ಮನೆ ನಿವೇಶನಕ್ಕಾಗಿ ಪಡೀಲ್ ಜಿಲ್ಲಾಧಿಕಾರಿ ಕಚೇರಿಗೆ ಅರೆಬೆತ್ತಲೆ ಪಾದಯಾತ್ರೆ: ದ.ಕ. ಜಿಲ್ಲಾಡಳಿತದ ವಿರುದ್ಧ ಕೊರಗ ಸಮುದಾಯ ಆಕ್ರೋಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಆದಿವಾಸಿ ಕೊರಗ ಸಮುದಾಯ ವಿರೋಧಿ ಮತ್ತು ಅಮಾನವೀಯ ನಿಲುವುಗಳನ್ನು ತೀವ್ರವಾಗಿ ಖಂಡಿಸಿ, ಸಮುದಾಯಕ್ಕೆ ಈಗಾಗಲೇ ಮಂಜೂರಾಗಿರುವ ಮನೆ ನಿವೇಶನಗಳನ್ನು ತಕ್ಷಣವೇ ವಿತರಿಸಬೇಕೆಂದು ಆಗ್ರಹಿಸಿ “ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ”ಯ ನೇತೃತ್ವದಲ್ಲಿ ಬೃಹತ್ ಅರೆಬೆತ್ತಲೆ ಪಾದಯಾತ್ರೆ ನಡೆಯಿತು. ವಾಮಂಜೂರು ಜಂಕ್ಷನ್‌ನಿಂದ ಆರಂಭಗೊಂಡ ಈ ಪ್ರತಿಭಟನಾ ಪಾದಯಾತ್ರೆಯು ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕೊರಗ ಸಮುದಾಯದ ನೂರಾರು ಜನರು ಸರ್ಕಾರದ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖ ಬೇಡಿಕೆಗಳು

ಕೊರಗ ಸಮುದಾಯಕ್ಕೆ ಸರ್ಕಾರದಿಂದ ಈಗಾಗಲೇ ಮಂಜೂರಾಗಿರುವ ಮನೆ ನಿವೇಶನಗಳನ್ನು ವಿಳಂಬ ಮಾಡದೇ ತಕ್ಷಣವೇ ಹಕ್ಕುಪತ್ರದೊಂದಿಗೆ ಹಸ್ತಾಂತರಿಸಬೇಕು.ಮೂಲಭೂತ ಹಕ್ಕುಗಳಿಗಾಗಿ ಅಲೆದಾಡುವಂತಾಗಿರುವ ಆದಿವಾಸಿಗಳ ಸ್ಥಿತಿಗೆ ಕಾರಣವಾಗಿರುವ ದ.ಕ. ಜಿಲ್ಲಾಡಳಿತ ಹಾಗೂ ಸರ್ಕಾರದ ನಿಲುವನ್ನು ಸಮಿತಿ ತೀವ್ರವಾಗಿ ಖಂಡಿಸಿತು.

ನಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಮತ್ತು ಮಂಜೂರಾದ ನಿವೇಶನ ಪಡೆಯಲು ನಾವು ಅರೆಬೆತ್ತಲೆಯಾಗಿ ರಸ್ತೆಗಿಳಿಯುವ ಪರಿಸ್ಥಿತಿ ಬಂದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ತಕ್ಷಣವೇ ನಮಗೆ ನಿವೇಶನ ಸಿಗದಿದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಪಾದಯಾತ್ರೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು