Monday, July 29, 2024

ಸತ್ಯ | ನ್ಯಾಯ |ಧರ್ಮ

ಹಿರಿಯ ಪರಿಸರವಾದಿ, ಸಾಹಿತಿ ʻಭೂಹಳ್ಳಿ ಪುಟ್ಟಸ್ವಾಮಿʼ ಸಾವಿಗೆ ಶರಣು!

ಹಿರಿಯ ಸಾಹಿತಿ ಹಾಗೂ ಪರಿಸರವಾದಿಯಾಗಿದ್ದ ಭೂಹಳ್ಳಿ ಪುಟ್ಟಸ್ವಾಮಿಯವರು ಅನಾರೋಗ್ಯದಿಂದ ಬೇಸತ್ತು ನಿನ್ನೆ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಪೋಸ್ಟ್‌ ಕೂಡಾ ಹಾಕಿದ್ದ ಹಿರಿಯರು ಬೆಳಗಿನ ಜಾವ ಆತ್ಮಹತ್ಯೆಗೆ ಶರಣಾದಂತಿದೆ.

ತಮ್ಮ ಫೇಸ್ಬುಕ್‌ ಪೋಸ್ಟಿನಲ್ಲಿ ಅವರು ಅನಾರೋಗ್ಯದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಚನ್ನಪಟ್ಟಣದ ಪಾರ್ವತಿ ಚಿತ್ರಮಂದಿರದ ರಸ್ತೆಯಲ್ಲಿ ರೂಮಿನಲ್ಲಿ ವಾಸವಿದ್ದ ಪುಟ್ಟಸ್ವಾಮಿ ಅದೇ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೃತ್ತಿಯಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದ ಪುಟ್ಟಸ್ವಾಮಿ ಅವರು ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು. ಸುಮಾರು 25ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಳ್ಳಿ ಮನೆ ಲುಂಬಿನಿ, ನೂರು ಸ್ವರ, ಎಲ್ಲರ ಹೆಜ್ಜೆ, ಭಾವ ಮಂಜರಿ, ನೆಲದ ಕಂಬನಿ, ಸ್ವಾತಂತ್ರ್ಯಕ್ಕೆ ಜೀವವಿದೆ, ಗೋಜಲು, ಬೆಳದಿಂಗಳ ಕುಡಿ, ಲಾವಣಿ ಹಾಡು, ಅಕ್ಷರ ಗುಡಿ ನಾಟಕ, ಅಗ್ರಹಾರ ಬೀದಿಗಳಲ್ಲಿ… ಹೀಗೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಆಸಕ್ತರ ಮೆಚ್ಚುಗೆ ಗಳಿಸಿದ್ದರು. ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ಸಾಹಿತ್ಯ ಪ್ರಶಸ್ತಿ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಸಾಹಿತ್ಯ ಕೌಸ್ತುಭ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪುಟ್ಟಸ್ವಾಮಿ ಭಾಜನರಾಗಿದ್ದರು.

ಅಪಾರ ಸ್ನೇಹ ಬಳಗವನ್ನು ಗಳಿಸಿದ್ದ ಅವರ ಸಾವಿನ ಸುದ್ದಿ ಖಚಿತಗೊಂಡಿದ್ದು ಗೆಳಯರೆಲ್ಲರೂ ನೋವಿನಲ್ಲಿ ಮುಳುಗಿದ್ದಾರೆ. ಹಿರಿಯ ಕವಿ ಎಮ್‌ ಆರ್‌ ಕಮಲಾ ಅವರು ಪುಟ್ಟಸ್ವಾಮಿಯವರನ್ನು ನೆನಪಿಸಿಕೊಂಡು ಬರೆದಿರುವ ಆರ್ದ್ರ ಲೇಖನ ಈ ಕೆಳಗಿದೆ.

ಗೆಳೆಯ ಭೂಹಳ್ಳಿ ಪುಟ್ಟಸ್ವಾಮಿಗೆ ವಿದಾಯ

ಬೆಳಗಿನ ಜಾವ ಬೇಗ ಎಚ್ಚರವಾಯಿತು. ಸುಮ್ಮನೆ ಫೇಸ್ ಬುಕ್ ತೆರೆದೆ. `ನನ್ನ ಸಾವಿಗೆ ಯಾರೂ ಕಾರಣರಲ್ಲ, ಅನಾರೋಗ್ಯದಿಂದ ಬೇಸರಗೊಂಡು ಜೀವನ ಯಾತ್ರೆ ಮುಗಿಸುತ್ತಿದ್ದೇನೆ’ ಎಂದು ಗೆಳೆಯ ಭೂಹಳ್ಳಿ ಪುಟ್ಟಸ್ವಾಮಿ ಹಾಕಿದ ಪೋಸ್ಟ್ ಕಾಣಿಸಿತು. ಅತಿಯಾಗಿ ಎಲ್ಲವನ್ನು ಹಚ್ಚಿಕೊಂಡು ಒದ್ದಾಡುವ ಸ್ವಭಾವವಾದ್ದರಿಂದ ಯಾವುದೋ ಖಿನ್ನತೆಯ ಗಳಿಗೆಯಲ್ಲಿ ಬರೆದಿರಬಹುದು ಎನ್ನಿಸಿದರೂ, ಅಂತಹ ನಿರ್ಧಾರ ಬೇಡವೆಂದು ಕಾಮೆಂಟ್ ಮಾಡಿದೆ. ಇದು ನಿಜವಾಗಿಬಿಟ್ಟಿದ್ದರೆ ಎನ್ನುವ ಆತಂಕವೂ ಆಯಿತು. ನಿದ್ದೆ ಬರದೆ ಗೆಳೆಯರಿಗೆಲ್ಲ ಫೋನ್ ಮಾಡಿದರೂ ವಿಷಯ ತಿಳಿಯಲೇ ಇಲ್ಲ. ಕೊನೆಗೆ ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಅವನು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು.

ಪುಟ್ಟಸ್ವಾಮಿ ನಮ್ಮಂತೆ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಿದ್ದ, ಕವಿತೆಗಳನ್ನು ಬರೆಯುತ್ತಿದ್ದ ವ್ಯಕ್ತಿ ಮಾತ್ರ ಆಗಿರಲಿಲ್ಲ. ಪರಿಸರವಾದಿ. ತನ್ನದೇ ಸ್ವಂತ ನೆಲದಲ್ಲಿ ಹನ್ನೆರಡು ವನಗಳನ್ನು (ಕವಿವನ, ಜೀವೇಶ್ವರ, ಬುದ್ಧೇಶ್ವರ ವನ ಹೀಗೆ) ಸೃಷ್ಟಿಸಿದ್ದ. ನಾನು ಚನ್ನಪಟ್ಟಣ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದಾಗ ಬಾಲಕರ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಪುಟ್ಟಸ್ವಾಮಿ ತಪ್ಪದೇ ಪ್ರತಿ ಶನಿವಾರ ಕಾಲೇಜು ಮುಗಿದ ಮೇಲೆ ಬಂದು ಒಂದು ಗಂಟೆ ಮಾತನಾಡಿ ಹೋಗುತ್ತಿದ್ದ. ಮನೆಗೆ ಹೋಗಿ ಆರಾಮಾಗಿರು, ನನ್ನ ಚಿಂತೆ ಯಾಕೆ ಮಾಡ್ತೀಯ' ಅಂದರೆನೋಡು ಕಮಲ, ಪ್ರಿನ್ಸಿಪಾಲ್ ಆದ ಮೇಲೆ ಎಲ್ಲರೂ ಒಂಟಿಯಾಗಿಬಿಡ್ತಾರೆ. ನೀನು ಎಷ್ಟೇ ಪ್ರೀತಿ ತೋರಿದರೂ ಅವರು ನಿನ್ನನ್ನು ಅನುಮಾನದಿಂದ ನೋಡ್ತಾರೆ. ನಿನ್ನಂಥ ಗಿಡ ಮರಗಳ ನಡುವೆ ಬೆಳೆದ ಹಳ್ಳಿ ಹುಡುಗಿಯ ವಿಶ್ವಾಸ, ನಂಬಿಕೆ ಗಿಡ ಬೆಳೆಸೋ ನನ್ನಂತಹವರಿಗೆ ಮಾತ್ರ ಅರ್ಥ ಆಗೋದು. ನೀನು ಜೀವೇಶ್ವರ ವನಕ್ಕೆ ಬರಬೇಕು. ನಾನು ಬೆಳೆಸಿದ ಗಿಡ ಮರಗಳನ್ನು ನೋಡಬೇಕು. ಬಹಳ ಖುಷಿ ಪಡ್ತೀಯ’ ಅನ್ನುತ್ತಿದ್ದ. ನನಗೆ ಹೋಗಲಾಗಲೇ ಇಲ್ಲ. ಅಲ್ಲಿಂದ ಬೆಂಗಳೂರಿಗೆ ವರ್ಗವಾಯಿತು. ಈ ಫೇಸ್ ಬುಕ್ಕಿನಲ್ಲಿ ಒಮ್ಮೊಮ್ಮೆ ಮಾತನಾಡುತ್ತಿದ್ದೆ ಅಷ್ಟೇ.

ನಾವು ಯಾರು ಇಲ್ಲಿ ಶಾಶ್ವತವಲ್ಲ. ಬದುಕಿದ್ದಷ್ಟು ದಿನ ಪ್ರೀತಿ ಹಂಚಿ ಹೋಗುವುದಷ್ಟೇ ನಮ್ಮ ಕೆಲಸ ಎಂದು ತಿಳಿದಿದೆ. ಆದರೂ ಕಳವಳವಾಯಿತು. ಯಾರಿಗೂ ಶ್ರದ್ಧಾಂಜಲಿ ಬರೆಯಬಾರದೆಂದು ನಿರ್ಧರಿಸಿದ್ದರೂ ಎರಡು ಸಾಲು ಬರೆದರೆ ಸಮಾಧಾನ ಅನ್ನಿಸಿದ್ದು ನಿಜ. ಪುಟ್ಟಸ್ವಾಮಿ ತಾನು ಬೆಳೆಸಿದ ಸಾವಿರಾರು ಗಿಡಗಳ ನಡುವೆ ಇದ್ದೇ ಇರುತ್ತಾನೆ.

ಎಮ್‌ ಆರ್‌ ಕಮಲಾ

ನಿಮ್ಮ ಮನಸ್ಸಿನಲ್ಲಿ ಆತ್ಮಹತ್ಯೆಯಂತಹ ಯೋಚನೆಗಳು ಮೂಡುತ್ತಿದ್ದಲ್ಲಿ ದಯವಿಟ್ಟು ಈ ಕೊಂಡಿಯಲ್ಲಿ ನೀಡಿರುವ ಯಾವುದೇ ಸಂಖ್ಯೆಯನ್ನು ಸಂಪರ್ಕಿಸಿ ಸಲಹೆಯನ್ನು ಪಡೆಯಿರಿ. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ ಎನ್ನುವುದು ನೆನಪಿರಲಿ.

Related Articles

ಇತ್ತೀಚಿನ ಸುದ್ದಿಗಳು