Home ರಾಜ್ಯ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ತಪ್ಪು ಮಾಹಿತಿ ಸಲ್ಲಿಕೆ ಆರೋಪ: ಮುಖ್ಯ ಕಾರ್ಯದರ್ಶಿಗೆ ಹಿರಿಯ ಐಪಿಎಸ್...

ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ತಪ್ಪು ಮಾಹಿತಿ ಸಲ್ಲಿಕೆ ಆರೋಪ: ಮುಖ್ಯ ಕಾರ್ಯದರ್ಶಿಗೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಪತ್ರ

0

ಬೆಂಗಳೂರು: ತಮ್ಮ ವೃತ್ತಿಪರ ಪ್ರಾಮಾಣಿಕತೆ ಹಾಗೂ ಹಿಂದಿನ ತನಿಖೆಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಕೀಲರು ಮಂಡಿಸಿರುವ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್, ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗಾಗಿ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರನ್ನಾಗಿ ಅಲೋಕ್ ಕುಮಾರ್ ಅವರನ್ನು ನೇಮಿಸಲಾಗಿತ್ತು. ಆದರೆ, ಅಕ್ಟೋಬರ್ 1 ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅಲೋಕ್ ಕುಮಾರ್ ನೇಮಕವನ್ನು ವಿರೋಧಿಸಿದ್ದರು. ಈ ವೇಳೆ, 2019ರ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆ ಬಾಕಿ ಇದೆ ಎಂದು ವಾದಿಸಲಾಗಿತ್ತು.

ಈ ವಾದಗಳನ್ನು ಸತ್ಯಕ್ಕೆ ದೂರವಾದುದು ಮತ್ತು ಅಧಿಕೃತ ದಾಖಲೆಗಳಿಗೆ ವಿರುದ್ಧವಾದುದು ಎಂದು ತಳ್ಳಿಹಾಕಿರುವ ಅಲೋಕ್ ಕುಮಾರ್, ತಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲದಿದ್ದರೂ ಅನಗತ್ಯವಾಗಿ ತಮ್ಮ ಹೆಸರನ್ನು ವಿವಾದಕ್ಕೆ ಎಳೆಯಲಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ಮುಂದೆ ತಮ್ಮ ವೃತ್ತಿಪರ ಪ್ರಾಮಾಣಿಕತೆ ಹಾಗೂ ವರ್ಚಸ್ಸನ್ನು ಪ್ರಶ್ನಿಸಲಾಗಿದ್ದು, ಸರ್ಕಾರದ ಪರ ವಕೀಲರಿಗೆ ತಪ್ಪು ಮಾಹಿತಿ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಫೋನ್ ಕದ್ದಾಲಿಕೆ ಮತ್ತು ಆಡಿಯೋ ಸೋರಿಕೆ ಪ್ರಕರಣವನ್ನು ಪ್ರಸ್ತಾಪಿಸಿರುವ ಅವರು, ಸಿಬಿಐ ಸಲ್ಲಿಸಿದ್ದ ಮುಕ್ತಾಯ ವರದಿ ಅಥವಾ ‘ಬಿ-ರಿಪೋರ್ಟ್’ ಅನ್ನು ಸಿಬಿಐ ವಿಶೇಷ ನ್ಯಾಯಾಲಯವು ಫೆಬ್ರವರಿ 13, 2024 ರಂದೇ ಅಂಗೀಕರಿಸಿದೆ ಎಂದು ಗಮನ ಸೆಳೆದಿದ್ದಾರೆ. ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್) ವರದಿ ಹಾಗೂ ಸಾಕ್ಷಿಗಳ ಹೇಳಿಕೆ ಆಧರಿಸಿ ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯವೇ ತೀರ್ಮಾನಿಸಿತ್ತು. ಜೊತೆಗೆ, ಮೂಲ ದೂರುದಾರರಾದ ಮಾಜಿ ಡಿಸಿಪಿ (ಸಂಚಾರ) ಕುಲದೀಪ್ ಆರ್. ಜೈನ್ ಕೂಡ ಮುಕ್ತಾಯ ವರದಿಗೆ ತಮ್ಮ ಯಾವುದೇ ಆಕ್ಷೇಪವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂದು ಅವರು ವಿವರಿಸಿದ್ದಾರೆ. ತನಿಖೆಗೆ ಒಳಪಟ್ಟ ಅವಧಿಯಲ್ಲಿ ತಾವು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಜೂನ್ 17, 2019 ರಿಂದ ಆಗಸ್ಟ್ 2, 2019 ರವರೆಗೆ ಕೇವಲ 47 ದಿನಗಳ ಕಾಲ ಮಾತ್ರ ಸೇವೆ ಸಲ್ಲಿಸಿದ್ದು, ಜನವರಿ 2022 ರಲ್ಲಿ ಸಿಬಿಐ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿಯಲ್ಲೂ ಯಾವುದೇ ಅಪರಾಧ ಕಂಡುಬಂದಿರಲಿಲ್ಲ ಎಂದು ಅವರು ಸ್ಮರಿಸಿದ್ದಾರೆ.

ತಮ್ಮ ವಿರುದ್ಧದ ಇಲಾಖಾ ವಿಚಾರಣೆಗಳ ಕುರಿತು ಸ್ಪಷ್ಟನೆ ನೀಡಿರುವ ಅಲೋಕ್ ಕುಮಾರ್, ಮಾರ್ಚ್ 2023 ರಲ್ಲಿ ತಾವು ಸಲ್ಲಿಸಿದ್ದ ಮನವಿಯನ್ನು ಅಂದಿನ ಮುಖ್ಯಮಂತ್ರಿಗಳು ಪರಿಶೀಲಿಸಿದ ಬಳಿಕ ಶಿಸ್ತು ಕ್ರಮ ಜರುಗಿಸುವ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು ಎಂದು ತಿಳಿಸಿದ್ದಾರೆ. ತದನಂತರ ಮೇ 2025 ರಲ್ಲಿ ಹೊಸ ಶೋಕಾಸ್ ನೋಟಿಸ್ ಮತ್ತು ಚಾರ್ಜ್‌ಶೀಟ್ ನೀಡಿದಾಗ ತಾವು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದು, ಅಕ್ಟೋಬರ್ 2025 ರಲ್ಲಿ ಸಿಎಟಿ ಅಧ್ಯಕ್ಷರು ನೋಟಿಸ್ ಮತ್ತು ಚಾರ್ಜ್‌ಶೀಟ್ ಎರಡನ್ನೂ ರದ್ದುಗೊಳಿಸಿ ತಮಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರೂ, ಹೈಕೋರ್ಟ್ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಹೀಗಾಗಿ ತಮ್ಮ ವಿರುದ್ಧ ಪ್ರಸ್ತುತ ಯಾವುದೇ ಇಲಾಖಾ ವಿಚಾರಣೆ ಅಥವಾ ಆರೋಪಗಳು ಬಾಕಿ ಉಳಿದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಎಸ್‌ಐಟಿ ಮುಖ್ಯಸ್ಥರಾಗಿ ನೇಮಿಸುವಂತೆ ತಾವು ಎಲ್ಲಿಯೂ ಕೋರಿಲ್ಲ ಅಥವಾ ಅದಕ್ಕಾಗಿ ಲಾಬಿ ನಡೆಸಿಲ್ಲ ಎಂಬುದನ್ನೂ ಈ ಹಿರಿಯ ಐಪಿಎಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ 21 ರಂದು ಆದೇಶ ಹೊರಡಿಸುವ ವೇಳೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವೇ ಸ್ವಯಂಪ್ರೇರಿತವಾಗಿ ತಮ್ಮನ್ನು ಆ ಸ್ಥಾನಕ್ಕೆ ನಾಮನಿರ್ದೇಶನ ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.

ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಗೆ ಮುನ್ನ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ, ಸಿಬಿಐ ಪ್ರಕರಣ ಮುಕ್ತಾಯಗೊಂಡಿರುವ ನ್ಯಾಯಾಲಯದ ಎಲ್ಲಾ ದಾಖಲೆಗಳನ್ನು ಸರ್ಕಾರದ ಕಾನೂನು ತಂಡದ ಮುಂದಿಡಬೇಕು, ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಅಫಿಡವಿಟ್‌ನಲ್ಲಿ ಯಾವುದೇ ಆಧಾರರಹಿತ ಆರೋಪಗಳು ಸೇರದಂತೆ ಖಚಿತಪಡಿಸಿಕೊಳ್ಳಬೇಕು ಮತ್ತು ಸರ್ವೋಚ್ಚ ನ್ಯಾಯಾಲಯದ ಮುಂದೆ ನಿಖರವಾದ ವಾಸ್ತವಾಂಶವನ್ನು ಮಂಡಿಸಬೇಕು ಎಂದು ಅಲೋಕ್ ಕುಮಾರ್ ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದಾರೆ.

You cannot copy content of this page

Exit mobile version