ದೆಹಲಿ: ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ಪ್ಯಾಕ್ ಮಾಡಿದ ಆಹಾರವನ್ನು ಸೇವಿಸುವುದರಿಂದ ಸಾಂಕ್ರಾಮಿಕವಲ್ಲದ ರೋಗಗಳ ಅಪಾಯ ಹೆಚ್ಚಾಗುತ್ತದೆ ಎಂಬ ಕಳವಳದ ನಡುವೆ ಸುಪ್ರೀಂ ಕೋರ್ಟ್ ಬುಧವಾರ ಪ್ರಮುಖ ಆದೇಶಗಳನ್ನು ನೀಡಿದೆ.
ಕೆಲವು ಆಹಾರ ಪದಾರ್ಥಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸಲು ಪ್ಯಾಕೆಟ್‌ಗಳ ಮೇಲೆ ಎಚ್ಚರಿಕೆಗಳನ್ನು ಮುದ್ರಿಸುವ ಬಗ್ಗೆ ಸೂಚನೆಗಳನ್ನು ತಕ್ಷಣವೇ ನೀಡುವಂತೆ ಕೇಂದ್ರ ಸರ್ಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿಗೆ ಸೂಚಿಸಲಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ. ಆಹಾರ ಮತ್ತು ಸುರಕ್ಷತಾ ಮಾನದಂಡಗಳು (ಲೇಬಲಿಂಗ್ ಮತ್ತು ಡಿಸ್ಪ್ಲೇ) ನಿಯಮಗಳು-2020 ರಲ್ಲಿ ಬದಲಾವಣೆಗಳನ್ನು ಸೂಚಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು.
ಈ ವಿಷಯವನ್ನು ಪರಿಗಣಿಸಿದ ಪೀಠವು, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ. ಸರ್ಕಾರ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಶಿಫಾರಸುಗಳನ್ನು ತ್ವರಿತವಾಗಿ ಒದಗಿಸುವಂತೆ ತಜ್ಞರ ಸಮಿತಿಗೆ ನಿರ್ದೇಶಿಸಲಾಯಿತು.