ಉರ್ದು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನ ನೀಡಿ: ಕರ್ನಾಟಕ ಸರ್ಕಾರಕ್ಕೆ ಎಸ್‌ಡಿಪಿಐ ಆಗ್ರಹ

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಭಾಷಾ ಸ್ಥಾನಮಾನ ನೀಡಲು ತೆಗೆದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಉರ್ದು ಭಾಷೆಗೂ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿದೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ತಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ದಶಕಗಳ ಕಾಲ ಹೋರಾಟ ನಡೆಸಿದ ಕರಾವಳಿ ಭಾಗದ ಜನರು, ತುಳು ಭಾಷಾ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳನ್ನು ಅಭಿನಂದಿಸಿದ್ದಾರೆ.

ಸರ್ಕಾರದ ಈ ನಿರ್ಧಾರವು ಭಾಷಾ ವೈವಿಧ್ಯತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನೀಡಿದ ಗೌರವವಾಗಿದೆ ಎಂದಿರುವ ಪಕ್ಷವು, ಕರ್ನಾಟಕದಲ್ಲಿ ಲಕ್ಷಾಂತರ ಜನರು ಮಾತನಾಡುವ ಹಾಗೂ ಶ್ರೀಮಂತ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಉರ್ದು ಭಾಷೆಗೂ ಅಧಿಕೃತ ಮನ್ನಣೆ ಸಿಗಬೇಕು ಎಂದು ಪ್ರತಿಪಾದಿಸಿದೆ. ಜನಗಣತಿ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಎಸ್‌ಡಿಪಿಐ, ಉರ್ದು ಕರ್ನಾಟಕದ ಪ್ರಮುಖ ಮಾತೃಭಾಷೆಗಳಲ್ಲಿ ಒಂದಾಗಿದ್ದು, ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲೂ ಮಹತ್ವದ ಸ್ಥಾನ ಪಡೆದಿದೆ ಎಂದು ತಿಳಿಸಿದೆ.

ಪಕ್ಷದ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ಕರ್ನಾಟಕದಲ್ಲಿ 3,934 ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳು ಮತ್ತು 302 ಅನುದಾನಿತ ಉರ್ದು ಮಾಧ್ಯಮ ಶಾಲೆಗಳಿದ್ದು, ಒಟ್ಟು ಸರ್ಕಾರಿ ಹಾಗೂ ಅನುದಾನಿತ ಉರ್ದು ಶಿಕ್ಷಣ ಸಂಸ್ಥೆಗಳ ಸಂಖ್ಯೆ 4,236ಕ್ಕೆ ತಲುಪಿದೆ.

ಉರ್ದು ಕೇವಲ ಮಾತನಾಡುವ ಭಾಷೆಯಾಗಿ ಉಳಿದಿಲ್ಲ; ಬದಲಿಗೆ ತನ್ನದೇ ಆದ ಲಿಪಿ, ಸಾಹಿತ್ಯ, ಪತ್ರಿಕೋದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯ ಮಟ್ಟದ ಅಧ್ಯಯನ ವಿಭಾಗಗಳನ್ನು ಹೊಂದಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಆಡಳಿತಾತ್ಮಕವಾಗಿ ಉರ್ದು ಭಾಷೆಗೆ ಮನ್ನಣೆ ನೀಡುವುದರಿಂದ ಉರ್ದು ಮಾತನಾಡುವ ನಾಗರಿಕರು ಸರ್ಕಾರಿ ಸೇವೆಗಳು, ಅಧಿಸೂಚನೆಗಳು, ಅರ್ಜಿ ನಮೂನೆಗಳು ಹಾಗೂ ಸಾರ್ವಜನಿಕ ಮಾಹಿತಿಗಳನ್ನು ತಮ್ಮ ಮಾತೃಭಾಷೆಯಲ್ಲೇ ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ವಾದಿಸಲಾಗಿದೆ.

ಸಂವಿಧಾನದ 345ನೇ ವಿಧಿಯನ್ನು ಉಲ್ಲೇಖಿಸಿದ ಎಸ್‌ಡಿಪಿಐ, ಅಧಿಕೃತ ಉದ್ದೇಶಗಳಿಗಾಗಿ ರಾಜ್ಯಗಳು ಒಂದು ಅಥವಾ ಹೆಚ್ಚಿನ ಭಾಷೆಗಳನ್ನು ಅಳವಡಿಸಿಕೊಳ್ಳಲು ಅಧಿಕಾರ ಹೊಂದಿವೆ ಎಂದು ನೆನಪಿಸಿದೆ. ನೆರೆಯ ತೆಲಂಗಾಣ ಸರ್ಕಾರವು ‘ತೆಲಂಗಾಣ ಅಧಿಕೃತ ಭಾಷೆಗಳ (ತಿದ್ದುಪಡಿ) ಕಾಯ್ದೆ, 2017’ ರ ಮೂಲಕ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿರುವುದನ್ನು ಬೆಟ್ಟು ಮಾಡಿರುವ ಪಕ್ಷ, ಕರ್ನಾಟಕವೂ ಇದೇ ರೀತಿಯ ಮಾದರಿಯನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದೆ.

ಉರ್ದು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವುದು, ಹಂತ-ಹಂತವಾಗಿ ಆಡಳಿತದಲ್ಲಿ ಅದರ ಬಳಕೆಯನ್ನು ಜಾರಿಗೆ ತರುವುದು, ಸರ್ಕಾರಿ ಕಚೇರಿಗಳಲ್ಲಿ ಉರ್ದುವಿನಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಮಾಹಿತಿ ನೀಡಲು ಸೌಲಭ್ಯಗಳನ್ನು ಬಲಪಡಿಸುವುದು ಹಾಗೂ ಉರ್ದು ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಒಳಗೊಂಡಂತೆ ಹಲವು ಪ್ರಮುಖ ಬೇಡಿಕೆಗಳನ್ನು ಎಸ್‌ಡಿಪಿಐ ಸರ್ಕಾರದ ಮುಂದಿಟ್ಟಿದೆ.

ಜತೆಗೆ, ಉರ್ದು ಮಾಧ್ಯಮ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣವನ್ನು ಸುಧಾರಿಸುವುದು, ಉರ್ದು ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಹಾಗೂ ಸರ್ಕಾರಿ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳು ಉರ್ದುವಿನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಪಕ್ಷ ಕೋರಿದೆ.

ಕನ್ನಡದ ಪ್ರಾಮುಖ್ಯತೆಗೆ ಇದರಿಂದ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಎಸ್‌ಡಿಪಿಐ, ಉರ್ದು ಭಾಷೆಯನ್ನು ಗುರುತಿಸುವುದರಿಂದ ಕರ್ನಾಟಕದ ಬಹುಭಾಷಾ ಮತ್ತು ಬಹುಸಂಸ್ಕೃತಿಯ ಪರಂಪರೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಹೇಳಿದೆ. “ಒಂದು ಭಾಷೆಯನ್ನು ಗೌರವಿಸುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸಿದಂತೆ. ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡುವುದೇ ಪ್ರಜಾಪ್ರಭುತ್ವದ ಅಂದ,” ಎಂದು ಅಬ್ದುಲ್ ಮಜೀದ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ಉರ್ದು ಮಾತನಾಡುವ ಸಮುದಾಯಗಳ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಕ್ಷ ಆಗ್ರಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು