Home ದೇಶ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ : SIR ಪ್ರಕ್ರಿಯೆ ನಿಲ್ಲಿಸಲು “ಕನ್ನಡ ಭಾರತೀಯರು” ಸಂಘಟನೆ...

ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ : SIR ಪ್ರಕ್ರಿಯೆ ನಿಲ್ಲಿಸಲು “ಕನ್ನಡ ಭಾರತೀಯರು” ಸಂಘಟನೆ ಮನವಿ

0

ಬೆಂಗಳೂರು : ಭಾರತ ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿ ಆಡಳಿತ ಪಕ್ಷದ ಪರವಾದ ಹಿತಾಸಕ್ತಿ ಎದ್ದು ಕಾಣುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

“ಕನ್ನಡ ಭಾರತೀಯರು” ಸಂಘಟನೆಯ ಪರವಾಗಿ ಡಾ. ರಮೇಶ್ ಬೆಲ್ಲಂಕೊಂಡ ಸಲ್ಲಿಸಿದ ಮನವಿಯಲ್ಲಿ, ದೇಶದ ಬಹುತೇಕ ಚುನಾವಣೆಗಳಲ್ಲಿ ಪ್ರಮುಖ ಸ್ಪರ್ಧಿಯಾಗಿ ಇರುವ ಬಿಜೆಪಿ ಪಕ್ಷವೇ ಚುನಾವಣಾ ಆಯುಕ್ತರನ್ನು ನೇಮಿಸುವ ಸ್ಥಿತಿಯು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ತನ್ನ ಮನವಿಯಲ್ಲಿ ಪ್ರಶ್ನಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರು ಇಂತಹ ನೇಮಕಾತಿಯನ್ನು ಒಪ್ಪಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ವಿರುದ್ಧವಲ್ಲವೇ ಎಂಬ ಪ್ರಶ್ನೆಯನ್ನೂ ಮನವಿಯಲ್ಲಿ ಎತ್ತಲಾಗಿದೆ. ಇದೇ ಹಿನ್ನೆಲೆಯಲ್ಲಿ, ಆಯುಕ್ತರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂಬ ಅಭಿಪ್ರಾಯವನ್ನೂ ಸಂಘಟನೆ ವ್ಯಕ್ತಪಡಿಸಿದೆ.

ಇದಲ್ಲದೆ, ದೇಶದಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಶೀಲನೆ (Special Intensive Revision – SIR) ಪ್ರಕ್ರಿಯೆಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ಮುಂದಾಗಿರುವ ಹಿನ್ನೆಲೆ, ಈ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗದ ಕ್ರಮಗಳು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆಯುಂಟುಮಾಡುವ ಸಾಧ್ಯತೆ ಇದೆ ಎಂದು ಮನವಿ ತಿಳಿಸಿದ್ದು, ಈ ಕುರಿತು ಸಂಬಂಧಿತ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಲಾಗಿದೆ.

You cannot copy content of this page

Exit mobile version