Thursday, June 27, 2024

ಸತ್ಯ | ನ್ಯಾಯ |ಧರ್ಮ

ಸೆಪ್ಟೆಂಬರ್ 7 ರಿಂದ 150 ದಿನಗಳ ‘ಭಾರತ್ ಜೋಡೋ’ ಪಾದಯಾತ್ರೆ

ಮಹಾತ್ಮಾ ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳುವಳಿ ನೆನಪಿಸುವಂತೆ ಕಾಂಗ್ರೆಸ್ ಪಕ್ಷ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆಗೆ ರೂಪುರೇಷೆ ಸಿದ್ದಪಡಿಸಿದೆ. ಒಟ್ಟು 3500 ಕಿಲೋಮೀಟರ್ ದೂರದ ಸುಧೀರ್ಘ ಪಾದಯಾತ್ರೆ ಇದಾಗಿದ್ದು ಒಟ್ಟು 150 ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.

ಸೆಪ್ಟೆಂಬರ್ 7 ರಿಂದ ಈ ಪಾದಯಾತ್ರೆ ನಿಗದಿಯಾಗಿದ್ದು, ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷದ ಮರು ಸಂಘಟನೆಗೆ ಪಕ್ಷ ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆಸಿದೆ. “ಭಾರತ್ ಜೋಡೋ” ಹೆಸರಿನಲ್ಲಿ ನಡೆಯುವ ಈ ಯಾತ್ರೆಗೆ ರಾಹುಲ್ ಗಾಂಧಿಯವರ ನೇತೃತ್ವ ಇರಲಿದ್ದು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

80 ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿಯವರು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಲು ಕ್ವಿಟ್ ಇಂಡಿಯಾ ಚಳುವಳಿ ರೂಪಿಸಿದ್ದರು, ಅದಾಗಿ ಕೇವಲ 5 ವರ್ಷಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಆ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಅದೇ ಮಾದರಿಯಲ್ಲಿ ಕಾಂಗ್ರೆಸ್ ಸಂಘಟಿಸಲು ಈ ಯಾತ್ರೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ತಿಳಿಸಿದ್ದಾರೆ.

ಇಡೀ ಪಾದಯಾತ್ರೆಯಲ್ಲಿ ದೇಶದಲ್ಲಿ ತಲೆದೋರಿರುವ ಬಡತನ, ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆ, ಅಸಮಾನತೆ, ಧರ್ಮಾಂಧತೆ ಇಂತಹ ಪ್ರಮುಖ ವಿಚಾರಗಳನ್ನು ಇಟ್ಟು ಜನರ ಮುಂದೆ ಹೋಗುವ ನಿರ್ಧಾರಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಟ್ಟಾರೆ ಬಿಜೆಪಿ ಪಕ್ಷದ ಆಡಳಿತಕ್ಕೆ ಒಂದು ದೊಡ್ಡ ಮಟ್ಟದ ಪ್ರತಿರೋಧ ತೋರಿಸುವ ಉದ್ದೇಶದಿಂದ ಕಾಂಗ್ರೆಸ್ ಒಟ್ಟು 12 ರಾಜ್ಯಗಳಲ್ಲಿ ಈ ಪಾದಯಾತ್ರೆಗೆ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು