ಪೆಸಿಫಿಕ್ ಮಹಾಸಾಗರದಲ್ಲಿ ತೀವ್ರ ಹವಾಮಾನ ಬದಲಾವಣೆ – ರಾಜ್ಯಕ್ಕೆ ಮುಂಗಾರು ಹಿನ್ನೆಡೆ ಬರಗಾಲದ ಆತಂಕ

ಬೆಂಗಳೂರು : ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗಿರುವ ತೀವ್ರ ಹವಾಮಾನ ಬದಲಾವಣೆ ಹಾಗೂ ‘ಸೂಪರ್ ಎಲ್‌ನಿನೋ’ (Super El Nino ) ಎಫೆಕ್ಟ್‌ನಿಂದಾಗಿ ರಾಜ್ಯದಲ್ಲಿ (Karnataka ) ಈ ಬಾರಿ ಮುಂಗಾರು ಮಳೆ (Monsoon Rain ) ತೀವ್ರವಾಗಿ ಕೈಕೊಟ್ಟಿದ್ದು, ಕರ್ನಾಟಕ ಭೀಕರ ಬರಗಾಲದ (Drought ) ಹೊಸ್ತಿಲಲ್ಲಿ ಬಂದು ನಿಂತಿದೆ.

ನೈಋತ್ಯ ಮುಂಗಾರು ಮಾರುತಗಳು ಸಂಪೂರ್ಣ ಕ್ಷೀಣಿಸಿರುವುದರಿಂದ ರಾಜ್ಯಾದ್ಯಂತ ಬರೋಬ್ಬರಿ ಶೇಕಡಾ 42 ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಆತಂಕಕಾರಿ ಮಾಹಿತಿ ನೀಡಿದೆ. ಜೂನ್ ತಿಂಗಳು ಕಳೆಯುತ್ತಾ ಬಂದರೂ ಕರಾವಳಿ ಮತ್ತು ಮಲೆನಾಡು ಸೇರಿದಂತೆ ಒಟ್ಟು 19ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಅನ್ನದಾತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಕಾವೇರಿ, ಕೃಷ್ಣಾ ಮತ್ತು ತುಂಗಭದ್ರಾ ಬೇಸಿನ್‌ನ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಕಬಿನಿ ಹಾಗೂ ಕೃಷ್ಣಾ ನದಿ ಪಾತ್ರಗಳು ಈಗಾಗಲೇ ನೀರಿಲ್ಲದೆ ಒಣಗುತ್ತಿವೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ. 23 ರಷ್ಟು ಮಾತ್ರ ನೀರು ಬಾಕಿ ಉಳಿದಿರುವುದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಸೃಷ್ಟಿಯಾಗುವ ಭೀತಿ ಎದುರಾಗಿದೆ.

ಮತ್ತೊಂದೆಡೆ, ಮಂಡ್ಯ, ಧಾರವಾಡ, ತುಮಕೂರು ಸೇರಿದಂತೆ ಹಳೇ ಮೈಸೂರು ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಭಾರಿ ಹೊಡೆತ ಬಿದ್ದಿದೆ. ಮಳೆ ಕೊರತೆಯಿಂದಾಗಿ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯವೇ ಸ್ಥಗಿತಗೊಂಡಿದ್ದು, ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಮಳೆಯಿಲ್ಲದೆ ಒಣಗಿ ಕರಟಿಹೋಗುತ್ತಿವೆ. ಹವಾಮಾನ ತಜ್ಞರ ಪ್ರಕಾರ, ಪೆಸಿಫಿಕ್ ಮಹಾಸಾಗರದ ಪೂರ್ವ ಭಾಗದಲ್ಲಿ ಮೇಲ್ಮೈ ತಾಪಮಾನವು ಅತಿಯಾಗಿ ಏರಿಕೆಯಾಗಿರುವುದರಿಂದ ಭಾರತದ ಮುಂಗಾರು ಮಾರುತಗಳ ದಿಕ್ಕು ತಪ್ಪಿದ್ದು, ಇದು ಮುಂದಿನ ದಿನಗಳಲ್ಲೂ ಮುಂದುವರಿದರೆ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕಂದಾಯ ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮಳೆ ಕೊರತೆಯಿರುವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಜಂಟಿ ಸಮೀಕ್ಷೆಗೆ ಮುಂದಾಗುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು