Home ಬ್ರೇಕಿಂಗ್ ಸುದ್ದಿ NEET ಪರೀಕ್ಷಾ ಅಕ್ರಮದಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳಿಗೆ SFI ವತಿಯಿಂದ ಶ್ರದ್ಧಾಂಜಲಿ ಸಭೆ

NEET ಪರೀಕ್ಷಾ ಅಕ್ರಮದಿಂದಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳಿಗೆ SFI ವತಿಯಿಂದ ಶ್ರದ್ಧಾಂಜಲಿ ಸಭೆ

ಹಾಸನ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಯಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಮೌಲ್ಯಮಾಪನ ಅಕ್ರಮಗಳಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ವತಿಯಿಂದ ಇಂದು ಹಾಸನ ನಗರದ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಯುವಜನ ನಾಯಕರು, ಅಕ್ರಮದಿಂದಾಗಿ ತಮ್ಮ ಕನಸುಗಳನ್ನು ಕಳೆದುಕೊಂಡು ಪ್ರಾಣ ತ್ಯಾಗ ಮಾಡಿದ ವಿದ್ಯಾರ್ಥಿಗಳಿಗೆ ನಮನ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ರಮೇಶ್ ಹಾಸನ್ “ವಿದ್ಯಾರ್ಥಿಗಳ ವರ್ಷಗಳ ಕಠಿಣ ಶ್ರಮ, ಪೋಷಕರ ತ್ಯಾಗ ಮತ್ತು ದೇಶದ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಚೆಲ್ಲಾಟವಾಡುತ್ತಿದೆ. NEET ಪರೀಕ್ಷೆಯಲ್ಲಾಗಿರುವ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ್ದು, ಇದರಿಂದ ಮಾನಸಿಕವಾಗಿ ಕುಗ್ಗಿ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
SFI ಪ್ರಮುಖ ಬೇಡಿಕೆಗಳು:
• NEET ಪರೀಕ್ಷಾ ಅಕ್ರಮದ ಸಮಗ್ರ ಮತ್ತು ಪಾರದರ್ಶಕ ತನಿಖೆಯಾಗಬೇಕು.
• ಅಕ್ರಮದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಹಾಗೂ NTA ಜವಾಬ್ದಾರಿಯುತ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು.
• ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ ಸೂಕ್ತ ಪರಿಹಾರ ನೀಡಬೇಕು.
• ವಿದ್ಯಾರ್ಥಿ ವಿರೋಧಿಯಾಗಿರುವ NTA ಸಂಸ್ಥೆಯನ್ನು ವಿಸರ್ಜಿಸಿ, ಶಿಕ್ಷಣದ ವ್ಯಾಪಾರೀಕರಣವನ್ನು ತಡೆಯಬೇಕು.
“ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯ ಸಿಗುವವರೆಗೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರುವವರೆಗೆ SFI ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ” ಎಂದು ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಸಿದರು. ಈ ಶ್ರದ್ಧಾಂಜಲಿ ಸಭೆಯಲ್ಲಿ SFI ನ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ರೈತ ಮುಖಂಡರಾದ ನವೀನ್ ಕುಮಾರ್, ವಿವೇಕ್, ಗಿರೀಶ್ ಪ್ರೇಮ್ ದೇಶ್ ಹಾಗೂ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.

You cannot copy content of this page

Exit mobile version