Friday, June 14, 2024

ಸತ್ಯ | ನ್ಯಾಯ |ಧರ್ಮ

ಲಂಡನ್ನಿನಲ್ಲಿ ಸಾವರ್ಕರ್ – ಹಿಂದುತ್ವ ರಾಜಕಾರಣದ ಕಥೆ ಅಧ್ಯಾಯ 11

ಇತ್ತೀಚೆಗೆ ಬಿಜೆಪಿಯ ಅಧ್ಯಕ್ಷರಾಗಿದ್ದಾಗ ಅಮಿತ್‌ ಷಾ ಸಾವರ್ಕರನ್ನು ಹೊಗಳಿ ಮಾತನಾಡಿದ್ದರು. ಅದಕ್ಕೆ ಅವರು ನೀಡಿದ ಒಂದು ಕಾರಣ ೧೮೫೭ರ ಸಂಗ್ರಾಮವನ್ನು ಸಿಪಾಯಿ ದಂಗೆಯೆಂದು ಬ್ರಿಟಿಷರು ಕರೆದಾಗ ಅದನ್ನು ಮೊದಲನೇ ಸ್ವಾತಂತ್ರ್ಯ ಹೋರಾಟವೆಂದು ಪುನರ್‌ ವ್ಯಾಖ್ಯಾನ ನೀಡಿದ್ದು ಸಾವರ್ಕರ್‌ ಎಂಬುದಾಗಿತ್ತು. ನಿಜದಲ್ಲಿ ಸಾವರ್ಕರ್‌ ಅದನ್ನು ಕರೆದಿರುವುದು ಹಾಗಲ್ಲ. ೧೮೫೭ರ ಭಾರತೀಯ ಸ್ವಾತಂತ್ರ್ಯ ಯುದ್ಧ ಎಂದು. ಹೋರಾಟ ಮತ್ತು ಯುದ್ಧದ ನಡುವಿನ ವ್ಯತ್ಯಾಸ ಗುರುತಿಸದಿದ್ದರೆ ಸಾವರ್ಕರ್‌ ಮತ್ತು ಅಭಿನವ್‌ ಭಾರತ್‌ ಮುಂದಿಟ್ಟ ಬ್ರಟಿಷ್‌ ವಿರೋಧಿ ಹೋರಾಟಕ್ಕೂ ನಂತರದ ಕಾಲದಲ್ಲಿ ರಾಷ್ಟ್ರೀಯ ಚಳುವಳಿಗಳು ಮತ್ತು ಗಾಂಧೀಜಿ ಮುಂದಿಟ್ಟ ಬ್ರಿಟಿಷ್‌ ವಿರೋಧಿ ಹೋರಾಟಕ್ಕೂ ನಡುವಿನ ವ್ಯತ್ಯಾಸ ಅರ್ಥವಾಗದೆ ಹೋಗಬಹುದು.

೧೯೦೬ರಲ್ಲಿ ಸಾವರ್ಕರ್‌ ಲಂಡನ್‌ ತಲುಪುತ್ತಾರೆ. ಶ್ಯಾಂಜಿ ಕೃಷ್ಣವರ್ಮ ನೀಡಿದ ಶಿವಾಜಿ ಸ್ಕಾಲರ್ಶಿಪ್‌ ಅದಕ್ಕೆ ದಾರಿ ಮಾಡಿಕೊಟ್ಟಿತ್ತು. ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಈಗಿನ ಗುಜರಾತಿನ ಕಛ್‌ ಪ್ರಾಂತ್ಯದ ಮಾಂಡವಿಯಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಶ್ಯಾಂಜಿ ಕೃಷ್ಣವರ್ಮ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗುಜರಾತಿನ ಭುಜ್‌ನಲ್ಲಿ ಪಡೆಯುತ್ತಾರೆ. ನಂತರ ಬಾಂಬೆಯ ವಿಲ್ಸನ್‌ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್‌ ತನಕ ಕಲಿಯುತ್ತಾರೆ. ಅದರ ನಂತರದ ವಿದ್ಯಾಭ್ಯಾಸ ಬ್ರಿಟಿಷರು ಸ್ಥಾಪಿಸಿದ ಎಲ್ಫಿನ್ಸ್‌ಟೈನ್‌ ಶಾಲೆಯಲ್ಲಿ. ಆಧುನಿಕ ವಿದ್ಯಾಭ್ಯಾಸಕ್ಕೆ ಸಮಾಂತರವಾಗಿ ವಿಶ್ವನಾಥ ಶಾಸ್ತ್ರಿ ನಡೆಸುತ್ತಿದ್ದ ಸಂಸ್ಕೃತ ಶಾಲೆಯಲ್ಲಿ ಸಂಸ್ಕೃತವನ್ನೂ ಕಲಿಯುತ್ತಾರೆ. ಆರ್ಯಸಮಾಜ ಸ್ಥಾಪಕರಾಗಿದ್ದ ದಯಾನಂದ ಸರಸ್ವತಿಯವರ ಶಿಷ್ಯನಾಗಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಅವರ ಯಾತ್ರೆಗಳಲ್ಲಿ ಜೊತೆಯಾಗುತ್ತಿದ್ದರು. ಪ್ರಮುಖ ಇಂಡೋಲಜಿಸ್ಟ್‌ ಎಂದು ಪಾಶ್ಚಾತ್ಯ ದೇಶಗಳು ಅಂಗೀಕರಿಸಿದ್ದ ಪ್ರೊಫೆಸರ್‌ ಮೋನಿಯರ್ ವಿಲಿಯಮ್ಸ್‌ಗೆ ಸಹಾಯಕನಾಗಿ ಇಂಗ್ಲೆಂಡಿಗೆ ಹೋಗಲು ೧೮೭೯ರಲ್ಲಿ ಅವರಿಗೆ ಅವಕಾಶ ಸಿಗುತ್ತದೆ. ಅಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿಯನ್ನೂ ಪಡೆಯುತ್ತಾರೆ. ಜೊತೆಗೆ ರಾಯಲ್‌ ಏಷ್ಯಾಟಿಕ್‌ ಸೊಸೈಟಿಯಲ್ಲಿ ಸದಸ್ಯತ್ವವನ್ನೂ ಪಡೆದುಕೊಳ್ಳುತ್ತಾರೆ. ೧೮೮೧ರಲ್ಲಿ ಬರ್ಲಿನ್‌ನಲ್ಲಿ ಓರಿಯಂಟಲಿಸ್ಟುಗಳ ಸಮ್ಮೇಳನ ನಡೆದಾಗ ಭಾರತೀಯ ಕಾರ್ಯಗಳ ಸೆಕ್ರೆಟರಿ ಅವರನ್ನು ಪ್ರಿತಿನಿಧಿಯಾಗಿ ಕಳುಹಿಸಿಕೊಡುತ್ತಾರೆ. ಬ್ರಿಟಿಷ್‌ ಸರಕಾರದ ಸಹಾಯ ಮತ್ತು ಪ್ರೀತಿ ಎಷ್ಟರ ಮಟ್ಟಿಗೆ ಅವರ ಮೇಲಿತ್ತು ಎಂಬುದನ್ನು ಅವರ ಬದುಕಿನ ಈ ಪ್ರಮುಖ ಹಂತಗಳು ತಿಳಿಸಿಕೊಡುತ್ತವೆ.

೧೮೮೫ರಲ್ಲಿ ಬ್ಯಾರಿಸ್ಟರ್‌ ಆಗಿ ಭಾರತಕ್ಕೆ ಮರಳುವ ಶ್ಯಾಂಜಿ ಕೃಷ್ಣವರ್ಮ ಭಾರತದ ಮೂರು ಸಂಸ್ಥಾನಗಳಲ್ಲಿ ದಿವಾನರಾಗಿಯೋ ಅಥವಾ ಆಡಳಿತ ಕಾರ್ಯದಲ್ಲಿ ಭಾಗವಹಿಸುವ ಕೌನ್ಸಿಲ್‌ ಮೆಂಬರ್‌ ಆಗಿಯೋ ಕೆಲಸ ಮಾಡುತ್ತಾರೆ. ರತ್ಲಂ, ಉದಯಪುರ ಮತ್ತು ಜುನಗಡ್‌ ಆ ಮೂರು ರಾಜಾಡಳಿತ ಸಂಸ್ಥಾನಗಳು. ಜುನಗಡದಲ್ಲಿ ಕೌನ್ಸಿಲ್‌ ಮೆಂಬರಾಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಬ್ರಟಿಷ್‌ ಅಧಿಕಾರಿಯಾಗಿದ್ದ ಮಾಕ ನೋಚಿಯೊಂದಿಗೆ ಕೆಲ ವಿಷಯಗಳಲ್ಲಿ ತಕರಾರು ಶುರುವಾಗುತ್ತದೆ. ಅದು ಶ್ಯಾಂಜಿಯನ್ನು ಹೊರದಬ್ಬುವಲ್ಲಿಗೆ ಬಂದು ನಿಲ್ಲುತ್ತದೆ. ೧೮೯೭ರಲ್ಲಿ ಮರಳಿ ಇಂಗ್ಲೆಂಡಿಗೆ ಹೋಗುವಷ್ಟರಲ್ಲಿ ಶ್ಯಾಂಜಿ ತಿಲಕರ ಕಡು ಹಿಂಬಾಲಕರಾಗಿ ಬದಲಾಗಿರುತ್ತಾರೆ.

ಆಂಗ್ಲ ಅಧಿಕಾರಿಗಳೊಂದಿಗೆ ಈಗಾಗಲೇ ಮೈಮನಸ್ಸು ಬೆಳೆಸಿದ್ದರಿಂದ ಇಂಗ್ಲೆಂಡ್‌ ತಲುಪಿದ ಶ್ಯಾಂಜಿ, ಆರ್ಥಿಕ ಕ್ಷೇತ್ರದ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಬದುಕಲು ದಾರಿ ಕಂಡುಕೊಳ್ಳುತ್ತಾರೆ. ಸ್ಟಾಕ್‌ ಮಾರ್ಕೆಟ್‌ ಮತ್ತು ಶೇರುಗಳಲ್ಲಿ ಭಾಗ್ಯ ಪರೀಕ್ಷಿಸುವ ಶ್ಯಾಂಜಿ ಅದರಲ್ಲಿ ಜಯಿಸುತ್ತಾರೆ. ಬಂಗಾಲ ವಿಭಜನೆಯ ಹಿನ್ನೆಲೆಯಲ್ಲಿ ಮೊಳಗಿದ್ದ ಸ್ವಯಂ ಆಡಳಿತದ ಘೋಷಣೆಯನ್ನು ಪ್ರಚಾರ ಪಡಿಸಲು ಇಂಡಿಯನ್‌ ಸೋಶ್ಯಲಜಿಸ್ಟ್‌ ಎಂಬ ಮಾಸಪತ್ರಿಕೆಯನ್ನು ಆರಂಭಿಸುತ್ತಾರೆ. ೧೯೦೫ರಲ್ಲಿ ಲಂಡನ್ನಿನ ಹೈಗೇಟ್‌ ಪ್ರಾಂತ್ಯದಲ್ಲಿ ಭಾರತೀಯ ವಿದ್ಯಾರ್ಥಿಗಳಿಗಾಗಿ ಇಂಡಿಯಾ ಹೌಸ್‌ ಎಂಬ ಹೆಸರಿನಲ್ಲಿ ಹಾಸ್ಟೆಲ್‌ ಒಂದನ್ನು ತೆರೆಯುವುದಾಗಿ ಘೋಷಿಸುತ್ತಾರೆ. ಆರಂಭದಲ್ಲಿ ೨೫ ವಿದ್ಯಾರ್ಥಿಗಳಿಗೆ ಇಂಡಿಯಾ ಹೌಸಿನಲ್ಲಿ ವಾಸಕ್ಕೆ ವ್ಯವಸ್ತೆ ಮಾಡುತ್ತಾರೆ. ಅದನ್ನು ಬೇಗನೇ ೫೦ಕ್ಕೆ ಏರಿಸುವುದಾಗಿಯೂ ಅವರ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದರು. ವಾಸದ ಸೌಕರ್ಯದ ಜೊತೆಗೆ ಒಂದು ಲೆಕ್ಚರ್‌ ಹಾಲ್‌, ಗ್ರಂಥಾಲಯ ಮತ್ತು ವಾಚನಾಲಯವನ್ನು ಇಂಡಿಯಾ ಹೌಸಿನಲ್ಲಿ ಮಾಡಿಕೊಂಡಿದ್ದರು. ಅದರ ಜೊತೆಗೆ ವಿದ್ಯಾರ್ಥಿಗಳ ಮನರಂಜನೆಗಾಗಿ ಟೆನಿಸ್‌ ಕೋರ್ಟ್‌ ಮತ್ತು ಆರೋಗ್ಯಕ್ಕಾಗಿ ಜಿಮ್‌ ಕೂಡ ಅಲ್ಲಿತ್ತು.

ಶ್ಯಾಂಜಿ ಕೃಷ್ಣವರ್ಮ ನೀಡುವ ಟ್ರಾವೆಲಿಂಗ್‌ ಫೆಲೋಷಿಪ್‌ ಮೂಲಕ ಲಂಡನ್ನಿಗೆ ಬರುವ ವಿದ್ಯಾರ್ಥಿಗಳಿಂದ ವಾರಕ್ಕೆ ೧೬ ಷಿಲ್ಲಿಂಗ್‌ ಖರ್ಚಿನ ಬಾಬ್ತು ವಸೂಲು ಮಾಡುವ ಹಾಗೆ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.

೧೯೦೫ರ ಇಂಡಿಯನ್‌ ಸೋಶ್ಯಲಜಿಸ್ಟ್‌ನ ಡಿಸೆಂಬರ್‌ ಸಂಚಿಕೆಯಲ್ಲಿ ಈ ಸುದ್ದಿ ಕಂಡ ಸಾವರ್ಕರ್‌ ಅದಕ್ಕೆ ಅರ್ಜಿ ಸಲ್ಲಿಸುತ್ತಾರೆ. ಶ್ಯಾಂಜಿಯ ಸಹಪಾಠಿಯಾಗಿದ್ದ ಎಸ್.ಆರ್‌. ರಾಣೆ ಕೂಡ ಫೆಲೋಷಿಪ್‌ ಘೋಷಿಸಿದ್ದರು. ಲಂಡನ್ನಿನಲ್ಲಿ ಶ್ಯಾಂಜಿ ಕಟ್ಟಿದ್ದ ಇಂಡಿಯನ್‌ ಹೋಂ ರೂಲ್‌ ಚಳುವಳಿಯ ಸ್ಥಾಪಕರಲ್ಲಿ ರಾಣೆಯೂ ಒಬ್ಬರಾಗಿದ್ದರು.

ರಾಣೆ ಘೋಷಿಸಿದ ಮೂರು ಫೆಲೋಷಿಪ್‌ಗಳು ಮೂವರು ಭಾರತೀಯ ರಾಜರುಗಳ ಹೆಸರಿನಲ್ಲಿದ್ದವು. ಮೊವಾರಿನ ಮಹಾರಾಣ ಪ್ರತಾಪ್‌, ಶಿವಾಜಿ ಮತ್ತು ಅಕ್ಬರ್‌ ಚಕ್ರವರ್ತಿಯ ಹೆಸರುಗಳಲ್ಲಿ. ಅಂದಿನ ದೊಡ್ಡ ಮೊತ್ತವಾಗಿದ್ದ ೨೦೦೦ ರೂಪಾಯಿಗಳನ್ನು ಪ್ರತಿ ಫೆಲೋಷಿಪ್‌ಗೆ ನೀಡಲಾಗುತ್ತಿತ್ತು. ಅದನ್ನು ಪಡೆಯುವವರು ಭಾರತದಲ್ಲೋ ಇಂಗ್ಲೆಂಡಿನಲ್ಲೋ ಸರಕಾರಿ ಕೆಲಸಕ್ಕೆ ಸೇರುವಂತಿಲ್ಲ ಎಂಬ ನಿಬಂಧನೆಯನ್ನು ಹಾಕಲಾಗಿತ್ತು. ಅದರ ಜೊತೆಗೆ ಹತ್ತು ವರ್ಷಗಳ ಒಳಗೆ ನಾಲ್ಕು ಶೇಕಡಾ ಬಡ್ಡಿ ದರದಲ್ಲಿ ವಿದ್ಯಾರ್ಥಿ ವೇತನವನ್ನು ಮರಳಿಸಬೇಕೆಂಬ ಷರತ್ತನ್ನೂ ಹಾಕಲಾಗಿತ್ತು. ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಹೊರಡುವ ವಿದ್ಯಾರ್ಥಿಗಳು ೫೦೦೦ ರೂಪಾಯಿಗೆ ಕಡಿಮೆಯಿಲ್ಲದ ಜೀವವಿಮೆ ತೆಗೆದುಕೊಳ್ಳಬೇಕೆಂದೂ ಅದನ್ನು ಸ್ಕಾಲರ್‌ಷಿಪ್‌ ಹಣಕ್ಕೆ ಜಾಮೀನಾಗಿ ನೀಡಬೇಕೆಂದೂ ಷರತ್ತಿನಲ್ಲಿ ಸೇರಿಸಲಾಗಿತ್ತು. ೪೦೦ ರೂಪಾಯಿಗಳಂತೆ ಐದು ಕಂತುಗಳಾಗಿ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತಿತ್ತು.

ತಿಲಕ್‌ ಮತ್ತು ಎಸ್‌.ಎಂ. ಪರಾಂಜಪೆ ಶಿಫಾರಸ್ಸಿನಂತೆ ವಿನಾಯಕ್‌ ದಾಮೋದರ್‌ ಸಾವರ್ಕರ್‌ಗೆ ಶಿವಾಜಿಯ ಹೆಸರಿನಲ್ಲಿರುವ ಸ್ಕಾಲರ್‌ಷಿಪ್‌ ಲಭಿಸಿರುತ್ತದೆ. ಮೊದಲ ಕಂತಿನ ೪೦೦ ರೂಪಾಯಿಗಳನ್ನು ತಿಲಕ್‌ ಮುಖಾಂತರ ಸಾವರ್ಕರ್‌ ಪಡೆದುಕೊಂಡರು. ಹೀಗೆ ೧೯೦೬ ಜೂನ್‌ ೯ರಂದು ಎಸ್.ಎಸ್.‌ ಪರ್ಷಿಯಾ ಎಂಬ ಹಡಗಿನಲ್ಲಿ ಸಾವರ್ಕರ್‌ ಇಂಗ್ಲೆಂಡ್ ಯಾತ್ರೆ ಶುರುವಾಗುತ್ತದೆ. ಆಗ ಪತ್ನಿ ಯಮುನಾ ಮೊದಲ ಮಗ ಪ್ರಭಾಕರ್‌ಗೆ ಜನ್ಮ ನೀಡಿದ್ದರು.

ಅಮೃತಸರದ ಹರ್ಣಾಸಿಂಗ್‌ ಹಡಗಿನಲ್ಲಿ ಸಾವರ್ಕರ್‌ ಸಹಯಾತ್ರಿಕನಾಗಿದ್ದ. ನಾಭ ಎಂಬ ಸಂಸ್ಥಾನದ ರಾಜ ನೀಡಿದ್ದ ಧನಸಹಾಯ ಪಡೆದುಕೊಂಡು ಇಂಗ್ಲೆಂಡಿನ ರಾಯಲ್‌ ಕಾಲೇಜ್‌ ಆಫ್‌ ಅಗ್ರಿಕಲ್ಚರ್‌ ಅಲ್ಲಿ ಕೃಷಿ ವಿಜ್ಞಾನ ಕಲಿಯಲು ಹರ್ಣಾಸಿಂಗ್‌ ಯಾತ್ರೆ ಹೊರಟಿದ್ದ. ಇವರಷ್ಟೇ ಅಲ್ಲದೆ ಇನ್ನಿಬ್ಬರು ಭಾರತೀಯರು ಆ ಹಡಗಿನಲ್ಲಿದ್ದರು. ಮೂರು ವಾರಗಳಷ್ಟು ದೀರ್ಘವಾದ ಆ ಯಾತ್ರೆಯಲ್ಲಿ ಹರ್ಣಾಸಿಂಗ್‌ ಮತ್ತು ಉಳಿದ ಇಬ್ಬರನ್ನು ಅಭಿನವ್‌ ಭಾರತ್‌ಗೆ ಸೆಳೆಯಲು ಸಾವರ್ಕರ್‌ಗೆ ಸಾಧ್ಯವಾಗುತ್ತದೆ. ಫ್ರಾನ್ಸಿನ ಮಾರ್ಸೆಲಲ್ಲಿ ಹಡಗು ದಡ ಸೇರಿ ಲಂಗರು ಹಾಕುತ್ತದೆ. ಅಲ್ಲಿಂದ ಪ್ಯಾರಿಸ್‌ ಮತ್ತು ಕಲೇಸಿಗೆ ರೈಲು ಯಾತ್ರೆ. ನಂತರ ಇಂಗ್ಲೀಷ್‌ ಕಾಲುವೆ ದಾಟಿ ಡೋವರ್‌ ತಲುಪಿ ಅಲ್ಲಿಂದ ೧೯೦೬ ಜೂನ್‌ ೩ರಂದು ಲಂಡನ್ನಿಗೆ ತಲುಪುತ್ತಾರೆ. ೧೯೦೬ ಜುಲೈ ೨೬ರಂದು ಲಂಡನ್ನಿನ ಗ್ರೇಸ್‌ ಇನ್‌ ನಲ್ಲಿ ಸಾವರ್ಕರ್‌ ಕಾನೂನು ವಿದ್ಯಾಭ್ಯಾಸ ಆರಂಭಿಸುತ್ತಾರೆ.

ಇಂಡಿಯಾ ಹೌಸ್‌ ಮತ್ತು ಇತರ ಕಡೆಗಳಲ್ಲಿ ಸಾವರ್ಕರ್‌ ಜೊತೆಗಿದ್ದವರು ಸರೋಜಿನಿ ನಾಯ್ಡು ಅವರ ಸಹೋದರ ವೀರೇಂದ್ರನಾಥ್‌ ಚಟ್ಟೋಪಾಧ್ಯಾಯ, ಲಾಲಾ ಹರ್‌ದಯಾಳ್‌, ವಿ.ವಿ.ಎಸ್.‌ ಅಯ್ಯರ್‌, ಪಿ.ಟಿ. ಆಚಾರ್ಯ, ಜೆ.ಸಿ. ಮುಖರ್ಜಿ, ಮೇಡಂ ಬಿಕಾಜಿ ಕಾಮ, ಭಾಯ್‌ ಪರಮಾನಂದ್‌, ಮದನ್‌ ಲಾಲ್‌ ಡಿಂಗ್ರ ಮೊದಲಾದವರು. ಇನ್ನೊಬ್ಬ ಚಿತ್ಪಾವನ ಬ್ರಾಹ್ಮಣನೂ ಚಾಪೇಕರ್‌ ಸಹೋದರರ ಸಂಘದಲ್ಲಿದ್ದ ಬಲ್ವಂತ್‌ ಬಿಡೇಯ ಶಿಷ್ಯನೂ ಆಗಿದ್ದ ಪಾಂಡರಂಗ್‌ ಮಹಾದೇವ್‌ ಬಾಪುಟ್‌ ಎಂಬ ಸೇನಾಪತಿ ಬಾಪುಟ್.‌ ಇವರಲ್ಲಿ ಮೇಡಂ ಬಿಕ್ಕಾಜಿ ಕಾಮ ಬಾಂಬೆಯ ಒಂದು ಸಂಪನ್ನ ಪಾರ್ಸಿ ಕುಟುಂಬದಿಂದ ಬಂದವರಾಗಿದ್ದರು. ಆಕೆ ರುಸ್ತುಂ ಕಾಮ ಜೊತೆ ಮದುವೆಯಾದರಾದರೂ ಆ ದಾಂಪತ್ಯ ಬಹಳ ಕಾಲ ಉಳಿಯಲಿಲ್ಲ. ೧೮೯೬ರಲ್ಲಿ ಪ್ಲೇಗ್‌ ಬಾಂಬೆಯನ್ನು ಅಟ್ಟಾಡಿಸುತ್ತಿದ್ದಾಗ ಆಕೆ ಪ್ಲೇಗ್‌ ರೋಗಿಗಳನ್ನು ಶುಶ್ರೂಷೆ ಮಾಡುತ್ತಾ ರೋಗ ಬಾಧಿತರಾಗಿದ್ದರು. ೧೯೦೧ರಲ್ಲಿ ಆಕೆಯ ತಂದೆ ಆಕೆಯನ್ನು ಇಂಗ್ಲೆಂಡಿಗೆ ಕಳುಹಿಸುತ್ತಾರೆ. ಅಲ್ಲಿ ಶ್ಯಾಂಜಿ ಕೃಷ್ಣವರ್ಮರನ್ನು ಭೇಟಿಯಾಗುತ್ತಾರೆ. ನಂತರ ಇಂಡಿಯನ್‌ ಸೋಶ್ಯಲಜಿಸ್ಟ್‌ ಗೆ ನಿರಂತರವಾಗಿ ಬರೆಯಲು ಶುರು ಮಾಡುತ್ತಾರೆ.

ಆ ಸಂಘದಲ್ಲಿದ್ದ ಇನ್ನೊಬ್ಬ ಗಮನಾರ್ಹ ವ್ಯಕ್ತಿ ಮದನ್‌ ಲಾಲ್‌ ಡಿಂಗ್ರ ಎಂಬ ಪಂಜಾಬ್‌ ಯುವಕ. ೧೮೮೩ ಸೆಪ್ಟೆಂಬರ್‌ ೧೮ರಂದು ಅಮೃತಸರದಲ್ಲಿ ಮದನ್‌ ಲಾಲ್‌ ಡಿಂಗ್ರ ಜನಿಸಿದ್ದ. ಆತನ ತಂದೆ ಮತ್ತು ಇಬ್ಬರು ಸಹೋದರರು ಡಾಕ್ಟರುಗಳಾಗಿದ್ದರು. ಮತ್ತಿಬ್ಬರು ಸಹೋದರರು ಬ್ಯಾರಿಸ್ಟರಾಗಿದ್ದರು. ೧೯೦೬ರಲ್ಲಿ ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಕಲಿಯಲೆಂದು ಡಿಂಗ್ರ ಲಂಡನ್‌ ತಲುಪಿದ್ದ. ರಾಜಕೀಯ ವಿಚಾರಗಳು ಯಾವುದೂ ಇಲ್ಲದಿದ್ದ ಡಿಂಗ್ರ ಬಹಳ ಬೇಗನೆ ಸಾವರ್ಕರ್‌ ವಲಯಕ್ಕೆ ಪ್ರಭಾವಿತನಾಗಿ ಸಾವರ್ಕರ್‌ಗೆ ನಂಬಿಕಸ್ಥ ಹಿಂಬಾಲಕನಾಗಿ ಬದಲಾದ.

ಅಭಿನವ್‌ ಭಾರತ್‌ನ ವಿದೇಶಿ ಶಾಖೆಯಾಗಿ ಫ್ರೀ ಇಂಡಿಯಾ ಸೊಸೈಟಿಯನ್ನು ಲಂಡನ್ನಿನಲ್ಲಿ ಶುರು ಮಾಡಲು ಬಹಳ ಸಮಯವೇನೂ ಹಿಡಿಯಲಿಲ್ಲ. ಶಿವಾಜಿ ಉತ್ಸವ ಮತ್ತು ಗಣೇಶೋತ್ಸವಗಳನ್ನು ಮಾದರಿಯಾಗಿಸಿ ಲಂಡನ್ನಿನಲ್ಲಿ ದಸರಾ, ಗುರುನಾನಕ್‌ ಜಯಂತಿ, ಗುರುಗೋವಿಂದ್‌ಸಿಂಗ್‌ ಜಯಂತಿ ಮೊದಲಾದವನ್ನು ಆಚರಿಸಲು ಶುರು ಮಾಡುತ್ತಾರೆ. ರಾಜಕೀಯಕ್ಕೋಸ್ಕರ ಧಾರ್ಮಿಕತೆಯನ್ನು ವಿಜೃಂಭನೆ ಮಾಡುವ ಬ್ರಾಹ್ಮಣಿಸಮ್ಮಿನ ಅದೇ ಭಾರತೀಯ ಶೈಲಿಯನ್ನು ಸಾವರ್ಕರ್‌ ಲಂಡನ್ನಿನಲ್ಲಿ ಪ್ರಯೋಗಿಸಿದ್ದರು. ಆ ಮೂಲಕ ಕೇಂಬ್ರಿಡ್ಜ್, ಆಕ್ಸ್‌ಫರ್ಡ್‌, ಎಡಿನ್‌ಬರೋ ಮೊದಲಾದ ಕಡೆಗಳಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಇಂಡಿಯಾ ಹೌಸ್‌ಗೆ ಆಕರ್ಷಿಸಲು ಸಾವರ್ಕರ್‌ಗೆ ಸಾಧ್ಯವಾಗುತ್ತದೆ. ಮಾತ್ರವಲ್ಲದೆ, ಲಾಲಾ ಲಜಪತ್‌ ರಾಯ್‌, ಬಿಪಿನ್‌ ಚಂದ್ರಪಾಲ್‌ ಮೊದಲಾದ ಭಾರತದ ರಾಷ್ಟ್ರೀಯ ನಾಯಕರನ್ನು, ಅದರಲ್ಲೂ ತಿಲಕರ ಸಿದ್ಧಾಂತದ ಜೊತೆಗೆ ನಿಲ್ಲುವ ನಾಯಕರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವಲ್ಲಿಯೂ ಸಾವರ್ಕರ್‌ ಯಶಸ್ವಿಯಾಗಿದ್ದರು.

ನವಸಂಪ್ರದಾಯವಾದಿ ಬ್ರಾಹ್ಮಣಿಸಂ ಮುಂದಿಟ್ಟಿದ್ದ ಹಿಂಸಾತ್ಮಕ ಬ್ರಿಟಿಷ್‌ ವಿರೋಧಿ ಹೋರಾಟವನ್ನೂ, ಧಾರ್ಮಿಕ ರಾಷ್ಟ್ರೀಯತೆಯನ್ನೂ ಅಂತರಾಷ್ಟ್ರೀಯ ಮಟ್ಟಕ್ಕೇರಿಸುವುದು ಅತ್ಯಗತ್ಯವೆಂದು ಸಾವರ್ಕರ್‌ಗೆ ಲಂಡನ್‌ ದಿನಗಳು ಕಲಿಸಿದವು. ಆಸ್ಟ್ರಿಯನ್‌ ಸಾಮ್ರಾಜ್ಯದ ಭಾಗವಾಗಿದ್ದ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಇಟಲಿ ಎಂಬ ದೇಶವನ್ನು ಕಟ್ಟಿದ ಮಸಿನಿಯ ಪ್ರಯತ್ನಗಳನ್ನು ಮುಂದಿಟ್ಟುಕೊಂಡು, ಬ್ರಿಟಿಷರ ಅಧೀನದಲ್ಲಿರುವ ಭಾರತದ ಪ್ರಾಂತ್ಯಗಳನ್ನು ಬೆಸೆದು ಬ್ರಾಹ್ಮಣ ದೇಶ ಸ್ಥಾಪನೆ ಎಂಬ ಗುರಿಯನ್ನು ಹಿಡಿದಿಟ್ಟುಕೊಳ್ಳುವುದು ಈ ಕಾಲದಲ್ಲಿ ಸಾವರ್ಕರ್‌ ಪ್ರಯತ್ನವಾಗಿತ್ತು. ಜಾತಿ ಪ್ರಾಬಲ್ಯವನ್ನು ಜನಾಂಗೀಯತೆಯೊಂದಿಗೆ ಸಮೀಕರಿಸುವ ಮೊದಲ ಪ್ರಯತ್ನ ಇದಾಗಿತ್ತು. ಇಂಡಿಯಾದಿಂದ ಹೊರಡುವಾಗಲೇ ಈ ಯೋಚನೆಯ ಬೀಜ ಸಾವರ್ಕರ್‌ ಮನಸ್ಸಿನಲ್ಲಿತ್ತು. ಮಾರ್ಸೆಲ್ಸಿಗೆ ಹಡಗು ತಲುಪಿದಾಗ ಅಲ್ಲಿ ನಿಂತು ಇಟಲಿಯ ಏಕೀಕರಣಕ್ಕೆ ಮಸ್ಸಿನಿ ಪಟ್ಟ ಶ್ರಮಗಳ ಕುರಿತು ತಾನು ಯೋಚಿಸಿದೆ ಎಂದು ಸಾವರ್ಕರ್‌ ತನ್ನ ಸ್ಮರಣ ಪುಸ್ತಕದಲ್ಲಿ ಬರೆದಿದ್ದಾರೆ. ಆ ಊರಿನವರಿಗೆ ಇದರ ಕುರಿತು ಯಾವ ಮಾಹಿತಿಯೂ ಇರಲಿಲ್ಲ ಎಂಬುದು ತನ್ನನ್ನು ಖಿನ್ನನಾಗಿಸಿತು ಎಂದೂ ಬರೆಯುತ್ತಾರೆ.

ಬ್ರಜಿಲ್, ಉರುಗ್ವೇ ಮುಂತಾದ ಕಡೆಗೆ ಗಡಿಪಾರು ಮಾಡಲ್ಪಟ್ಟಿದ್ದ ಗಾರಿಬಾಲ್ಡಿ ಹಾಗೂ ಸಾರ್ಡೀನಿಯಾ ದೇಶವನ್ನು ಸೇರಿಸಿಕೊಂಡು ಮಸ್ಸಿನಿ ಆಸ್ಟ್ರಿಯಾ ಸಾಮ್ರಾಜ್ಯದ ವಿರುದ್ಧ ಮಾಡಿದ ಯುದ್ಧವನ್ನು ಬ್ರಾಹ್ಮಣರ ನಾಯಕತ್ವದಲ್ಲಿ ಹಿಂದೂಗಳೆಲ್ಲರು ಸೇರಿಕೊಂಡು ಬ್ರಿಟಿಷರಿಗೆದುರಾಗಿ ಮಾಡುವ ಯುದ್ಧದೊಂದಿಗೆ ಸಮೀಕರಿಸಿಕೊಂಡು ಸಾವರ್ಕರ್‌ ಹಲವು ಕಡೆಗಳಲ್ಲಿ ಭಾಷಣ ಮಾಡಿದ್ದರು. ಯುದ್ಧ ಗೆಲ್ಲದಿದ್ದರೂ ಗೆಲ್ಲಬಹುದಾದ ಯುದ್ಧಗಳಿಗೆ ಅದು ಬಾಗಿಲು ತೆರೆದು ಕೊಟ್ಟಿತು.

ಮಸ್ಸಿನಿಯ ಕುರಿತ ಈ ದಿಕ್ಕಿನ ಅಧ್ಯಯನವನ್ನು ಪೂರ್ತಿಗೊಳಿಸಲು ಸಾವರ್ಕರ್‌ಗೆ ಇಂಡಿಯಾ ಹೌಸಿನ ಗ್ರಂಥಾಲಯ ಸಹಾಯ ಮಾಡಿತು. ರಹಸ್ಯ ಸಂಘಟನೆಗಳ ಮತ್ತು ಶಸ್ತ್ರ ಶೇಖರಣೆಯ ಅಗತ್ಯತೆಯ ಸಂದೇಶವನ್ನು ಎತ್ತಿಹಿಡಿಯಲು ಹಾಗೂ ಅದನ್ನು ಬ್ರಾಹ್ಮಣರು ಮತ್ತು ಇತರ ಹಿಂದೂಗಳ ನಡುವೆ ಪ್ರಚಾರ ಪಡಿಸಲು ಈ ಅಧ್ಯಯನವನ್ನು ಸಾವರ್ಕರ್‌ ಕೈಗೊಳ್ಳುವುದು. ಭಾರತದ ಸ್ವಾತಂತ್ರ್ಯ ಎಂಬುದು ಬ್ರಾಹ್ಮಣರು ಮತ್ತು ಬ್ರಿಟಿಷರ ನಡುವಿನ ಯುದ್ಧದ ಫಲವೇ ಆಗಿರುತ್ತದೆ ಎಂದು ಗಟ್ಟಿಯಾಗಿ ಇಲ್ಲಿ ಸಾವರ್ಕರ್‌ ವಾದಿಸುತ್ತಾರೆ. ಮಂದಗಾಮಿಗಳು ʼಬಾಲಿಶʼ ಎಂದು ಕರೆಯುವ ಈ ಯುದ್ಧಸನ್ನಾಹವೇ ಸರಿಯಾದ ದಾರಿ ಎಂದು ಮಸ್ಸಿನಿಯನ್ನು ಎತ್ತಿ ಹಿಡಿದುಕೊಂಡು ಸಾವರ್ಕರ್‌ ವಾದಿಸುತ್ತಾರೆ.

ʼಮಸ್ಸಿನಿ ಮತ್ತು ಆತನ ಸಹ ಕ್ರಾಂತಿಕಾರಿಗಳು ಇದೇ ರೀತಿಯಲ್ಲಿ ೧೮೩೦ರ ಕಾಲದ ಇಟಲಿಯಲ್ಲಿ ಅವರ ಸಮಕಾಲೀನ ʼಹಿರಿಯರಿಗೆʼ ʼಬಾಲಿಶʼರಾಗಿಯೂ ʼಅಸಂಬದ್ಧʼರಾಗಿಯೂ ಕಂಡಿದ್ದರು. ಅಂತಹ ಅಪಹಾಸ್ಯಗಳಿಗೆ ಮಸ್ಸಿನಿ ತನ್ನ ಲೇಖನಗಳ ಮೂಲಕ ತಿರುಗೇಟು ನೀಡಿದ್ದ. ತಮಾಷೆಯ ಸಂಗತಿ ಏನೆಂದರೆ ೧೯೦೬ರಲ್ಲಿ ಮಸ್ಸಿನಿ ಮತ್ತು ಗಾರಿಬಾಲ್ಡಿ ತರಹದ ವ್ಯಕ್ತಿಗಳನ್ನು ‌ʼಮಹಾನ್ ದೇಶಪ್ರೇಮಿʼಗಳೆಂದು ಭಾರತದ ನಾಯಕರು ಕರೆದಿದ್ದರು. ತಮ್ಮ ಕಾಲದಲ್ಲಿ ಮಸ್ಸಿನಿ ಮತ್ತು ಗಾರಿಬಾಲ್ಡಿ ಮೂರ್ಖರೆಂದೂ ಬಾಲಿಶರೆಂದೂ ಮುದ್ರೆಯೊತ್ತಲ್ಪಟ್ಟಿದ್ದರೆಂದು ಇವರುಗಳಿಗೆ ತಿಳಿದೇ ಇರಲಿಲ್ಲ. ಮಸ್ಸಿನಿಯ ಬರಹಗಳು ನಮ್ಮ ಚಟುವಟಿಕೆಗಳಿಗೆ ಪೂರಕವಾಗಿವೆ ಮತ್ತು ನಮ್ಮ ಶೈಲಿ ಭಾರತದ ಜನರಿಗೆ ವಿಶ್ವಾಸ ಮೂಡುವಂತೆ ಮಾಡುತ್ತವೆ.ʼ

ಮಸ್ಸಿನಿಯ ಆತ್ಮಕತೆಯನ್ನು ಸಾವರ್ಕರ್‌ ಮರಾಠಿಯಲ್ಲಿ ಭಾಷೆಯಲ್ಲಿ ಬರೆದು ಪೂರ್ತಿಗೊಳಿಸಿದರು. ಜೋಸೆಫ್‌ ಮಸ್ಸಿನಿಯಾಂಚೆ ಆತ್ಮಚರಿತ ವ ರಾಜ್‌ಕರಣ್ (ಜೋಸೆಫ್‌ ಮಸ್ಸಿನಿಯ ಆತ್ಮಕತೆ ಮತ್ತು ರಾಜಕಾರಣ) ಪುಸ್ತಕದ ಹೆಸರು. ೧೯೦೬ರ ಅಕ್ಟೋಬರಿನಲ್ಲಿ ಹಸ್ತಪ್ರತಿಯನ್ನು ಬಾಬಾರಾವ್‌ಗೆ ಕಳುಹಿಸಿಕೊಡುತ್ತಾರೆ. ಬಾಬಾರಾವ್‌ ಅದನ್ನು ತಿಲಕ್‌ ಮತ್ತು ಪರಾಂಜಪೆ ಅವರಿಗೆ ಅದನ್ನು ಓದಲು ಕೊಡುತ್ತಾರೆ. ಅಪಾರ ಮುನ್ನೋಟವಿದ್ದ ತಿಲಕ್‌ ಇದನ್ನು ಪ್ರಕಟಿಸಿದರೆ ಘಟಿಸಬಹುದಾದ ಆಪತ್ತುಗಳ ಬಗ್ಗೆ ಬಾಬಾರಾವ್‌ಗೆ ಎಚ್ಚರಿಕೆ ನೀಡುತ್ತಾರೆ. ಜಗತಹಿತೇಚ್ಛು ಎಂಬ ಪತ್ರಿಕೆಯ ಪ್ರೆಸ್‌ನಲ್ಲಿ ಅಭಿನವ್‌ ಭಾರತ್‌ ಕಾರ್ಯಕರ್ತರು ಇದರ ಮುದ್ರಣವನ್ನು ಪೂರ್ತಿಗೊಳಿಸುತ್ತಾರೆ. ಪರಾಂಜಪೆಯ ಕಾಲ್‌ ಈ ಪುಸ್ತಕವನ್ನು ಹೊಗಳಿಕೊಂಡು ಪ್ರಬಂಧ ಪ್ರಕಟಿಸಿತು. ಮಸ್ಸಿನಿಯ ರಾಷ್ಟ್ರೀಯತೆಯನ್ನು ಬ್ರಾಹ್ಮಣಿಸಂ ಜೊತೆಗೆ ತಳುಕು ಹಾಕಿಕೊಂಡ ಹೊಗಳಿಕೆಯಾಗಿತ್ತದು.

ʼಮಸ್ಸಿನಿಯ ಈ ಲೇಖನಗಳು ಅಮೃತದಂತೆ. ವೇದಮಂತ್ರಗಳ ಹಾಗೆ ಇವಕ್ಕೆ ಅಸಾಮಾನ್ಯ ಶಕ್ತಿಯಿದೆʼ ಎಂದು ಕಾಲ್‌ ಬರೆಯಿತು. ಎರಡನೇ ಮುದ್ರಣ ಬರುವ ಮೊದಲೇ ೧೯೦೭ರಲ್ಲಿ ಬ್ರಿಟಿಷ್‌ ಅಧಿಕಾರಿಗಳು ಆ ಪುಸ್ತಕವನ್ನು ನಿಷೇಧಿಸಿದರು.

ಈ ನಡುವೆ ಆಗ ಇಂಗ್ಲೆಂಡಿನಲ್ಲಿದ್ದ ಗಾಂಧಿ ಇಂಡಿಯಾ ಹೌಸ್‌ ಸಂದರ್ಶಿಸಿದ್ದರು. ಸಾವರ್ಕರ್‌ ಮತ್ತು ಗಾಂಧಿಯ ಮೊದಲ ಭೇಟಿಯಾಗಿತ್ತದು. ಆಗ ಚಿತ್ಪಾವನ ಬ್ರಾಹ್ಮಣನಾಗಿದ್ದ ಸಾವರ್ಕರ್‌ ತನಗೆಂದು ಸೀಗಡಿ ಅಡುಗೆ ಮಾಡುತ್ತಿರುವುದನ್ನು ಕಂಡು ಗಾಂಧಿ ಆಶ್ಚರ್ಯಗೊಂಡರೆಂದು ಹೇಳುತ್ತಾರೆ. ಸಸ್ಯಾಹಾರಿಯಾಗಿದ್ದ ಗಾಂಧಿ ಊಟ ನಿರಾಕರಿಸಿದರು. ವಿನಾಯಕ್‌ ಅದನ್ನು ಕಂಡು ತಿರುಗೇಟು ನೀಡಿದ್ದರಂತೆ, ʼತಾವು ನಮ್ಮೊಂದಿಗೆ ಊಟ ಮಾಡುವುದಿಲ್ಲವಾದರೆ, ನಮ್ಮೊಂದಿಗೆ ಹೋರಾಡಲು ಈ ಭೂಮಿಯ ಮೇಲೆ ನಿಮ್ಮನ್ನು ಪ್ರೇರೇಪಿಸುವ ಶಕ್ತಿ ಯಾವುದು? ಅದಕ್ಕೂ ಮಿಗಿಲಾಗಿ ಇದು ಬರಿಯ ಕರಿದ ಸೀಗಡಿ. ನಾವು ಬಯಸುವುದು ಜನರು ಬ್ರಟಿಷರನ್ನು ಹಸಿಯಾಗಿಯೇ ಹರಿದು ತಿನ್ನಬೇಕೆಂದು.ʼ

ಸಾವರ್ಕರ್ ಯುದ್ಧ ಅರ್ಧ ದಾರಿಯಲ್ಲಿ ನಿಂತದ್ದನ್ನೂ ಗಾಂಧಿಯ ಹೋರಾಟ ದೀರ್ಘಕಾಲ ಮುಂದುವರಿದು ಗೆದ್ದಿದ್ದನ್ನೂ ಈ ಭೇಟಿ ದಾಖಲಿಸಿದ ಹರೀಂದ್ರ ಶ್ರೀವಾಸ್ತವ ನೆನೆಯುವುದೇ ಇಲ್ಲ.

ಮಸ್ಸಿನಿಯ ಆತ್ಮಕತೆ ಪೂರ್ತಿಗೊಳಿಸಿದ ನಂತರ, ಚಿತ್ಪಾವನ ಬ್ರಾಹ್ಮಣ ನಾನಾಸಾಹೇಬ್‌ ಭಾಗವಹಿಸಿದ್ದ ೧೮೫೭ರ ಸಂಗ್ರಾಮವನ್ನು ಆ ರೀತಿಯಲ್ಲಿ ಚಿತ್ರೀಕರಿಸಲು ಸಾವರ್ಕರ್‌ ಶ್ರಮಿಸಿದ್ದರು. ಸಿಪಾಯಿ ದಂಗೆಯೆಂದು ಬ್ರಿಟಿಷರು ಕರೆದ ಹೋರಾಟವನ್ನು ಬ್ರಾಹ್ಮಣಿಸಮ್ಮಿನ ನೋಟಕ್ರಮದಲ್ಲಿ ಪುನರ್‌ ರಚಿಸುವ ಪ್ರಯತ್ನಕ್ಕೆ ಸಾವರ್ಕರ್‌ ಮುಂದಾಗಿದ್ದರು. ಅದು ಮಾತ್ರ ಸುಲಭದ ದಾರಿಯಾಗಿರಲಿಲ್ಲ. ಯಾಕೆಂದರೆ ಅದರಲ್ಲಿದ್ದ ಮೌಲವಿ ಅಹಮ್ಮದ್‌ ಷಾ ಮತ್ತು ಬಹದೂರ್‌ ಷಾ ಜಫರ್‌ ತರದ ಮುಸ್ಲಿಮರ ಪಾಲ್ಗೊಳ್ಳುವಿಕೆಯನ್ನು ಮರೆಮಾಚುವುದು ಅಸಾಧ್ಯವಾಗಿತ್ತು. ಬ್ರಾಹ್ಮಣಿಸಮ್ಮಿನ ಅಡಿಪಾಯ ತತ್ವಗಳಲ್ಲಿ ಒಂದಾಗಿದ್ದ ಮುಸ್ಲಿಂ ದ್ವೇಷದಲ್ಲಿ ನೀರು ಬೆರೆಸಲು ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ಸ್ವಭಾವ ಸಾವರ್ಕರನ್ನು ಪ್ರೇರೇಪಿಸಿತು. ಲಂಡನ್ನಿನಲ್ಲಿ ನಿಂತುಕೊಂಡು ಮಾಡುತ್ತಿದ್ದ ಬ್ರಾಹ್ಮಣಿಸಂ ಪ್ರಚಾರ ಕಾರ್ಯದಲ್ಲಿ ಮುಸ್ಲಿಂ ದ್ವೇಷ ಎಂಬುದು ತೀರಾ ಅಪ್ರತ್ಯಕ್ಷವಾಗಿತ್ತು. ಅಷ್ಟೇ ಅಲ್ಲದೆ, ಇಂಡಿಯಾ ಹೌಸ್‌ ಕೇಂದ್ರೀಕರಿಸಿ ನಡೆಯುತ್ತಿದ್ದ ಬ್ರಿಟಿಷ್‌ ವಿರೋಧಿ ಹೋರಾಟಗಳಲ್ಲಿ ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳು ಕೂಡ ದೊಡ್ಡ ಪಾತ್ರ ವಹಿಸಿದ್ದರು. ಹೀಗೆ ಒಳಗೂ ಹೊರಗೂ ಇದ್ದ ಮುಸ್ಲಿಮರ ಸಾನಿಧ್ಯ ಪ್ರತ್ಯಕ್ಷವಾಗಿ ಮುಸ್ಲಿಂ ವಿರೋಧಿ ನಿಲುವನ್ನು ತೆಗೆದುಕೊಳ್ಳಲು ಸಾವರ್ಕರ್‌ ಹಿಂದೇಟು ಹಾಕುವಂತೆ ಮಾಡಿತ್ತು.

೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಐವತ್ತನೇ ವಾರ್ಷಿಕದಂದು ʼ೧೮೫೭ರ ರಕ್ತಸಾಕ್ಷಿಗಳ ನೆನಪಿಗೆʼ ಎಂಬ ಬ್ಯಾಡ್ಜ್‌ ಧರಿಸಿ ಕಾಲೇಜಿಗೆ ಹೋದ ರಫೀಕ್‌ ಮುಹಮ್ಮದ್‌ ಖಾನ್‌ಎಂಬ ವಿದ್ಯಾರ್ಥಿ ಮುಸ್ಲಿಂ ಆಗಿದ್ದ. ಅದಕ್ಕಾಗಿ ಆತ ಅಧಿಕಾರಿಗಳಿಂದ ಶಿಕ್ಷೆಗೂ ಒಳಪಟ್ಟ. ಇಂತಹ ಘಟನೆಗಳ ಹಿನ್ನೆಲೆಯಲ್ಲಿಯೇ ಸಾವರ್ಕರ್‌ ಆ ಹೋರಾಟದ ಚರಿತ್ರೆ ಬರೆಯಲು ಮುಂದಾಗುವುದು.

