Friday, June 21, 2024

ಸತ್ಯ | ನ್ಯಾಯ |ಧರ್ಮ

ʼಶಕ್ತಿʼ ಯೋಜನೆ ಜಾತಿ, ಧರ್ಮ, ವರ್ಗ, ಭಾಷೆ ಮೀರಿದ ಯೋಜನೆ -ದಿನೇಶ್ ಗುಂಡೂರಾವ್

ಮಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಮಾಡಿದ  ಐದು ಗ್ಯಾರಂಟಿಗಳ ವಾಗ್ದಾನವನ್ನು  ಈಡೇರಿಸುವ ತೀರ್ಮಾನವನ್ನು  ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಮೊದಲ ಕ್ಯಾಬಿನೆಟ್‌ ಸಭೆಯಲ್ಲೇ ತೆಗೆದುಕೊಂಡಿದೆ. 2013 ರಲ್ಲಿ ಅನ್ನಭಾಗ್ಯ ಯೋಜನೆಯನ್ನೂ ಪ್ರಥಮ ಕ್ಯಾಬಿನೆಟ್‌ ನಲ್ಲೇ ಘೋಷಿಸಲಾಗಿತ್ತು. ಈ ತೀರ್ಮಾನ ಕರ್ನಾಟಕದ ಮಟ್ಟಿಗೆ ಒಂದು ಐತಿಹಾಸಿಕ ತೀರ್ಮಾನವಾಗಿದೆ. ಬದ್ಧತೆ, ಧೈರ್ಯ, ಮಾತು ಉಳಿಸಿಕೊಳ್ಳುವ ನೈತಿಕತೆ ಇದ್ದಾಗ ಮಾತ್ರ ಇಂತಹ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ, ದಕ್ಷಿಣ ಕನ್ನಡ ಜಿಲ್ಲೆಯ  ಉಸ್ತುವಾರಿ ಸಚಿವರೂ ಆದ  ದಿನೇಶ್‌ ಗುಂಡೂರಾವ್‌ ಹೇಳಿದರು. ಅವರು ಮಂಗಳೂರಿನ ಬಿಜೈ ಕೆ ಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣದಲ್ಲಿ ʼಶಕ್ತಿʼ ಯೋಜನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಐದೂ ಯೋಜನೆಗಳನ್ನು  ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ. ಜಾತಿ, ವರ್ಗ, ಧರ್ಮ ಮೀರಿದ ಈ ವಿಶೇಷ ಯೋಜನೆಗಳು ಎಲ್ಲರನ್ನು ತಲಪಬೇಕು. ಸಿದ್ದರಾಮಯ್ಯ ಸರಕಾರ ಒಬ್ಬರ ಪರ ಕೆಲಸ ಮಾಡದೆ ಎಲ್ಲರ ಪರ ಕೆಲಸ ಮಾಡುತ್ತದೆ. ಅಪಪ್ರಚಾರ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಾಮರಸ್ಯ, ಸಹೋದರತ್ವ, ಶಾಂತಿ ನೆಮ್ಮದಿ ನೆಲೆಸಬೇಕು ಎಂದೂ ಹೇಳಿದರು.

ಮಹಿಳೆಯರಿಗೆ ಎಲ್ಲಾ ಕಡೆಯೂ ಸಮಾನ ಅವಕಾಶ ಸಿಗಬೇಕು. ಲೋಕಸಭೆ ವಿಧಾನಸಭೆಗಳಲ್ಲೂ ಮಹಿಳಾ ಮೀಸಲಾತಿ ಬರಬೇಕು. ಮಹಿಳೆಯರು ಈಗಾಗಲೇ ಹೆಜ್ಜೆ ಮುಂದಿಟ್ಟಿದ್ದಾರೆ. ಇನ್ನೂ ಹೆಚ್ಚು ಹೆಚ್ಚು ಹೆಜ್ಜೆ ಇಡಬೇಕು. ಶಕ್ತಿ ಯೋಜನೆ ಅವರಿಗೆ ಓಡಾಟದ ಅವಕಾಶ ನೀಡಿದ್ದು ಅದು ಅವರಲ್ಲಿ ಶಕ್ತಿ, ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುರಿವ ಮಳೆಯನ್ನೂ ಲೆಕ್ಕಿಸಿದೆ ಉಚಿತ ಪ್ರಯಾಣವನ್ನು ಸಂಭ್ರಮಿಸಿದ ಮಹಿಳೆಯರು

ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ಶಕ್ತಿ ಯೋಜನೆಯ ಪರಿಚಯ ಮಾಡಿದರು. ಎಚ್‌ ಆರ್‌ ಕಮಲ್‌ ಕುಮಾರ್‌ ಸ್ವಾಗತಿಸಿದರು. ಜಿಲ್ಲಾಧಿಕಾರಿ ಎಂ ಆರ್‌ ರವಿಕುಮಾರ್‌, ಐವಾನ್‌ ಡಿʼಸಿಲ್ವಾ, ಜೆ ಆರ್‌ ಲೋಬೋ, ಶಾಲೆಟ್‌ ಪಿಂಟೋ, ಮಮತಾ ಗಟ್ಟಿ, ಪ್ರತಿಭಾ ಕುಳಾಯಿ, ಲ್ಯಾನ್ಸಿ ಲಾಟ್‌ ಪಿಂಟೋ,‌ ಸುರೇಶ್ ಬಲ್ಲಾಳ್‌ ಮುಂತಾದವರು ವೇದಿಕೆಯಲ್ಲಿದ್ದರು

ಮಹಿಳೆಯರೊಂದಿಗೆ ಪುರುಷರಿಗೂ ವಿಶೇಷವಾಗಿ ಶೃಂಗಾರಗೊಂಡ ಬಸ್ಸಿನಲ್ಲಿ ಒಂದು ಸುತ್ತು ಹೋಗಿ ಬರುವ ಅವಕಾಶವನ್ನೂ ಒದಗಿಸಲಾಗಿತ್ತು.

ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ-‘ಶಕ್ತಿ ಯೋಜನೆ’ ಯ ಸಾರಥಿ..ರೈಟ್…ರೈಟ್..!

Related Articles

ಇತ್ತೀಚಿನ ಸುದ್ದಿಗಳು