Home ಇನ್ನಷ್ಟು ಕೋರ್ಟು - ಕಾನೂನು ಚುನಾವಣಾ ಆಯುಕ್ತರ ಆಯ್ಕೆ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ: ವಿಭಜಿತ ತೀರ್ಪು ನೀಡಿದ ಸುಪ್ರೀಂ ಕೋರ್ಟ್...

ಚುನಾವಣಾ ಆಯುಕ್ತರ ಆಯ್ಕೆ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ: ವಿಭಜಿತ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠ, ಸಿಜೆಐ ಅಂಗಳಕ್ಕೆ ಚೆಂಡು

0

ದೆಹಲಿ: ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ನೇಮಕಾತಿಯನ್ನು ನಿಯಂತ್ರಿಸುವ 2023 ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಭಿನ್ನ ತೀರ್ಪು ನೀಡಿದೆ. ಈ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕೇ ಅಥವಾ ಬೇಡವೇ ಎಂಬ ವಿಷಯದಲ್ಲಿ ಇಬ್ಬರು ನ್ಯಾಯಮೂರ್ತಿಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ, ಅಂತಿಮ ನಿರ್ಧಾರವನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ವಿವೇಚನೆಗೆ ಬಿಡಲಾಗಿದೆ.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿತು.2023 ರ ಕಾಯ್ದೆಯಲ್ಲಿ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟು, ಅವರ ಬದಲಿಗೆ ಪ್ರಧಾನಿ ನೇಮಿಸುವ ಕೇಂದ್ರ ಸಚಿವರನ್ನು ಸೇರಿಸಲಾಗಿದೆ.ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ಈ ವಿಷಯವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರೆ, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ಅರ್ಜಿಯಲ್ಲಿ ಎತ್ತಲಾಗಿರುವ ಸಂವಿಧಾನಾತ್ಮಕ ಪ್ರಶ್ನೆಗಳನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವೇ ಪರಿಶೀಲಿಸಬೇಕೆಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದರು.

ಈ ಅರ್ಜಿಗಳನ್ನು ಐದು ದಿನಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದೇವೆ, ಇಬ್ಬರೂ ಒಂದೇ ನಿಲುವು ತಳೆದಿದ್ದರೆ ಸಾಂಸ್ಥಿಕ ಒಗ್ಗಟ್ಟಿಗೆ ನೆರವಾಗುತ್ತಿತ್ತು, ಆದರೆ ದುರದೃಷ್ಟವಶಾತ್ ನಮ್ಮ ಅಭಿಪ್ರಾಯಗಳು ಭಿನ್ನವಾಗಿವೆ ಎಂದು ನ್ಯಾ.ದತ್ತಾ ಹೇಳಿದರು.ಆಡಳಿತಗಾರರು ಕಾನೂನಿಗೆ ಬದ್ಧರಾಗಿರಬೇಕೇ ಹೊರತು ಕಾನೂನಿಗಿಂತ ಮೇಲಲ್ಲ ಎಂಬುದು ಸಂವಿಧಾನ ವ್ಯವಸ್ಥೆಯ ಮೂಲ ತತ್ವ ಎಂದು ಅವರು ಉಲ್ಲೇಖಿಸಿದರು.ಆದರೆ ನ್ಯಾ.ಶರ್ಮಾ ಅವರು ಇದಕ್ಕೆ ಭಿನ್ನ ನಿಲುವು ವ್ಯಕ್ತಪಡಿಸಿ, ಸಂವಿಧಾನದ ತತ್ವಗಳಿಗೆ ಅನುಗುಣವಾಗಿ ಆಯ್ಕೆ ಸಮಿತಿಯಲ್ಲಿ ತಟಸ್ಥ ಸದಸ್ಯರನ್ನು ಸೇರಿಸದಿರುವ ಸಂಸತ್ತಿನ ನಿರ್ಧಾರ ಸರಿಯೇ ಅಥವಾ ತಪ್ಪೇ ಎಂಬುದನ್ನು ವಿಸ್ತೃತ ಸಂವಿಧಾನ ಪೀಠವೇ ಪರಿಶೀಲಿಸುವುದು ಸೂಕ್ತ ಎಂದಿದ್ದಾರೆ.

You cannot copy content of this page

Exit mobile version