ಇತ್ತೀಚೆಗೆ ಬಿಜೆಪಿಯ ಅಧ್ಯಕ್ಷರಾಗಿದ್ದಾಗ ಅಮಿತ್‌ ಷಾ ಸಾವರ್ಕರನ್ನು ಹೊಗಳಿ ಮಾತನಾಡಿದ್ದರು. ಅದಕ್ಕೆ ಅವರು ನೀಡಿದ ಒಂದು ಕಾರಣ ೧೮೫೭ರ ಸಂಗ್ರಾಮವನ್ನು ಸಿಪಾಯಿ ದಂಗೆಯೆಂದು ಬ್ರಿಟಿಷರು ಕರೆದಾಗ ಅದನ್ನು ಮೊದಲನೇ ಸ್ವಾತಂತ್ರ್ಯ ಹೋರಾಟವೆಂದು ಪುನರ್‌ ವ್ಯಾಖ್ಯಾನ ನೀಡಿದ್ದು ಸಾವರ್ಕರ್‌ ಎಂಬುದಾಗಿತ್ತು. ನಿಜದಲ್ಲಿ ಸಾವರ್ಕರ್‌ ಅದನ್ನು ಕರೆದಿರುವುದು ಹಾಗಲ್ಲ. ೧೮೫೭ರ ಭಾರತೀಯ ಸ್ವಾತಂತ್ರ್ಯ ಯುದ್ಧ ಎಂದು. ಹೋರಾಟ ಮತ್ತು ಯುದ್ಧದ ನಡುವಿನ ವ್ಯತ್ಯಾಸ ಗುರುತಿಸದಿದ್ದರೆ ಸಾವರ್ಕರ್‌ ಮತ್ತು ಅಭಿನವ್‌ ಭಾರತ್‌ ಮುಂದಿಟ್ಟ ಬ್ರಟಿಷ್‌ ವಿರೋಧಿ ಹೋರಾಟಕ್ಕೂ ನಂತರದ ಕಾಲದಲ್ಲಿ ರಾಷ್ಟ್ರೀಯ ಚಳುವಳಿಗಳು ಮತ್ತು ಗಾಂಧೀಜಿ ಮುಂದಿಟ್ಟ ಬ್ರಿಟಿಷ್‌ ವಿರೋಧಿ ಹೋರಾಟಕ್ಕೂ ನಡುವಿನ ವ್ಯತ್ಯಾಸ ಅರ್ಥವಾಗದೆ ಹೋಗಬಹುದು. ಬ್ರಿಟಿಷರು ಭಾರತದಲ್ಲಿ ಗೆದ್ದ ಯುದ್ಧಗಳನ್ನು ಹಾಗೆಯೇ ಉಲ್ಟಾ ಮಾಡುವುದೇ ಸಾವರ್ಕರ್‌ ಮತ್ತಿತರರು ಘೋಷಿಸಿದ ಬ್ರಾಹ್ಮಣಿಸಮ್ಮಿನ ಸ್ವಾತಂತ್ರ್ಯ ಹೋರಾಟದ ಮುಖ್ಯ ಆಶಯ. ಒಂದಷ್ಟು ಜನರು ಸೈನ್ಯಕಟ್ಟಿಕೊಂಡು ಆಕ್ರಮಣಗಳು ಮತ್ತು ಬಲಿದಾನಗಳ ಮೂಲಕ ಯುದ್ಧ ಗೆಲ್ಲುವುದು ಸಾವರ್ಕರ್‌ ಯೋಜನೆಯಾಗಿತ್ತು. ಅದರ ಭೂತಕಾಲವಾಗಿ ಮಾತ್ರವೇ ಸಾವರ್ಕರ್‌ ೧೮೫೭ರ ಹೋರಾಟವನ್ನು ಕಂಡಿದ್ದ. ಸ್ವರಾಜ್ಯ ಮತ್ತು ಸ್ವಧರ್ಮ, ಅಂದರೆ ಜನ್ಮಭೂಮಿಯೊಂದಿಗೂ ಹುಟ್ಟಿದ ಧರ್ಮದೊಂದಿಗೂ ನಿಷ್ಠೆಯಿಂದಿರುವುದು ಮಾತ್ರವೇ ಸಾವರ್ಕರ್‌ ಯೋಜಿಸಿದ್ದ ʼಕ್ರಾಂತಿʼಗೆ ಅಡಿಪಾಯ. ಅದು ನಂತರದ ಕಾಲದಲ್ಲಿ ಹುಟ್ಟಿಕೊಂಡ ಮಾರ್ಕ್ಸಿಸ್ಟ್‌ ಕ್ರಾಂತಿಕಾರಿ ಚಿಂತನೆಗಳಿಂದಲೂ ಬೇರೆಯಾಗಿ ನಿಲ್ಲಲು ಕಾರಣವೂ ಇದುವೇ ಆಗಿದೆ. ಸಾವರ್ಕರ್‌ಗೆ ಮತ್ತು ಸಾವರ್ಕರಿಸಂಗೆ ದೇಶ ಮತ್ತು ಧರ್ಮ ಎಂಬುದು ಪ್ರಶ್ನಿಸಲಾಗದ ಮತ್ತು ಬದಲಾವಣೆಗೆ ಒಳಪಡಿಸಲಾಗದ ಚಿರ ಕಲ್ಪನೆಗಳಾಗಿದ್ದವು. ಅವನ್ನು ಚಿರವಾಗಿ ಉಳಿಸುವುದೇ ಹೋರಾಟಗಳ ಆತ್ಯಂತಿಕ ಗುರಿ. ಧರ್ಮ ಅಧರ್ಮಗಳ ಬದಲಿಗೆ ಹಿಂಸೆ ಮಾತ್ರವೇ ಅದರ ಏಕೈಕ ದಾರಿಯಾಗಿ ಬದಲಾಗುವುದು ಕೂಡ ಅದರಿಂದಾಗಿಯೆ.

೧೮೫೭ರ ಸ್ವಾಂತಂತ್ರ್ಯಯುದ್ಧದಲ್ಲಿ ಮುಸ್ಲಿಮರ ಕುರಿತಾದ ತನ್ನ ದೃಷ್ಟಿಕೋನವನ್ನು ಹೀಗೆ ಪರಿಷ್ಕರಿಸುತ್ತಾರೆ:

