಾಕತ್ತಿಗಾಗಿ ಈ ಸಿನಿಮಾವನ್ನು ಮಿಸ್ ಮಾಡದೇ ನೋಡಲೇಬೇಕು.

ಒಟ್ಟು ರೇಟಿಂಗ್ :- 3.75 – 4 out of 5 ಸ್ಟಾರ್ಸ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page