ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಜಿಟಿಡಿ ಹೊರಕ್ಕೆ.. ಚನ್ನಪಟ್ಟಣ ಉಪಚುನಾವಣೆಯಿಂದ ಸಂಪೂರ್ಣ ದೂರವೇ ಉಳಿದ ಜಿಟಿಡಿ.. ಒಕ್ಕಲಿಗ ಐಡೆಂಟಿಟಿ; ಜೆಡಿಎಸ್ ನಿಂದ ಒಕ್ಕಲಿಗರೇ ಮೂಲೆಗುಂಪು..
ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನ ಗಮನಿಸಿದರೆ ಜೆಡಿಎಸ್ ನ ಒಳಗೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿದೆ. ಇದನ್ನು ಅನುಮಾನ ಎನ್ನುವುದಕ್ಕಿಂತ ನಿಖರವಾದ ಅಂಶಗಳನ್ನು ಪರಿಗಣಿಸಿದಂತೆ ಪಕ್ಷದೊಳಗಿನ ಆಂತರಿಕ ಕಚ್ಚಾಟ ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲು ದಿನ ಎಣಿಸಲಾಗುತ್ತಿದೆ. ಮಾಹಿತಿಯಂತೆ ಚನ್ನಪಟ್ಟಣ ಉಪಚುನಾವಣೆ ಒಂದೇ ಗಡುವು ಎನ್ನಲಾಗಿದೆ.
ಹೌದು. ಈ ಅನುಮಾನಗಳಿಗೆ ಪುಷ್ಟಿ ಕೊಡುವಂತೆ ಜೆಡಿಎಸ್ ನ ಹಿರಿಯ ನಾಯಕ ಜಿಟಿ ದೇವೇಗೌಡರನ್ನು ಜೆಡಿಎಸ್ ಪಕ್ಷ ಸಂಪೂರ್ಣವಾಗಿ ಕಡೆಗಣನೆ ಮಾಡಿದೆ. ಇಂದು ಬಿಡುಗಡೆ ಆದ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಜಿಟಿ ದೇವೇಗೌಡರನ್ನು ಹೊರಗಿಟ್ಟಿದ್ದು ಈ ಅನುಮಾನ ದಟ್ಟವಾಗುವಂತೆ ಮಾಡಿದೆ.
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಾಲಿ ಶಾಸಕರು, ಮಾಜಿ ಶಾಸಕರು, ಮಾಜಿ, ಹಾಲಿ ಸಂಸದರು, ಹಿರಿಯ ನಾಯಕರು, ಮಾಜಿ, ಹಾಲಿ ಎಂಎಲ್ಸಿಗಳು ಸೇರಿ ಒಟ್ಟು 40 ಮಂದಿ ಪ್ರಚಾರಕರ ಹೆಸರು ಸೇರಿಸಲಾಗಿದೆ. ಆದರೆ ಪಕ್ಷದ ಹಿರಿಯ ನಾಯಕ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಮತ್ತು ಹೆಚ್.ಡಿ.ರೇವಣ್ಣ ಅವರ ಹೆಸರು ಪಟ್ಟಿಯಲ್ಲಿ ಇಲ್ಲದದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರೇವಣ್ಣ ಆದರೂ ಮಗನ ಮೇಲಿರುವ ಅತ್ಯಾಚಾರ ಆರೋಪ, ಸ್ವತಃ ಅವರ ಮೇಲಿರುವ ಕಿಡ್ನಾಪ್ ಪ್ರಕರಣದ ಆರೋಪದ ಕಾರಣ ಅವರನ್ನು ಹೊರಗಿಡಲಾದರೆ, ಜಿಟಿಡಿ ದೂರವಿಟ್ಟಿರುವುದು ದೇವೇಗೌಡರ ಕುಟುಂಬದಿಂದ ಅಂತರ ಕಾಯ್ದುಕೊಂಡಿರುವುದು ಸ್ಪಷ್ಟ.
ಹೇಳಿಕೊಳ್ಳಲು ಜಿಟಿಡಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ. ಆದರೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅವರನ್ನ ಹೊರಗಿಟ್ಟಿರುವುದರ ಹಿಂದೆ ಬೇರೆಯೇ ಕಾರಣ ಇದೆ ಎನ್ನಲಾಗಿದೆ. ಕಳೆದ ಕೆಲವು ಹಿಂದೆ ಕೂಡ ಜಿಟಿ ದೇವೇಗೌಡ ಮುಡಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದೂ ಸಹ ಮತ್ತೊಮ್ಮೆ ದೇವೇಗೌಡರ ಕುಟುಂಬದ ಕಣ್ಣು ಕೆಂಪಗಾಗಿಸಿದೆ.
ದಸರಾ ಸಂದರ್ಭದಲ್ಲಿ ಮುಡಾ ಪ್ರಕರಣದ ಅಡಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ಆಗಿದೆ ಅವರು ರಾಜೀನಾಮೆ ನೀಡುತ್ತಾರಾ ಎಂದು ಸಮಾರಂಭದಲ್ಲಿ ವಾಗ್ದಾಳಿ ನಡೆಸಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇನ್ನು ಕೇವಲ ಎರಡು ದಿನಗಳ ಹಿಂದೆಯೂ ಹಾಸನದಲ್ಲಿ ಮಾಧ್ಯಮಗಳು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ “ನಾನೇನು ಚುನಾವಣೆಗೆ ಹೋಗಿಲ್ಲ. ನನ್ನದೇ ಕ್ಷೇತ್ರದ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದೇನೆ, ಹಾಗಾಗಿ ನಾನು ಯಾವುದೇ ಚುನಾವಣೆಗೆ ಹೋಗಿಲ್ಲ. ಹಾಗೂ ಇನ್ನೂ ಹೋಗುವ ತೀರ್ಮಾನ ಕೂಡ ಮಾಡಿಲ್ಲ” ಎಂದು ಉತ್ತರಿಸಿದ್ದರು
“ಚನ್ನಪಟ್ಟಣ ಉಪಚುನಾವಣೆ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ, ಪಕ್ಷದಿಂದಲೂ ನನಗೆ ಆಹ್ವಾನವಾಗಲಿ ಏನೂ ಬಂದಿಲ್ಲ. ಅದಕ್ಕೂ ಮೀರಿ ನಾನು ಹೋಗುವ ತೀರ್ಮಾನ ಕೂಡ ಮಾಡಿಲ್ಲ. ಕ್ಷೇತ್ರದಲ್ಲಿ ಕೆಲಸಗಳ ಒತ್ತಡದಲ್ಲಿ ಇದ್ದೀನಿ ಮುಂದೆ ನೋಡೋಣ. ಚುನಾವಣೆ ಬಗ್ಗೆ ಮಾಹಿತಿ ಪಡೆದಿಲ್ಲ, ಅದರ ಬಗ್ಗೆ ನಾನು ಮಾತನಾಡಲ್ಲ. ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದ್ದರು.
ಜೆಡಿಎಸ್ ಪಕ್ಷದಿಂದ ಒಕ್ಕಲಿಗರೇ ಮೂಲೆಗುಂಪು
ಹೇಳಿಕೇಳಿ ಒಂದು ಮಟ್ಟಿಗೆ ಹಳೆ ಮೈಸೂರು ಭಾಗದಲ್ಲಷ್ಟೇ ತನ್ನ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಒಕ್ಕಲಿಗ ಐಡೆಂಟಿಟಿ ಮೂಲಕವೇ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದೆ. ಅದರಲ್ಲೂ ದೇವೇಗೌಡರ ಕುಟುಂಬವೇ ಒಕ್ಕಲಿಗ ಸಮುದಾಯದ ಸುಪ್ರೀಂ ನಾಯಕತ್ವ ಎಂಬ ಸ್ವಯಂಘೋಷಿತ ನಿಯಮಗಳ ಮೂಲಕ ತನ್ನನ್ನು ತಾನು ಬಿಂಬಿಸಿಕೊಂಡು ಬಂದಿದೆ.
ಹೀಗಿರುವಾಗ ದೇವೇಗೌಡರ ಕುಟುಂಬ ಹೊರತುಪಡಿಸಿ ಒಕ್ಕಲಿಗರೇ ಜೆಡಿಎಸ್ ನಲ್ಲಿ ಹೆಚ್ಚು ಮೂಲೆಗುಂಪು ಆಗಿದ್ದಾರೆ. ಜಿಲ್ಲಾ ಮಟ್ಟದ ರಾಜಕೀಯ ಹೊರತುಪಡಿಸಿ ಯಾವ ಒಕ್ಕಲಿಗ ನಾಯಕರೂ ದೇವೇಗೌಡರ ಕುಟುಂಬ ಮೀರಿ ಗುರುತಿಸಿಕೊಳ್ಳುವುದನ್ನು ದೇವೇಗೌಡರ ಕುಟುಂಬ ಸಹಿಸುವುದಿಲ್ಲ ಎಂಬ ಆರೋಪ ಅವರ ಕುಟುಂಬದ ಮೇಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿದರೆ ಜಿಟಿ ದೇವೇಗೌಡ ಕೂಡ ಇದೇ ಸಾಲಿಗೆ ಸೇರಲಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.