ಹಾಸನ: ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದಲ್ಲಿ ಯಾವುದೇ ಅಬಕಾರಿ ಹಗರಣ ನಡೆದಿಲ್ಲ ಎಂಬುದನ್ನು ನ್ಯಾಯಾಲಯದ ತೀರ್ಪು ಸ್ಪಷ್ಟಪಡಿಸಿರುವುದು ಸತ್ಯಕ್ಕೆ ದೊರೆತ ಜಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವಿರುದ್ಧ ಸಿಬಿಐ ಸಂಸ್ಥೆಯ ಮೂಲಕ ಪ್ರಕರಣ ದಾಖಲಿಸಿ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿರುವುದು ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಆಮ್ ಆದ್ಮಿ ಪಕ್ಷವನ್ನು ಭ್ರಷ್ಟಾಚಾರಿಗಳೆಂದು ಬಿಂಬಿಸಲು ಪ್ರಯತ್ನಿಸಿದ್ದು, ನ್ಯಾಯಾಲಯದ ತೀರ್ಪಿನಿಂದ ಆ ಆರೋಪಗಳಿಗೆ ಅಂತಿಮ ತೆರೆ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಾರ್ಚ್ 2022ರಲ್ಲಿ ಪಂಜಾಬ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಎಎಪಿ ವಿವಿಧ ರಾಜ್ಯಗಳಲ್ಲಿ ಬೆಳೆಯುತ್ತಿರುವುದರಿಂದ ರಾಜಕೀಯ ಭೀತಿಗೆ ಒಳಗಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ರೀತಿಯ ಷಡ್ಯಂತ್ರ ನಡೆಸಿದ್ದವು ಎಂದು ದೂರಿದರು. ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ದೂರು ನೀಡುವ ಪ್ರಕ್ರಿಯೆಯಲ್ಲೂ ರಾಜಕೀಯ ಪ್ರೇರಣೆ ಇದ್ದುದಾಗಿ ಆರೋಪಿಸಿದರು.
ಭಾರತದ ನ್ಯಾಯಾಂಗ ವ್ಯವಸ್ಥೆ ಯಾವುದೇ ಭೇದಭಾವವಿಲ್ಲದೆ ಸತ್ಯದ ಪರ ನಿಂತಿದೆ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ನ್ಯಾಯಾಲಯದ ತೀರ್ಪಿನಿಂದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಹೊಸ ಉತ್ಸಾಹ ದೊರೆತಿದೆ ಎಂದು ಹೇಳಿದರು.
ಭ್ರಷ್ಟಾಚಾರ ವಿರೋಧಿ ಆಶಯದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷದ ಬೆಳವಣಿಗೆಯನ್ನು ಸಹಿಸದೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ರಾಜಕೀಯ ಪಿತೂರಿ ನಡೆಸಿ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿದ್ದರು. ಇದೀಗ ನ್ಯಾಯಾಲಯ ನೀಡಿದ ಕ್ಲೀನ್ ಚಿಟ್‌ನಿಂದ ಸತ್ಯ ಹೊರಬಂದಿದ್ದು, ಪಕ್ಷದ ವಿರುದ್ಧ ಆರೋಪ ಮಾಡಿದವರಿಗೆ ಮುಖಭಂಗವಾಗಿದೆ ಎಂದು ಅವರು ಹೇಳಿದರು.
