Thursday, August 15, 2024

ಸತ್ಯ | ನ್ಯಾಯ |ಧರ್ಮ

ಭಾಷೆಯೊಂದು ನಿರೂಪಿಸುವ ಸೆಕ್ಯೂಲರಿಸ್ಟಿಕ್ ರಾಷ್ಟ್ರೀಯವಾದ ಹಾಗೂ ಅದರ ಪರಿಣಾಮಗಳು !!

“ಪ್ರತಿ ವಿಷಯಗಳಿಗೂ ರಾಜಕೀಯ ಮೋಟಿವ್ ಗಳೇ ಕಾರಣವಾಗುತ್ತಿರುವ ಈ ದುರಿತ ಕಾಲದಲ್ಲಿ ಮುಸ್ಲಿಮರಿಗೆ ಸಂಬಂಧಿಸಿದ ಯೋಜನೆಯೊಂದು ಏಕ ವ್ಯಕ್ತಿಯಿಂದ ರೂಪುಗೊಳ್ಳುವುದು ಎಂದರೆ ಅದು ತೀರಾ ತೆಳುವಾದ ಯೋಚನೆ ಹಿನ್ನೆಲೆಯಿಂದ ಬಂದಿರುವಂತದ್ದು…” ಪತ್ರಕರ್ತ ಆಶಿಕ್ ಮುಲ್ಕಿಯವರ ಬರಹದಲ್ಲಿ

ಇತ್ತೀಚೆಗೆ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೊತ್ತಮ ಬಿಳಿಮಲೆ ಮದರಸಾಗಳಲ್ಲಿ ಕನ್ನಡ ಕಲಿಕೆ ಯೋಜನೆಗೆ ತೀವ್ರ ವಿರೋಧ ಹಾಗೂ ಪರ ಚರ್ಚೆಗಳು ನಡೆದು, ಕೊನೆಗೆ ಅವರು ಆ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ. ಮುಸ್ಲಿಮರಿಗೆ ಕನ್ನಡ ಬರುವುದಿಲ್ಲ ಹಾಗೂ ಅವರು ಕನ್ನಡಕ್ಕೆ ಬೆನ್ನು ತಿರುಗಿಸಿ ನಡೆಯುವವರು ಎಂಬ ನರೇಟಿವ್ ಗಳು ಇತ್ತೀಚೆಗೆ ಹುಟ್ಟಿಕೊಂಡಿದ್ದಲ್ಲ. ಅದಕ್ಕೆ ದೀರ್ಘ ಹಿನ್ನೆಲೆ ಇದೆ ಮತ್ತು ಕನ್ನಡ ಭಾಷೆ ಹಾಗೂ ಕರ್ನಾಟಕದ ನಡುವಿನ ಅತಿ ಸೂಕ್ಷ್ಮ ಸಂಬಂಧ ಅರಿವೆ ಮುಚ್ಚಿಹೋಗಿರುವುದು ಮುಸ್ಲಿಮರ ಮೇಲೆ ಇಂಥದ್ದೊಂದು ತೀವ್ರ ಆರೋಪ ಹುಟ್ಟಿಕೊಳ್ಳಲು ಮುಖ್ಯ ಕಾರಣ. ಆರ್ ಎಸ್ ಎಸ್ ರಾಷ್ಟ್ರೀಯವಾದದಂತೆಯೇ ಮುಸ್ಲಿಮರ ಮೇಲೆ ‘ಕನ್ನಡ ಗೊತ್ತಿಲ್ಲ’ ಎನ್ನುವ ವಾದವೂ ಕೂಡ ಅತ್ಯಂತ ಅಪಾಯಕಾರಿ ಎನ್ನುವುದು ಸದ್ಯದ ಸ್ಟೇಟ್ ಮೋಟಿವ್ ಗಳಿಂದ ಸಾಬೀತಾಗಿದೆ. ಇದರ ನಡುವೆ ಮುಸ್ಲಿಮರು ಅತ್ಯಂತ ಆಶಾಭಾವನೆಯಿಂದ ಎದುರು ನೋಡುವ ಕಾಂಗ್ರೆಸ್ ಸರ್ಕಾರದ ಅಧಿಕಾರ ಅವಧಿಯಲ್ಲಿ ಕನ್ನಡ ಪ್ರಾಧಿಕಾರದ ಇಂಥದ್ದೊಂದು ನಿರ್ಧಾರ ಮುಸ್ಲಿಮರಲ್ಲಿ ಆತಂಕ ಮೂಡಿಸಿದೆ. ಅದಾಗಿಯೂ ಮುಸ್ಲಿಮರ ಒಳಗಿಂದಲೇ ಇದೊಂದು ಸರಿಯಾದ ಯೋಜನೆ ಅಂತಲೂ ವಾದ ಕೇಳಿ ಬಂದಿದೆ.‌ ಇದು ಮುಸ್ಲಿಮರ ಕಾಲಕ್ಕೆ ತಕ್ಕಂತೆ ಬದಲಾಗುತ್ತಿಲ್ಲ ಎನ್ನುವುದನ್ನು ಪೊಳ್ಳು ಮಾಡಿದೆ.‌

ಮುಂದುವರೆದು, ಬಹುಪಾಲು ಮುಸ್ಲಿಮರು ಯಾಕೆ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ ಎನ್ನುವುದು ಇಲ್ಲಿ ಚರ್ಚಾ ವಿಷಯ. ಈಗಾಗಲೇ ಬಂಜಗೆರೆ ಜಯಪ್ರಕಾಶ್ ಸೇರಿದಂತೆ ನಾಡಿನ‌ ವೈಚಾರಿಕ ಹಿರಿತಲೆಗಳು ಇದನ್ನು ನಯವಾಗಿ ವಿರೋಧಿಸಿ ಕೆಲವು ಫೇಸ್ ಬುಕ್ ಪೋಸ್ಟುಗಳ ಕೆಳಗಡೆ ಅಭಿಪ್ರಾಯ ಮಂಡಿಸಿದ್ದಾರೆ. ಬಹುಶಃ ಬದಲಾದ ಈ ರಾಜಕೀಯ ವಾತಾವರಣದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ.‌ ಪ್ರೊ. ಬಿಳಿಮಲೆಯವರು ಈ ಯೋಜನೆ ಜಾರಿ ಮಾಡುವ ಮೂಲಕ ಪಾಸಿಟಿವ್ ಆಲೋಚನೆಗಳೇ ಹೊಂದಿದ್ದರೂ ಕೂಡ, ಇದರಿಂದ ಭವಿಷ್ಯತ್ ನಲ್ಲಿ ಆಗಬಹುದಾದ ಅವಾಂತರಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ಇದೇ ಕಾರಣಕ್ಕೆ ಯಾವುದೇ ಅಧ್ಯಯನ ಹಾಗೂ ಸಮೀಕ್ಷೆ ರಹಿತ ಆಧಾರದಲ್ಲಿ ಮದರಸಾಗಳಲ್ಲಿ ಕನ್ನಡ ಕಲಿಕೆಯ ಮುಂದಾಳು ಆಗಿದ್ದಾರೆ.

