Home ದೆಹಲಿ ರಾಶಿಬಿದ್ದಿವೆ ‘ಎಕ್ಸಿಕ್ಯೂಷನ್’ ಅರ್ಜಿಗಳು: ದಾವೆಯಲ್ಲಿ ಗೆದ್ದರೂ ತೀರ್ಪು ಜಾರಿಯಲ್ಲಿ ತೀವ್ರ ವಿಳಂಬ

ರಾಶಿಬಿದ್ದಿವೆ ‘ಎಕ್ಸಿಕ್ಯೂಷನ್’ ಅರ್ಜಿಗಳು: ದಾವೆಯಲ್ಲಿ ಗೆದ್ದರೂ ತೀರ್ಪು ಜಾರಿಯಲ್ಲಿ ತೀವ್ರ ವಿಳಂಬ

0

ದೆಹಲಿ: ನ್ಯಾಯಾಲಯಗಳು ಹೊರಡಿಸಿದ ಆದೇಶಗಳನ್ನು ಜಾರಿಗೊಳಿಸಲು ಸಲ್ಲಿಸಲಾದ ಲಕ್ಷಾಂತರ ಎಕ್ಸಿಕ್ಯೂಷನ್ ಪಿಟಿಷನ್‌ಗಳು (Execution Petitions) ದೇಶದ ವಿವಿಧ ನ್ಯಾಯಾಲಯಗಳಲ್ಲಿ ರಾಶಿ ಬೀಳುತ್ತಿವೆ.

ತೀರ್ಪುಗಳು ಮತ್ತು ಆದೇಶಗಳ ಜಾರಿಯಲ್ಲಿ ಆಗುತ್ತಿರುವ ತೀವ್ರ ವಿಳಂಬವನ್ನು ನ್ಯಾಯಾಲಯಗಳ ಗಮನಕ್ಕೆ ತರಲು ಮತ್ತು ಅವುಗಳನ್ನು ಶೀಘ್ರವಾಗಿ ಜಾರಿಗೊಳಿಸಲು ಕೋರಿ ಈ ಎಕ್ಸಿಕ್ಯೂಷನ್ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ಇವುಗಳನ್ನು ಮಿನಿ ಸಿವಿಲ್ ದಾವೆಗಳು ಎಂದೂ ಕರೆಯಲಾಗುತ್ತದೆ. ಇಂತಹ ಸುಮಾರು 8.82 ಲಕ್ಷ ಅರ್ಜಿಗಳು ದಶಕಗಳಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು

ಎಕ್ಸಿಕ್ಯೂಷನ್ ಅರ್ಜಿಗಳಲ್ಲಿ 39 ಪ್ರತಿಶತದಷ್ಟು ಕೇವಲ ಮಹಾರಾಷ್ಟ್ರದಲ್ಲಿಯೇ ಬಾಕಿ ಉಳಿದಿರುವುದು ಗಮನಾರ್ಹ. ಅಂದರೆ, ಆ ರಾಜ್ಯದಲ್ಲಿ 3,41,000 ಅರ್ಜಿಗಳು ಅಂತಿಮ ತೀರ್ಪಿಗಾಗಿ ಕಾಯುತ್ತಿವೆ.

ದೇಶದಲ್ಲಿ ಒಟ್ಟು ಬಾಕಿ ಉಳಿದಿರುವ ಈ ರೀತಿಯ ಅರ್ಜಿಗಳಲ್ಲಿ ಮೂರನೇ ಎರಡರಷ್ಟು ಭಾಗವು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಸೇರಿವೆ.

ತಮಿಳುನಾಡು: 86,148

ಕೇರಳ: 82,997

ಆಂಧ್ರಪ್ರದೇಶ: 68,137

ಮಧ್ಯಪ್ರದೇಶ: 52,218 ಅರ್ಜಿಗಳು ಅಂತಿಮ ಆದೇಶಗಳಿಗಾಗಿ ಕಾಯುತ್ತಿವೆ.

ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯದ ಡಿಕ್ರಿಗಳನ್ನು ಜಾರಿಗೊಳಿಸುವಲ್ಲಿ ಆಗುತ್ತಿರುವ ತೀವ್ರ ವಿಳಂಬವನ್ನು ತಡೆಯಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಆದೇಶ ನೀಡಿದೆ. ಎಕ್ಸಿಕ್ಯೂಷನ್ ಅರ್ಜಿಗಳನ್ನು ಆರು ತಿಂಗಳೊಳಗೆ ಇತ್ಯರ್ಥಪಡಿಸಲು ಅಗತ್ಯ ಕಾರ್ಯವಿಧಾನವನ್ನು ಸ್ಥಾಪಿಸುವಂತೆ ಕೋರಿದೆ. ದೇಶದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಎಕ್ಸಿಕ್ಯೂಷನ್ ಅರ್ಜಿಗಳು ಬಾಕಿ ಉಳಿದಿವೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಸಮಸ್ಯೆಯ ಸ್ವರೂಪ

ಸಿವಿಲ್ ದಾವೆಗಳಲ್ಲಿ ಎಕ್ಸಿಕ್ಯೂಷನ್ ಅರ್ಜಿಗಳೇ ಕೊನೆಯ ಹಂತವಾಗಿವೆ. ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವಂತೆ ಎದುರು ಪಕ್ಷದ ಮೇಲೆ ಒತ್ತಡ ಹೇರಲು ಡಿಕ್ರಿ (ತೀರ್ಪು) ಪಡೆದವರು ಈ ಅರ್ಜಿಗಳನ್ನು ಸಲ್ಲಿಸುತ್ತಾರೆ. ಈ ರೀತಿಯ ಅರ್ಜಿಗಳಲ್ಲಿ ಹಣ ವಸೂಲಾತಿ ಮತ್ತು ಆಸ್ತಿ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಿರುತ್ತವೆ.

ಎಕ್ಸಿಕ್ಯೂಷನ್ ಅರ್ಜಿಗಳ ಇತ್ಯರ್ಥದಲ್ಲಿ ಆಗುತ್ತಿರುವ ತೀವ್ರ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಂಗದ ಆದೇಶಗಳನ್ನು ಜಾರಿಗೊಳಿಸಲು ವಿಫಲವಾದರೆ ಕೋರ್ಟ್ ಡಿಕ್ರಿಗಳಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. ಪ್ರಕರಣ ಗೆದ್ದ ನಂತರವೂ ಆದೇಶಗಳ ಜಾರಿಗಾಗಿ ಡಿಕ್ರಿ ಹೋಲ್ಡರ್‌ಗಳು ದಶಕಗಳ ಕಾಲ ಕಾಯಬೇಕಾಗಿದೆ.

ಸಿವಿಲ್ ದಾವೆಯಲ್ಲಿ ಕೋರ್ಟ್ ನೀಡಿದ ಡಿಕ್ರಿಯನ್ನು ಪ್ರಕರಣ ಸೋತವರು ಜಾರಿಗೊಳಿಸುವುದು ಬಹಳ ವಿರಳ ಎಂದು ಟ್ರಯಲ್ ಕೋರ್ಟ್‌ಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರು ಹೇಳುತ್ತಾರೆ. ಏಕೆಂದರೆ, ಗೆದ್ದವರು ಸಲ್ಲಿಸುವ ಎಕ್ಸಿಕ್ಯೂಷನ್ ಅರ್ಜಿಗಳು ಮಿನಿ ಸಿವಿಲ್ ದಾವೆಯಂತಿದ್ದು, ಅದರ ವಿಚಾರಣೆಗೂ ವರ್ಷಗಳು ಬೇಕಾಗುತ್ತವೆ.

You cannot copy content of this page

Exit mobile version