Thursday, June 13, 2024

ಸತ್ಯ | ನ್ಯಾಯ |ಧರ್ಮ

ಸಂಕೀರ್ಣ ಕಾಲಘಟ್ಟದಲ್ಲಿ ದಿಟ್ಟವಾಗಿ ಬರೆದ ಸಾರಾ ಅಬೂಬಕ್ಕರ್

ಬಂಡಾಯ ಕಾಲಘಟ್ಟದಲ್ಲಿ ತಮ್ಮ ಒಳದನಿಗಳಿಗೆ ಅಕ್ಷರರೂಪ ಕೊಟ್ಟು  ಸಾಹಿತ್ಯದ ಓದುಗರಿಗೆ ತೀರ ಅಪರಿಚಿತವಾದ ಲೋಕವನ್ನು ಪರಿಚಯಿಸಿ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು ಸಾರಾ ಅಬೂಬಕ್ಕರ್‌. ಸಾರ್ವಜನಿಕ ಸಭೆ, ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ನಡೆಯುವ ರ್ಯಾಲಿ, ಮಹಿಳಾ ಸಂಘಟನೆ, ಮಹಿಳಾ ಸಬಲೀಕರಣ ಸಾಹಿತ್ಯ ಸಂಘಟನೆ, ವಿಚಾರ ಸಂಕಿರಣ ಹೀಗೆ ಎಲ್ಲ ಕಡೆಯೂ ತಮ್ಮ ಚಿಂತನೆ, ವ್ಯಕ್ತಿತ್ವದ ಘನತೆಯಿಂದ ಸಂದವರು ಸಾರಾ. ಇಂತಹ ಎದೆಗಾರಿಕೆಯ, ಕಥೆಗಾರಿಕೆಯ ಸಾರಾ ಇಂದು ನಮ್ಮನ್ನಗಲಿದ್ದಾರೆ. ಪೀಪಲ್‌ ಮೀಡಿಯಾವು ಪುರುಷೋತ್ತಮ ಬಿಳಿಮಲೆಯವರು ಬರೆದ ನುಡಿ ನಮನದೊಂದಿಗೆ  ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.

ಬಂಡಾಯ ಚಳುವಳಿಯು ಅನೇಕ ಮಹಿಳೆಯರಿಗೆ ಬರೆಯುವ ಧೈರ್ಯ ತಂದುಕೊಟ್ಟದ್ದು ಈಗ ಇತಿಹಾಸ. ಹಿಂದುಳಿದ ಮತ್ತು ಅಲ್ಪ ಸಂಖ್ಯಾಕ ವರ್ಗಕ್ಕೆ ಸೇರಿದ ಲೇಖಕ, ಲೇಖಕಿಯರನ್ನು ಹುಡುಕಿ ಅವರ ಬರೆಹಗಳನ್ನು ಪ್ರಕಟಿಸಿ ಓದುವ ವರ್ಗಕ್ಕೆ ಪರಿಚಯಿಸುವ ಕೆಲಸವನ್ನು ಲಂಕೇಶ್‌ ತನ್ನ ಕರ್ತವ್ಯವೆಂಬಂತೆ ಮಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ಪ್ರಸಿದ್ಧಿಗೆ ಬಂದ ಅನೇಕ ಲೇಖಕಿಯರಲ್ಲಿ ಸಾರಾ ಅಬೂಬಕರ್‌ ಒಬ್ಬರು. ( ಜೂನ್‌ ೩೦, ೧೯೩೬- ಜನವರಿ ೧೦, ೨೦೨೩). ಕಾಸರಗೋಡಿನ ಸಣ್ಣ ಊರಲ್ಲಿ ಅವರ ಅಜ್ಜಿ ಹೇಳುತ್ತಿದ್ದ ಅರೆಬಿಕ್‌ ಕತೆಗಳಿಂದ ಪ್ರೇರಣೆ ಪಡೆದ ಅವರು ಕನ್ನಡದಲ್ಲಿ ಕತೆ ಬರೆಯುವ ಪ್ರಖ್ಯಾತ ಲೇಖಕಿಯಾಗಿ ಬೆಳೆದದ್ದು ನಾನು ಬದುಕಿದ ಕಾಲ ಘಟ್ಟದ ಮಹತ್ವದ ಘಟನೆಗಳಲ್ಲೊಂದು. ಚಂದ್ರಗಿರಿಯ ತೀರದಲ್ಲಿ, ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿ, ಪಂಜರ, ಇಳಿಜಾರು, ಕಾಣಿಕೆ, ಇವರ ಮುಖ್ಯ ಕಾದಂಬರಿಗಳಾದರೆ, ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಮತ್ತು ಗಗನ ಸಖಿ ಅವರ ಮುಖ್ಯ ಕಥಾ ಸಂಕಲನಗಳು. ತಮ್ಮ ಬಹುತೇಕ ಬರೆಹಗಳಲ್ಲಿ ಮತ್ತು ಭಾಷಣಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕ ಬೇಕೆಂದು ಪ್ರತಿಪಾದಿಸುತ್ತಿದ್ದ ಅವರು “ಹೆಣ್ಣು ಮಕ್ಕಳು ಹೆರುವ ಪ್ರಾಣಿಗಳಲ್ಲ, ಯಂತ್ರಗಳೂ ಅಲ್ಲʼ ಎಂದು ಗಟ್ಟಿಯಾಗಿಯೇ ಘೋಷಿಸುತ್ತಿದ್ದರು.

೧೯೮೦ರ ದಶಕದಲ್ಲಿ ನಾವು ಹಲವರು ದಸಂಸ ಮತ್ತು ಬಂಡಾಯ ಚಳುವಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಾರಾ ಅವರು ನಮ್ಮ ಜೊತೆಗಿದ್ದರು. ನನ್ನ ಓದಿನ ಕಾಲ ಘಟ್ಟದಲ್ಲಿ ಒಂದಿಬ್ಬರು ಮುಸ್ಲಿಮರು ತನ್ನ ತರಗತಿಯಲ್ಲಿ ಇದ್ದುದು ಹೌದಾದರೂ ಈ ಪಟ್ಟಿಗೆ ಯಾವ ಮುಸ್ಲಿಂ ಹುಡುಗಿಯರೂ ಸೇರಿರಲಿಲ್ಲ. ಪದವಿ ಓದುತ್ತಿದ್ದಾಗ ಒಬ್ಬಳು ಮುಸ್ಲಿಂ ಹುಡುಗಿ ಇದ್ದದು ಹೌದಾದರೂ ಅವಳ ಮತ್ತು ನನ್ನ ನಡುವಿನ ಅಂತರ ನೆಲ ಮುಗಿಲಿನಷ್ಟಿತ್ತು. ಹೀಗಾಗಿ ನಮ್ಮ ಜೊತೆಗೇ ಇರುವ ಮುಸ್ಲಿಂ ಮಹಿಳೆಯರೊಡನೆ ಹೇಗೆ ಮಾತಾಡಬೇಕೆಂಬ ಕನಿಷ್ಟ ಪರಿಜ್ಞಾನವೂ ನಮಗಿರಲಿಲ್ಲ. ಇಂಥ ಅಸ್ಪಷ್ಟ ಪರಿಸರದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಸ್ನೇಹ ನಮಗೆ ಅವಶ್ಯವಾಗಿತ್ತು. ಆಗ ನಮಗೆ ಸಿಕ್ಕವರು ಸಾರಾ ಅಬೂಬಕರ್. ಮತ್ತು ಸಬೀಹಾ ಮೇಡಂ. ಸಬೀಹಾ ಅವರ ತಂದೆ ಬಹಳ ದೊಡ್ಡ  ಪ್ರಾಧ್ಯಾಪಕರಾದ್ದರಿಂದ ಅವರೊಡನೆ ಸ್ನೇಹ ಸುಲಭವಾಗಿರಲಿಲ್ಲ . ಆದರೆ ಸಾರಾ ಥೇಟ್‌ ನಮ್ಮ ಹಾಗೆ. ಅವರ ಮನೆಗೆ ಹೋದರೆ ಅದು ಮರುಕ್ಷಣದಲ್ಲಿ ನಮ್ಮ ಮನೆಯಾಗುತ್ತಿತ್ತು. ಮುಸ್ಲಿಂ ಮಹಿಳಾ ಲೋಕದ ಬಗ್ಗೆ ನಮಗೆಲ್ಲ ಮಾಹಿತಿ ನೀಡಿದ ಅವರ ಮೊದಲ ಕೃತಿಯೆಂದರೆ ‘ಚಂದ್ರಗಿರಿಯ ತೀರದಲ್ಲಿ’. ಮುಸ್ಲಿಂ ಸಮುದಾಯದದಲ್ಲಿ ಆಳವಾಗಿ ಬೇರು ಬಿಟ್ಟಿರುವ ಧಾರ್ಮಿಕ ಕಂದಾಚಾರವನ್ನು ಈ ಕಾದಂಬರಿ ಅದ್ಭುತವಾಗಿ ಅನಾವರಣ ಮಾಡಿದಾಗ ನಾವೆಲ್ಲ ಬೆಚ್ಚಿ ಬಿದ್ದಿದ್ದೆವು, ನಿದ್ದೆಗೆಟ್ಟಿದ್ದೆವು. ಸಹನಾ ಮತ್ತು ವಜ್ರಗಳು ಮುಂದೆ ಪ್ರಕಟವಾದಾಗ ನಮಗೆಲ್ಲಾ ಸಾರಾ ಅವರಲ್ಲಿ ಪುಟಿದೇಳುತ್ತಿರುವ ಬಂಡಾಯ ಪ್ರವೃತ್ತಿಯ ಬಗೆಗೆ ಒಂದು ಬಗೆಯ ತಿಳಿವಳಿಕೆ ಮೂಡತೊಡಗಿತ್ತು. ಅವರ ಬಗ್ಗೆ ಅಗಾಧವಾದ ನಂಬಿಕೆ ಬರತೊಡಗಿತ್ತು.

ಸಾರಾ ಅವರು ಬಂಡಾಯಗಾರ್ತಿಯೇ ಹೌದಾದರೂ ಅವರನ್ನು ಬಂಡಾಯ ಚಳುವಳಿಗೆ ಸೇರಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಅದೊಂದು ಸಂಕೀರ್ಣ ಪ್ರಕ್ರಿಯೆಯಾಗಿತ್ತು.

ಬಂಡಾಯ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ನಾವು ಆಗಲೇ ಹಲವರ ವಿರೋಧಕ್ಕೆ ಗುರಿಯಾಗಿದ್ದೆವು. ಮತಾಂಧ ಶಕ್ತಿಗಳ ಕ್ರೌರ್ಯವೇನೂ ಕಡಿಮೆ ಇರಲಿಲ್ಲ. ಸ್ವತ: ಬಂಡಾಯಗಾರರಾಗಿದ್ದ ಲಂಕೇಶ್ ಬಂಡಾಯ ಸಂಘಟನೆಯನ್ನು ಸಮಯ ಸಿಕ್ಕಾಗಲೆಲ್ಲ ಗೇಲಿ ಮಾಡುತ್ತಿದ್ದರು. ಜನರ ನಡುವೆ ಹೋಗಿ ಕೆಲಸ ಮಾಡಬಯಸುವ ನಮ್ಮ ಬಗ್ಗೆ ನಮ್ಮಲ್ಲಿಯೇ ಗುಮಾನಿ ಹುಟ್ಟಿಕೊಳ್ಳುತ್ತಿದ್ದ ಆ ಸಂದರ್ಭದಲ್ಲಿ ಸಾರಾ ಅವರನ್ನು ಸಂಘಟನೆಯತ್ತ ಎಳೆದು ತರುವುದು ನಮ್ಮ ಮುಂದೆಯೇ ಅನೇಕ ಪ್ರಶ್ನೆಗಳನ್ನು ತಂದೊಡ್ಡುತ್ತಿತ್ತು. ಇದರ ಜೊತೆಗೆ ಇಸ್ಲಾಂ ಧರ್ಮದ ಮತಾಂಧ ಶಕ್ತಿಗಳು ಸಾರಾ ಅವರ ಬಗೆಗೆ ಇಲ್ಲ ಸಲ್ಲದ ಆರೋಪ ಹೊರಿಸುವ ಲೇಖನಗಳನ್ನು ಪ್ರಕಟಿಸಿ ಅವರ ತೇಜೋವಧೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದುವು. ಸಾರಾ ಅವರ ಚಲನವಲನಗಳನ್ನು ತೀವ್ರವಾಗಿ ಗಮನಿಸುತ್ತಿದ್ದ ಈ ಶಕ್ತಿಗಳನ್ನು ನಾವು ವಿರೋಧಿಸುವ ಸಂದರ್ಭದಲ್ಲಿ ಹಿಂದೂ ಮತಾಂಧ ಶಕ್ತಿಗಳು ನಮಗೆ ಬೆಂಬಲ ಸೂಚಿಸುವ ಸಾಧ್ಯತೆ ಇತ್ತು. ಬಾಣಲೆಯಿಂದ ಉರಿಯುವ ಬೆಂಕಿಗೆ ಬೀಳಲು ನಾವು ಸಿದ್ಧರಿರಲಿಲ್ಲ.

