ಹೊಸದಿಲ್ಲಿ: ಭಾರತ ಅತ್ಯುಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಡಿ ವೈ ಚಂದ್ರಚೂಡ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. 49ನೇ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದ ಯು.ಯು ಲಲಿತ್ ಮಂಗಳವಾರ ನವೆಂಬರ್ 8ರಂದು ತಮ್ಮ ಕರ್ತವ್ಯದಿಂದ ನಿರ್ಗಮಿಸಿದ್ದರು. ಇಂದು 50ನೇ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆ ಸುಪ್ರಿಂ ಕೋರ್ಟ್‌ನ ನ್ಯಾಯಾಧೀಶರ ಸಭೆಯಲ್ಲಿ ನಿವೃತ್ತ ನ್ಯಾ.ಯು.ಯು ಲಲಿತ್ ಅವರು ಧನಂಜಯ್ ಚಂದ್ರಚೂಡ್ ಅವರ ಹೆಸರನ್ನು ತನ್ನ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು.
1959 ನವೆಂಬರ್ 11ರಂದು ಜನಿಸಿದ ಡಿ.ವೈ ಚಂದ್ರಚೂಡ್ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದರು. ನಂತರ ಬಾಂಬೆ ಹೈಕೋರ್ಟ್ ಅವರಿಗೆ 1998ರ ಜೂನ್ ತಿಂಗಳಿನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು. 2000 ಇಸವಿಯಲ್ಲಿ ಬಾಂಬೆ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.
ಅವರನ್ನು ಈ ಸ್ಥಾನಕ್ಕೆ ಹಿಂದಿನ ನ್ಯಾಯಾಧೀಶರು ಶಿಫಾರಸ್ಸು ಮಾಡುತ್ತಿದ್ದಂತೆ ಗುಂಪೊಂದು ಅವರ ವಿರುದ್ಧ ಜಾಲತಾಣಗಳಲ್ಲಿ ಕ್ಯಾಂಪೇನ್ ನಡೆಸಿದ್ದಲ್ಲದೆ. ಅವರ ಆಯ್ಕೆಯ ವಿರುದ್ಧ ಕೋರ್ಟಿಗೂ ಹೋಗಲಾಗಿತ್ತು. ಆದರೆ ಕೋರ್ಟ್ ಮನವಿಯನ್ನು ತಳ್ಳಿ ಹಾಕಿ ಆಯ್ಕೆಯನ್ನು ಪುರಸ್ಕರಿಸಿತ್ತು. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಹೆಚ್ಚು ನಂಬಿಕೆಯುಳ್ಳ ಮಾನ್ಯ ನ್ಯಾಯಾಧೀಶರು ಪ್ರಜಾಪ್ರಭುತ್ವವಾದಿ ಜನರ ಗುಂಪುಗಳಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ. ಅವರ ಕೆಲವು ತೀರ್ಪುಗಳು ಐತಿಹಾಸಿಕವಾಗಿದ್ದವು ಮತ್ತು ಮಾನವೀಯವಾಗಿದ್ದವು.