Home ಅಂಕಣ ಸೆಲೆಕ್ಟಿವ್ ಹಿಡನ್ ಅಜೆಂಡಾದಲ್ಲಿ ಸಂಘಪರಿವಾರ ಸದಾ ಮುಂದು!

ಸೆಲೆಕ್ಟಿವ್ ಹಿಡನ್ ಅಜೆಂಡಾದಲ್ಲಿ ಸಂಘಪರಿವಾರ ಸದಾ ಮುಂದು!

0

“..ಮತ್ತೊಂದು ದೇಶದ ಕಾನೂನನ್ನು ಅಥವಾ ಅಲ್ಲಿನ ಮೂಲಭೂತವಾದವನ್ನು ಟೀಕಿಸುವುದು ಬಹಳ ಸುಲಭ. ಆದರೆ ಅದೇ ಮೂಲಭೂತವಾದ ಮತ್ತು ಕ್ರೌರ್ಯ ನಮ್ಮದೇ ನೆಲದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ತಾಂಡವವಾಡಿದಾಗ..” ಚಿಂತಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ

ಇವತ್ತಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ‘ಮಾನವೀಯತೆ’, ‘ಮಹಿಳಾ ಪರ ಕಾಳಜಿ’ ಮತ್ತು ‘ಆಕ್ರೋಶ’ಗಳು ಕೂಡ ಪಕ್ಕಾ ಫಿಲ್ಟರ್ ಆಗಿಯೇ ಹೊರಬರುತ್ತವೆ. ಒಂದು ಅಮಾನವೀಯ ಘಟನೆ ನಡೆದಾಗ ಅಲ್ಲಿ ಸಂತ್ರಸ್ತರು ಯಾರು, ತಪ್ಪಿತಸ್ಥರು ಯಾವ ಧರ್ಮದವರು ಅಥವಾ ಅದು ಯಾವ ದೇಶದಲ್ಲಿ ನಡೆದಿದೆ ಎಂಬುದನ್ನು ನೋಡಿಕೊಂಡು ತಮ್ಮ ದನಿಯನ್ನು ಎತ್ತರಿಸುವ ಒಂದು ದೊಡ್ಡ ‘ಆಯ್ದ ಆಕ್ರೋಶದ’ (Selective Outrage) ವರ್ಗವೇ ನಮ್ಮ ನಡುವೆ ಹುಟ್ಟಿಕೊಂಡಿದೆ. ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಪ್ರೇಮಿಗಳಿಗೆ ವಿಧಿಸಲಾದ ಕಠಿಣ ಶಿಕ್ಷೆಯ ಕುರಿತು ನಡೆಯುತ್ತಿರುವ ಚರ್ಚೆಗಳು ನಮ್ಮ ಸಮಾಜದ ಈ ಇಬ್ಬಗೆ ನೀತಿಯನ್ನು ಮತ್ತೊಮ್ಮೆ ಬೆತ್ತಲೆ ಮಾಡಿವೆ.

ಬೆರಳು ತೋರಿಸುವ ಮುನ್ನ ನಮ್ಮ ಮನೆಯಂಗಳದ ಕನ್ನಡಿಯನ್ನೊಮ್ಮೆ ನೋಡಿಕೊಳ್ಳೋಣ.

ಮತ್ತೊಂದು ದೇಶದ ಕಾನೂನನ್ನು ಅಥವಾ ಅಲ್ಲಿನ ಮೂಲಭೂತವಾದವನ್ನು ಟೀಕಿಸುವುದು ಬಹಳ ಸುಲಭ. ಆದರೆ ಅದೇ ಮೂಲಭೂತವಾದ ಮತ್ತು ಕ್ರೌರ್ಯ ನಮ್ಮದೇ ನೆಲದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ತಾಂಡವವಾಡುವಾಗ ಮೌನಕ್ಕೆ ಜಾರುವುದು ಯಾವ ಬಗೆಯ ನೈತಿಕತೆ?

