Monday, June 17, 2024

ಸತ್ಯ | ನ್ಯಾಯ |ಧರ್ಮ

ಹಾಲಶ್ರೀ ಬಂಧನ ; ಸಿಸಿಬಿಗೆ ಚಳ್ಳೆಹಣ್ಣು ತಿನ್ನಿಸಲು ಸ್ವಾಮಿ ಹೂಡಿದ ಕಳ್ಳಾಟದ ಸಂಪೂರ್ಣ ಮಾಹಿತಿ ನೋಡಿ

“ಸ್ವಾಮೀಜಿಗಳು ಅರೆಸ್ಟ್ ಆಗಲಿ ಇನ್ನೂ ಹಲವಷ್ಟು ಜನರ ಬಂಡವಾಳ ಹೊರಬರಲಿದೆ” ಎಂದು ಕೋಟಿ ಕೋಟಿ ವಂಚನೆಯ ಎ1 ಆರೋಪಿ ಚೈತ್ರ ಕುಂದಾಪುರ ಹೇಳಿ ಮೂರೇ ದಿನಗಳಲ್ಲಿ ಕಳ್ಳಸ್ವಾಮಿ ಎಂದೇ ಕುಖ್ಯಾತಿ ಪಡೆದಿರುವ ಅಭಿನವ ಹಾಲಶ್ರೀ ಬಂಧನವಾಗಿದೆ. ಒಡಿಶಾದ ಕಟಕ್ ನಲ್ಲಿ ಸಿನಿಮೀಯ ಶೈಲಿಯಲ್ಲಿ ಸಿಸಿಬಿ ಪೊಲೀಸರು ಹಾಲಶ್ರೀ ಸ್ವಾಮಿಯನ್ನು ಬಂಧಿಸಿದ್ದಾರೆ.

ಪ್ರಕರಣದ ದಾಖಲಾದ ದಿನದಿಂದಲೇ ನಾಪತ್ತೆಯಾಗಿದ್ದ ಕಳ್ಳಸ್ವಾಮಿ ಹೈದರಾಬಾದ್ ಗೆ ಹೋದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲಿಂದ ತನಿಖೆ ಹಾಲಶ್ರೀ ಬೇಟೆಗೆ ಮುಂದಾಗಿದ್ದ ಸಿಸಿಬಿ ಪೊಲೀಸರು ಹಾಲಶ್ರೀ ಕಾರು ಚಾಲಕನನ್ನು ತಂದು ವಿಚಾರಣೆಗೆ ಒಳಪಡಿಸಿದ್ದರು. ಆತನ ಬಳಿ ಹೆಚ್ಚು ಮಾಹಿತಿ ಸಿಗಲಿಲ್ಲವಾದರೂ ಅವನ ಮೇಲೂ ನಿಗಾ ಇಡಲಾಗಿತ್ತು‌. ಹೀಗಾಗಿ ಆತನಿಗೆ ಬರುವ ಫೋನ್‌ಗೆ ಕರೆಗಳ ಆಧಾರಿಸಿ ಸ್ವಾಮಿಯನ್ನು ಟ್ರಾಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಧ್ಯ ಸಿಸಿಬಿ ಬಂಧನದಲ್ಲಿ ಇರುವ ಹಾಲಶ್ರೀ ಬಂಧನದ ಪ್ರಕ್ರಿಯೆ ಕೂಡಾ ಅಷ್ಟೆ ರೋಚಕವಾಗಿದೆ. ಬಹುಶಃ ಚೈತ್ರ ಕುಂದಾಪುರ ಹೇಳಿಕೆಯಂತೆ ಸ್ವಾಮಿ ಬಂಧನದ ನಂತರ ಹಲವರ ಬಂಡವಾಳ ಬಯಲಿಗೆ ಬರಲು ಹಾಲಶ್ರೀ ಬಂಧನವೇ ಒಂದು ದೊಡ್ಡ ಘಟ್ಟವಾಗಿರುವ ಕಾರಣ ಈ ಕಳ್ಳಸ್ವಾಮಿ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಹೂಡಿದ್ದಾರೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಕುಖ್ಯಾತ ಕಳ್ಳಸ್ವಾಮಿ ವೇಷ ಬದಲಿಸುವ ಕಳ್ಳಾಟ ನಡೆಸಿದ್ದಾರೆ. ಮೊದಲಿಗೆ ಕಾವಿ ಹಾಕಿಕೊಂಡು ಸ್ವಾಮಿಯ ವೇಷದಲ್ಲಿದ್ದ ಹಾಲಶ್ರೀ ನಂತರ ಕಾವಿ ತಗೆದು ಟೀ ಶರ್ಟ್ ಧರಿಸಿ ಮಾಮೂಲಿ ಜನರಂತೆ ನಾಟಕವಾಡಿದ್ದಾರೆ.

ಈ ನಡುವೆ ಹೊಸ ಮೊಬೈಲ್ ಖರೀದಿ ಮಾಡಿದ್ದ ಹಾಲಶ್ರೀ, ಪ್ರತಿಯೊಂದು ಕರೆಗೂ ಸಿಮ್ ಚೇಂಜ್ ಮಾಡಿದ್ದಾರೆ. ಆದರೆ ಪ್ರತಿಯೊಂದು ಹೊಸ ಸಿಮ್ ಕರೆಯೂ ಕರ್ನಾಟಕಕ್ಕೇ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ತಿಳಿದು ಕರೆ ಬಂದ ಲೊಕೇಶನ್ ಟ್ರೇಸ್ ಮಾಡಿದ್ದಾರೆ. ಹಾಲಶ್ರೀ ಕರೆ ಮಾಡಿದ ಲೊಕೇಶನ್ ಟ್ರೇಸ್ ಮೂಲಕ ಕಳ್ಳಸ್ವಾಮಿಗೆ ಸಿಸಿಬಿ ಖೆಡ್ಡಾ ತೋಡಿ ಬಂಧಿಸಿದ್ದಾರೆ.

ಈ ನಡುವೆ, ಪೊಲೀಸರ ಕಣ್ತಪ್ಪಿಸಲು ಹಾಲಶ್ರೀ ನಂಬರ್ ಪ್ಲೇಟ್ ಬದಲಿಸಿದ ಕಾರನ್ನು ಉಪಯೋಗಿಸಿದ್ದರು ಎನ್ನಲಾಗಿದೆ. ಒಟ್ಟಾರೆ ಕೇಸ್ ದಾಖಲಾಗಿ 11 ದಿನಗಳ ನಂತರ ಕಳ್ಳಸ್ವಾಮಿಯ ಬಂಧನವಾಗಿದೆ.

ಬಂಧನದ ನಂತರ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಮತ್ತು ಬಿಜೆಪಿ ಹಿನ್ನೆಲೆಯಲ್ಲಿ ಗುರುತಿಸಿಕೊಂಡಿರುವ ಹಲವು ಪ್ರಮುಖ ವ್ಯಕ್ತಿಗಳ ಬಂಡವಾಳ ಹೊರಬರಲಿದೆ ಎಂದೇ ಅಂದಾಜಿಸಲಾಗಿದೆ. ಅದರಲ್ಲೂ ಬಿಜೆಪಿ ಪಕ್ಷದ ಬಾಡಿಗೆ ಭಾಷಣಕಾರನೊಬ್ಬನ ಮೇಲೆ ಹಲವು ಗುಮಾನಿ ಇದ್ದು ಆತನೇ ಇವೆಲ್ಲದರ ಮಾಸ್ಟರ್ ಮೈಂಡ್ ಎಂದೂ ಹೇಳಲಾಗುತ್ತಿದೆ.

ಸಧ್ಯಕ್ಕೆ ಬಂಧನವಾದ ಹಾಲಶ್ರೀಯನ್ನು ಇಂದು ಮಧ್ಯರಾತ್ರಿ ವೇಳೆಗೆ ಬೆಂಗಳೂರಿಗೆ ಸಿಸಿಬಿ ಪೊಲೀಸರು ಕರೆತರಲಿದ್ದಾರೆ. ಒಡಿಶಾದಲ್ಲಿ ಬಂಧಿತರಾಗಿರುವ ಅಭಿವನ ಹಾಲಶ್ರೀಯನ್ನು ಈಗ ಅಲ್ಲಿನ ಪೊಲೀಸ್‌ ಠಾಣೆಗೆ ಹಾಜರುಪಡಿಸಿ ಬಳಿಕ ವಿಮಾನದ ಮೂಲಕ ಸಂಜೆ ವೇಳೆಗೆ ಬೆಂಗಳೂರಿಗೆ ಕರೆ ತರುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು