ಮಧ್ಯಪ್ರದೇಶದಲ್ಲಿ ಗರಿಷ್ಠ ಪ್ರಕರಣಗಳು 2022ರಲ್ಲಿ 64,469 ಪ್ರಕರಣಗಳು ದಾಖಲು
ದೆಹಲಿ, ಅಕ್ಟೋಬರ್ 17: ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು (Child Abuse Cases) 2017ರಿಂದ 2022ರ ಅವಧಿಯಲ್ಲಿ ಶೇ. 94 ರಷ್ಟು ಹೆಚ್ಚಾಗಿವೆ.
ಪೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 33,210 ರಿಂದ 64,469 ಕ್ಕೆ ಏರಿಕೆಯಾಗಿದೆ. ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ, ಶಿಕ್ಷೆಯ ಪ್ರಮಾಣವು ಶೇ. 90 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಇದು ಮತ್ತಷ್ಟು ಬಲವಾದ ಕಾನೂನು ಕ್ರಮಗಳು ಮತ್ತು ಪ್ರಕರಣಗಳ ದಾಖಲಾತಿಯ ಅಗತ್ಯವನ್ನು ಸೂಚಿಸುತ್ತದೆ.
ಚೈಲ್ಡ್‌ಲೈಟ್ ಗ್ಲೋಬಲ್ ಚೈಲ್ಡ್ ಸೇಫ್ಟಿ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿದ 2025ರ ವರದಿಯ ಪ್ರಕಾರ, ಅಪರಾಧ ಅಂಕಿಅಂಶಗಳಲ್ಲಿನ ಪಾರದರ್ಶಕತೆಯು ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ಮತ್ತು ತ್ವರಿತ ಕ್ರಮಕ್ಕೆ ದಾರಿ ಮಾಡಿಕೊಡುತ್ತದೆ.
ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ವರದಿಯು ಜಾಗತಿಕ ಮಟ್ಟದ ಮಾನವ ದುರಂತ ಎಂದು ವಿವರಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು 2012 ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂದಿತು. 2017 ರಲ್ಲಿ 33,210 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದರೆ, 2022 ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಂಡಿದೆ. ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ ಎಂದರೆ ಸಂತ್ರಸ್ತರು ಮೌನ ಮುರಿಯುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬೇಕು. ಆದಾಗ್ಯೂ, ದಾಖಲಾಗದ ಪ್ರಕರಣಗಳು ಇನ್ನೂ ಹಲವಾರು ಇರಬಹುದು.
ಪ್ರತಿ 8 ಮಕ್ಕಳಲ್ಲಿ ಒಬ್ಬರು ಸಂತ್ರಸ್ತರು:
ಭಾರತ, ನೇಪಾಳ ಮತ್ತು ಶ್ರೀಲಂಕಾದಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ 8 ಮಕ್ಕಳಲ್ಲಿ ಒಬ್ಬರು ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿ ಹೇಳಿದೆ. ಈ ಮೂರು ದೇಶಗಳಲ್ಲಿ ಸುಮಾರು 5.40 ಕೋಟಿ ಮಕ್ಕಳು ಲೈಂಗಿಕ ಅಪರಾಧಗಳ ಸಂತ್ರಸ್ತರಾಗಿದ್ದಾರೆ ಎಂದು ವರದಿ ತಿಳಿಸಿದೆ. ಇದು ಈ ಮೂರು ದೇಶಗಳ ಒಟ್ಟು ಮಕ್ಕಳ ಜನಸಂಖ್ಯೆಯ ಶೇ. 12.5 ರಷ್ಟಿದೆ.
2024 ರಲ್ಲಿ ದಕ್ಷಿಣ ಏಷ್ಯಾದಲ್ಲಿ ಅತಿ ಹೆಚ್ಚು ‘ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳ’ (Child Sexual Abuse Material – CSAM) ಪ್ರಕರಣಗಳು ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ದಾಖಲಾಗಿವೆ ಎಂದು ವರದಿ ಹೇಳಿದ್ದು, ಭಾರತ ಒಂದರಲ್ಲೇ 22.5 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.
ಕೃತಕ ಬುದ್ಧಿಮತ್ತೆ (AI) ದುರ್ಬಳಕೆ ಕುರಿತು ಎಚ್ಚರಿಕೆ:
ವರದಿಯು ಕೃತಕ ಬುದ್ಧಿಮತ್ತೆಯ ದುರ್ಬಳಕೆ ಬಗ್ಗೆಯೂ ಎಚ್ಚರಿಕೆ ನೀಡಿದೆ. 2023 ಮತ್ತು 2024 ರ ನಡುವೆ ಎಐನಿಂದ ರಚಿಸಲ್ಪಟ್ಟ CSAM ಪ್ರಕರಣಗಳು ಶೇ. 1,325 ರಷ್ಟು ಹೆಚ್ಚಾಗಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ. ಯಾವುದೇ ರಕ್ಷಣಾತ್ಮಕ ಕ್ರಮಗಳಿಲ್ಲದೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ CSAM ಕಳುಹಿಸಲು ಪ್ರಮುಖ ಟೆಕ್ ಕಂಪನಿಗಳು ತೆಗೆದುಕೊಂಡ ನಿರ್ಧಾರದಿಂದಾಗಿ, ಅಂತಹ ಅಪರಾಧಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿದೆ. “ಪ್ರತಿ ಅಂಕಿ-ಅಂಶಗಳ ಹಿಂದೆ ಒಂದು ಮಗುವಿನ ಸುರಕ್ಷತೆ, ಗೌರವ ಮತ್ತು ಭವಿಷ್ಯವು ಅಪಾಯದಲ್ಲಿ ಇರುತ್ತದೆ” ಎಂದು ಚೈಲ್ಡ್‌ಲೈಟ್‌ನ ಸಿಇಒ ಪಾಲ್ ಸ್ಟಾನ್‌ಫೀಲ್ಡ್ ತಿಳಿಸಿದ್ದಾರೆ.
‘ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಪರಿಗಣಿಸಲು ಕರೆ:
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಎಲ್ಲಾ ದೇಶಗಳು ‘ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ (Public Health Emergency) ಎಂದು ಪರಿಗಣಿಸಬೇಕು ಎಂದು ಚೈಲ್ಡ್‌ಲೈಟ್ ತನ್ನ ವರದಿಯಲ್ಲಿ ಕರೆ ನೀಡಿದೆ. ಹೆಚ್‌ಐವಿ/ಏಡ್ಸ್ ಮತ್ತು ಕೋವಿಡ್-19 ರ ಪ್ರಕರಣಗಳಿಗೆ ನೀಡಿದಷ್ಟೇ ತುರ್ತುಸ್ಥಿತಿಯೊಂದಿಗೆ ಈ ಪ್ರಕರಣಗಳಿಗೂ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ವರದಿ ಕೋರಿದೆ.
ಮಧ್ಯಪ್ರದೇಶದಲ್ಲೇ ಗರಿಷ್ಠ ಪ್ರಕರಣಗಳು:
ದೇಶಾದ್ಯಂತ 2022 ರಲ್ಲಿ ಮಕ್ಕಳ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ 1.77 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದು 2022 ರಲ್ಲಿ ದಾಖಲಾದ 1.62 ಲಕ್ಷ ಪ್ರಕರಣಗಳಿಗೆ ಹೋಲಿಸಿದರೆ ಶೇ. 9.2 ರಷ್ಟು ಹೆಚ್ಚಳವಾಗಿದೆ. ಇದು ಮಹಿಳೆಯರು ಮತ್ತು ವೃದ್ಧರ ಮೇಲಿನ ಅಪರಾಧಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು 22,393 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಸರಾಸರಿ ಪ್ರತಿದಿನ 486 ಪ್ರಕರಣಗಳು ದಾಖಲಾಗುತ್ತಿವೆ, ಅಂದರೆ ಪ್ರತಿ ಮೂರು ನಿಮಿಷಗಳಿಗೊಮ್ಮೆ ಒಂದು ಅಪರಾಧ ಸಂಭವಿಸಿದೆ ಎಂದು ತಿಳಿಯಬೇಕು.