  • ದೇವಾಲಯದಲ್ಲೇ ನಡೆದ ಪೈಶಾಚಿಕತೆ: ಕೆಲವು ವರ್ಷಗಳ ಹಿಂದೆ ಜಮ್ಮುವಿನ ಕಥುವಾದಲ್ಲಿ ದೇವಸ್ಥಾನದ ಆವರಣದಲ್ಲೇ ಎಂಟು ವರ್ಷದ ಪುಟ್ಟ ಕಂದಮ್ಮನನ್ನು ಕೂಡಿಹಾಕಿ ಸಾಮೂಹಿಕ ದೌರ್ಜನ್ಯವೆಸಗಿ ಹತ್ಯೆ ಮಾಡಲಾಯಿತು. ಅಂದು ಆ ಮಗುವಿನ ಪರವಾಗಿ ನಿಲ್ಲುವ ಬದಲು, ಆರೋಪಿಗಳ ಪರವಾಗಿ ತಿರಂಗಾ ಹಿಡಿದು ಮೆರವಣಿಗೆ ಮಾಡಿದವರನ್ನು ನಾವು ನೋಡಿದ್ದೇವೆ.
  • ಮೀಸೆ ಬಿಟ್ಟಿದ್ದಕ್ಕೆ, ಕುದುರೆ ಏರಿದ್ದಕ್ಕೆ ಹತ್ಯೆ: ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ರಾಜಸ್ಥಾನದ ಜಿತೇಂದ್ರ ಮೇಘವಾಲ್ ನಂತಹ ದಲಿತ ಯುವಕರು ಕೇವಲ ಹುರಿಮೀಸೆ ಬಿಟ್ಟರು ಎಂಬ ಕಾರಣಕ್ಕೆ ಮೇಲ್ಲಾತಿಯ ದುರಹಂಕಾರಿಗಳಿಂದ ಕೊಲೆಯಾಗುತ್ತಾರೆ. ಗುಜರಾತ್‌ ನ ಪ್ರದೀಪ್ ರಾಥೋಡ್ ನಂತಹ ಯುವಕರು ಕುದುರೆ ಏರಿದರು ಅಥವಾ ಮದುವೆ ಮೆರವಣಿಗೆಯಲ್ಲಿ ಕುದುರೆ ಬಳಸಿದರು ಎಂಬ ಕಾರಣಕ್ಕೆ ಹೆಣವಾಗುತ್ತಾರೆ.
  • ದೇಗುಲ ಪ್ರವೇಶಕ್ಕೆ ಬಹಿಷ್ಕಾರ ಮತ್ತು ಸಾವು: ಇಂದಿಗೂ ಭಾರತದ ಹಲವು ಹಳ್ಳಿಗಳಲ್ಲಿ ದಲಿತರು ಅಥವಾ ಕೆಳಜಾತಿಯವರು ದೇವಸ್ಥಾನದ ಮೆಟ್ಟಿಲು ತುಳಿದರು, ದೇವರ ವಿಗ್ರಹ ಮುಟ್ಟಿದರು ಎಂಬ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವ, ಥಳಿಸಿ ಕೊಲ್ಲುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ.

ಇನ್ನು ಪ್ರೇಮಿಗಳ ವಿಚಾರಕ್ಕೆ ಬಂದರೆ, ಸೌದಿ ಅರೇಬಿಯಾದಲ್ಲಿ ಸರ್ಕಾರ ಕಾನೂನಿನ ಹೆಸರಿನಲ್ಲಿ ಪ್ರೇಮಿಗಳಿಗೆ ಶಿಕ್ಷೆ ವಿಧಿಸಿದರೆ, ನಮ್ಮಲ್ಲಿ ‘ಮರ್ಯಾದೆಗೇಡು ಹತ್ಯೆ’ಯ ಹೆಸರಿನಲ್ಲಿ ಹೆತ್ತವರೇ, ಜಾತಿ ಸಂಘಟನೆಗಳೇ ಕೋರ್ಟು-ಕಚೇರಿಗಳ ಹಂಗಿಲ್ಲದೆ ಪ್ರೇಮಿಗಳನ್ನು ಬರ್ಬರವಾಗಿ ಕೊಚ್ಚಿ ಹಾಕುತ್ತಾರೆ. ಕರ್ನಾಟಕದಲ್ಲೇ ನಡೆದ ಅನೇಕ ಅಂತರ್ಜಾತಿ ಮತ್ತು ಅಂತರ್ಧಮೀ್ರಯ ಪ್ರೇಮಿಗಳ ಹತ್ಯೆಗಳು ಇದಕ್ಕೆ ಸಾಕ್ಷಿ.

ಗಾಜಾದ ಮಕ್ಕಳ ಸಾವಿನ ಮುಂದೆ ಮೌನವೇಕೆ?
ಮಾನವ ಹಕ್ಕುಗಳ ಕಾಳಜಿ ಎಂಬುದು ಗಡಿಗಳನ್ನು ಮೀರಿದ್ದು. ಪ್ಯಾಲೆಸ್ಟೈನ್‌ನ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ನಿರಂತರ ಬಾಂಬ್ ದಾಳಿಗಳಿಗೆ ಬಲಿಯಾದ ಸುಮಾರು 20 ಸಾವಿರಕ್ಕೂ ಹೆಚ್ಚು ಮುಗ್ಧ ಕಂದಮ್ಮಗಳ ಮಾರಣಹೋಮ ಜಗತ್ತಿನ ಕಣ್ಣಮುಂದೆಯೇ ನಡೆಯಿತು. ಆಸ್ಪತ್ರೆಗಳು, ಶಾಲೆಗಳು ಸ್ಮಶಾನವಾದಾಗ, ಹಸುಗೂಸುಗಳು ಆಹಾರವಿಲ್ಲದೆ, ಚಿಕಿತ್ಸೆಯಿಲ್ಲದೆ ಪ್ರಾಣಬಿಟ್ಟಾಗ ಅದನ್ನು ಸಮರ್ಥಿಸಿಕೊಂಡವರು ಅಥವಾ ಜಾಣಕುರುಡು ಪ್ರದರ್ಶಿಸಿದವರು, ಈಗ ಏಕಾಏಕಿ ಸೌದಿಯ ಘಟನೆಯನ್ನು ಮುಂದಿಟ್ಟುಕೊಂಡು ‘ಮಾನವೀಯತೆ’ಯ ಪಾಠ ಮಾಡುವುದು ಹಾಸ್ಯಾಸ್ಪದವಲ್ಲದೆ ಮತ್ತೇನು?

ಪ್ರಶ್ನಿಸುವ ನೈತಿಕತೆ ಯಾರಿಗಿದೆ?
ಕಡೆಯದಾಗಿ ನಾನು ಹೇಳುವುದು ಏನೆಂದರೆ, ಯಾರಿಗೆ ಜಾತಿ, ಧರ್ಮ, ದೇಶಗಳ ಹಂಗಿಲ್ಲದೆ ಎಲ್ಲಾ ಬಗೆಯ ಹಿಂಸೆಯನ್ನು ಕಂಡಾಗಲೂ ರಕ್ತ ಕುದಿಯುತ್ತದೆಯೋ, ಯಾರು ಕಥುವಾದ ಮಗುವಿನ ಪರವಾಗಿ, ದಲಿತ ಯುವಕರ ಬದುಕುವ ಹಕ್ಕಿನ ಪರವಾಗಿ ಮತ್ತು ಗಾಜಾದ ಮಕ್ಕಳ ಜೀವದ ಪರವಾಗಿ ದನಿ ಎತ್ತಿದ್ದರೋ ಅವರಿಗೆ ಮಾತ್ರವೇ ಸೌದಿ ಆಡಳಿತದ ಅಮಾನವೀಯತೆಯನ್ನು ಖಂಡಿಸುವ ನೈತಿಕ ಹಕ್ಕಿದೆ. ಉಳಿದವರದ್ದು ಅಂದರೆ, ಈ ಸೆಲೆಕ್ಸೆಡ್ ವಿಚಾರಗಳಿಗಷ್ಟೇ ಮಾತನಾಡುವ ಸಂಘಪರಿವಾರದ ನಡೆಗಳು, ಕೇವಲ ತಮ್ಮ ರಾಜಕೀಯ ಮತ್ತು ಧಾರ್ಮಿಕತೆಯ ಹಿಡನ್ ಅಜೆಂಡಾಗಳಿಗೆ ತಕ್ಕಂತೆ ನಡೆಸುವ ‘ಸೆಲೆಕ್ಟಿವ್’ ಬೊಬ್ಬೆಯಷ್ಟೇ.

ಪ್ರೇಮವೆಂಬ ನಿಸರ್ಗದ ಕೊಡುಗೆ ಮತ್ತು ಗಲ್ಲುಶಿಕ್ಷೆಯ ಕ್ರೌರ್ಯ
ಮಂದಿರವಾಗಲಿ, ಮಸೀದಿಯಾಗಲಿ, ಚರ್ಚ್ ಆಗಲಿ-ಯಾವುದೇ ಧಾರ್ಮಿಕ ಕಟ್ಟಡಗಳಿಗಿಂತ ಮನುಷ್ಯನ ಜೀವ ಮತ್ತು ಭಾವನೆಗಳು ದೊಡ್ಡದು. ಪ್ರೇಮ ಎಂಬುದು ಪ್ರಕೃತಿ ಪ್ರತಿ ಜೀವಿಗೂ ನೀಡಿರುವ ಸಹಜ ಕೊಡುಗೆ. ಧರ್ಮದ ಕಟ್ಟುಪಾಡುಗಳು ಮತ್ತು ಪಾವಿತ್ರ್ಯತೆಯ ಹೆಸರಿನಲ್ಲಿ ಪ್ರೇಮವನ್ನು ಅಪರಾಧವಾಗಿ ನೋಡುವುದು ಮೂಲಭೂತವಾದಿ ಮನಸ್ಥಿತಿಯ ಲಕ್ಷಣ. ಒಂದು ವೇಳೆ ಧಾರ್ಮಿಕ ಸ್ಥಳಗಳ ನಿಯಮ ಉಲ್ಲಂಘನೆಯಾಗಿದ್ದರೆ ಅದಕ್ಕೆ ಸಣ್ಣಮಟ್ಟದ ಕಾನೂನು ಕ್ರಮ ಇರಬಹುದೇ ಹೊರತು, ಪ್ರೀತಿಸಿದ ಜೀವಗಳನ್ನು ನೇಣಿಗೇರಿಸುವುದು ವಿಕೃತಿಯ ಪರಮಾವಧಿ.

ಅಸಲಿಗೆ, ಆಧುನಿಕ ನಾಗರಿಕ ಜಗತ್ತಿನಲ್ಲಿ ‘ಗಲ್ಲುಶಿಕ್ಷೆ’ ಎಂಬ ಪರಿಕಲ್ಪನೆಯೇ ಅತ್ಯಂತ ಅನಾಗರಿಕವಾದದ್ದು. ಕಾನೂನಿನ ಹೆಸರಿನಲ್ಲಿ ಪ್ರಭುತ್ವವೇ ಒಬ್ಬ ಮನುಷ್ಯನ ಜೀವ ತೆಗೆಯುವುದು ನ್ಯಾಯವಲ್ಲ, ಅದು ‘ಸಾಂಸ್ಥಿಕ ಕೊಲೆ’ (State-sponsored murder). ಗಲ್ಲುಶಿಕ್ಷೆಯಿಂದ ಸಮಾಜದಲ್ಲಿ ಅಪರಾಧಗಳು ಕಡಿಮೆಯಾಗುತ್ತವೆ ಎಂಬುದಕ್ಕೆ ಜಗತ್ತಿನಲ್ಲೆಲ್ಲೂ ವೈಜ್ಞಾನಿಕ ಪುರಾವೆಗಳಿಲ್ಲ. ತಪ್ಪು ಮಾಡಿದ ಮನುಷ್ಯನನ್ನು ತಿದ್ದಲು, ಆತನಿಗೆ ಪಶ್ಚಾತ್ತಾಪ ಪಡಲು ಅವಕಾಶ ನೀಡಬೇಕೇ ಹೊರತು, ಆತನ ಉಸಿರನ್ನೇ ನಿಲ್ಲಿಸುವ ಹಕ್ಕು ಯಾವುದೇ ಸರ್ಕಾರಕ್ಕಿಲ್ಲ.

ಜಗತ್ತಿನ 110ಕ್ಕೂ ಹೆಚ್ಚು ದೇಶಗಳು ಈಗಾಗಲೇ ಗಲ್ಲುಶಿಕ್ಷೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಸೌದಿ ಅರೇಬಿಯಾ, ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳೂ ಈ ಅಮಾನವೀಯ ಗಲ್ಲುಶಿಕ್ಷೆಯನ್ನು ಕಾನೂನು ಪುಸ್ತಕದಿಂದ ಶಾಶ್ವತವಾಗಿ ಅಳಿಸಿಹಾಕಬೇಕಿದೆ. ಜಾತಿವಾದ, ಧರ್ಮಾಂಧತೆ ಮತ್ತು ಯುದ್ಧೋನ್ಮಾದವನ್ನು ಮೀರಿ ನಿಲ್ಲುವ ನಿಜವಾದ ಮಾನವೀಯತೆಯಷ್ಟೇ ಇವತ್ತಿನ ಯುವಜನತೆಯ ಆದರ್ಶವಾಗಬೇಕಿದೆ.

You cannot copy content of this page

Exit mobile version