ಸಕಲೇಶಪುರ ಮಾನವ–ಆನೆ ಸಂಘರ್ಷ ತಕ್ಷಣ ತಜ್ಞರ ತಂಡ ಕಳುಹಿಸಿ – ಸಂಸದ ಶ್ರೇಯಸ್ ಪಟೇಲ್

ಹಾಸನ :  ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಮಾನವ–ಆನೆ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಹೊರಗೆ, ವಿಶೇಷವಾಗಿ ಕಾಫಿ ತೋಟಗಳು ಹಾಗೂ ಕೃಷಿ ಪ್ರದೇಶಗಳಲ್ಲಿ 90ಕ್ಕೂ ಹೆಚ್ಚು ಆನೆಗಳು ಸಂಚರಿಸುತ್ತಿದ್ದು, ಇದುವರೆಗೆ ಆನೆ ದಾಳಿಯಿಂದ 80ಕ್ಕೂ ಹೆಚ್ಚು ಮಾನವ ಜೀವಗಳು ಬಲಿಯಾಗಿವೆ. ಇದರ ಜೊತೆಗೆ ಬೆಳೆ ನಷ್ಟ, ಆಸ್ತಿ ಹಾನಿ ಹಾಗೂ ಜನರಿಗೆ ಗಾಯಗಳಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಈ ಹಿಂದೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದ ಸಂಸದ ಶ್ರೇಯಸ್ ಎಂ. ಪಟೇಲ್ ಅವರ ಮನವಿಯನ್ನು ಸಚಿವರು ಪರಿಗಣಿಸಿ, DGF (Wildlife) ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಬಳಿಕ ಹಾಸನ ಜಿಲ್ಲೆಗೆ ತಜ್ಞರ ತಂಡವನ್ನು ಕಳುಹಿಸಿ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸುವ ಭರವಸೆ ನೀಡಲಾಗಿತ್ತು.

ಆದರೆ ಮಾನವ ಜೀವಗಳಿಗೆ ಮುಂದುವರಿದಿರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಭರವಸೆ ನೀಡಿರುವ ತಜ್ಞರ ತಂಡದ ಭೇಟಿಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣ ಆಯೋಜಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.

ಭೇಟಿ ನೀಡುವ ತಂಡದಲ್ಲಿ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಅನುಭವ ಹೊಂದಿರುವ ಆನೆ ತಜ್ಞರು, ವನ್ಯಜೀವಿ ತಜ್ಞರು ಹಾಗೂ ವಿಜ್ಞಾನಿಗಳು ಇರಬೇಕು. ಅವರು ಹಾಸನದ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರು ಹಾಗೂ ಸ್ಥಳೀಯ ಜನರೊಂದಿಗೆ ನೇರವಾಗಿ ಚರ್ಚಿಸಿ, ಮಾನವ–ಆನೆ ಸಂಘರ್ಷಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ರೂಪಿಸುವಂತೆ ಸಂಸದರು ಮನವಿ ಮಾಡಿದ್ದಾರೆ. ಹಾಸನದ ಜನರು ಈಗಾಗಲೇ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದಾರೆ. ಮತ್ತಷ್ಟು ಜೀವಹಾನಿ ಸಂಭವಿಸುವ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ತುರ್ತು ಕ್ರಮ ಕೈ ಳ್ಳಬೇಕು. DGF (Wildlife) ಅವರಿಂದ ತಂಡ ಭೇಟಿ ನೀಡುವ ಭರವಸೆ ಈಗಾಗಲೇ ದೊರೆತಿದೆ. ಇನ್ನು ಅಗತ್ಯವಿರುವುದು ನೆಲಮಟ್ಟದಲ್ಲಿ ತ್ವರಿತ ಮತ್ತು ಸಮನ್ವಯಿತ ಕ್ರಮ,” ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಜನರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಲು ಕೇಂದ್ರ ಹಾಗೂ ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಮತ್ತು ತಜ್ಞರ ತಂಡದ ಭೇಟಿಯನ್ನು ಶೀಘ್ರದಲ್ಲೇ ಖಚಿತಪಡಿಸಬೇಕು ಎಂದು ಅವರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು