Wednesday, July 3, 2024

ಸತ್ಯ | ನ್ಯಾಯ |ಧರ್ಮ

SC-ST ಮೀಸಲಾತಿ ಹೆಚ್ಚಳ: ಸಾಮಾಜಿಕ ನ್ಯಾಯ ನೀಡುವ ಕಳಕಳಿಯ ನಿರ್ಣಯ ಸಿಎಂ ಬೊಮ್ಮಾಯಿ

ಬೆಂಗಳೂರು: ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳದ ಐತಿಹಾಸಿಕ ನಿರ್ಣಯ ಸಾಮಾಜಿಕ ನ್ಯಾಯ ನೀಡುವ ಮನದಾಳದ ಕಳಕಳಿಯ ನಿರ್ಣಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಎಸ್ಸಿ ಎಸ್ಟಿ ಸಮುದಾಯದ ಮುಖಂಡರು ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.

ಮೀಸಲಾತಿ ಹೆಚ್ಚಳದ ಬೇಡಿಕೆ ಕಳೆದ 50 ವರ್ಷದಿಂದ ಇತ್ತು. ಹತ್ತು ಹಲವಾರು ಸರ್ಕಾರಗಳು ಬಂದಿದ್ದರೂ, ವಿವಿಧ ಕಾರಣಗಳಿಂದಾಗಿ ಈ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೂ ನಮ್ಮ ಸರ್ಕಾರದ ಇಚ್ಛಾಶಕ್ತಿಯಿಂದ , ಸಚಿವ ಸಂಪುಟ ಸಹೋದ್ಯೋಗಿಗಳು, ಭಾಜಪ ಕೋರ್ ಕಮಿಟಿ , ಕಾರ್ಯಕಾರಿ ಸಮಿತಿ ಎಲ್ಲವೂ ಒಕ್ಕೊರಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಸ್ ಸಿ ಮೀಸಲಾತಿಯನ್ನು ಶೇ. 15 ರಿಂದ 17 ಹಾಗೂ ಎಸ್ ಟಿ ಮೀಸಲಾತಿಯನ್ನು 3 ರಿಂದ 7 ಕ್ಕೆ ಹೆಚ್ಚಿಸಿರುವುದು ಐತಿಹಾಸಿಕ ನಿರ್ಣಯವಾಗಿದ್ದು, ಇದು ನಮ್ಮ ಸರ್ಕಾರದ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.

“ಸಮಾಜದಲ್ಲಿನ ದುರ್ಬಲ ವರ್ಗದವರು, ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ತೀರ್ಮಾನವಾಗಿದೆ. ಇದಕ್ಕೆ ಹಲವರು ಹಲವಾರು ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಸರ್ಕಾರದ ನಿರ್ಣಯವನ್ನು ರಾಜ್ಯದ ಎಲ್ಲ ಎಸ್ ಸಿ ಎಸ್ ಟಿ ಜನಾಂಗದವರು ಸ್ವಾಗತಿಸುತ್ತಿದ್ದಾರೆ”. ಬಳ್ಳಾರಿ, ಹೊಸಪೇಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ , ದೊಡ್ಡ ಪ್ರಮಾಣದಲ್ಲಿ ಸೇರಿದ್ದ ಅಲ್ಲಿನ ಜನರು ಈ ನಿರ್ಣಯದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಈ ಸಮುದಾಯದಗಳಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಇಚ್ಛಾಶಕ್ತಿ ನನ್ನದಾಗಿದೆ. ಹಿಂದುಳಿದ ವರ್ಗದ ಹತ್ತು ಹಲವಾರು ಸಮುದಾಯಗಳಿಗೂ ನ್ಯಾಯವನ್ನು ಒದಗಿಸುವ ಕೆಲಸವನ್ನು ಅತ್ಯಂತ ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು