ದೆಹಲಿ: ದೆಹಲಿ ಜಲ ಮಂಡಳಿಯ (ಡಿಜೆಬಿ) ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಮೇಲ್ದರ್ಜೆಗೇರಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ (ಆಪ್) ಹಿರಿಯ ನಾಯಕ ಸತ್ಯೇಂದರ್ ಜೈನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಬಂಧಿಸಿದೆ.
ಜೈನ್ ಅವರೊಂದಿಗೆ ದೆಹಲಿ ಜಲ ಮಂಡಳಿಯ ಮಾಜಿ ಸಿಇಒ ಉದಿತ್ ಪ್ರಕಾಶ್ ರೈ, ಮಂಡಳಿಯ ಮಾಜಿ ಗುತ್ತಿಗೆ ಸಲಹೆಗಾರ ಅಂಕಿತ್ ಶ್ರೀವಾಸ್ತವ, ಎ.ಎನ್. ಎಂಟರ್‌ಪ್ರೈಸಸ್ ಮಾಲೀಕ ನಾಗೇಂದ್ರ ಯಾದವ್, ಯುರೋಟೆಕ್ ಎನ್ವಿರಾನ್‌ಮೆಂಟ್ ಮುಖ್ಯಸ್ಥ ರಾಜಾ ಕುಮಾರ್ ಕುರ್ರಾ ಹಾಗೂ ಸೃಜನ್‌ಹಾರ್ ಮಾಲೀಕ ಪಂಕಜ್ ವರ್ಮಾ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ.
ದೆಹಲಿ ಸರ್ಕಾರದ ಜಾಗೃತ ನಿರ್ದೇಶನಾಲಯ ನೀಡಿದ ದೂರಿನ ಮೇರೆಗೆ 2024ರ ಮೇ 11 ರಂದು ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಟೆಂಡರ್ ನಿಯಮಗಳನ್ನು ಮಾರ್ಪಡಿಸಿ, ಇತರೆ ಕಂಪನಿಗಳಿಗೆ ಅವಕಾಶ ಸಿಗದಂತೆ ನಿರ್ಬಂಧಗಳನ್ನು ಹೇರಿ ‘ಯುರೋಟೆಕ್ ಎನ್ವಿರಾನ್‌ಮೆಂಟ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಅನುಕೂಲ ಮಾಡಿಕೊಡಲಾಗಿತ್ತು ಎಂದು ಎಸಿಬಿ ಆರೋಪಿಸಿದೆ. ಅಲ್ಲದೆ, ಪ್ರಸ್ತಾವಿತ ಪ್ರಾಯೋಗಿಕ ಅಧ್ಯಯನ ನಡೆಸದೆ, ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ನಡುವೆ ಟೆಂಡರ್ ದಾಖಲೆಗಳು ಮತ್ತು ತಿದ್ದುಪಡಿಗಳನ್ನು ಮೊದಲೇ ಹಂಚಿಕೊಳ್ಳಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರ್ಥಿಕ ತನಿಖೆಯಲ್ಲಿ ಎ.ಎನ್. ಎಂಟರ್‌ಪ್ರೈಸಸ್ ಮೂಲಕ ಮಾಜಿ ಸಿಇಒ ಉದಿತ್ ಪ್ರಕಾಶ್ ರೈ ಮತ್ತು ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ 1.52 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಹಣವನ್ನು ಸ್ಥಿರಾಸ್ತಿ ಖರೀದಿಸಲು ಬಳಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಇದೇ ಪ್ರಕರಣದ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ), ನಾಲ್ಕು ಟೆಂಡರ್‌ಗಳ ಮೂಲಕ ಒಟ್ಟು 17.70 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿ 2025ರ ಡಿಸೆಂಬರ್‌ನಲ್ಲಿ ಜೈನ್ ಸೇರಿದಂತೆ 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಪಂಜಾಬ್ ರಾಜಕೀಯಕ್ಕೆ ತಳುಕು ಹಾಕಿದ ಆಪ್
ಜೈನ್ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, “ಹಿಂದಿನ ಪ್ರಕರಣಗಳಂತೆಯೇ ಈ ನೂತನ ಪ್ರಕರಣವೂ ಸುಳ್ಳೆಂದು ಸಾಬೀತಾಗಲಿದೆ; ಬಿಜೆಪಿ ರಾಜಕೀಯ ಸೇಡಿನಿಂದ ಈ ಬಂಧನ ಮಾಡಿಸಿದೆ,” ಎಂದು ಆರೋಪಿಸಿದ್ದಾರೆ. ಜೈನ್ ಪ್ರಸ್ತುತ 2027ರ ವಿಧಾನಸಭಾ ಚುನಾವಣೆ ನಡೆಯಲಿರುವ ಪಂಜಾಬ್‌ನ ಪಕ್ಷದ ಸಹ-ಉಸ್ತುವಾರಿಯಾಗಿದ್ದು, ಮುಂಬರುವ ಪಂಜಾಬ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಮನೀಶ್ ಸಿಸೋಡಿಯಾ ದೂರಿದ್ದಾರೆ.
ಹಳೆಯ ಪ್ರಕರಣಗಳ ಹಿನ್ನೆಲೆ
ಸತ್ಯೇಂದರ್ ಜೈನ್ ಅವರನ್ನು 2022ರ ಮೇ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿತ್ತು. ಸುಮಾರು 18 ತಿಂಗಳು ಜೈಲಿನಲ್ಲಿದ್ದ ಅವರಿಗೆ ಅಕ್ಟೋಬರ್ 2024 ರಲ್ಲಿ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಎಸ್‌ಟಿಪಿ ಟೆಂಡರ್ ಅಕ್ರಮ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಅವರು ಮತ್ತೆ ಎಸಿಬಿ ವಶಕ್ಕೆ ಒಳಗಾಗಿದ್ದಾರೆ.
