ಇತ್ತೀಚೆಗೆ ಮಲಯಾಳಂ ಚಿತ್ರರಂಗದಲ್ಲಿ ಎದ್ದ Me Too ಪ್ರಕರಣದ ಬೆನ್ನಲ್ಲೇ ಚಿತ್ರದಲ್ಲಿ ಅವಕಾಶ ಕೊಡುವಂತೆ ನಂಬಿಸಿ, ಲೈಂಗಿಕ ಕಿರುಕುಳ ನಡೆಸಿದ ಆರೋಪದಲ್ಲಿ ಹೊತ್ತಿದ್ದ ನಟ ನಿವಿನ್ ಪೌಳಿ ಗೆ ಬಿಗ್ ರಿಲೀಫ್ ಸಿಕ್ಕಿದೆ.
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಮಲಯಾಳಂ ನಟ ನಿವಿನ್ ಪೌಲಿ ಅವರನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಲಾಗಿದೆ.
ಕೇರಳದ ನೆರಿಯಮಂಗಲಂ ನಿವಾಸಿಯಾಗಿರುವ ದೂರುದಾರೆ, 2023 ರ ನವೆಂಬರ್ನಲ್ಲಿ ಚಲನಚಿತ್ರದಲ್ಲಿ ಪಾತ್ರ ನೀಡುವ ಸೋಗಿನಲ್ಲಿ ದುಬೈನಲ್ಲಿ ಪೌಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಚಲನಚಿತ್ರೋದ್ಯಮದಲ್ಲಿನ ಲೈಂಗಿಕ ದುರ್ನಡತೆಯ ಸಮಸ್ಯೆಗಳನ್ನು ಪರಿಹರಿಸುವ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಟ ನಿವಿನ್ ಪೌಳಿ ವಿರುದ್ದ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರನೇ ಆರೋಪಿ ಎಂದು ಹೆಸರಿಸಲಾದ ನಿವಿನ್ ಪೌಲಿ ಅವರನ್ನು ಔಪಚಾರಿಕವಾಗಿ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಕೊತಮಂಗಲಂ ಡಿವೈಎಸ್ಪಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಇದನ್ನು ನಿಖರವಾಗಿ ವಿವರಿಸಲಾಗಿದೆ.
ಈ ಪ್ರಕರಣ ನನ್ನ ಮೇಲಿನ ಪಿತೂರಿ ಎಂದು ಕರೆದ ನಿವಿನ್, ತನಗೆ ಮಹಿಳೆಯ ಪರಿಚಯವಿಲ್ಲ ಅಥವಾ ಅವಳೊಂದಿಗೆ ಈವರೆಗೂ ಮಾತನಾಡಿಲ್ಲ. ಆದರೆ ಎಫ್ಐಆರ್ನಲ್ಲಿ ಉಲ್ಲೇಖಿಸಲಾದ ಜನರಲ್ಲಿ ಒಬ್ಬರ ಪರಿಚಯ ತನಗಿದೆ ಎಂದು ಅವರು ಒಪ್ಪಿಕೊಂಡಿದ್ದರು. ಸಧ್ಯ ಎಲ್ಲಾ ತನಿಖೆಯ ನಂತರ ಈ ಪ್ರಕರಣದಲ್ಲಿ ನಿವಿನ್ ಪೌಳಿ ಪಾತ್ರ ಇಲ್ಲ ಎಂದು ಪರಿಗಣಿಸಿ ಅವರನ್ನು ಆರೋಪ ಮುಕ್ತ ಮಾಡಲಾಗಿದೆ.