ʼವಿದೇಶಿ ಆಡಳಿತಗಾರರು ಎಂಬ ನೆಲೆಯಲ್ಲಿ ಮುಸ್ಲಿಮರು ಭಾರತದಲ್ಲಿ ಬದುಕಿದ್ದಷ್ಟು ಕಾಲವೂ ಅವರನ್ನು ಸಹೋದರರಂತೆ ಕಂಡು ಒಟ್ಟಿಗೆ ಬಾಳುವುದು ರಾಷ್ಟ್ರೀಯ ದೌರ್ಬಲ್ಯವನ್ನು ಎತ್ತಿಹಿಡಿಯುವ ಕಾರ್ಯವೇ ಆಗಿತ್ತು. ಆದ್ದರಿಂದ ಅಲ್ಲಿಯ ತನಕ ಮುಸ್ಲಿಮರನ್ನು ಪರಕೀಯರಾಗಿ ಕಾಣಲೇಬೇಕಾದದ್ದು ಹಿಂದೂಗಳ ಕರ್ತವ್ಯವಾಗಿತ್ತು. ಅದಕ್ಕಿಂತ ಮಿಗಿಲಾಗಿ ಪಂಜಾಬಿನಲ್ಲಿ ಗುರುಗೋವಿಂದ್‌ ಸಿಂಗ್‌, ರಜಪೂತರಲ್ಲಿ ರಾಣಾ ಪ್ರತಾಪ್‌, ಬುಂದೇಲ್‌ ಖಂಡದಲ್ಲಿ ಛತ್ರಶಾಲೆ ಮತ್ತು ದೆಹಲಿಯ ಸಿಂಹಾಸನದ ಮೇಲೆ ಮರಾಠರು ಕೂರುವ ಮೂಲಕ ಮುಹಮ್ಮದೀಯರ ಆಡಳಿತವನ್ನು ನಾಶಗೊಳಿಸಲಾಯಿತು. ಶತಮಾನಗಳ ಕಾಲ ನಡೆದ ಯುದ್ಧಗಳ ನಂತರ ಹಿಂದೂಗಳ ಪರಮಾಧಿಕಾರ ಮುಹಮ್ಮದೀಯರ ಆಡಳಿತವನ್ನು ಕೊನೆಗಾಣಿಸಿ ಪೂರ್ತಿ ಭಾರತವನ್ನು ಅದರಡಿಯಲ್ಲಿ ಒಟ್ಟುಗೂಡಿಸಿತು. ಅಂದು ಮುಹಮ್ಮದೀಯರೊಂದಿಗೆ ಕೈಜೋಡಿಸುವುದು ತಲೆತಗ್ಗಿಸುವ ಕೆಲಸವಾಗಿತ್ತು. ಆದರೆ ಈಗ ಅದು ಉದಾರ ಕಾರ್ಯವಾಗಿದೆ. ಆದ್ದರಿಂದಲೇ ಈಗ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಶತೃತ್ವ ಎಂಬುದು ಭೂತಕಾಲದ ಒಂದು ಸಂಗತಿ ಮಾತ್ರವಾಗಿದೆ. ಅವರ ಇಂದಿನ ಸಂಬಂಧ ಪ್ರಭುತ್ವ-ಪ್ರಜೆಗಳು, ಸ್ವದೇಶಿಗಳು-ಪರಕೀಯರು ಎಂಬ ಹಂತವನ್ನು ಮೀರಿ ಸಹೋದರತ್ವಕ್ಕೆ ಬಂದು ನಿಂತಿದೆ. ನಮ್ಮ ನಡುವಿನ ಒಂದೇ ವ್ಯತ್ಯಾಸ ಧರ್ಮ ಮಾತ್ರವೇ ಆಗಿ ಉಳಿದಿದೆ. ಹಿಂದೂಸ್ತಾನದ ಮಣ್ಣಿನ ಮಕ್ಕಳು ನಾವಿಬ್ಬರು. ಅವರ ಹೆಸರುಗಳು ಭಿನ್ನವಾಗಿದ್ದರೂ ನಾವು ಒಂದೇ ತಾಯಿಯ ಮಕ್ಕಳು. ರಕ್ತದ ಮೂಲಕ ಅವರು ನಮ್ಮ ಸಹೋದರರಾಗಿದ್ದಾರೆ. ನಾನಾಸಾಹೇಬ್‌, ದೆಹಲಿಯ ಬಹಾದೂರ್‌ ಷಾ, ಮೌಲವಿ ಅಹಮ್ಮದ್‌ ಷಾ ಮೊದಲಾದವರು ಮತ್ತು ೧೮೫೭ರ ಇತರ ನಾಯಕರು ಈ ಸಂಬಂಧವನ್ನು ಒಂದು ಹಂತದವರೆಗೆ ಗುರುತಿಸಿ ತಮ್ಮೊಳಗಿನ ಶತೃತ್ವವನ್ನು ಅತಾರ್ಕಿಕ ಮತ್ತು ಮೂರ್ಖತನಗಳಾಗಿ ಕಂಡು ಅದನ್ನು ಬದಿಗೆ ಸರಿಸಿ ಸ್ವದೇಶೀ ಪತಾಕೆಯ ಸುತ್ತ ನೆರೆದರು. ಒಟ್ಟಿನಲ್ಲಿ ಹೇಳುವುದಾದರೆ, ನಾನಾಸಾಹೇಬ್‌ ಮತ್ತು ಅಜೀಮುಲ್ಲಾರ ನಿಲುವುಗಳ ಅತ್ಯಂತ ವಿಶಾಲವಾದ ಅಂಶ ಏನೆಂದರೆ, ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಎದೆಗೆ ಎದೆ ಕೊಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು, ಸ್ವಾತಂತ್ರ್ಯ ಲಭಿಸಿದರೆ ಭಾರತದ ಆಡಳಿತಗಾರರ ಮತ್ತು ರಾಜರುಗಳ ಅಡಿಯಲ್ಲಿ ಭಾರತದ ಒಕ್ಕೂಟ ಸಂಸ್ಥಾನಗಳನ್ನು ರೂಪೀಕರಿಸಬೇಕು ಎಂಬುದೇ ಆಗಿತ್ತು.ʼ

ಸಾವರ್ಕರ್‌ ತನ್ನ ಜೀವನಮಾನ ಪೂರ್ತಿ ಬೆಳೆಸಿಕೊಂಡಿದ್ದ ನಂಬಿಕೆಗಳಿಂದ ದೂರ ನಡೆಯುವುದನ್ನು ಇಲ್ಲಿ ಗಮನಿಸಬಹುದಾದರೂ ಅದರ ಸೂಕ್ಷ್ಮಗಳನ್ನು ಗಮನಿಸಬೇಕಾಗುತ್ತದೆ. ʼಸೋತ ಮುಸ್ಲಿಮರೊಂದಿಗೆʼ ಮಾತ್ರವೇ ಇಲ್ಲಿ ಸಾವರ್ಕರ್‌ ಐಕ್ಯತೆ ಸಾರುತ್ತಿರುವುದು. ಅದು ಎರಡೂ ಕಡೆಯವರನ್ನು ಸೋಲಿಸಿದ ಬೃಹತ್‌ ಶಕ್ತಿಯೊಂದಿಗೆ ಹೋರಾಡಲು ಬೇಕಾದ ತಾತ್ಕಾಲಿಕ ಒಪ್ಪಂದ ಮಾತ್ರ. ತನ್ನ ಹಿಂದೂ ನಿಲುವಿನಲ್ಲಿ ನಿಂತುಕೊಂಡೇ ಸಾವರ್ಕರ್‌ ಈ ವಿವರಣೆಯನ್ನು ನೀಡುತ್ತಿರುವುದು. ಎಂದಿನಂತೆ ಮಾತನಾಡುತ್ತಿರುವುದು ಕೂಡ ತನ್ನ ಹಿಂದೂ ಸಮುದಾಯದೊಂದಿಗೆ ಮಾತ್ರ. ಇಂತಹ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳದೆ ೧೮೫೭ರ ಮೊದಲ ಸ್ವಾತಂತ್ರ್ಯ ಹೋರಾಟದ ನಿಷೇಧಿಸಲಾಗದ ಇತಿಹಾಸವನ್ನು ಸಾವರ್ಕರ್‌ ಪುನರ್‌ ರಚಿಸುತ್ತಿದ್ದರು.

ಈ ಪುಸ್ತಕದ ಪ್ರಕಟನೆಯೂ ಸುಲಭವಾಗಿರಲಿಲ್ಲ. ಹಸ್ತಪ್ರತಿ ಭಾರತಕ್ಕೆ ತಲುಪಿಸಲಾಯಿತಾದರೂ ಪ್ರಕಟಿಸಲು ಯಾರೂ ಮುಂದೆ ಬರಲಿಲ್ಲ. ನಂತರ ಬಾಬುರಾವ್‌ ಅದನ್ನು ಫ್ರಾನ್ಸ್‌ಗೆ ಕಳುಹಿಸಿದರು. ಅಲ್ಲಿಯೂ ಮುದ್ರಣ ಸಾಧ್ಯವಾಗದ ಕಾರಣ ಜರ್ಮಿನಿಯಲ್ಲಿ ಸಾಧ್ಯವೇ ಎಂದು ಅಭಿನವ್‌ ಭಾರತ್‌ ಕಾರ್ಯಕರ್ತರು ವಿಚಾರಿಸಿದರು. ಮರಾಠಿ ಭಾಷೆಯ ಮುದ್ರಣ ಜರ್ಮನಿಯಲ್ಲಿ ಕಷ್ಟವಾಗಿದ್ದರಿಂದ ಅದನ್ನು ಇಂಗ್ಲೀಷಿಗೆ ಅನುವಾದ ಮಾಡಲಾಯಿತು. ವಿ.ವಿ.ಎಸ್.‌ ಅಯ್ಯರ್‌ ಮೇಲ್ನೋಟದಲ್ಲಿ ಅನುವಾದ ಕಾರ್ಯ ನಡೆಯಿತು. ಈ ಇಂಗ್ಲೀಷ್‌ ಅನುವಾದವನ್ನು ಮುದ್ರಿಸಲು ಕೂಡ ಹಲವಾರು ಅಡೆತಡೆಗಳು ಎದುರಾದವು. ಕೊನೆಗೆ ಅದು ಹಾಲೆಂಡಿನಲ್ಲಿ ಮುದ್ರಣ ಕಂಡಿತು. ಮಸ್ಸಿನಿಯ ಪುಸ್ತಕದಂತೆ ಇದಕ್ಕೂ ಬ್ರಿಟಿಷರು ನಿಷೇಧ ಹೇರಿದರು. ಮುಖಪುಟ ಬದಲಾಯಿಸಿ ಡಿಕೆನ್ಸನ್‌ ಮತ್ತು ಸೆರ್ವಾಂಟಿಸ್‌ ಕೃತಿಗಳು ಎಂಬಂತೆ ಬಿಂಬಿಸಿ ಅವನ್ನು ಭಾರತಕ್ಕೆ ತರಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು