Friday, June 14, 2024

ಸತ್ಯ | ನ್ಯಾಯ |ಧರ್ಮ

ಸಾಂತ್ವನದ ಸಾಲುಗಳಿಗೆ ಹಂಬಲಿಸಿದೆ ಮನ

ಇನ್ನೊಬ್ಬರು ಜೊತೆಯಾಗಬೇಕು, ನಮ್ಮ ನೋವು ಹಂಚಿಕೊಳ್ಳಬೇಕು ಎನ್ನುವ ಅತಿ ನಿರೀಕ್ಷೆಗಳಿಂದ ದೂರವಿರುವುದು ಬಹು ಒಳಿತು. ಮರ ಬೃಹತ್ ಆಗಿ ಬೆಳೆದು ರೆಂಬೆ ಕೊಂಬೆಗಳು ಇದ್ದರೂ ಅದು ನಂಬಿರುವುದು ಬೇರನ್ನು. ನಾವು ಕೂಡ ಮರದಂತೆ ಇರುವುದು ಕಲಿಯಬೇಕಿದೆ ಎಂಬ ಹಂಬಲ ಕುಂದಾಪುರದ ನವ್ಯಶ್ರೀ ಶೆಟ್ಟಿಯವರದು

ಸಂಬಂಧಗಳಲ್ಲಿ ಜಗಳ, ಮುನಿಸು, ಮನಸ್ತಾಪ ಎಲ್ಲವೂ ಸಾಮಾನ್ಯ. ಒಮ್ಮೊಮ್ಮೆ ನಾವು ತೀರಾ ಆತ್ಮೀಯರ ಜೊತೆ ಜಗಳ ಮಾಡಿಕೊಂಡಾಗ ಸಾಂತ್ವನದ ಮಾತುಗಳಿಗೆ ಹಂಬಲಿಸುತ್ತೇವೆ. ಅವರಿಂದ ಕ್ಷಮೆಯ ನಿರೀಕ್ಷೆಯ ಜೊತೆಗೆ ಸಮಾಧಾನದ ಮಾತುಗಳಿಗೆ ಹಾತೊರೆಯುತ್ತೇವೆ. ಜಗಳದ ಕೋಪ ತಣಿಯುವ ತನಕ ಕಾಯುವ ತಾಳ್ಮೆ ನಮಗಿರುವುದಿಲ್ಲ. ಕ್ಷಣಿಕವಾಗಿ ನಮಗೆ ಸಾಂತ್ವನದ ಮಾತುಗಳು ಬೇಕು.  ಅದು ನಾವು ಪ್ರೀತಿಸುವ ಜೀವದಿಂದ ಸಿಕ್ಕರೆ ಇನ್ನಷ್ಟು ಹಿತ. ಇನ್ಯಾರಿಂದ ದೊರೆತರೂ ಅದು ಕಿರಿ ಕಿರಿ.

ಮುನಿಸು ಮುಂದುವರೆದಾಗ ನಮಗೆ ನಾವೇ ಸಂತೈಸಿಕೊಳ್ಳಲು ದಾರಿ ಹುಡುಕುತ್ತೇವೆ. ಆ ದಾರಿಯಲ್ಲಿ ಸಾಗಿದಾಗ ನಮಗೆ ಸಿಗುವುದು ಸಾಲುಗಳು. ಬೇಜಾರಾದಾಗ, ಇನ್ನೊಬ್ಬರ ಬಳಿ ಹೇಳಿಕೊಳ್ಳಲಾಗದ ಸಂದಿಗ್ಧತೆಯಲ್ಲಿದ್ದಾಗ ನಾವು ಇನ್ಯಾರೋ ಬರೆದ ಸಾಲುಗಳ ಮೊರೆ ಹೋಗುತ್ತೇವೆ. ಜಾಲತಾಣಗಳ ಹಲವು ವೇದಿಕೆಗಳಲ್ಲಿ ಸಿಗುವ ಸ್ಪೂರ್ತಿಯ ಹಿತವಚನದ ಮಾತುಗಳನ್ನು ಹುಡುಕುತ್ತೇವೆ. ಆ ಮಾತುಗಳ ಸಾಲುಗಳನ್ನು ನಮಗೆ ನಾವು ಅನ್ವಯಿಸಿಕೊಂಡು ಬಿಡುತ್ತೇವೆ. ಅದಾಗಲೇ ನೊಂದಿರುವ ಮನಕ್ಕೆ ಆ ಸಾಲುಗಳು ಅರೆಕಾಲಿಕ  ಉಪಶಮನದಂತೆ ಭಾಸವಾಗುತ್ತದೆ. ನಮ್ಮನ್ನು ನೋಯಿಸಿದವರು ನೋಡಲಿ ಎನ್ನುವ ಕಾರಣಕ್ಕೆ ಸ್ಟೇಟಸ್ ಗಳಲ್ಲಿ ಬರೆದುಕೊಳ್ಳುತ್ತೇವೆ.ಅವರು ನೋಡಿದ ತಕ್ಷಣ ಒಂದು ರೀತಿಯ ನಿಟ್ಟುಸಿರು. ಸಾಲುಗಳು ಸಾಂತ್ವನ ನೀಡಿದ ಸಂತೃಪ್ತಿ ತೆರೆಮರೆಯಲ್ಲಿ ನಮ್ಮನ್ನು ಆವರಿಸಿ ಬಿಡುತ್ತದೆ.

ಆದರೆ ಅದೆಷ್ಟು ವಿಚಿತ್ರ ಅಲ್ವಾ? ಪರಸ್ಪರ ಸಂವಹನ ಬದುಕಿನ ಅವಿಭಾಜ್ಯ ಎಂದು ಭಾವಿಸುವ ನಾವುಗಳೇ ಅಕ್ಷರದ ಸಾಲುಗಳಿಗೆ  ನಮ್ಮನ್ನು ನಾವು ಸಂತೈಸಿಕೊಳ್ಳುತ್ತೇವೆ. ಮನುಷ್ಯ ಭಾವುಕ ಜೀವಿ. ಅವನ ಭಾವುಕತೆಗಳನ್ನು ಬದಲಾಯಿಸುವ ಅಲಿಖಿತ ಶಕ್ತಿ ಬರಹ ರೂಪದ ಅಕ್ಷರಕ್ಕಿದೆ. ಜೀವನದ ಖುಷಿ, ದುಃಖಗಳಲ್ಲಿ ಯಾರೋ ಎಂದೋ ಬರೆದ ಸಾಲುಗಳು ಪ್ರಸ್ತುತವಾಗಿ ಬಿಡುತ್ತವೆ.

ಬೇಸರವಾದಾಗ, ಖುಷಿಯಾದಾಗ ಮಾತ್ರವಲ್ಲ  ನಿತ್ಯದ ಬದುಕಿನ ಜಂಜಾಟಗಳ ನಡುವೆ ನಮಗೊಂದು ಬಿಡುವಿನ ನಿಲ್ದಾಣಬೇಕೆಂದು ಅನಿಸುತ್ತದೆ. ಆ ನಿಲ್ದಾಣ ನಮ್ಮನ್ನು ಎಲ್ಲ ಒತ್ತಡಗಳಿಂದ ಮುಕ್ತಗೊಳಿಸಬೇಕೆಂದು ನಿರೀಕ್ಷೆ ಮಾಡುತ್ತೇವೆ. ಆ ಸಮಯದಲ್ಲಿ ಮತ್ತೆ  ಕೆಲವೊಮ್ಮೆ ಮನದ ಮಾತುಗಳನ್ನು ಅಕ್ಷರ ರೂಪದಲ್ಲಿ ಬದಲಾದ ಹಿತ ಸಾಲುಗಳನ್ನು ಅಪ್ಪಿಕೊಳ್ಳುತ್ತೇವೆ. 

ಮನುಷ್ಯ ಅಂದಾಗ ಇನ್ನೊಬ್ಬರಿಂದ  ನಿರೀಕ್ಷೆ  ಮಾಡುವುದು ಸಾಮಾನ್ಯ.  ಆ ದೆಸೆಯಲ್ಲಿ ನಿರಾಸೆಗಳು ಆಗುವುದು ಕೂಡ ಸಹಜ. ಈ ವೇಳೆ ನಮ್ಮ ಸ್ಥಿತಿಗೆ ಪೂರಕವಾಗುವಸಾಲು, ಪದ್ಯಗಳ ಮೊರೆ ಹೋಗುತ್ತೇವೆ. ಅವುಗಳ ನಡುವೆ ಕೊಂಚ ನಿರ್ಲಿಪ್ತವಾಗಿ ಬಿಡುತ್ತೇವೆ. ಇದು ಇತ್ತೀಚಿನ ದಿನಗಳಲ್ಲಿ ನೊಂದ ಮನಸುಗಳ ಸಹಜ ಕ್ರಿಯೆ.

ಆದರೆ ಪ್ರತಿ ಬಾರಿ ಅಂತಹ ಕ್ರಿಯೆ ಎಷ್ಟು ಸರಿ ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ನಮ್ಮ ಮನದ ನೋವಿಗೆ  ಯಾವುದೋ ಸಾಲು, ಪದ್ಯ ಮದ್ದಾಗುವುದು ಪ್ರತಿ ಬಾರಿ ಒಳ್ಳೆಯದಲ್ಲ. ಅದು ಅಭ್ಯಾಸವಾಗಿಅವಲಂಬನೆಯಾಗಿ ಬಿಡುತ್ತದೆ. ನಮಗೆ ಸ್ಪಷ್ಟ ಅರಿವಿರುತ್ತದೆ, ಜಾಲತಾಣಗಳ ಸಾಲುಗಳು ಎಲ್ಲವೂ ವಾಸ್ತವವಲ್ಲ ಅನ್ನುವ ಸತ್ಯ.  ಅವುಗಳು ನಮ್ಮ ಕಲ್ಪನಾ ಜಗದ ಅಕ್ಷರಗಳು. ಆದರೆ ಅವುಗಳನ್ನೇ ಒಗ್ಗಿಕೊಂಡು ಬಿಡುವುದು ಸರಿಯಲ್ಲ.

ಬದುಕೇ ಬೇರೆ, ಪದ್ಯ, ಅಕ್ಷರಗಳೇ ಬೇರೆ. ನಿಜ. ಬೇಸರವಾದಾಗ, ಖುಷಿಯಾದಾಗ ಅಂತಹ ಚಟುವಟಿಕೆ ಸಂತೋಷ ಆರಾಮ ಎಲ್ಲವನ್ನೂ ನೀಡಬಹುದು. ಆದರೆ ಅದು ಆ ಕ್ಷಣಕ್ಕೆ ಮಾತ್ರ. ನಮ್ಮ ಆ ಸಮಯದ ಮನಸಿನ ತಳಮಳದ ಮೇಲೆ ಅದು ಪರಿಣಾಮ ಬೀರಬಹುದೇ ಹೊರತು ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಖುಷಿಯಾದಾಗ ಮುಕ್ತ ಮನಸ್ಸಿನ ಪದ್ಯಗಳನ್ನು ಆಲಿಸಿ, ಬರಹಗಳನ್ನು ಓದಿ. ಆದರೆ ಬೇಸರವಾದಾಗ  ಸಾಲುಗಳು ಶಾಶ್ವತ ಸಾಂತ್ವನ ಅನ್ನುವ ಭ್ರಮೆಯಲ್ಲಿರಬೇಡಿ. ಅಕ್ಷರವನ್ನುಅಕ್ಷರವಾಗಿ ನೋಡಿ. 

ಅದರಾಚೆಗೆ ನಿಮ್ಮ ಭಾವನೆಗಳ  ನಿಯಂತ್ರಿಸಿ ಇಲ್ಲವೆಂದರೆ ಕೆಲವೊಮ್ಮೆ ನೀವೇ ಮೂರ್ಖರಂತೆ ಆಗಿ ಬಿಡುತ್ತೀರಿ. ಬೇಸರವಾದಾಗ ಬರೆದುಪದ್ಯಗಳನ್ನು ಸ್ಟೇಟಸ್ ಹಾಕಿಕೊಂಡು ಬಿಡುವವರನ್ನು ನಾವು ನೋಡಿರುತ್ತೇವೆ. ಒಂದೆರೆಡು ಬಾರಿ ವಿಚಾರಿಸಿ ಕೂಡ ಇರಬಹುದು . ಆದರೆ ಪ್ರತಿ ಸಾರಿ ಹೀಗೆ ಮಾಡಿದಾಗ ಇವರು ಇರೋದೇ ಹೀಗೆ ಎಂದು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಅಂತಹ ಮಂದಿಯ ಪಟ್ಟಿಗೆ ನಾವು ಸೇರಬಾರದು. ಇನ್ನೊಬ್ಬರು ನಮ್ಮನ್ನು ಸಂತೈಸುತ್ತಾರೆ ಎನ್ನುವ ಭ್ರಮೆಯನ್ನು ಬಿಟ್ಟುಬಿಡಬೇಕು. ನಮಗೆ ನಾವೇ, ನಮ್ಮನ್ನು ನಾವೇ ಸಂತೈಸಿಕೊಳ್ಳಬೇಕು ಎನ್ನುವ ವಾಸ್ತವನ್ನು ಒಪ್ಪಿಕೊಳ್ಳಬೇಕು.

ಇನ್ನೊಬ್ಬರು ಜೊತೆಯಾಗಬೇಕು, ನಮ್ಮ ನೋವು ಹಂಚಿಕೊಳ್ಳಬೇಕು ಎನ್ನುವ ಅತಿ ನಿರೀಕ್ಷೆಗಳಿಂದ ದೂರವಿರುವುದು ಬಹು ಒಳಿತು. ಮರ ಬೃಹತ್ ಆಗಿ ಬೆಳೆದು ರೆಂಬೆ ಕೊಂಬೆಗಳು ಇದ್ದರೂ ಅದು ನಂಬಿರುವುದು ಬೇರನ್ನು. ನಾವು ಕೂಡ ಮರದಂತೆ ಇರುವುದು ಕಲಿಯಬೇಕಿದೆ. ಎಷ್ಟೇ ಸ್ನೇಹಿತರು, ಸಂಬಂಧಿಕರು, ಹಿತೈಷಿಗಳು ನಮ್ಮ ನಡುವೆ ಇರಬಹುದು. ಆದರೆ ನಮಗೆ ನಾವೇ ಆಸರೆ, ನಮ್ಮ ಬದುಕನ್ನು ನಾವೇ ನೋಡಿಕೊಳ್ಳಬೇಕು ಎನ್ನುವ ಸತ್ಯ ಒಪ್ಪಿಕೊಳ್ಳೋಣ. ಎಲ್ಲವನ್ನೂ ವಾಸ್ತವದ ಕಣ್ಣಿನಿಂದ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳೋಣ. ಆಗ  ಬದುಕಿನ ಹಲವು ದುರಂತಗಳಿಂದ ತಪ್ಪಿಸಿಕೊಳ್ಳಬಹುದು.

Related Articles

ಇತ್ತೀಚಿನ ಸುದ್ದಿಗಳು