ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಹೊಸ ತಿರುವು : ಡಿಕೆ ಶಿವಕುಮಾರ್‌ಗೆ ಪಟ್ಟ ಕಟ್ಟಲು ದೆಹಲಿಯಲ್ಲಿ ಸರಣಿ ಸಭೆ

ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಇದೀಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್‌ನ ಸರಣಿ ಸಭೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯಗಳಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಭೆಯಲ್ಲಿ ಹಲವು ರಾಜಕೀಯ ಆಯ್ಕೆಗಳನ್ನು ಮುಂದಿಟ್ಟುಕೊಂಡು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ. ಈ ಬೆಳವಣಿಗೆಯ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಆಪ್ತ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಮಹತ್ವದ ನಿರ್ಧಾರಕ್ಕೆ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಾರದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಘೋಷಣೆ ಸಾಧ್ಯತೆ ಇದೆ ಎಂಬ ರಾಜಕೀಯ ವದಂತಿಗಳು ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿವೆ. ಈ ಬೆಳವಣಿಗೆಗೆ ಪೂರಕವಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯ ನಾಯಕತ್ವ ಹಾಗೂ ಉಪಮುಖ್ಯಮಂತ್ರಿ ಹುದ್ದೆಗಳ ಸಮೀಕರಣದ ಬಗ್ಗೆ ಮಹತ್ವದ ಚರ್ಚೆ ನಡೆಸುವ ಬಗ್ಗೆ ತೀವ್ರ ಚರ್ಚೆ ನಡೆದಿದೆ.

ಇದೇ ವೇಳೆ ಮೇ 28ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆರಂಭದಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆಗಳು ನಡೆದಿದ್ದರೂ, ಹೈಕಮಾಂಡ್ ಈಗ ನೇರ ನಾಯಕತ್ವ ಬದಲಾವಣೆಯತ್ತ ಒಲವು ತೋರಿದೆ ಎಂಬ ಅಭಿಪ್ರಾಯ ಕಾಂಗ್ರೆಸ್ ಮೂಲಗಳಿಂದ ವ್ಯಕ್ತವಾಗಿದೆ.

ಸಂಪುಟ ಪುನಾರಚನೆ ಮಾತ್ರ ನಡೆದರೆ ಸಿದ್ದರಾಮಯ್ಯ ಕನಿಷ್ಠ ಇನ್ನೊಂದು ವರ್ಷ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇರುತ್ತದೆ. ಇದರಿಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಲಭಿಸುವುದು ಮತ್ತಷ್ಟು ವಿಳಂಬವಾಗಬಹುದೆಂಬ ಆತಂಕ ಕಾಂಗ್ರೆಸ್‌ನ ಮತ್ತೊಂದು ಬಣದಲ್ಲಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಈಗ ಸೂಕ್ತ ಸಮಯ ಎಂದು ಹೈಕಮಾಂಡ್ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.

ಆದರೆ ಈ ಸೂಚನೆಗೆ ಸಿದ್ದರಾಮಯ್ಯ ಅವರು ಯಾವ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅವರು ಇಂದು ತಮ್ಮ ಆಪ್ತ ಶಾಸಕರು ಮತ್ತು ಬೆಂಬಲಿಗರ ಸಭೆ ಕರೆದಿದ್ದು, ಆ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸಬಹುದೆಂಬ ಮಾಹಿತಿ ಲಭ್ಯವಾಗಿದೆ.

ಇನ್ನೊಂದೆಡೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಪರಿಸ್ಥಿತಿ ಬಂದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸತೀಶ್ ಜಾರಕಿಹೊಳಿ ಅವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಅವರ ಬಣ ಬಲವಾಗಿ ಮುಂದಿಟ್ಟಿದೆ. ಕಾಂಗ್ರೆಸ್ ಸಂಘಟನೆಯಲ್ಲಿ ಪ್ರಸ್ತುತ ಇರುವ ಶಕ್ತಿ ಸಮೀಕರಣಕ್ಕೆ ಸಮತೋಲನ ತರಬಲ್ಲ ನಾಯಕ ಸತೀಶ್ ಜಾರಕಿಹೊಳಿ ಎಂಬುದು ಸಿದ್ದರಾಮಯ್ಯ ಬೆಂಬಲಿಗರ ವಾದವಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಇಂದು ನಡೆಯಲಿರುವ ಸಭೆಗಳು ಹಾಗೂ ದೆಹಲಿ-ಬೆಂಗಳೂರು ರಾಜಕೀಯ ಚಟುವಟಿಕೆಗಳ ಮೇಲೆ ರಾಜ್ಯ ರಾಜಕೀಯದ ಕಣ್ಣು ನೆಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು