ಕೇರಳದ ಕೊಟ್ಟಾಯಂ ಜಿಲ್ಲೆಯ ಐಟಿ ವೃತ್ತಿಪರನ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ಸಂಭವಿಸಿದೆ. ಒಂದು ತಿಂಗಳ ಹಿಂದೆ ತಿರುವನಂತಪುರಂನಲ್ಲಿ ಲಾಡ್‌ಜ್‌ನಲ್ಲಿ ಮೃತಪಟ್ಟಿದ್ದ 26 ವರ್ಷದ ಟೆಕ್ಕಿ ಆತ್ಮಹತ್ಯೆಗೆ ಮೊದಲು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದ ಸಂದೇಶದಲ್ಲಿ ಆರೆಸ್ಸೆಸ್ ಶಾಖಾದಲ್ಲಿ ತಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆನೆಂದು ಆರೋಪಿಸಿದ್ದನು.
ಪೊಲೀಸರ ತನಿಖೆಯಲ್ಲಿ ಟೆಕ್ಕಿಯ ಲ್ಯಾಪ್‌ಟಾಪ್‌ನಿಂದ ದೊರೆತ ವೀಡಿಯೊದಲ್ಲಿ ಆರೋಪಿಯ ಹೆಸರನ್ನು ಉಲ್ಲೇಖಿಸಿದ್ದರಿಂದ, ಈಗ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಾಂಜಿರಪಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸಾಜು ವರ್ಗೀಸ್ ತಿಳಿಸಿದ್ದಾರೆ.
ಪೋಕ್ಸೊ ಕಾಯ್ದೆ ಜಾರಿಗೆ ಮುಂಚೆ ಈ ಘಟನೆ ನಡೆದಿದೆಯೆಂದು ಪೊಲೀಸರು ಹೇಳಿದ್ದಾರೆ. ಗ್ರಹಿಸಿರುವ ಸಾಕ್ಷ್ಯ ಮತ್ತು ಕಾನೂನು ಸಲಹೆಯ ಆಧಾರದ ಮೇಲೆ ಮಾತ್ರ ಬಂಧನ ಮತ್ತು ಚಾರ್ಜ್‌ಶೀಟ್ ಸಲ್ಲಿಕೆ ನಡೆಯಲಿದೆ.
ಸಂತ್ರಸ್ತನ ಕುಟುಂಬವು ಈ ಪ್ರಕರಣದಲ್ಲಿ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದ್ದು, ಆರೋಪಿ ಹಲವು ವರ್ಷಗಳ ಕಾಲ ಸಂತ್ರಸ್ತನ ಮನೆ ಸಮೀಪ ವಾಸಿಸುತ್ತಿದ್ದನೆಂದು ಶಂಕಿಸಲಾಗಿದೆ.
