Monday, June 17, 2024

ಸತ್ಯ | ನ್ಯಾಯ |ಧರ್ಮ

PayCM ನಂತರ SayCM ; ತೀವ್ರ ಮುಜುಗರಕ್ಕೆ ಸಿಕ್ಕಿದ ಬಿಜೆಪಿ ಪಕ್ಷ

ಕಳೆದ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆ ಮತ್ತು ಪ್ರಣಾಳಿಕೆಯನ್ನೇ ಮುಂದಿಟ್ಟು ಈಗ ಕಾಂಗ್ರೆಸ್ ಪಕ್ಷ #SayCM ಅಭಿಯಾನ ಶುರು ಮಾಡಿದೆ.

ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಾಮಾಜಿಕ ಜಾಲತಾಣಗಳಲ್ಲಿ “ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ?” ಎನ್ನುವ ರೀತಿಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಈ ಹಿಂದೆ ಆರಂಭಿಸಿದ್ದ ‘40% ಸರ್ಕಾರ’ ವೆಬ್‌ಸೈಟ್‌ಗೆ ಲಿಂಕ್ ಆಗುವ ಕ್ಯೂಆರ್‌ ಕೋಡ್ ಹಾಕಿ, ‘ನಿಮ್ ಹತ್ರ ಇದ್ಯಾ ಉತ್ತರ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

ಬಿಜೆಪಿ ಪಕ್ಷದ ಕಳೆದ ಬಾರಿಯ ಪ್ರಣಾಳಿಕೆ ಇಟ್ಟು ಟ್ವಿಟ್ ಮಾಡಿ “ತಮ್ಮದೇ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸುವ ದಮ್ಮು ತಾಕತ್ತು ಇದೆಯೇ ಬಿಜೆಪಿಗೆ..? ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ, ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ?. ಪ್ರಣಾಳಿಕೆ ಮುಂದಿಟ್ಟುಕೊಂಡು ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ ಕರ್ನಾಟಕ ಬಿಜೆಪಿ?” ಎಂದು ಬಿಜೆಪಿ ಸಾಮಾಜಿಕ ಜಾಲತಾಣ, ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡುವ ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಹರಿಹಾಯ್ದಿದೆ.

“ಕರ್ನಾಟಕದ ಜನತೆಗೆ ಬಿಜೆಪಿ ಪಕ್ಷ ಚುನಾವಣೆಗೂ ಮುನ್ನ 613 ಆಶ್ವಾಸನೆಗಳ ಮಹಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಆದರೆ 3 ವರ್ಷ ಕಳೆದರೂ 613 ಆಶ್ವಾಸನೆಗಳ ಪೈಕಿ ಬಿಜೆಪಿ ಶೇ.10ರಷ್ಟು ಕೂಡಾ ಭರವಸೆಯನ್ನೂ ಈಡೇರಿಸಿಲ್ಲ. ಈ ಬಗ್ಗೆ ಮೌನವೇಕೆ? #SayCM ಬಿಜೆಪಿಯ ವಿಫಲ ಭರವಸೆಗಳನ್ನು ತಿಳಿಯಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ” ಎಂದು ಪೇಸಿಎಂ ರೀತಿಯಲ್ಲೇ ಸೇಸಿಎಂ ನ ಕ್ಯೂಆರ್ ಕೋಡ್ ಮಾಡಿ, ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.

ಮಂಗಳವಾರ ಸಂಜೆಯಿಂದಲೇ SayCM ಅಭಿಯಾನ ಶುರುವಾಗಿದ್ದು, ಬಿಜೆಪಿಗೆ ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ‌. ಕಾಂಗ್ರೆಸ್ ಪಕ್ಷದ PayCM ಅಭಿಯಾನ ರಾಜ್ಯ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಹೆಚ್ಚು ಸುದ್ದಿ ಮಾಡಿತ್ತು. QR code ಬಳಸಿದ ವೆಬ್ಸೈಟ್ನಲ್ಲಿ ಬಿಜೆಪಿ ಪಕ್ಷದ ಭ್ರಷ್ಟಾಚಾರ, ವಚನ ಭ್ರಷ್ಟತೆ, 40% ಕಮೀಷನ್ ಆರೋಪದ ಬಗ್ಗೆ ಹೆಚ್ಚು ಒತ್ತು ನೀಡಿ ಮಾಹಿತಿ ನೀಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷ SayCM ಅಡಿಯಲ್ಲಿ ಹಿಂದೆ ಬಿಜೆಪಿ ನೀಡಿದ ಪ್ರಣಾಳಿಕೆ ಇಟ್ಟು ಬಿಜೆಪಿಯನ್ನು ಮತ್ತೆ ಮುಜುಗರಕ್ಕೆ ಸಿಕ್ಕಿಸಿದೆ.

Related Articles

ಇತ್ತೀಚಿನ ಸುದ್ದಿಗಳು