ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಇಡೀ ಸರ್ಕಾರ ಮತ್ತು ವಿರೋಧ ಪಕ್ಷದ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಳಿಗಾಲ ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆಯ ಬಿಸಿ ತಟ್ಟಲಿದ್ದು, ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ತಂತ್ರ ಹೆಣೆದಿವೆ. ಮುಡಾ ಮತ್ತು ವಕ್ಫ್ ಖಾತೆ ವಿಚಾರವನ್ನೇ ಮುನ್ನೆಲೆಗೆ ತಂದು ಅಧಿವೇಶನದಲ್ಲಿ ಪ್ರತಿಭಟನೆಗೆ ಮುಂದಾಗುವ ತಂತ್ರ ಹೆಣೆದಿವೆ. ಅಷ್ಟೇ ಅಲ್ಲದೆ ಬಾಣಂತಿಯರ ಸಾವು, ಶಿಶುಗಳ ಸಾವು ಸಹ ಸರ್ಕಾರವನ್ನು ಗುರಿಯಾಗಿಸುವ ಹೊಸ ವಿಷಯಗಳಾಗಿ ಸಿಕ್ಕಿವೆ.
ಸರ್ಕಾರಕ್ಕೆ ಸುವರ್ಣಸೌಧದ ವಿರೋಧ ಪಕ್ಷಗಳ ತಲೆಬಿಸಿ ಒಂದು ಕಡೆಯಾದರೆ, ಸರ್ಕಾರದ ವಿರುದ್ಧ 11 ಸಂಘಟನೆಗಳು ವಿವಿಧ ವಿಚಾರಗಳ ಅಡಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಪ್ರತಿಭಟನೆಗೆ ಎರಡು ಕಡೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಕೊಂಡುಸಕೊಪ್ಪ, ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ. 3 ಸಂಘಟನೆಗಳಿಗೆ ಕೊಂಡುಸಕೊಪ್ಪ ಮತ್ತು 8 ಸುವರ್ಣಗಾರ್ಡನ್‌ನಲ್ಲಿ ಪ್ರತಿಭಟನೆಗೆ ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿಗೆ ಬಿಸಿ ತುಪ್ಪವಾಗಿರುವ ಯತ್ನಾಳ್, ಸದನದಲ್ಲಿ ಯಾವ ರೀತಿ ವಿರೋಧ ಪಕ್ಷಗಳ ಪ್ರತಿಭಟನೆಗೆ ಸ್ಪಂದಿಸುತ್ತಾರೆ ಎಂಬುದು ಕಮಲ ಪಡೆಗೆ ಆತಂಕ ತಂದೊಡ್ಡಿದೆ. ಬಿಜೆಪಿ ನಾಯಕರು ಅನಿವಾರ್ಯವಾಗಿ ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಯುದ್ಧಕ್ಕಿಳಿದು ಸರ್ಕಾರಕ್ಕೆ ಖೆಡ್ಡಾ ತೋಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.