Saturday, February 7, 2026

ಸತ್ಯ | ನ್ಯಾಯ |ಧರ್ಮ

ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ತಕ್ಷಣ ವೈದ್ಯರ ನೇಮಕಕ್ಕೆ ಒತ್ತಾಯ, ವೈದ್ಯಾಧಿಕಾರಿ ವಿರುದ್ಧ ಗಂಭೀರ ಆರೋಪ – ತನಿಖೆಗೆ ಆಗ್ರಹ

ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ಅಗತ್ಯ ವೈದ್ಯರನ್ನು ತಕ್ಷಣ ನೇಮಿಸಿ, ಇಗಿರುವ ವೈದ್ಯಾಧಿಕಾರಿಯನ್ನು ವಜಾಗೊಳಿಸಬೇಕು ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಆಗ್ರಹಿಸಿದರು. ಆಸ್ಪತ್ರೆಯ ಸಮಸ್ಯೆಗಳ ಕುರಿತು ಒಕ್ಕೂಟ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಲೆನಾಡು ಪ್ರದೇಶದ ಜನರು ಚಿಕಿತ್ಸೆಗಾಗಿ ಶೃಂಗೇರಿಗೆ ಬರುವುದು ಈಗಾಗಲೇ ಕಷ್ಟಕರವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರಿಯಾದ ವೈದ್ಯರಿಲ್ಲದಿರುವುದು ಜನರ ಜೀವಕ್ಕೆ ಅಪಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಯಂದಿರಿಗೆ ಗರ್ಭಿಣಿಯಾದ ದಿನದಿಂದ ಹೆರಿಗೆ ಆಗುವವರೆಗೂ ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿದ್ದು ಚಿಕಿತ್ಸೆ ಪಡೆಯುವುದು ಅತ್ಯಂತ ಅಗತ್ಯ. ಆದರೆ ಶೃಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಮುಖ್ಯವಾದ ಹೆರಿಗೆ ತಜ್ಞ ವೈದ್ಯರೇ ಇಲ್ಲ. ಜೊತೆಗೆ ಚರ್ಮ, ಮೂಳೆ, ಕಣ್ಣು ಸೇರಿದಂತೆ ಹಲವು ವಿಭಾಗಗಳ ವೈದ್ಯರ ಕೊರತೆಯೂ ಇದೆ ಎಂದು ತಿಳಿಸಿದರು. ಈ ಕುರಿತು ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಮೊದಲು ಇಲ್ಲಿದ್ದ ಒಳ್ಳೆಯ ವೈದ್ಯರನ್ನು ಇಗಿರುವ ವೈದ್ಯಾಧಿಕಾರಿಗಳೇ ಓಡಿಸಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಆಸ್ಪತ್ರೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಲೋಪವೆಸಗಿದ್ದು, ಅಲ್ಲಿನ ನೌಕರರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಆಸ್ಪತ್ರೆ ಭೇಟಿ ನೀಡಿ ವೈದ್ಯಾಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಗ್ರಾಮ ನೈರ್ಮಲ್ಯ ಸಮಿತಿ (VHSNC) ಮೂಲಕ ವರ್ಷಕ್ಕೆ ರೂ.10,000 ವರೆಗೆ ಹಣ ಬರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಈ ಹಣವನ್ನು ವೈದ್ಯಾಧಿಕಾರಿ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರಶ್ನಿಸಿದರೆ, “ರಾತ್ರಿ ಬರುತ್ತೆ, ಬೆಳಿಗ್ಗೆ ವಾಪಸ್ಸು ಹೋಗುತ್ತೆ” ಎಂಬ ಜವಾಬ್ದಾರಿ ಇಲ್ಲದ ಉತ್ತರ ನೀಡುತ್ತಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಹಣ ವೈದ್ಯಾಧಿಕಾರಿಗಳ ಖಾತೆಗೆ ಬರುತ್ತಿರುವುದರಿಂದ ಅದರ ಲೆಕ್ಕವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಹಣ ಪಾವತಿ ಆಗದೆ ಗ್ರಾಮ ನೈರ್ಮಲ್ಯ ಸಮಿತಿ ಸಭೆಗಳೂ ನಡೆಯುತ್ತಿಲ್ಲ. ಸಭೆಗೂ ಹಾಜರಾಗದ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಪಕ್ಕದ ಬೇಗಾರು ಮತ್ತು ನೆಮ್ಮಾರು ಗ್ರಾಮಗಳಲ್ಲಿ ಹಣ ಪಾವತಿ ಆಗಿರುವಾಗ ಶೃಂಗೇರಿಯಲ್ಲಿ ಯಾಕೆ ಪಾವತಿ ಆಗುತ್ತಿಲ್ಲ ಎಂಬ ಪ್ರಶ್ನೆಯೂ ಸಭೆಯಲ್ಲಿ ಕೇಳಿಬಂದಿತು.

ಆಸ್ಪತ್ರೆಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ಈ ಕುರಿತು ಗೌರವಾನ್ವಿತ ಶಾಸಕರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಸಭೆಯಲ್ಲಿ ಸುಬ್ರಮಣ್ಯ ಆಚಾರ್, ಉಮೇಶ್ ಹಿಂಡ್ರೋಳ್ಳಿ, ಜಗದೀಶ್ ಕಣದ ಮನೆ, ಕೆ.ಟಿ. ಮಂಜುನಾಥ್, ಪ್ರದೀಪ್ ಯಾಡದಳು, ಕೇಶವ ಗುತ್ತಳಿಕೆ, ಮುರಳಿದ ಪೈ, ಮದುಕರ್, ಶಿವಕುಮಾರ್ ಹೊಸಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page