Thursday, June 13, 2024

ಸತ್ಯ | ನ್ಯಾಯ |ಧರ್ಮ

ಸಂಗೊಳ್ಳಿ ರಾಯಣ್ಣ ಎಂಬ ಸ್ವಾತಂತ್ರ್ಯ ದೀವಿಗೆ

ಬ್ರಿಟಿಷ್ ಸರಕಾರಕ್ಕೆ ಸಿಂಹಸ್ವಪ್ನವಾಗಿದ್ದ, ತಾಯ್ನೆಲಕ್ಕಾಗಿ ನಗುನಗುತ್ತಲೇ ನೇಣಿಗೆ ಕೊರಳೊಡ್ಡಿ ಹುತಾತ್ಮರಾದ ಕೆಚ್ಚೆದಯ ಹೋರಾಟಗಾರ, ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ಇಂದು. ಅವರನ್ನು ಗೌರವಪೂರ್ವಕವಾಗಿ ನೆನೆಯೋಣ.

ಸಂಗೊಳ್ಳಿ ರಾಯಣ್ಣ 1795 ರ ಆಗಸ್ಟ್‌ ೧೫ರಂದು ಸಂಗೊಳ್ಳಿಯಲ್ಲಿ ತಾಯಿ ಕೆಂಚವ್ವ ಮಾತೆಯ ಉದರದಲ್ಲಿ ಜನಿಸಿದ. ಕೆಂಚವ್ವ ತಾಯಿಯ ತವರು ಊರು ನೇಗಿನಾಳ. ತಂದೆ ಬರಮಪ್ಪ. ಕುಟುಂಬದಲ್ಲಿ ಕ್ಷಾತ್ರತೇಜಸ್ಸು ವಂಶವಾಹಿನಿಯಿಂದ ಹರಿದುಬಂದಿತ್ತು. ರಾಯಣ್ಣನ ಅಜ್ಜ ರಾಗಪ್ಪ. ಚಿನಗಿ ಕೋವಾಡ್ ಕಾಳಗದಲ್ಲಿ ವೈರಿಗಳ ವಿರುದ್ಧ ತೋರಿದ ಸಾಹಸಕ್ಕೆ ಕಿತ್ತೂರಿನ ಅಂದಿನ ದೊರೆ ವೀರಪ್ಪ ದೇಸಾಯಿ ಅಂದರೆ ಮಲ್ಲಸರ್ಜ ದೇಸಾಯಿ ತಂದೆ “ಸಾವಿರ ಒಂಟೆಗಳ ಸರದಾರ” ಎಂಬ ಬಿರುದನ್ನು ನೀಡಿದ್ದ.


1824 ಅಕ್ಟೋಬರ್ 23 ರಂದು ಕಿತ್ತೂರ ಸಂಸ್ಥಾನದವರು ಟ್ಯಾಕರೆ ತಲೆ ಕಡಿದ ನಂತರ ಬ್ರಿಟಿಷರು ಹೆಡೆ ತುಳಿದ ನಾಗರಹಾವಿನಂತೆ ಆಗಿದ್ದರು. ಸುತ್ತಮುತ್ತಲಿನ ಸಂಸ್ಥಾನಿಕರು ಸೇರಿಸಿಕೊಂಡು ಕಿತ್ತೂರಿನ ವಿರುದ್ದ ಮಾಡಿ 1824 ನವೆಂಬರ್ 30 ರಿಂದ ಡಿಸೆಂಬರ್ ಐದರ ವರೆಗೆ ಕಿತ್ತೂರಿನ ಮೇಲೆ ದಾಳಿ ಮಾಡಿದರು. ಡಿಸೆಂಬರ್ 4 ರಂದು ಸಂಗೊಳ್ಳಿರಾಯಣ್ಣನ ಬಂಧನ. ಡಿಸೆಂಬರ್ 5 ರಿಂದ 12ರ ವರೆಗೆ ಕಿತ್ತೂರು ಕೋಟೆಯನ್ನು ಜಪ್ತಿ ಮಾಡಿದ ಬ್ರಿಟಿಷರು 4 ಲಕ್ಷ ರೂಪಾಯಿಗಳ ವಜ್ರ ಆಭರಣವನ್ನು ಲೂಟಿ ಮಾಡಿದರು. ಒತ್ತಾಯ ಪೂರ್ವಕವಾಗಿ ಸಂಸ್ಥಾನದ ಆಸ್ತಿಗೆ ರಾಣಿಚೆನ್ನಮ್ಮ ಸೊಸೆಯಂದಿರಾದ ವೀರಮ್ಮ ಜಾನಕಿಬಾಯಿ ಪಡೆದರು ನಂತರದಲ್ಲಿ ವಾರ್ಷಿಕ 40000 ವರ್ಷಾಸನ ವನ್ನು ನೀಡಿ ಗೃಹಬಂಧನದಲ್ಲಿರಿಸಿದರು. ಫೆಬ್ರವರಿ 2, 1829 ರಂದು ರಾಣಿ ಚೆನ್ನಮ್ಮಾಜಿಯ ನಿಧನದ ನಂತರ ಸಂಗೊಳ್ಳಿ ರಾಯಣ್ಣ ರೊಚ್ಚಿಗೆದ್ದ. ರಾಯಣ್ಣನಿಗೆ ವೀರಮ್ಮ( ಕಿತ್ತೂರಿನ ಕೊನೆಯ ರಾಣಿ) ಪ್ರೇರಣೆಯಾದಳು. ಇಲ್ಲಿಂದ ಸಂಗೊಳ್ಳಿ ರಾಯಣ್ಣ ನಲ್ಲಿ ಬೆಂಕಿ ಮತ್ತು ಬಿರುಗಾಳಿ ಎರಡನ್ನು ಸೇರಿಸಿ ಬ್ರಿಟಿಷರ ಆಡಳಿತ ವ್ಯವಸ್ಥೆ ಮೇಲೆ ರುದ್ರನರ್ತನ ಮಾಡಿದ.

1824 ಅಕ್ಟೋಬರ್ 27ರಂದು ಕಿತ್ತೂರು ಸಂಸ್ಥಾನದ ದತ್ತು ಪುತ್ರನಾದ ಮಾಸ್ತಮರಡಿಯ ಬಾಳನಗೌಡನ ಮಗ ಶಿವಲಿಂಗಪ್ಪನಿಗೆ ಉರ್ಪ್ ಸವಾಯಿ ಮಲ್ಲಸರ್ಜನಿಗೆ ಮಾಡಿರುವ (ಎರಡನೇಯ ಸಾರಿ). ಪಟ್ಟಾಭಿಷೇಕದ ಸಮಾರಂಭದಲ್ಲಿ ಸಂಗೊಳ್ಳಿರಾಯಣ್ಣ ಭಾಗಿಯಾಗಿರುವನು. ಹೀಗಾಗಿ ದತ್ತಕ ದೊರೆಯನ್ನು ಮುಂದಿಟ್ಟುಕೊಂಡು ಹೋರಾಟದ ರಣಕಹಳೆ ಮೊಳಗಿಸುವ ನಿರ್ಧಾರ ರಾಯಣ್ಣ ಇಲ್ಲಿಯೇ ಮಾಡಿರಬೇಕು.

ರಾಯಣ್ಣ ಒಳ್ಳೆಯ ಕಟ್ಟುಮಸ್ತಾದ ದೇಹ, ಕುಸ್ತಿ, ಅಂಗಸೌಷ್ಟವದಲ್ಲಿ ಸದಾಕಾಲ ಶರೀರವನ್ನು ದಂಡಿಸಿದ ಕಾರಣ ಒಳ್ಳೆಯ ಚಾರಣಿಗನೂ ಆಗಿದ್ದ. ಕಿತ್ತೂರು ಸುತ್ತಮುತ್ತಲಿರುವ ಗುಡ್ಡಗಾಡುಗಳ ಪರಿಚಯ ಆತನಿಗಿತ್ತು. 1824 ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ನಡೆದ ಕಿತ್ತೂರಿನ ಎರಡನೆಯ ಕದನದಲ್ಲಿ ಭಾಗಿಯಾದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು 1824 ರ ಡಿಸೆಂಬರ್ 4ರಂದು ಬಂಧಿಸುವರು. 23 ನೇ ಅಕ್ಟೋಬರ್‌ 1825 ರಂದು ಮುಂಬೈ ಪ್ರೆಸಿಡೆನ್ಸಿಯ ಕಮಿಷನರ್ ಆಗಿರುವ ಚಾಪ್ಲಿನ್ ಮಾಡಿದ ಆದೇಶದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಆತನ ಜೊತೆಗಿರುವ ಇತರರನ್ನು ಸನ್ನಡತೆಯ ಬಗೆಗೆ ಖಾತ್ರಿಯನ್ನು ಮಾಡಿಕೊಂಡು ಬಿಡುಗಡೆ ಮಾಡುವಂತೆ ಧಾರವಾಡದ ಜಿಲ್ಲಾಧಿಕಾರಿ ಮತ್ತು ಪೊಲಿಟಿಕಲ್ ಏಜೆಂಟ ಎಚ್.ಬೇಬರನಿಗೆ ಆದೇಶ ಮಾಡುತ್ತಾನೆ. ಈ ಆದೇಶ ಪತ್ರದಲ್ಲಿ ಐವರು ಹೋರಾಟಗಾರರ ಹೆಸರುಗಳಿವೆ. ಅಲ್ಲಿಂದ ಸಂಗೊಳ್ಳಿರಾಯಣ್ಣ ಎಲ್ಲಿ ಹೋದ ಏನು ಮಾಡಿದ ಎಂಬುದು ನಿಗೂಢ. ಅಜ್ಞಾತವಾಗಿ ಇದ್ದುಕೊಂಡೇ ಬ್ರಿಟಿಷ್ ಸರಕಾರದ ಹೆಡೆಮುರಿ ಕಟ್ಟಲು ತನ್ನ ಸಹಚರರಾದ ಬಿಚ್ಚುಗತ್ತಿ ಚನ್ನಬಸಪ್ಪ, ವಡ್ಡರ ಯಲ್ಲಣ್ಣ, ಹಬಸಿ ರಾಮ ಮುಂತಾದವರ ಜೊತೆ ಗುಪ್ತಗಾಮಿನಿಯಾಗಿ ವರ್ಣರಂಜಿತ ಕಿತ್ತೂರಿನ ಕನಸು ಕಾಣುತ್ತ ಅದಕ್ಕೆ ಹೋರಾಡುವ ಪಡೆಯ ಜಾಲ ಕಟ್ಟುವ ಕಾಯಕದಲ್ಲಿ ನಿರತನಾದ.

ಜನವರಿ 23,1825 ರಂದು ಧಾರವಾಡ ಜೈಲಿನಿಂದ ಬಿಡುಗಡೆಯಾದ ನಂತರದಲ್ಲಿ ಕಿತ್ತೂರು ಸಂಸ್ಥಾನದ ಸ್ಥಿತಿಗತಿಯನ್ನು ನೆನೆಸಿಕೊಂಡು ಮರಗಿದ. ಪ್ರತಿಕಾರಕ್ಕಾಗಿ ಬ್ರಿಟಿಷರ ವಿರುದ್ಧ ರಣತಂತ್ರ ರೂಪಿಸುವ ಕಾಯಕದಲ್ಲಿ ನಿರತನಾದ. 1828 ನೇ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಕಂಪನಿ ಸರ್ಕಾರದ ನಿಷ್ಠರನ್ನು ಮೆತ್ತಗೆ ಮಾಡಿರುವ ಘಟನೆ ಕೆಳಗಿನಂತಿದೆ..

ಫೆಬ್ರವರಿ 2, 1829 ರಂದು ರಾಣಿ ಚೆನ್ನಮ್ಮಾಜಿಯ ವಯೋಸಹಜ ಕಾರಣ ನಿಧನ ಹೊಂದುತ್ತಾಳೆ. ಸಂಗೊಳ್ಳಿ ರಾಯಣ್ಣ ಮತ್ತು ಆತನ ಸಹಚರರು ಮರಗುತ್ತಾರೆ. ರಾಯಣ್ಣನ ಮನಸ್ಸು ಅನಾಥತೆಯನ್ನು ಅನುಭವಿಸುತ್ತದೆ. ರಾಯಣ್ಣ ಸಹಚರರನ್ನು ಕೂಡಿಕೊಂಡು ಮುಂದಿನ ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡು ಅದನ್ನು ಸಂಗಡಿಗರೊಂದಿಗೆ ಹಂಚಿಕೊಂಡಿದ್ದು ಬಡಾಲ ಅಂಕಲಗಿ ಗುಡ್ಡದಲ್ಲಿ. ಸಹಚರರ ಜೊತೆ ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಂಡು, ಸವಾಯಿ ಮಲ್ಲಸರ್ಜನಿಗೆ ಪಟ್ಟಕಟ್ಟುವ ಹಠ ರಾಯಣ್ಣನದು. ಸಂಗೊಳ್ಳಿ ರಾಯಣ್ಣನಿಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಯಿತು. 1830 ಜನವರಿ 1 ರಂದು ಸಂಸ್ಥಾನದ ದತ್ತುಪುತ್ರನಾದ ಸವಾಯಿ ಮಲ್ಲಸರ್ಜನನ್ನು ಮುಂಚೂಣಿಯಲ್ಲಿ ಇಟ್ಟುಕೊಂಡು B ವಿರುದ್ದ ಹೋರಾಟ ಕಟ್ಟಲು ಸಂಗೊಳ್ಳಿ ರಾಯಣ್ಣ ಮತ್ತು ಆತನ ಸಹಚರರು ನಿರ್ಧರಿಸಿದರು.

ಸಂಗೊಳ್ಳಿ ರಾಯಣ್ಣ ಮತ್ತು ದತ್ತಕ ಮಗನಾದ ಸವಾಯಿ ಮಲ್ಲಸರ್ಜ ಮತ್ತು ಸಹಚರರು ಕಿತ್ತೂರಿಗೆ ಬಂದು ರಾಜಗುರು ಗದ್ದುಗೆಗೆ ನಮಸ್ಕರಿಸಿ ಪೂಜೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಐದುನೂರು ಜನ ಬಂಟರು ಉಪಸ್ಥಿತರಿದ್ದರು. ಅಲ್ಲಿಂದ ಡೂಂಬರ್ಕೊಪ್ಪದ ದಟ್ಟಾರಣ್ಯದಲ್ಲಿ ವಿವಿಧ ತಂಡಗಳಾಗಿ ಹೋರಾಟಕ್ಕೆ ಇಳಿದರು. ರಾಯಣ್ಣ ಮತ್ತು ಸವಾಯಿ ಮಲ್ಲಸರ್ಜ ಮಾತ್ರ ಬೇರೆ ತಂಡದಲ್ಲಿ ಅರಣ್ಯ ಸೇರಿದರು. ರಾಯಣ್ಣ ಮತ್ತು ಆತನ ಸಹಚರರ ತಂಡದ ಮೇಲೆ ಬ್ರಿಟಿಷರು ಹದ್ದಿನ ಕಣ್ಣಿಟ್ಟಿದ್ದರು. ಈ ಸಂದರ್ಭದಲ್ಲಿ ಬಿಡಿ ತಾಲೂಕಿನ ತಿಜೋರಿಯಲ್ಲಿ ಸರಕಾರದ ಸಾಕಷ್ಟು ಹಣ ಇದೆ ಎಂಬ ಮಾಹಿತಿ ಪಡೆದು ದಾಳಿ ಮಾಡುವ ಯೋಜನೆ ಸಿದ್ಧ ಮಾಡಿಕೊಂಡರು. ಜನವರಿ 1, 1830 ರ ರಾತ್ರಿ 3 ಗಂಟೆ ಸುಮಾರಿಗೆ ಸಂಗೊಳ್ಳಿರಾಯಣ್ಣನ ನೇತೃತ್ವದಲ್ಲಿ ಬಿಡಿ ತಾಲೂಕು ಕಚೇರಿ ಮೇಲೆ ದಾಳಿ ಮಾಡಿ ಖಜಾನೆಯಲ್ಲಿದ್ದ 1909 ರೂಪಾಯಿ ವಶಮಾಡಿಕೊಂಡರು. ಖಜಾನೆಯಲ್ಲಿ 28000 ರೂಪಾಯಿಗಳು ಇದ್ದಿತ್ತು. ಅದನ್ನು ಮುಂಬೈಗೆ ಮುನ್ನಾದಿನ ಅಧಿಕಾರಿಗಳು ರವಾನಿಸಿದ್ದರು. .

ಹೀಗಾಗಿ ಸರಕಾರದ ಬಹಳಷ್ಟು ಹಣ ಸಂಗೊಳ್ಳಿರಾಯಣ್ಣನ ತಂಡಕ್ಕೆ ಸಿಗದೇ ಇರಬಹುದು, ಆದರೆ ತಾಲೂಕ ಕಚೇರಿಯ ಮೇಲೆ ದಾಳಿ ಮಾಡಿ ಬ್ರಿಟಿಷರ ಆಡಳಿತದ ಎದೆ ಮೇಲೆ ಭತ್ತ ಕುಟ್ಟಿದ ಯಮಯಾತನೆಯ ನೋವಿನ ಅನುಭವವನ್ನು ಬ್ರಿಟಿಷ್ ಸರಕಾರಕ್ಕೆ ಒದಗಿಸುವುದಾಗಿತ್ತು. ಅದರಲ್ಲಿ ಸಂಗೊಳ್ಳಿ ರಾಯಣ್ಣನ ತಂಡ ಯಶಸ್ವಿಯಾಗಿತ್ತು. ಜೊತೆಗೆ ಬ್ರಿಟಿಷ್ ಸರ್ಕಾರದ ಕಾಗದಪತ್ರಗಳನ್ನು ಬೆಂಕಿಗೆ ಆಹುತಿ ಕೊಟ್ಟರು. ಸರಕಾರದ ಕೆಲವು ನಿಷ್ಠರನ್ನು ಹೆಡೆಮುರಿ ಕಟ್ಟಿದರು. ಕುಂಪನಿ ಸರಕಾರ ಒಳಒಳಗೆ ಕೆಂಗಟ್ಟಿತ್ತು.

ಧಾರವಾಡದ ಅಂದಿನ ಜಿಲ್ಲಾಧಿಕಾರಿ ತಾಲೂಕಿನ ಅಮಲ್ದಾರರಿಗೆ ಸಂಗೊಳ್ಳಿರಾಯಣ್ಣ ಮತ್ತು ಅವರ ತಂಡದ ಸದಸ್ಯರನ್ನು ಸೆರೆಹಿಡಿದು ಶಿಕ್ಷಿಸುವಂತೆ ಆದೇಶ ಮಾಡಿದ. ಇದಕ್ಕೆ ಕಾರಣಕರ್ತ ರಾಯಣ್ಣನ ಸ್ವಂತ ತಾಲೂಕಿನ ಅಮಲ್ದಾರ್ ಹುಚ್ಚೋಳಿ ಕೃಷ್ಣರಾವ್ (ಮೂಲತಃ ರಾಯಚೂರ ಜಿಲ್ಲೆಯವನು) ಈತ ಕುಹಕಿ ಮತ್ತು ಕುತಂತ್ರಿ ಆಗಿದ್ದ. ಆರನೇ ತಾರೀಕಿನಂದು ಸಂಗೊಳ್ಳಿರಾಯಣ್ಣನ ತಂಡ ನಂದಗಡಕ್ಕೆ ಪ್ರಯಾಣ ಬೆಳೆಸಿತು. ಸಂಗೊಳ್ಳಿರಾಯಣ್ಣನ ತಂಡಕ್ಕೆ ಖಾನಾಪುರಕ್ಕಿಂತ ಹೆಚ್ಚಾಗಿ ನಂದಗಡದ ಮೇಲೆ ಹೆಚ್ಚಿನ ಪ್ರೀತಿ ಇತ್ತು ಕಾರಣ ಖಾನಾಪುರ ಬ್ರಿಟಿಷರ ಕೈವಶವಾಗಿ ಕಿತ್ತೂರಿನ ಕಾರಸ್ಥಾನವನ್ನು ಪರಿವರ್ತನೆಯಾದರೆ ಅದಕ್ಕೆ ಪರ್ಯಾಯವಾಗಿ ಕಿತ್ತೂರು ಅರಸರು ನಂದಗಡ ವನ್ನು ವ್ಯಾಪಾರ ಕೇಂದ್ರವನ್ನಾಗಿ ಬೆಂಬಲಿಸಿದ್ದರು. ನಂದಗಡದ ಜನ ಸಂಗೊಳ್ಳಿ ರಾಯಣ್ಣನ ತಂಡಕ್ಕೆ ಸಾಕಷ್ಟು
ಪ್ರೀತಿ-ವಿಶ್ವಾಸ, ತನು-ಮನ-ಧನದಿಂದ ಬೆಂಬಲಿಸಿದ್ದರು. ನಂದಗಡಕ್ಕೆ ಬಂದಂತಹ ಸಂದರ್ಭದಲ್ಲಿ ಜನ ಹಿಗ್ಗಿನಿಂದ ಹೋರಾಟಗಾರರನ್ನು ಬರಮಾಡಿಕೊಂಡರು.

1818 ರಂದು ಮನ್ರೋ ಒಪ್ಪಂದದ ಖಾನಾಪುರ ಬ್ರಿಟಿಷ್ ಬ್ರಿಟಿಷರ ಕೈವಶವಾದಾಗ ಕಿತ್ತೂರ ಸಂಸ್ಥಾನಿಕರು ಒಳಒಳಗೆ ಹಲ್ಲು ಕಟಕಿಸಿದ್ದರು. ಖಾನಪುರಕ್ಕೆ ಪರ್ಯಾಯವಾಗಿ ನಂದಗಡವನ್ನು ಪ್ರೀತಿಯಿಂದ ಕಿತ್ತೂರ ಸಂಸ್ಥಾನದವರು ಬೆಳಸಿದರು. ಮುಂದೆ ನಂದಗಡದ ಜನ ರಾಯಣ್ಣನ ಪ್ರೀತಿ-ವಿಶ್ವಾಸ ಹೋರಾಟಕ್ಕೆ ತನುಮನ ಧನವನ್ನು ಅರ್ಪಿಸಿ ರಾಯಣ್ಣನಿಗೆ ಜೊತೆಯಾದರು. ನಂತರದಲ್ಲಿ ಸಂಗೊಳ್ಳಿ ರಾಯಣ್ಣನ ತಂಡ ದಿನಾಂಕ 8-1-1830 ರಂದು ಖಾನಾಪುರ ಮೇಲೆ ದಾಳಿ ಮಾಡಿತು. ಬ್ರಇಟಿಷ ನೆಲೆಗಳ ಮೇಲೆ ಎಲ್ಲ ದಿಕ್ಕುಗಳಿಂದ ಹೋರಾಟಗಾರರು ಮುತ್ತಿಗೆ ಹಾಕುತ್ತಿರುವುದಕ್ಕೆ ಬ್ರಿಟಿಷ್ ಅಧಿಕಾರಿಗಳು ತಮ್ಮ ಪತ್ರ ವಿನಿಮಯದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.

ಖಾನಾಪುರದ ಮೇಲಿನ ದಾಳಿಯ ಸಂದರ್ಭದಲ್ಲಿ ಸುಮಾರು ಮೂರು ಸಾವಿರ ಜೊತೆಗಾರರು ರಾಯಣ್ಣನ ಜೊತೆಗೆ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಮಾರನೇ ದಿನ ರಾಯಣ್ಣನ ತಂಡ ಇಟಗಿ ಗ್ರಾಮಕ್ಕೆ ಭೇಟಿ ನೀಡಿತು. ರೈತರೆಲ್ಲ ಸೇರಿಸಿ 5000 ರೂ ನಗದು ಸಂಗ್ರಹಿಸಿ ನೀಡುವುದರ ಹೋರಾಟಕ್ಕೆ ಬೆಂಬಲಿಸಿದರು. ನಂತರ ಪಾರಿಶ್ವಾಡ ಮಾರ್ಗವಾಗಿ ಬಡಾಲ ಅಂಕಲಗಿ ತಲುಪಿ ರಾಚೋಟೆಪ್ಪ ಮತ್ತು ಗಜಪತಿ ಎಂಬವರು ನೀಡಿದ ಐದುನೂರು ರೂಪಾಯಿಗಳನ್ನು ಸ್ವೀಕರಿಸಿದರು. ನಂತರ ಹಡಗಲಿ ಗ್ರಾಮಕ್ಕೆ ರಾಯಣ್ಣನ ಸೈನ್ಯ ಭೇಟಿ ನೀಡಿತು. ಎಲ್ಲ ಹೋರಾಟಗಳಿಂದ ಬೆಚ್ಚಿಬಿದ್ದಿದ್ದ ಧಾರವಾಡದ ಅಂದಿನ ಜಿಲ್ಲಾಧಿಕಾರಿ ನಿಸ್ಬೆತ್ತ ತನ್ನ ನಿಯಂತ್ರಣದಲ್ಲಿರುವ ತಹಸಿಲ್ದಾರ್ ಮತ್ತು ಸೇಟ್ ಸನದಿಗಳ ಬಲ ಕ್ರೂಢೀಕರಣ ಮಾಡಿದನು. ಸಂಪಗಾವ ತಾಲೂಕಿನ ತಹಸೀಲ್ದಾರ್ ಹುಚ್ಹೋಳಿ ಕೃಷ್ಣ ರಾವ್ ಗೆ ಹೆಚ್ಚಿನ ಗಮನ ನೀಡಿದರು. ಅವನ ಬೇಡಿಕೆಯ ಮೇರೆಗೆ ಹೆಚ್ಚುವರಿ ಸೇಟ್ಸನದಿ ಮತ್ತು ಸವಾರರನ್ನು ಕಳುಹಿಸಿಕೊಟ್ಟನು. ಎಲ್ಲರೂ ಸೇರಿ ರಾಯಣ್ಣನ ಚಲನವಲನಗಳ ಲೆಕ್ಕಾಚಾರ ಹಾಕಲು ಪ್ರಾರಂಭಿಸಿದರು. ಆದರೆ ರಾಯಣ್ಣನ ಹೆಜ್ಜೆಗುರುತುಗಳು ಬ್ರಿಟಿಷ ನಿಷ್ಠರಿಗೆ ಯಾವತ್ತು ಸಿಗಲೇ ಇಲ್ಲ.

ದಿನಾಂಕ 11.01.1830ರಂದು ಸಂಪಗಾವಿಯಿಂದ ಉತ್ತರಕ್ಕಿರುವ ಜಕ್ಕನಾಯಕನ ಕೊಪ್ಪದ ಮೇಲೆ ಮುತ್ತಿಗೆ ಹಾಕಿ ಅಲ್ಲಿ ಸರಕಾರಿ ಚಾವಡಿ ಮತ್ತು ಸರ್ಕಾರಿ ಕಾಗದಪತ್ರಗಳನ್ನು ಸುಟ್ಟು ಹಾಕಿದರು. ಪ್ರತಿವಾದ ಮಾಡಿದವರನ್ನು ಹೊಸಕಿ ಹಾಕಿದರು. ಆಗ ಸಂಪಗಾಂವ್ದ ತಹಸಿಲ್ದಾರ ನಂದಗಡದಲ್ಲಿ ಇದ್ದನು. ನೂರು ಜನ ಗ್ರಾಮರಕ್ಷಕರನ್ನು ಮತ್ತು 15 ಜನ ಕುದುರೆಗಳ ಗಳನ್ನು ಕೃಷ್ಣರಾವ್ ತನ್ನೊಂದಿಗೆ ಇಟ್ಟುಕೊಂಡಿದ್ದನು. ಸಂಗೊಳ್ಳಿ ರಾಯಣ್ಣನ ಸುಮಾರು ನಾಲ್ಕು ನೂರು ಜನ ಸಹಚರರ ಜೊತೆ 1830ರ ಸೂರ್ಯೋದಯದ ಕ್ಕಿಂತ ಮುಂಚೆ ಸಂಪಗಾಂವ್ ಮೇಲೆ ಮುತ್ತಿಗೆ ಹಾಕಿದನು. ಸಂಪಗಾಂವ್‌ ನಲ್ಲಿ ಸಂಗ್ರಹವಾಗಿದ್ದ 1000 ರೂಪಾಯಿಗಳನ್ನು ಅಮಲ್ದಾರ ಕಚೇರಿಯ ಸಮೀಪದ ಮಸೀದಿಯ ಮೇಲಿಟ್ಟು ಬಂಧೂಕುದಾರಿಗಳನ್ನು ಕಾವಲಿರಿಸಿದ್ದರು. ಇದೆಲ್ಲಾ ಕೃಷ್ಣ ರಾವ್‌ ನ ಅಣತಿಯ ಮೇರೆಗೆ ನಡೆದಿದ್ದು. ಅಮಲ್ದಾರ್ ಕಚೇರಿಯನ್ನು ಕಾಯಲು ದೇವಲಾಪುರ ದಿಂದ 20 ಜನ ಸಾಹಸಿಗರನ್ನು ಕರೆಸಿದ್ದರು. ಸಂಗೊಳ್ಳಿರಾಯಣ್ಣ ಸಂಪಗಾಂವ್ ದ ಅಮಲ್ದಾರ್ ಕಚೇರಿಗೆ ದಾಳಿ ಮಾಡಿದ ತಕ್ಷಣ ಕಾವಲುಗಾರರೆಲ್ಲರೂ ರಾಯಣ್ಣನ ಜೊತೆ ಸೇರಿಕೊಂಡು ಸರಕಾರದ ಕಾಗದಪತ್ರಗಳನ್ನು ಸುಟ್ಟುಹಾಕಿದರು, ಕಚೇರಿಗೆ ಬೆಂಕಿ ಇಟ್ಟು ಪೀಠೋಪಕರಣ ಸುಟ್ಟುಹಾಕಿದರು.

ರಾಯಣ್ಣನ ತಂಡ ಮಸೀದಿಯ ಮೇಲಿದ್ದ 1000 ರೂ. ಇಟ್ಟಿದ್ದ ತಿಜೋರಿಯ ಕಡೆಗೆ ಲಕ್ಷ್ಯ ಇಟ್ಟರು. ಅದನ್ನು ಕಾಯಲು ನಿಂತಿದ್ದ ಅಧಿಕಾರಿ ಪಡೆ ಕಂಗಾಲಾಯಿತು. ಮೇಲಿನಿಂದ ಅಧಿಕಾರಿಗಳು ಮದ್ದುಗುಂಡುಗಳ ಬಳಕೆ ಪ್ರಾರಂಭಿಸಿದರು ಬೃಹತ್ ಪ್ರಮಾಣದ ಸಂಗೊಳ್ಳಿ ರಾಯಣ್ಣ ತಂಡದ ಸದಸ್ಯರು ಬ್ರಿಟಿಷ ನಿಷ್ಠರ ಮೇಲೆ ಎರಗಿತ್ತು ಎರಡು ಕಡೆಗೆ ಸಾವು-ನೋವು ಸಂಭವಿಸಿತ್ತು. ಈ ಘಟನೆಯನ್ನು ಬ್ರಿಟಿಷರು ವರದಿ ಮಾಡಿದ್ದು ಮಾತ್ರ ವಿಚಿತ್ರವಾಗಿತ್ತು.ತಮ್ಮ ಕಡೆಗೆ ಸಾವು-ನೋವು ಸ್ವಲ್ಪ ಪ್ರಮಾಣದ್ದಾಗಿದೆ ಎಂದು ವರದಿ ಮಾಡುವ ಮೂಲಕ ತಮ್ಮ ಅವಮಾನವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದರು . ರಾಯಣ್ಣ ಸಂಪಗಾವ್ ಮೇಲೆ ದಾಳಿ ಮಾಡುವ ಮುನ್ನಾದಿನ ಅಂದರೆ
7-1-1830ರ ಸಂಜೆ ಎಂದು ಸಂಪಗಾವ್ ಕಚೇರಿಯಲ್ಲಿನ 21500 ರೂಪಾಯಿಗಳನ್ನು ಬೈಲಹೊಂಗಲಕ್ಕೆ ಸಾಗಿಸಲಾಗಿತ್ತು . ಗುಪ್ತಚರ ಮಾಹಿತಿ ಮೂಲಕ ರಾಯಣ್ಣ ಸಂಪಗಾವ ಮೇಲೆ ದಾಳಿ ಮಾಡುವುದನ್ನು ತಿಳಿದು ಅಂದಿನ ಜಿಲ್ಲಾಧಿಕಾರಿ ಮಾಡಿದ ಉಪಾಯದಿಂದ ಬ್ರಿಟಿಷರು ಭಾರಿ ಮೊತ್ತದ ಹಣವನ್ನು ಉಳಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದರು. ನಂತರ ರಾಯಣ್ಣನ ತಂಡ ಸಂಪಗಾಂವ್ ದಿಂದ ದೇಶನೂರ ಅರಣ್ಯದತ್ತ ಸಾಗಿತು.13-1-1830 ರಂದು ಮರಿಕಟ್ಟಿ ಚಾವಡಿಯನ್ನು ಸಂಗೊಳ್ಳಿ ರಾಯಣ್ಣ ತಂಡ ಸುಟ್ಟುಹಾಕಿ ಬ್ರಿಟಿಷ್ ನಿಷ್ಠರನ್ನು ಬಡಿದು ಮೆತ್ತಗೆ ಮಾಡಿದರು.

ರಾಯಣ್ಣನ ನೇತೃತ್ವದ ಒಂದು ತಂಡವು ಸಂಗೂಳ್ಳಿಯ ಮೇಲೆ ಲಗ್ಗೆ ಇಟ್ಟು ಬಾಳಪ್ಪ ಕುಲಕರ್ಣಿ, ಅಂಚೆ ಕಾರ್ಯದ ಅಬ್ದುಲ್ಲಾ ,ಬಾಳಪ್ಪ ಕುಲಕರ್ಣಿ ಹಿಂದೆ ಸುಳಿದಾಡುತ್ತಿದ್ದ ತಳವಾರ ಪಕ್ಕೀರ ರಾಯಣ್ಣನ ದೃಷ್ಟಿಯಲ್ಲಿ ನೆಟ್ಟಿದ್ದರು. 1000 ದಷ್ಟು ಜೊತೆಗಾರರ ಜೊತೆಗೆ ರಾಯಣ್ಣ ಸಂಗೊಳ್ಳಿ ಯನ್ನು ಪ್ರವೇಶಿಸಿದಾಗ ಜನಸಾಮಾನ್ಯರೆಲ್ಲರು ಮನತುಂಬಿ ಅದ್ದೂರಿಯಾಗಿ ಬರಮಾಡಿಕೊಂಡರು. ಸಂಗೊಳ್ಳಿಯ ಸರ್ಕಾರಿ ಚಾವಡಿ ಅದರಲ್ಲಿನ ಕಾಗದ ಪತ್ರಗಳನ್ನೆಲ್ಲ ರಾಯಣ್ಣನ ಅನುಯಾಯಿಗಳು ಸಂಪೂರ್ಣವಾಗಿ ಸುಟ್ಟು ಬೂದಿ ಮಾಡಿದರು.ಕಂಪನಿ ಸರ್ಕಾರದ ಹಸ್ತ ಕರನ್ನು ,ನಿಷ್ಠರನ್ನು ಎಳೆದೆಳೆದು ತಂದು ಹಣ್ಣುಗಾಯಿ ನೀರುಗಾಯಿ ಮಾಡಿದರು. ಬಾಳಪ್ಪ ಕುಲಕರ್ಣಿಯ ಮನೆ ಬೆಂಕಿಗಾಹುತಿ ಆಯಿತು. ಆತನ ಸಂಬಂಧಿಕರೆಲ್ಲ ಎಲ್ಲೋ ಓಡಿಹೋಗಿ ಬದುಕಿ ಕೊಂಡರು.

ದಿನಾಂಕ 14-1-1830 ಸಂಕ್ರಮಣದ ದಿನದಂದು ಸಂಗೊಳ್ಳಿ ರಾಯಣ್ಣ ಮತ್ತು ಆತನ ಸಹಚರರು ತಂಡ ಕಿತ್ತೂರಿಗೆ ದಾಳಿ ಮಾಡಿತು.ಕಲ್ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಗುರುಸಿದ್ದಶ್ವೇರ ಶ್ರೀಗಳ ದರ್ಶನ ಪಡೆದರು. ಪೇಟೆಯಲ್ಲಿ ನಿರ್ಭೀತಿಯಿಂದ ಸುಳಿದಾಡಿದರು. ಬ್ರಿಟಿಷ ನಿಷ್ಠರಿಗೆ ಎಚ್ಚರಿಕೆ ಕೊಟ್ಟರು. ರಾಯಣ್ಣನ ತಂಡ ಕಿತ್ತೂರಿಗೆ ಭೇಟಿ ನೀಡಿರುವುದು ಬ್ರಿಟಿಷರ ಎದೆಯಮೇಲೆ ಬತ್ತ ಕುಟ್ಟಿದಂತೆ ಆಗಿತ್ತು. ಕಿತ್ತೂರು ನಾಡಿನಿಂದ ರಾಯಣ್ಣನ ತಂಡ ಬಾಳಗುಂದದ ಕಾಡಿಗೆ ಹೆಜ್ಜೆ ಇಟ್ಟಿತು. ಹಳಿಯಾಳ ಸರಕಾರಿ ಕಚೇರಿಯ ಲೂಟಿಗೆ ಯತ್ನಿಸಿದಾಗ ರಾಯಣ್ಣ ಎಡಗಾಲಿಗೆ ಗುಂಡು ತಾಗಿತು. ರಾಯಣ್ಣ ಮತ್ತು ಅವನ ತಂಡದವರನ್ನು ಬಂಧಿಸಲು ಜಿಲ್ಲಾಧಿಕಾರಿ-ನಿಸ್ಬೇತ್ ಇಂಗ್ಲಿಷ್ ಭಾಷೆ ಬಲ್ಲ ಲಿಂಗನಮಕ್ಕಿಯ ರಾಮಪ್ಪ ಅಖಬರನೀಸ ನನ್ನು ಹುರಿದುಂಬಿಸಿದ. ತಾಳಗುಂದದ ಬೆಟ್ಟ ,ಹಂಡಿಬಡಗನಾಥ ಬೆಟ್ಟ ,ಖಾನಾಪುರ ಸುತ್ತಲಿನ ಪ್ರದೇಶಗಳಲ್ಲಿ ರಾಯಣ್ಣನನ್ನು ಹುಡುಕಿ ಸೆದೆಬಡೆಯುವುದು ಅಕಬರನೀಸ್ ನ ಜವಾಬ್ದಾರಿಯಾಗಿತ್ತು. ಅಕ್ಬರ್ನಿಸನ ಜೊತೆಗೆ ಬೆಂಬಲಕ್ಕೆ ಇರುವಂತೆ ಬ್ರಿಟಿಷ್ ಸೇನೆಯ ಮೇಲಧಿಕಾರಿ ಮೇಜರ್ ಪಿಕರಿಂಗಗೆ ತಿಳಿಸಲಾಗಿತ್ತು. ಅಕ್ಬರನೀಸ ಮತ್ತು ಪಿಕರಿಂಗ್ ವಿಚಾರ ವಿನಿಮಯ ಮಾಡಿಕೊಂಡು ಕಾರ್ಯ ಸನ್ನದ್ಧರಾದರು. ಆದರೆ ರಾಯಣ್ಣನ ತಂಡ 21-1-1830 ರಂದು ನೀಡಿದ ಎದುರಿಟೀಗೆ ತತ್ತರಿಸಿ ಹೋಯಿತು.ದಿನಾಂಕ 22-1- 1830ರಂದು ವಿವರವಾದ ವರದಿಯನ್ನು ರಾಮಪ್ಪ ಅಖಬರನೀಸ್ ಬ್ರಿಟಿಷ್ ಮೇಲಧಿಕಾರಿಗಳಿಗೆ ವರದಿ ಮಾಡಿದ್ದಾನೆ. ರಾಯಣ್ಣನ ಕುರಿತು ಯಾವುದೇ ಮಾಹಿತಿ ದೊರೆಯಲಿಲ್ಲ ಯಾವಾಗ ಎತ್ತ ಹೋಗುವನೋ ರಾಯಣ್ಣ ಎಂಬುದು ಯಕ್ಷಪ್ರಶ್ನೆಯಾಗಿತ್ತು.


ರಾಯಣ್ಣ ಮತ್ತು ತಂಡದವರಿಗೆ ಕಿತ್ತೂರಿನ ವ್ಯಾಪಾರಸ್ಥರ ಮೇಲೆ ರೋಷ ಹೆಚ್ಚಾಗುತ್ತಿತ್ತು. ಕಾರಣ ಜನಸಾಮಾನ್ಯರು ನನ್ನ ತಂಡಕ್ಕೆ ಬೆಂಬಲ ನೀಡಿದರೆ ಶ್ರೀಮಂತರು ಮಾತ್ರ ಬ್ರಿಟಿಷ್ ನಿಷ್ಟರಾಗಿ ಗುಪ್ತ ಮಾಹಿತಿಯನ್ನು ನೀಡುತ್ತಿದ್ದರು. ಕಿತ್ತೂರು ಪೇಟೆ ಮೇಲೆ ದಾಳಿ ಮಾಡಿ ಬ್ರಿಟಿಷ್ ನಿಷ್ಠರಿಗೆ ಬುದ್ದಿ ಕಲಿಸುವ ಯೋಜನೆ ರೂಪಿಸಿದರು. ಈ ದಾಳಿಯ ನೇತೃತ್ವವನ್ನು ದೇವಗಾಂವಿಯ ಭೀಮಾನಾಯಕ,‌ ಬೆಳವಡಿಯ ವಡ್ಡರ ಯಲ್ಲಣ ಮುಂತಾದವರು ದಿನಾಂಕ 8-2-1831 ರ ಸಾಯಂಕಾಲದ ಸಮಯದಲ್ಲಿ ಕೊಂಬು ಕಹಳೆಗಳ ಅಬ್ಬರದೊಂದಿಗೆ ಕಿತ್ತೂರಿನ ಮೇಲೆ ದಾಳಿಮಾಡಿದರು. ಆಕ್ರಮಣದಲ್ಲಿ ಸುಮಾರು 300 ಜನ ವೀರರು ತಂಡದಲ್ಲಿದ್ದರು. ರಾಯಣ್ಣನ ಬಂಟರು ತೋರಿದ ಧೈರ್ಯದಿಂದ ಬ್ರಿಟಿಷ್ ಅಧಿಕಾರಿಗಳು ದಿಗ್ಮೂಢರಾದರು, ಬ್ರಿಟಿಷ್ ಅಧಿಕಾರಿಗಳ ಲೆಕ್ಕಾಚಾರ ತಲೆಗೆಳಕಾದ ಕಾರಣ ರಾಯಣ್ಣನನ್ನು ನಿಗ್ರಹಿಸುವ ಹಾದಿಯೇ ತಿಳಿಯದಾಯಿತು. ನಂತರದಲ್ಲಿ ಭಂಡಾರಿ ಬಸ್ಸಪ್ಪ ರಾಯಣ್ಣನಿಗೆ ಬೆಳಗಾವಿ ಕೋಟೆಯನ್ನು ವಶಪಡಿಸಿಕೊಳ್ಳಲು ಕಣಬುರಗಿಯ ದಟ್ಟಾರಣ್ಯದಲ್ಲಿ ಸಲಹೆ ನೀಡಿದ. ಆದರೆ ಸಂಗೊಳ್ಳಿ ರಾಯಣ್ಣ ಅಳೆದು-ತೂಗಿ ಈ ಯೋಜನೆ ಕಾರ್ಯಸಾಧುವಲ್ಲ ಎಂಬುದನ್ನು ಅರಿತ, ವ್ಯಾವಹಾರಿಕವಾಗಿಯೂ ಇದು ಲಾಭದಾಯಕವಲ್ಲ ಎಂಬುದನ್ನು ತಿಳಿದ.

ಒಟ್ಟಿನಲ್ಲಿ ಸಂಗೊಳ್ಳಿರಾಯಣ್ಣ ಮತ್ತು ಸಹಚರರ ಹೋರಾಟ ಬ್ರಿಟಿಷ್ ಸರಕಾರಕ್ಕೆ ಸಿಂಹಸ್ವಪ್ನವಾಗಿ ಕಾಡತೊಡಗಿತು. ಸಂಗೊಳ್ಳಿ ರಾಯಣ್ಣನನ್ನು ಹಿಡಿಯದೇ ಹೋದರೆ ಬ್ರಿಟಿಷ್‌ ಸರ್ಕಾರ ಉಳಿಯುವುದು ಕಷ್ಟವಾಗಿತ್ತು. ಹೇಗಾದರೂ ಮಾಡಿ ರಾಯಣ್ಣನನ್ನು ಹಿಡಿಯಲೇಬೇಕು ಎಂದು ಅವರು ತೀರ್ಮಾನಿಸಿದರು. ನಮ್ಮ ನೆಲದ ಕೆಲವು ಕುತಂತ್ರಿಗಳು ಬ್ರಿಟಿಷರ ಕೈಜೋಡಿಸಿದರು. ರಾಯಣ್ಣನನ್ನು ಹಿಡಿಯಲು ಹಲವಾರು ಯೋಜನೆಗಳನ್ನು ರೂಪಿಸಿದ ಬ್ರಿಟಿಷರು ಕುತಂತ್ರದಿಂದ ಏಪ್ರಿಲ್ 8 ರಂದು ಸಂಗೊಳ್ಳಿ ರಾಯಣ್ಣನನ್ನು ಸೆರೆಹಿಡಿದರು. ಸಾಕಷ್ಟು ವಿಚಾರಣೆ ನಡೆಸಿ 26-1-1831 ರಂದು ಗಲ್ಲು ಹಾಕಲಾಯಿತು. ತಾಯ್ನೆಲಕ್ಕಾಗಿ ಸಂಗೊಳ್ಳಿ ರಾಯಣ್ಣ ನಗುನಗುತ್ತಲೇ ನೇಣಿಗೆ ಕೊರಳೊಡ್ಡಿ ಹುತಾತ್ಮರಾದರು. ಇಂಥ ಕೆಚ್ಚೆದಯ ಹೋರಾಟಗಾರ, ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನ ಇಂದು. ಅವರನ್ನು ಗೌರವಪೂರ್ವಕವಾಗಿ ನೆನೆಯೋಣ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಮಹೇಶ. ನೀ.ಚನ್ನಂಗಿ
ಪ್ರೌಢಶಾಲಾ ಮುಖ್ಯ ಶಿಕ್ಷಕರು.
ಚನ್ನಮ್ಮನ ಕಿತ್ತೂರು.
೯೭೪೦೩೧೩೮೨೦

Related Articles

ಇತ್ತೀಚಿನ ಸುದ್ದಿಗಳು