ಒಬ್ಬ ವ್ಯಕ್ತಿಯ ವೈಯಕ್ತಿಕ ಅಭಿರುಚಿಯ ಹಾಗೂ ಪಾಂಡಿತ್ಯದ ಹಿನ್ನೆಲೆಯಲ್ಲಿ ಒಂದು ಯೋಜನೆ ರೂಪುಗೊಳ್ಳುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿರಲಿದೆ.‌ ಒಂದು ಯೋಜನೆ ರೂಪುಗೊಳ್ಳುವುದಕ್ಕೆ ಸೂಕ್ತವಾದ ಅಧ್ಯಯನ ಅಥವಾ ಅದರ ಕುರಿತಾದ ವಿಸ್ತೃತ ಚರ್ಚೆಯೊಂದು ನಡೆದ ಬಳಿಕ‌ ಯೋಜನೆ ರೂಪುಗೊಳ್ಳುವುದು ಬಹಳ ಸೂಕ್ತವೆನಿಸುತ್ತದೆ. ಮದರಸಾಗಳಲ್ಲಿ ಕನ್ನಡ‌ ಕಲಿಕೆಗಿಂತ ಮೊದಲು, ಮುಸ್ಲಿಮರು ಕನ್ನಡದಿಂದ ಎದುರಿಸುತ್ತಿರುವ ಸೆಕ್ಯೂಲರ್ ರಾಷ್ಟ್ರೀಯವಾದದ ಆತಂಕದ ಹಿನ್ನೆಲೆ ಏನು ಎನ್ನುವುದರ ಕುರಿತಾಗಿ ಒಂದು ಬಹು ಅಧ್ಯಯನ ನಡೆಯಬೇಕಿರುವುದು ಈಗಿನ ತುರ್ತು. ಕನ್ನಡದ ಭಾಷೆಯ ಪರವಾಗಿರುವುದು ಹಾಗೂ ಕರ್ನಾಟಕದ ಪರವಾಗಿರುವುದು ಎರಡೂ ಬೇರೆ ಬೇರೆ ಎಂಬ ಸಾಮಾನ್ಯ ತಿಳುವಳಿಕೆಯೂ ಕೂಡ ಬಹುಸಂಖ್ಯಾತ ವಾದದಿಂದ ಹುಟ್ಟಿಕೊಂಡಿರುವ ರಾಷ್ಟ್ರೀಯವಾದದ ನೆರಳಲ್ಲಿ ಅಡಗಿ ಹೋಗಿದೆ. ಈ ರಾಜಕೀಯ ಕಾಲಘಟ್ಟದಲ್ಲಿ ವ್ಯಕ್ತವಾಗುವ ಅಭಿಪ್ರಾಯ ಹಾಗೂ ಭಿನ್ನವಾದಗಳು ಇನ್ನೊಂದು ಕಾಲಘಟ್ಟಕ್ಕೆ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಮದರಾಸಗಳಲ್ಲಿ ಕನ್ನಡ ಕಲಿಕೆಯ ಅಗತ್ಯಕ್ಕಿಂತ ಈಗಿರುವ ರಾಷ್ಟ್ರೀಯವಾದ ಹಾಗೂ ಇದರಿಂದ ಪೋಷಣೆಗೆ ಒಳಪಡುತ್ತಿರುವ ಕನ್ನಡದ ಭಾಷಾ ಪ್ರೇಮ ಸೆಕ್ಯೂಲರ್ ಗಳ ಮೂಲಕ ಹೇಗೆ ಇಲ್ಲಿನ ಮುಸ್ಲಿಮರನ್ನು ಉಸಿರುಗಟ್ಟಿಸುತ್ತಿದೆ ಎನ್ನುವುದರ ಬಗ್ಗೆ ಕನ್ನಡ ಪ್ರಾಧಿಕಾರ ಒಂದು ತಜ್ಞರ ಸಮಿತಿ ರಚಿಸಿ ಅಧ್ಯಯನ ಮಾಡಿ ವರದಿ ಬಹಿರಂಗ ಪಡಿಸುವುದು ಈಕಾಲದ ತುರ್ತುಗಳಲ್ಲೊಂದು.

ಪ್ರತಿ ವಿಷಯಗಳಿಗೂ ರಾಜಕೀಯ ಮೋಟಿವ್ ಗಳೇ ಕಾರಣವಾಗುತ್ತಿರುವ ಈ ದುರಿತ ಕಾಲದಲ್ಲಿ ಮುಸ್ಲಿಮರಿಗೆ ಸಂಬಂಧಿಸಿದ ಯೋಜನೆಯೊಂದು ಏಕ ವ್ಯಕ್ತಿಯಿಂದ ರೂಪುಗೊಳ್ಳುವುದು ಎಂದರೆ ಅದು ತೀರಾ ತೆಳುವಾದ ಯೋಚನೆ ಹಿನ್ನೆಲೆಯಿಂದ ಬಂದಿರುವಂತದ್ದು. ದಲಿತರ, ಮುಸ್ಲಿಮರ, ಕ್ರೈಸ್ತರ ಅಥವಾ ಇತರೆ ಅತ್ಯಂತ ಅಲ್ಪಸಂಖ್ಯಾದ ಸಮುದಾಯದ ಪರವಾಗಿ ಯೋಜನೆಗಳು ರೂಪುಗೊಳ್ಳಬೇಕಿರುಬುದು ಭಿನ್ನ ವಾದ ಅಥವಾ ಬದಲಾಗುತ್ತಿರುವ ತಲೆಮಾರುಗಳ ಚರ್ಚೆಯಿಂದ ಎನ್ನುವ ಅನಿಸಿಕೆ ನನ್ನದು. ಅಕಾಡೆಮಿಕ್ ಆಗಿ ರೂಪುಗೊಳ್ಳುವ ಬಹುತೇಕ ಯೋಜನೆಗಳು ಆ ಕ್ಷಣಕ್ಕೆ ಸರಿಯಾಗಿಯೂ, ನಂತರದ ದಿನಗಳಲ್ಲಿ ಅದೇ ಸಮಸ್ಯೆ ಉಂಟುಮಾಡುವ ವಿಷಯ ವಸ್ತುಗಳಾಗಿ ಮಾರ್ಪಾಟಾಗುವ ಸಂಭವವನ್ನು ತಳ್ಳಿ ಹಾಕುವಂತಿಲ್ಲ. ಸದ್ಯ ಭಾರತದಲ್ಲಿ ಸಿಂಹಪಾಲು ಅಧ್ಯಯನಗಳು, ಯೋಜನೆಗಳು ಪಕ್ಷಾತೀತವಾಗಿ ಆರ್ ಎಸ್ ಎಸ್ ರಾಷ್ಟ್ರೀಯವಾದದ ನೆರಳಲ್ಲೇ ರೂಪುಗೊಳ್ಳುತ್ತಿರುವುದನ್ನು ಯಾರಾದರೂ ಕಡೆಗಣಿಸಲು ಸಾಧ್ಯವೆ? ಹೀಗಾಗಿ ಮುಕ್ತವಾದ ಸಮುದಾಯಿಕ‌ ಅಧ್ಯಯನ ಹಾಗೂ ವಾಸ್ತವಿಕ ಸ್ಥಿತಿಗಳಿಗೆ ಆಧಾರವಾಗಿ ಯೋಜನೆ ರೂಪುಗೊಳ್ಳುವುದು ಸೂಕ್ತವೆನಿಸುತ್ತದೆ.

ಮದರಾಸಗಳಲ್ಲಿ ಕನ್ನಡ‌ ಕಲಿಯಿಂದ ಮುಸ್ಲಿಮರಿಗೆ 99%ರಷ್ಟು ಅನುಕೂಲವೇ ಎಂದು ಇಟ್ಟುಕೊಳ್ಳೋಣ, ಆದರೆ 1% ನಷ್ಟು ಕೆಡುಕಾದರೂ ಅದನ್ನು ಸಹಿಸಿಕೊಳ್ಳುವ ತ್ರಾಣ ಸದ್ಯದ ಸ್ಥಿತಿಯಲ್ಲಿ ಮುಸ್ಲಿಮರಿಗೆ ಇಲ್ಲ ಎನ್ನುವ ವಾಸ್ತಿವಿಕ‌ ಸತ್ಯವನ್ನು ನೀವು ಒಪ್ಪಿಕೊಳ್ಳಬೇಕು.‌ ಭಾಷೆಯೊಂದರ ಮೇಲಿನ ಅಗಾಧ ಪ್ರೀತಿ ಹಾಗೂ ಕಾಳಜಿ ದಿನದಿಂದ ದಿನಕ್ಕೆ ತನ್ನ ಸ್ವರೂಪ ಬದಲಿಸಿಕೊಂಡು ರಾಷ್ಟ್ರೀಯವಾದವನ್ನು ಪೋಷಿಸ ತೊಡಗಿರುವ ಈ ಸ್ಥಿತಿಯಲ್ಲಿ ಸೆಕ್ಯೂಲರಿಸ್ಟ್ ಗಳು ಭಾಷೆಯ ಹೆಸರಿನಲ್ಲಿ ಕ್ರಾಂತಿ ಮಾಡುವುದರಿಂದ ದೂರ ಉಳಿದಷ್ಟು, ಭವಿಷ್ಯತ್ ನಲ್ಲಿ ಅದರ ಫಲ ಸಿಹಿಯಾಗಿರುವುದು ಮಾತ್ರ ನಿಚ್ಚಳ.

  • ಆಶಿಕ್ ಮುಲ್ಕಿ, ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page