Wednesday, August 14, 2024

ಸತ್ಯ | ನ್ಯಾಯ |ಧರ್ಮ

ಮಲೆನಾಡಿನ ಅವೈಜ್ಞಾನಿಕ ರಸ್ತೆ ಯೋಜನೆಗಳು ಮತ್ತದರ ಪರಿಣಾಮದ ತೀವ್ರತೆ.!

ಸಕಲೇಶಪುರದ ಆನೆಮಹಲ್‌ನಲ್ಲಿ ನಿಂತಿರುವ ವಾಹನಗಳ ಸಾಲುಗಳು, ಮೂರ್ನಾಲ್ಕು ದಿನಗಳಿಂದ ಸಕಲೇಶಪುರದ ಮಟ್ಟಿಗಿರುವ ದೊಡ್ಡ ಸಮಸ್ಯೆ ಇದು. ಮಂಗಳೂರು ಕಡೆಗೆ ಹೋಗುವಾಗ,ಆನೆಮಹಲ್ ಮತ್ತು ಎತ್ತಿನಹೊಳೆಯಿಂದ ದೊಡ್ಡತಪ್ಪಲುವರೆಗಿನ ವಿಪರೀತ ಗುಡ್ಡಕುಸಿತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಕಾರಣವಾದರೂ ಅದಕ್ಕೆ ಇಲ್ಲಿನ ಅಧಿಕಾರಿವರ್ಗದ ಸೋಮಾರಿತನವೇ ಕಾರಣವೆನ್ನಬಹುದು.

2019 ರಲ್ಲಿ NH 75 ಕಾಮಗಾರಿಗಾಗಿ ಗುಡ್ಡಕೊರೆಯಲಾಗಿತ್ತು. ಆ ವರ್ಷ ವಿಪರೀತ ಮಳೆಯಾದಾಗ ದೊಡ್ಡತಪ್ಪಲು ಬಳಿ ಗುಡ್ಡ ಕುಸಿತಕ್ಕೆ ಸಿಲುಕಿದ ಬುಲೆಟ್ ಟ್ಯಾಂಕರೊಂದು ಜಾರಿಕೊಂಡು ಪ್ರಪಾತದಲ್ಲಿದ್ದ ಕೆರೆಯಲ್ಲಿ ಮುಳುಗಿ ಚನ್ನರಾಯಪಟ್ಟಣ ಮೂಲದ ಇಬ್ಬರು ಚಾಲಕರು ಜೀವ ಕಳೆದುಕೊಂಡಿದ್ದರು. ಈಜುತಜ್ಞರನ್ನು ಕರೆಸಿಕೊಂಡು ಇಡೀ ಕೆರೆಗೆ ಮೋಟಾರಿಟ್ಟು ಕೆರೆನೀರು ಕಾಲಿಮಾಡಿದ ನಂತರ ಶವ ಪತ್ತೆಹಚ್ಚಲಾಗಿತ್ತು. ಸಕಲೇಶಪುರದ ಸಾರ್ವಜನಿಕರು, ಸಂಘಸಂಸ್ಥೆಗಳ ಸಹಕಾರದಿಂದ ವಾರಗಟ್ಟಲೆಯ ಪರಿಶ್ರಮದ ನಂತರ ಶವಗಳು ಸಿಕ್ಕಿದವು. ಈ ಘಟನೆ ಸಕಲೇಶಪುರದ ಯಾತನಾಮಯ ದುರಂತಗಳ ಪಟ್ಟಿಗೆ ಸೇರಿಕೊಂಡವು. ಅದರ ಪರಿಣಾಮ ಈಗ ವಿಪರೀತ ಮಳೆಯ ಕಾರಣವನ್ನಿಟ್ಟುಕೊಂಡು ಆರಕ್ಷಕರು ರಾತ್ರಿ ಸಂಚಾರಕ್ಕೆ ನಿಷೇದ ಹಾಕಿದ್ದಾರೆ. ಅಸಲಿಗೆ ಸಕಲೇಶಪುರದಲ್ಲಿ ಸ್ಥಳೀಯಾಡಳಿತದ ಬಹುತೇಕ ಹಿರಿಯ ಅಧಿಕಾರಿಗಳು ಬದಲಾಗಿದ್ದಾರೆ. ಬಹುಶಃ ಹೊಸಬರಿಗೆ ಈ ಕರಾಳ ಇತಿಹಾಸಗಳು ಗೊತ್ತಿರಲಿಕ್ಕಿಲ್ಲ. ಆದರೆ ಹತ್ತಾರು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿರುವ ಕಿರಿಯ ಅಧಿಕಾರಿಗಳು ಇದನ್ನು ಗಮನಿಸಿರಲಿಲ್ಲವೆಂದಲ್ಲ. ಎತ್ತಿನಹೊಳೆಯಿಂದ ದೊಡ್ಡತಪ್ಪಲುವರೆಗೆ ಈ ಬಾರಿ ಕೂಡ ವಿಪರೀತವಾಗಿ ಕಡಿದಾದ ರೀತಿಯಲ್ಲಿ ಮಣ್ಣು ಕೊರೆದಿದ್ದಾರೆ. ಮಳೆಗಾಲದ ಅವಾಂತರಗಳ ಬಗ್ಗೆ ಜ್ಞಾನವಿದ್ದರೂ ನಮಗೇನಾಬೇಕೆನ್ನೋ ಮೈಮರೆವಿನವರೇ ಜಾಸ್ತಿ. Road tax ನಿಂದ ಬರುವ ಆದಾಯದಲ್ಲಿ ಇವರಿಗೂ ವೇತನ ಸಿಗುತ್ತದೆನ್ನುವ ಪರಿಜ್ಞಾನ ಇಲ್ಲದೇ ಬದುಕುವ ಮತ್ತು ಮಳೆಗಾಲದಲ್ಲಿ ಸಾಮಾನ್ಯರಿಗಾಗುವ ಅನಾನುಕೂಲದ ಬಗ್ಗೆ ಯೋಚನೆಯೂ ಇಲ್ಲದಿರುವ, ತಿನ್ನುವ ಅನ್ನ ಎಲ್ಲಿಂದ ಬರುತ್ತದೆನ್ನುವ ಋಣಾನುಭಂದ ಗೊತ್ತಿಲ್ಲದವರೇ ಸಕಲೇಶಪುರದ ಸರ್ಕಾರಿ ಕಛೇರಿಗಳಲ್ಲಿ ಮೊಕ್ಕಾಂ ಹೂಡಿರುವುದು. ಇರಲಿ.



2019 ರ ಅನಾಹುತದ ನೆನಪು ಇದ್ದಿದ್ದರೆ ಈ ವರ್ಷ ಮತ್ತೆ ರಸ್ತೆಯನ್ನು ಕಡಿದಾದ ರೀತಿಯಲ್ಲಿ ಕೊರೆಯುತ್ತಿರಲಿಲ್ಲ,ಇಲ್ಲಿನ ಮಳೆ,ಮಣ್ಣಿನ ಗುಣ. ನೀರು ಹರಿಯುವ ದಿಕ್ಕು. ರಸ್ತೆಯಲ್ಲಿ ಸಂಚರಿಸುವ ವಾಹನಗಳ ತೂಕ ಎಲ್ಲವನ್ನೂ ಗಮನಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆದೇ ಇಲ್ಲ. ಎತ್ತಿನಹೊಳೆಯಿಂದ ದೊಡ್ಡತಪ್ಪಲು ಹೋಗುವಾಗ ಬಲಭಾಗದಲ್ಲಿ ಇರುವುದು ಎತ್ತರದ ಪ್ರದೇಶ,ಅದು ಬೃಹದಾಕಾರದ ಬಂಡೆಯಮೇಲೆ ಮೈಲ್ಮೈಯನ್ನು ಹೊದ್ದುಕೊಂಡು ಒಂದು ದೊಡ್ಡ ಗುಡ್ಡವಿದೆ. ಮಣ್ಣಿನ ಮೇಲ್ಪದರ ಕಲ್ಲುಮಿಶ್ರಿತ ಗ್ರಾವಲ್ ಮಣ್ಣುಗಳಲ್ಲಿ ಕಾಡು ಬೆಳೆದು ಬೇರುಗಳಿಂದ ಹಿಡಿದಿಟ್ಟುಕೊಂಡಿರುತ್ತದೆ. ಅದರ ಐದಾರು ಅಡಿ ಕೆಳಗೆ ಸಿಗುವುದೇ ಕೆಂಪು ಜೇಡಿಮಣ್ಣು. ಇದಕ್ಕೆ ಬಹುತೇಕ ಅಂಟುರೀತಿಯ ಗುಣವಿರುತ್ತದೆ. ಕೆಂಪು ಜೇಡಿಮಣ್ಣು ಮತ್ತು ಬೃಹತ್ ಬಂಡೆಯ ನಡುವೆ ಬಿಳಿ ಜೇಡಿಮಣ್ಣು ಇಲ್ಲಿ ಸಾಮಾನ್ಯ. ಮತ್ತು ಇದೇ ಬಿಳಿಮಣ್ಣು ಅಪಾಯಕಾರಿ ಕೂಡ. ಈ ಪ್ರದೇಶದ ಗುಡ್ಡಕುಸಿತಕ್ಕೆ ಅಸಲಿ ಕಾರಣ ಕೂಡ ಇದೇ ಬಿಳಿಮಣ್ಣು, ಈ ಮಣ್ಣು ಎಷ್ಟು ನಯವಾಗಿರುತ್ತದೆಯೆಂದರೆ ಬರಿಗೈಯಲ್ಲೂ ಕೂಡ ಇದನ್ನು ಕೊರೆಯುವಷ್ಟು ಮೆತ್ತಗಿರುತ್ತದೆ. ಸ್ವಲ್ಪವೇ ನೀರು ಸಿಕ್ಕರೆ ಸಾಕು ಪಾಯಸದ ರೀತಿಯಲ್ಲಿ ಹರಡುವಂತ ಗುಣ ಈ ಮಣ್ಣಿನದ್ದು. ಮೇಲ್ಮೈನಲ್ಲಿರುವ ಗ್ರಾವೆಲಿಗೆ ಬಿದ್ದ ನೀರು ಸರಾಗವಾಗಿ ಜೇಡಿಮಣ್ಣಿನವರೆಗೂ ಬಂದು ಅಲ್ಲಿಂದ ಕೆಳಗೆ ವಿಶಾಲವಾದ ಬಂಡೆ ಹರಡಿಕೊಂಡಿದ್ದು ಹೀರಿಕೊಳ್ಳುವ ವ್ಯವಸ್ಥೆಯೇ ಇಲ್ಲದಿರುವಾಗ, ಬಂಡೆಯ ಮೇಲಿರುವ ಬಿಳಿಮಣ್ಣಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲದಿರುವಾಗ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಜ್ಞಾನ ಇಲ್ಲದಿರುವ ಇಂಜಿನಿಯರ್‌ಗಳು ಈ ರಸ್ತೆಯಲ್ಲಿ ಸಾಗುವ ವಾಹನ ಚಾಲಕರಿಗೆ ದಾರಿಹೋಕರಿಗೆ ಯಮರಾಜನಾಗಿ ಕಾಡುತ್ತಿದ್ದಾರೆ.



ಐವತ್ತು ವರ್ಷಗಳ ಹಿಂದೆ ನಡೆದ NH 48 ಕಾಮಗಾರಿ ನಡೆಸುವಾಗ ಯಂತ್ರಗಳು ಕಡಿಮೆ ಇದ್ದವು, ತಂತ್ರಜ್ಞಾನದ ಕೊರತೆ ಇದ್ದವು. ಆದರೆ ಇಲ್ಲಿನ ಭೂಪ್ರದೇಶದ ಅಪಾರ ಅನುಭವ ಇಟ್ಟುಕೊಂಡ ಅನುಭವಿ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಕೆಲಸ ನಡೆಯುತ್ತಿದ್ದವು. ಕಾಮಗಾರಿಗಳು ಮಾನವ ಸಂಪನ್ಮೂಲಗಳಿಂದಲೇ ನಡೆಯುತ್ತಿರುವಾಗ ಆಯಾ ಪ್ರದೇಶದ Positives ಮತ್ತು Negativity ಬಗ್ಗೆ ಅಲ್ಲೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಯಂತ್ರಗಳಿಗೆ ಆ ಗುಣ ಇರುವುದಿಲ್ಲ,ವಿಪರೀತವಾಗಿ ಯಂತ್ರಗಳನ್ನು ಅವಲಂಬಿಸಿರುವುದು. ಮತ್ತು ಹಣ ಮತ್ತು ಜಾತಿ ಪ್ರಭಾವಗಳಿಂದ ಇಂಜಿನಿಯರ್‌ಗಳಾಗಿ ಅಧಿಕಾರಿಗಳಾಗಿ ಬಂದವರ ವಿಪರೀತ ಹಣದಾಹವೇ ಈ ಎಲ್ಲಾ ಸಮಸ್ಯೆಗೆ ಕಾರಣವೆನ್ನಬಹುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page