2024 ರ ಚುನಾವಣೆಗೂ ಮುನ್ನ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮಮಂದಿರ ಉದ್ಘಾಟನೆ ಸಧ್ಯ ದೇಶಾದ್ಯಂತ ಅತ್ಯಂತ ಚರ್ಚಿತ ವಿಚಾರ. ಇದರ ಉದ್ಘಾಟನೆಗೆ 10,000 ಮುಖ್ಯ ಅತಿಥಿಗಳು, 100 ವಿದೇಶಿ ಆಹ್ವಾನಿತರು ಆಗಮಿಸುತ್ತಿದ್ದರೂ ಶಂಕರಾಚಾರ್ಯ ಸ್ಥಾಪಿತ ಕೇವಲ ನಾಲ್ಕು ಮಠಗಳ ಮುಖ್ಯಸ್ಥರು ಆಗಮಿಸದೇ ಉಳಿದಿರುವುದು ತೀರಾ ಮುಖ್ಯ ಸಂಗತಿಯಾಗಿ ಮಾರ್ಪಟ್ಟಿದೆ.
ಒರಿಸ್ಸಾದ ಪುರಿ ಗೋವರ್ಧನ ಪೀಠ ಮುಖ್ಯಸ್ಥ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜ್ ಹಾಗೂ ಉತ್ತರಾಕಾಂಡದ ಶಂಕರಾಚಾರ್ಯ ಸ್ಥಾಪಿತ ಮಠದ ಸ್ವಾಮಿಗಳು ಸ್ಪಷ್ಟವಾಗಿ ತಾವು ರಾಮಮಂದಿರ ಉದ್ಘಾಟನೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಅದರಲ್ಲೂ ನರೇಂದ್ರ ಮೋದಿಯ ಉಪಸ್ಥಿತಿಯನ್ನು ಉಲ್ಲೇಖಿಸಿ ತಮ್ಮ ಗೈರನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಬಹುತೇಕ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿ ಧಾರ್ಮಿಕ ಕಾರ್ಯಗಳಲ್ಲಿ ಶೂದ್ರ ವ್ಯಕ್ತಿಯ ಒಳಗೊಳ್ಳುವ ಬಗ್ಗೆಯೂ ಶಂಕರಾಚಾರ್ಯ ಸ್ಥಾಪಿತ ಮಠಗಳ ಸ್ವಾಮಿಗಳ ಅಪಸ್ವರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಇತ್ತ ಕರ್ನಾಟಕದ ಶೃಂಗೇರಿಯ ಶಾರದಾ ಪೀಠ ಮತ್ತು ಗುಜರಾತಿನ ದ್ವಾರಕಾದಲ್ಲಿರುವ ಶಾರದಾ ಪೀಠದವರು ಇಲ್ಲಿಯವರೆಗೆ ತಮ್ಮ ಹಾಜರಾತಿಯನ್ನು ಖಚಿತಪಡಿಸಿಲ್ಲ ಹಾಗೂ ನಿರಾಕರಿಸಿಯೂ ಇಲ್ಲ ಎಂಬುದು ಉಲ್ಲೇಖಾರ್ಹ. ಶಂಕರಾಚಾರ್ಯ ಸ್ಥಾಪಿತ ಮಠಗಳಲ್ಲಿ ಕನಿಷ್ಟ 2 ಮಠಗಳು ಬಾರದೇ ಇರುವುದು ಸಹ ವಿರೋಧ ಪಕ್ಷಗಳಿಗೆ ಬಿಜೆಪಿ ಮತ್ತು RSS ಮೇಲೆ ವಾಗ್ದಾಳಿ ನಡೆಸಲು ಪ್ರಮುಖ ಅಸ್ತ್ರವಾಗಲಿದೆ.
ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಕಳೆದ ವಾರ, “ಶ್ರೀರಾಮನ ಮಹಾಮಸ್ತಕಾಭಿಷೇಕವನ್ನು ಗೌರವಯುತವಾಗಿ ಮಾಡಬೇಕು. ಪ್ರಧಾನಿ ಗರ್ಭಗುಡಿಯಲ್ಲಿದ್ದು ವಿಗ್ರಹವನ್ನು ಮುಟ್ಟುತ್ತಾರೆ … ಇದಕ್ಕೆ ರಾಜಕೀಯ ಕೋನವನ್ನು ನೀಡಲಾಗುತ್ತಿದೆ. ಇದು ಒಪ್ಪತಕ್ಕ ವಿಚಾರವಲ್ಲ. ಈ ಕಾರಣದಿಂದ ನಾನು ಪ್ರಾಣಪ್ರತಿಷ್ಠೆಗೆ ಹೋಗುವುದಿಲ್ಲ” ಎಂದು ತಿಳಿಸಿದ್ದಾರೆ.
ಸ್ವಾಮಿ ಸರಸ್ವತಿಯವರು ತಮ್ಮ ಅಭಿಪ್ರಾಯದಲ್ಲಿ, “ಪವಿತ್ರೀಕರಣವನ್ನು ಶಾಸ್ತ್ರಗ್ರಂಥದ ಮಾರ್ಗಸೂಚಿಗಳ ಪ್ರಕಾರ ಮಾಡಬೇಕು… ಇಲ್ಲದಿದ್ದರೆ ದೇವತೆಯ ತೇಜಸ್ಸು ಕಡಿಮೆಯಾಗುತ್ತದೆ ಮತ್ತು ರಾಕ್ಷಸ ಘಟಕಗಳು ಪ್ರವೇಶಿಸಬಹುದು” ಎಂದು ಹೇಳಿದ್ದಾರೆ.
“ನಾನು ಅಸಮಾಧಾನಗೊಂಡಿಲ್ಲ … ನಾನು ನನ್ನ ನಿಲುವನ್ನು ತೆಗೆದುಕೊಂಡಿದ್ದೇನೆ. ಇದು ನನ್ನ ನೀತಿ ಮತ್ತು ತತ್ವವಾಗಿದೆ. ರಾಮ ಪ್ರತಿಷ್ಠಾಪನೆ ಸಮಿತಿಯಿಂದ ಆಹ್ವಾನ ಸ್ವೀಕರಿಸಿದ್ದೇನೆ. ಆದರೆ ನಾನು ಹೋಗುವುದಿಲ್ಲ” ಎಂದು ಸ್ವಾಮಿ ಸರಸ್ವತಿ ಹೇಳಿದ್ದಾರೆ.
ಉತ್ತರಾಖಂಡದ ಮಠಗಳ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಮುಂದಿನ ವಾರದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ ಮತ್ತು ರಾಮಮಂದಿರ ನಿರ್ಮಾಣವು ಸನಾತನ ಧರ್ಮ ಅಥವಾ ಹಿಂದೂ ಧರ್ಮಕ್ಕೆ “ವಿಜಯ” ಎಂಬ ಅಂಶವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. “ಅಯೋಧ್ಯೆ ಹಿಂದೆ ರಾಮಮಂದಿರವನ್ನು ಹೊಂದಿತ್ತು. ಈಗ ಮಂದಿರವಾಗಿರುವುದು ಧರ್ಮಕ್ಕೆ ಸಿಕ್ಕ ಉಡುಗೊರೆಯೇ ಹೊರತು ವಿಜಯವಲ್ಲ. ಬಿಜೆಪಿ ಇದನ್ನು ಹಿಂದೂ ಧರ್ಮದ ವಿಜಯ ಎಂಬಂತೆ ಪ್ರತಿಪಾದಿಸುವುದನ್ನು ನಾನು ಒಪ್ಪುವುದಿಲ್ಲ. ದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿದ ದಿನದಂದು ನಾನು ಅಯೋಧ್ಯೆಗೆ ಭೇಟಿ ನೀಡುತ್ತೇನೆ” ಎಂದು ಇನ್ನೊಂದು ಆಯಾಮದಲ್ಲಿ ತಮ್ಮ ಗೈರನ್ನು ಸಮರ್ಥಿಸಿಕೊಂಡಿದ್ದಾರೆ.
ಶೃಂಗೇರಿ ಮಠದ ಶಂಕರಾಚಾರ್ಯ ಭಾರತೀ ತೀರ್ಥರು ಮತ್ತು ಪ್ರಧಾನಿಯವರ ತವರು ಗುಜರಾತ್‌ನಲ್ಲಿರುವ ದ್ವಾರಕಾದಲ್ಲಿರುವ ಶಾರದಾ ಪೀಠದ ಶಂಕರಾಚಾರ್ಯ ಸದಾನಂದ ಸರಸ್ವತಿ ಅವರು ಇಲ್ಲಿಯವರೆಗೆ ಮೌನವಾಗಿದ್ದಾರೆ. ಬಹುತೇಕ ಈ ಮಠಗಳ ಸ್ವಾಮಿಗಳೂ ರಾಮಮಂದಿರ ಉದ್ಘಾಟನೆಗೆ ಹೋಗುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ. ಶೃಂಗೇರಿಯ ಶಾರದಾ ಪೀಠದ ಸ್ವಾಮಿಗಳು “ಮಂದಿರದ ಪ್ರತಿಷ್ಠಾಪನೆಗೆ ಧರ್ಮೀಯರು ಸೇರಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು. ಆದರೆ ಈವರೆಗೆ ಎಲ್ಲೂ ಸಹ ತಾನೂ ಹಾಜರಾಗುತ್ತೇನೆ ಅಥವಾ ಇಲ್ಲ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಜೊತೆಗೆ ಇಲ್ಲದ ಊಹಾಪೋಹಗಳಿಗೆ ತಲೆಗೊಡದೇ ಅಧಿಕೃತವಾಗಿ ನಮ್ಮ ಮಠದ ವೆಬ್ಸೈಟ್ ನಿಂಂದ ಬಂದ ಮಾಹಿತಿ ಅಷ್ಟೆ ನಂಬಬೇಕು ಎಂದು ಕರೆ ನೀಡಿದ್ದಾರೆ.
ಆದರೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಎಎನ್‌ಐಗೆ “ಎಲ್ಲವೂ ಶಾಸ್ತ್ರದ ಪ್ರಕಾರ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ದೇವಾಲಯವು ಅಪೂರ್ಣವಾಗಿದೆ ಮತ್ತು ಧಾರ್ಮಿಕ ಮುಖಂಡರ ಪ್ರಕಾರ, ಪವಿತ್ರಗೊಳಿಸಿಲ್ಲ. ಅಷ್ಟೆ ಅಲ್ಲ, ಜನವರಿ 22 ಅಶುಭದ ಸಂಕೇತ ಎಂದೂ ಶಂಕರಾಚಾರ್ಯ ಪೀಠದ ಸ್ವಾಮಿಗಳು ಹೇಳಿದ್ದಾರೆ. ಅಷ್ಟೆ ಅಲ್ಲದೆ ಇದೊಂದು ರಾಜಕೀಯ ಪ್ರೇರಿತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಿಂದ ನಾವು ಅಂತರ ಕಾಯ್ದುಕೊಂಡಿದ್ದೇವೆ ಎಂದಿದ್ದಾರೆ.
ಇತ್ತ ಶಂಕರ ಪೀಠದ ಸ್ವಾಮಿಗಳು ರಾಮಮಂದಿರ ಉದ್ಘಾಟನೆಯಿಂದ ಅಂತರ ಕಾಯ್ದುಕೊಂಡದ್ದು INDIA ಕೂಟದ ಬಹುತೇಕ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ. ಬಿಜೆಪಿ ಪಕ್ಷದ ರಾಜಕೀಯ ಉದ್ದೇಶವನ್ನೂ ಸೇರಿದಂತೆ ಸ್ವಾಮಿಗಳು ಸೂಚಿಸಿದ ಅಂಶಗಳಿಂದ ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
ಈ ನಡುವೆ ಬಿಜೆಪಿ ಸರ್ಕಾರದ ಸಚಿವರೊಬ್ಬರು ಶಂಕರ ಪೀಠದ ಮಠಗಳ ಅಭಿಪ್ರಾಯದ ಬಗ್ಗೆ ಪ್ರಸ್ತಾಪಿಸಿ, ಈ ಸ್ವಾಮಿಗಳಿಂದ ಹಿಂದೂ ಧರ್ಮಕ್ಕೆ ಏನು ಪ್ರಯೋಜನ ಎಂದಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಮಠದ ಅನುಯಾಯಿಗಳು ಕೇಂದ್ರ ಸಚಿವರ ಈ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದಾರೆ.