Wednesday, June 19, 2024

ಸತ್ಯ | ನ್ಯಾಯ |ಧರ್ಮ

ಶಾಲಾ ಶಿಕ್ಷಕರ ನೇಮಕಾತಿ ವಿಚಾರ: ವಿವಾಹಿತ ಹೆಣ್ಣು ಮಕ್ಕಳ ಗೊಂದಲ ಬಗೆಹರಿಸುವಂತೆ ಮಹದೇವಪ್ಪ ಆಗ್ರಹ

ಬೆಂಗಳೂರು: ನೇಮಕಾತಿ ಹಗರಣ ಮಾಡಿ ಕಷ್ಟಪಟ್ಟು ಓದಿದ ಅಭ್ಯರ್ಥಿಗಳ ಬದುಕಲ್ಲಿ ಆತಂಕ ಸೃಷ್ಟಿಸಿದ್ದ 40% ಬಿಜೆಪಿ ಸರ್ಕಾರ ಇದೀಗ ಮೊನ್ನೆ ನಡೆದ ಶಾಲಾ ಶಿಕ್ಷಕರ ನೇಮಕಾತಿಯ ವಿಷಯದಲ್ಲೂ ಹಲವು ಗೊಂದಲಗಳನ್ನು ಸೃಷ್ಟಿಸಲು ಹೊರಟಿದೆ ಎಂದು ಮಾಜಿ ಸಚಿವರಾದ ಡಾ. ಹೆಚ್‌.ಸಿ. ಮಹದೇವಪ್ಪ ಅವರು ದೂರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 2022 ರ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆದು ವಿವಿಧ ಮೀಸಲಾತಿಗಳ ಅಡಿಯಲ್ಲಿ ಇದೀಗ ದಾಖಲೆ ಪರಿಶೀಲನೆಗೆ ಆಯ್ಕೆಯಾಗಿರುವ ವಿವಾಹಿತ ಹೆಣ್ಣು ಮಕ್ಕಳು ತಮ್ಮ ತಂದೆಯ ಜಾತಿಯ ಪ್ರಮಾಣ ಪತ್ರವನ್ನು ಸಲ್ಲಿಸುವಂತಿಲ್ಲ. ಬದಲಿಗೆ ಅವರು ತಮ್ಮ ಗಂಡನ ಜಾತಿ ಪ್ರಮಾಣವನ್ನು ಸಲ್ಲಿಸಬೇಕು ಎಂದು ಸರ್ಕಾರ ವಿವಾಹಿತ ಹೆಣ್ಣು ಮಕ್ಕಳಿಗೆ ಸೂಚಿಸಿತ್ತು ಎಂದು ತಿಳಿಸಿದ್ದಾರೆ.

ಆದರೆ ಇಲಾಖೆಯ ಪ್ರಕಟಣೆಯಲ್ಲಿ ಕೇವಲ ಜಾತಿ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸಲು ಹೇಳಲಾಗಿರುತ್ತದೆ. ಪರಿಸ್ಥಿತಿ ಹೀಗಿದ್ದರೂ ನಿಯಮಗಳಿಗೆ ವಿರುದ್ಧವಾಗಿ ಸರ್ಕಾರವು ಬೇಕಾಬಿಟ್ಟಿಯಾಗಿ ನಿಯಮಗಳನ್ನು ಅಭ್ಯರ್ಥಿಗಳ ಮೇಲೆ ಹೇರಲು ಹೊರಟಿದೆ ಎಂದು ಮಹದೇವಪ್ಪ ಆರೋಪಿದ್ದಾರೆ.

ನಿಯಮಾವಳಿಗೆ ವಿರುದ್ಧವಾಗಿ ಹೊಸ ಹೊಸ ನಿಯಮಗಳನ್ನು ಹೇರುತ್ತಿರುವ ಸರ್ಕಾರಕ್ಕೆ ಅಂತರ್ಜಾತೀಯ ವಿವಾಹ, ಅಂತರ್ ಧರ್ಮೀಯ ವಿವಾಹದ ಸಂದರ್ಭದಲ್ಲಿ ಏನು ಕ್ರಮ ಅನುಸರಿಸಬೇಕೆಂದು ತಿಳಿಸಿಲ್ಲ ಎಂದಿದ್ದಾರೆ.

ಗಂಡನ ಜಾತಿಯ ಜಾತಿ ಪತ್ರವನ್ನು ಸಲ್ಲಿಸದಿದ್ದರೆ ಆಯ್ಕೆಯಾದ ಅಭ್ಯರ್ಥಿಗಳ ಮೀಸಲಾತಿ ರದ್ದುಪಡಿಸಿ ಅವರನ್ನು ಸಾಮಾನ್ಯ ಅಭ್ಯರ್ಥಿಗಳ ಪಟ್ಟಿಗೆ ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ. ಇದು ಬಿಜೆಪಿಗರ ಮೀಸಲಾತಿ ವಿರೋಧಿ ಧೋರಣೆ ಆಗಿದ್ದು, ಈ ನೇಮಕಾತಿಯಲ್ಲೂ ಕೂಡಾ ಲಂಚ ಹೊಡೆಯುವ ಹುನ್ನಾರ ಮಾಡುತ್ತಿರುವರೇ ಎಂಬ ಅನುಮಾನ ಮೂಡ ತೊಡಗಿದೆ ಎಂದು ಮಹದೇವಪ್ಪ ಹೇಳಿದ್ದಾರೆ.

ಕೂಡಲೇ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಈ ಅನಗತ್ಯವಾದ ಗೊಂದಲವನ್ನು ಪರಿಹರಿಸಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಹೆಣ್ಣು ಮಕ್ಕಳ ಆತಂಕವನ್ನು ದೂರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು