Thursday, December 18, 2025

ಸತ್ಯ | ನ್ಯಾಯ |ಧರ್ಮ

2026ರ ಅಂತ್ಯದೊಳಗೆ ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ ಜಾರಿ: ನಿತಿನ್ ಗಡ್ಕರಿ ಘೋಷಣೆ

ದೆಹಲಿ: ಮುಂದಿನ ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಪಗ್ರಹ (Satellite) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಘೋಷಿಸಿದ್ದಾರೆ.

ಸ್ಯಾಟಲೈಟ್ ಟೋಲ್ ವಿಧಾನದಿಂದಾಗಿ ವಾಹನ ಸವಾರರು ಇನ್ನು ಮುಂದೆ ಟೋಲ್ ಪ್ಲಾಜಾಗಳಲ್ಲಿ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲಿನಲ್ಲಿ ಕಾಯುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯು ಸಂಪೂರ್ಣವಾಗಿ ಕೃತಕ ಉಪಗ್ರಹ ಮತ್ತು ಕೃತಕ ಬುದ್ಧಿಮತ್ತೆ (AI) ಯೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ಶೂನ್ಯಕ್ಕೆ ಇಳಿಯಲಿದೆ. ಟೋಲ್ ಬಳಿ ವಾಹನಗಳು ಕಾಯುವಾಗ ಎಂಜಿನ್ ಆನ್ ಆಗಿರುವುದರಿಂದ ಸುಮಾರು 1500 ಕೋಟಿ ರೂಪಾಯಿ ಮೌಲ್ಯದ ಇಂಧನ ವ್ಯರ್ಥವಾಗುತ್ತಿದೆ.

ಹೊಸ ವ್ಯವಸ್ಥೆಯಿಂದ ಈ ವ್ಯರ್ಥ ತಡೆಯಬಹುದು ಮತ್ತು ಸರ್ಕಾರಕ್ಕೂ ಪರೋಕ್ಷವಾಗಿ 6000 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಈ ವ್ಯವಸ್ಥೆಯಲ್ಲಿ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಸಾಗಬಹುದು, ಯಾರೂ ನಿಮ್ಮನ್ನು ತಡೆಯುವುದಿಲ್ಲ ಎಂದು ಸಚಿವರು ವಿವರಿಸಿದ್ದಾರೆ.

ಫಾಸ್ಟ್ಯಾಗ್ ಮತ್ತು ಎಐ ಸಹಾಯದಿಂದ ಉಪಗ್ರಹವು ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಿ ಟೋಲ್ ಹಣವನ್ನು ಕಡಿತಗೊಳಿಸುತ್ತದೆ. ಇದಕ್ಕಾಗಿ ‘ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್’ (ANPR) ಮತ್ತು ಫಾಸ್ಟ್ಯಾಗ್ ತಂತ್ರಜ್ಞಾನಗಳ ಸಮ್ಮಿಲನವಾದ ‘ಮಲ್ಟಿಲೇನ್ ಫ್ರೀ ಫ್ಲೋ ಟೋಲ್’ (MLFF) ವಿಧಾನವನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ದೊಡ್ಡ ನಾಯಕರ ಹೆಸರು ಹೇಳಿ ಟೋಲ್ ಪಾವತಿಸದೆ ಹೋಗುವುದು, ಬೆದರಿಕೆ ಹಾಕುವುದು ಮತ್ತು ಪಾವತಿಯಲ್ಲಿನ ಅಕ್ರಮಗಳು ಸಂಪೂರ್ಣವಾಗಿ ನಿಲ್ಲಲಿವೆ.

2026ರ ಅಂತ್ಯಕ್ಕೆ ಈ ವ್ಯವಸ್ಥೆ ನೂರಕ್ಕೆ ನೂರರಷ್ಟು ಜಾರಿಗೆ ಬರಲಿದೆ. ಕರ್ತವ್ಯ ಲೋಪ ಎಸಗುವ ಅಥವಾ ಅಕ್ರಮ ನಡೆಸುವ ಗುತ್ತಿಗೆದಾರರನ್ನು ಎರಡು ವರ್ಷಗಳ ಕಾಲ ಡಿಬಾರ್ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮಾತ್ರ ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತದೆ. ರಾಜ್ಯ ಹೆದ್ದಾರಿಗಳು ಅಥವಾ ನಗರದ ರಸ್ತೆಗಳ ನಿರ್ವಹಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರಾಜ್ಯದ ರಸ್ತೆಗಳ ಸಮಸ್ಯೆಗಳನ್ನು ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಎಂದು ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ಗಡ್ಕರಿ ಸ್ಪಷ್ಟಪಡಿಸಿದರು.

ಪ್ರಾಯೋಗಿಕವಾಗಿ ಈಗಾಗಲೇ ಕೆಲವು ಕಡೆ ಈ ವ್ಯವಸ್ಥೆ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಲಾಗುವುದು. ಇದರಿಂದ ಟೋಲ್ ಬೂತ್‌ಗಳು, ಬ್ಯಾರಿಯರ್‌ಗಳು ಮತ್ತು ಸಿಬ್ಬಂದಿಯ ಅಗತ್ಯವಿರುವುದಿಲ್ಲ, ಇದರಿಂದ ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page