ಸಾರಾ ಬರೆಯುತ್ತಿದ್ದ ಅಂದಿನ ಸಂದರ್ಭ ಹೀಗೆ ಬಹಳ ಸಂಕೀರ್ಣವಾಗಿತ್ತು. ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ನಾವು ಕೆಲವರು ೧೯೮೫ರಲ್ಲಿ ಬಂಡಾಯದ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದೆವು. ‘ಅನ್ಯಾಯಗಳ ವಿರುದ್ಧದ ನಿಮ್ಮ ಹೋರಾಟದಲ್ಲಿ ಭಾಗವಹಿಸುವುದು ನನಗೆ ಹೆಮ್ಮೆಯ ಸಂಗತಿ. ನಾನು ವಿದ್ವಾಂಸಳಲ್ಲ, ನನಗೆ ಮಾತಾಡಲು ಬರುವುದಿಲ್ಲ, ಆದರೆ ನಿಮ್ಮೊಂದಿಗೆ ನಾನಿರುತ್ತೇನೆ” ಎಂದ ಅವರ ತಣ್ಣಗಿನ ಆದರೆ ನಿಖರ ಉತ್ತರಕ್ಕೆ ನಾನು ದಂಗಾಗಿದ್ದೆ. ನಮ್ಮಲ್ಲಿದ್ದ ಯಾವ ಗೊಂದಲವೂ ಅವರಲ್ಲಿ ಇರಲಿಲ್ಲ. ಅವರೇನೋ ಬರಲೊಪ್ಪಿದರು. ಆದರೆ ಮುಂದಿನ ಹಾದಿ ಸುಗಮವಾಗಿರಲಿಲ್ಲ. ಆಗೀಗ ಬೆದರಿಕೆಯ ಪತ್ರಗಳು, ಬರುತ್ತಲೇ ಇರುತ್ತಿದ್ದುವು. ನಾವು ಯಾವ ಬೆದರಿಕೆಗೂ ಜಗ್ಗುತ್ತಿರಲಿಲ್ಲವಾದರೂ ಅವು ಒಂದು ಬಗೆಯ ಒತ್ತಡಗಳನ್ನು ಹೇರುತ್ತಿದ್ದವು. ಆಗೆಲ್ಲಾ ನಮ್ಮನ್ನು ಸಮಾಧಾನ ಮಾಡುತ್ತಿದ್ದವರೆಂದರೆ ಸಾರಾ ಅವರೇ. “ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು, ನಮ್ಮ ಪ್ರಗತಿಪರ ಚಿಂತನೆಗಳನ್ನು ಕಸಿದುಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ಅಮಾಯಕರಾದ ಬಡಜನತೆಯೊಡನೆ ನಾವು ಪ್ರಾಮಾಣಿಕರಾಗಿರಬೇಕು. ನಮ್ಮ ನಿಲುವುಗಳನ್ನು ಧೈರ್ಯವಾಗಿ ಜನರ ಮುಂದಿಡೋಣ. ಯಾವುದು ಒಳ್ಳೆಯದು, ಯಾವುದು ಕೆಟ್ಟದೆಂಬುದನ್ನು ಜನರು ತೀರ್ಮಾನಿಸಲಿ” ಎಂದು ಅವರು ನಮಗೆ ಕಿವಿ ಮಾತು ಹೇಳುತ್ತಿದ್ದರು.

ಸಾರಾ, ವಿವೇಕ ರೈ ಮೊದಲಾದವರು ಭಾಗವಹಿಸಿದ್ದ ಪುತ್ತೂರಿನ ಕಾರ್ಯಕ್ರಮವನ್ನು ಮುಸ್ಲಿಂ ಮತಾಂಧ  ಶಕ್ತಿಗಳು ನಡೆಯಲು ಬಿಡಲೇ ಇಲ್ಲ. ಸಾರಾ ಭಾಷಣ ಮಾಡಲು ಎದ್ದು ನಿಲ್ಲುತ್ತಿದ್ದಂತೆ ಎಲ್ಲಿಂದಲೋ ನುಗ್ಗಿ ಬಂದ ಕೆಲವರು ಸಾರಾ ಭಾಷಣ ಮಾಡದಂತೆ ತಡೆದರು. ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಮ್ಮ ಮನವಿ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಕೆಲವರಂತೂ ಕುರ್ಚಿಯನ್ನು ಎತ್ತಿ ವೇದಿಕೆಯತ್ತ ಎಸೆಯಲು ಆರಂಭಿಸಿದಾಗ ವಿವೇಕ ರೈಗಳು ಸಾರಾ ರಕ್ಷಣೆಗೆ ನಿಂತರು. ಕೊನೆಗೂ ನಾವು ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಆ ಹೊತ್ತಿಗೆ ನಾವೆಲ್ಲ ವಿಚಲಿತರಾಗಿದ್ದರೂ ಸಾರಾ ವಿಚಲಿತರಾಗಿರಲಿಲ್ಲ. ಅವರ ಮುಖದಲ್ಲಿ ದಿಟ್ಟತನವಿತ್ತು. “ನಿಮಗೆ ನನ್ನ ಮಾತನ್ನಾಗಲೀ, ಬರೆಹವನ್ನಾಗಲೀ ನಿಲ್ಲಿಸಲು ಸಾಧ್ಯವಿಲ್ಲ” ಎಂದವರು ಗಟ್ಟಿಯಾಗಿ ಹೇಳುತ್ತಿದ್ದರು. ತಮ್ಮ ಸ್ವಾರ್ಥಕ್ಕೆ ಮಹಿಳೆಯನ್ನು ಬಲಿಪಶು ಮಾಡಿ, ಅದಕ್ಕೆ ಮಹಿಳೆಯೇ ಕಾರಣ ಎಂದು ಹೇಳುವ ಪುರುಷ ಸಮಾಜದ ಕ್ರೌರ್ಯವನ್ನು ಅನುಭವದ ಬಲದಿಂದ ಇದಿರಿಸಿದ ದಿಟ್ಟ ಲೇಖಕಿ ಸಾರಾ ಅಬೂಬಕರ್.‌

ಪುರುಷೋತ್ತಮ ಬಿಳಿಮಲೆ

ಸಮಾಜ ಮತ್ತು ಸಂಸ್ಕೃತಿ ಚಿಂತಕರು

Related Articles

ಇತ್ತೀಚಿನ ಸುದ್ದಿಗಳು