Friday, June 14, 2024

ಸತ್ಯ | ನ್ಯಾಯ |ಧರ್ಮ

ನಾಚಿಕೆಗೆಟ್ಟ ರಾಜಕಾರಣ

ಈಶ್ವರಪ್ಪ, ಯಡಿಯೂರಪ್ಪ ಮುಂತಾದವರಿಗೆ ಒಡ್ಡಿರುವ ಆಮಿಷಗಳು ಅವರನ್ನು ತೆಪ್ಪಗಾಗಿಸಿವೆಯಾದರೂ ಜಗದೀಶ್ ಶೆಟ್ಟರ್ ಸಿಡಿದು ನಿಂತಿದ್ದು ಪುರೋಹಿತಶಾಹಿ ಕುತಂತ್ರಗಾರಿಕೆಗೆ ಬಿದ್ದ ಬಲವಾದ ಪೆಟ್ಟು, ಪುರೋಹಿತಶಾಹಿಯ ಜಾತಿ ಅಭಿಮಾನ ಎಷ್ಟು ತೀವ್ರವಾಗಿರುತ್ತದೆಂದರೆ, ಈ ಬಾರಿ ಬಿಜೆಪಿ ಸರ್ಕಾರ ರಚಿಸುವಂತಾದರೆ ಆಗ ಮುಖ್ಯಮಂತ್ರಿಗಳಾಗುವವರು ಪುರೋಹಿತಶಾಹಿಯ ಪ್ರಬಲ ಸಮರ್ಥಕರಾದ ಪ್ರಲ್ಹಾದ್ ಜೋಷಿ ಅಥವಾ ಸಂತೋಷ್ ಅವರಲ್ಲಿ ಒಬ್ಬರಾಗಿರುತ್ತಾರೆ – ಡಾ. ಬೈರಮಂಗಲ ರಾಮೇಗೌಡ

ಸುಮಾರು 50 ವರ್ಷಗಳ ಹಿಂದೆಯೇ ರಾಷ್ಟ್ರಕವಿ ಕುವೆಂಪು ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಭಾಷಣ ಮಾಡುತ್ತ, ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಂಡಿರುವ ಭಾರತದಲ್ಲಿ ಚುನಾವಣೆಗಳು ಹೇಗೆ ನಡೆಯುತ್ತಿವೆ, ರಾಜಕಾರಣಿಗಳು ಏನಾಗುತ್ತಿದ್ದಾರೆ, ಅವರು ನೀಡಿದ್ದ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸದೇ ನೀವು ಮತ್ತೆ ಮತ್ತೆ ಮಾಡುತ್ತಿರುವ ತಪ್ಪುಗಳನ್ನು ತಿದ್ದಿಕೊಳ್ಳದೇ ಹೋದುದರಿಂದ ದೇಶವನ್ನು ಅಧೋಗತಿಗೆ ತಳ್ಳುವ ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಪಕ್ಷಾತೀತವಾಗಿ ಮಹಾಭ್ರಷ್ಟರಾಗುತ್ತಿರುವ ರಾಜಕಾರಣಿಗಳು ಜನತೆಯ ಉದ್ಧಾರಕ್ಕೆ ವಿನಿಯೋಗಿಸಬೇಕಾದ ದೇಶದ ಸಂಪತ್ತನ್ನು ನುಂಗಿ ತೇಗುತ್ತಿದ್ದರೂ ಮತ್ತಷ್ಟು ಕಬಳಿಸುವುದಕ್ಕಾಗಿ ಹೊಂಚು ಹಾಕುತ್ತಿದ್ದಾರೆ. ಹೀಗೆ ಕೊಳ್ಳೆ ಹೊಡೆಯುವ ವಿಚಾರದಲ್ಲಿ ಅವರಿಗೆ ಯಾವ ಭಯವೂ ಇಲ್ಲ, ನಾಚಿಕೆಯಂತೂ ಮೊದಲೇ ಇಲ್ಲ! ಎಂದಿದ್ದರು.

ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗುತ್ತಿರುವ ಸಂದರ್ಭದಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ನಡೆಯುತ್ತಿರುವ ಬಿರುಸಿನ ಚಟುವಟಿಕೆಗಳು, ಅವಸರದ ನಿರ್ಧಾರಗಳು ಹುಬ್ಬೇರಿಸುವಂತೆ ಮಾಡುವ ವಿದ್ಯಮಾನಗಳು ಅವುಗಳಿಗೆ ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲ, ನೈತಿಕತೆ ಮೊದಲೇ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿವೆ. ಇದರ ವಿಶ್ಲೇಷಣೆಗೆ ತೊಡಗುವ ಮುನ್ನ ಮತವನ್ನು ಪವಿತ್ರ ಎಂದು ಭಾವಿಸಿರುವ ಅಥವಾ ಭಾವಿಸಬೇಕಾದ ನಾವು ಪ್ರಜಾಪ್ರಭುತ್ವ ಮತ್ತು ಚುನಾವಣೆಯ ವಿಚಾರವಾಗಿ ಆಲೋಚಿಸಬೇಕಾಗಿರುವುದು ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕಾದದ್ದು, ನೈತಿಕ ಸಂಹಿತೆಯಾಗಿ ಅಳವಡಿಸಿಕೊಳ್ಳಬೇಕಾಗಿರುವುದು ಏನು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಕುವೆಂಪು ಹೇಳಿರುವುದನ್ನು ಗಮನಿಸೋಣ: “ನಿಜವಾದ ಪ್ರಜಾಸತ್ತೆ ಎಂದರೆ ಅನಿರ್ಬಾಧಿತ ಇಚ್ಚಾ ಸ್ವಾತಂತ್ರ್ಯದಿಂದ ಪ್ರಜೆಗಳು ಆ ಯುವ ಪ್ರಾಮಾಣಿಕ ವ್ಯಕ್ತಿಗಳಿಂದ ಸರ್ವರ ಅಭ್ಯುದಯಕ್ಕಾಗಿ ನಡೆಯುವ ರಾಜ್ಯಭಾರ. ಆ ದೃಷ್ಟಿಯಿಂದ ನೋಡಿದರೆ ಈಗ ನಡೆಯುವ ಚುನಾವಣೆಗಳು ಪ್ರಜಾಸತ್ತಾತ್ಮಕ ಎಂದು ಹೇಳಲಾಗುತ್ತದೆಯೇ? ಈಗ ನಮ್ಮ ರಾಜಕೀಯ ರಂಗ ಹೇಗಾಗಿದೆ ಎಂದರೆ ಪ್ರಾಮಾಣಿಕರೂ, ಸಂಭಾವಿತರೂ, ಸುಸಂಸ್ಕೃತರೂ ಯಾರೂ ಅದರ ಹತ್ತಿರ ಸುಳಿಯಲೂ ಅಂಜುತ್ತಾರೆ. ಚುನಾವಣೆಯ ರೀತಿಯನ್ನೇ ಬದಲಾಯಿಸದಿದ್ದರೆ ಮಾನ ಮರ್ಯಾದೆಯುಳ್ಳ ಪ್ರಾಮಾಣಿಕ ಯೋಗ್ಯರಾರೂ ಅದರಲ್ಲಿ ಪಾಲುಗೊಳ್ಳುವ ಸಂಭವವಿಲ್ಲ. ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುವ ಯಾವ ವ್ಯಕ್ತಿಯಾಗಲಿ ಯಾವ ಪಕ್ಷವಾಗಲಿ ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವಿಲ್ಲ. ಆದ್ದರಿಂದ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಮತ್ತು ನಿಜವಾದ ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಛೆ ನಿಮಗಿದ್ದರೆ ಇಂದಿನ ರೀತಿಯ ಧನಾಶ್ರಿತ ಚುನಾವಣೆಯ ಪದ್ಧತಿಯನ್ನೇ ಬದಲಾಯಿಸಿ ಅದನ್ನು ಗುಣಾಶ್ರಿತವನ್ನಾಗಿ ಪರಿವರ್ತಿಸುವ ಕರ್ತವ್ಯ ನಿಮ್ಮ ಹೆಗಲ ಮೇಲೆ ಬೀಳುತ್ತದೆ. ಉಗ್ರ ಕ್ರಾಂತಿಯಿಂದಲಾದರೂ ನೀವು ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳೂ, ಸಮಯ ಸಾಧಕರೂ, ಗೂಂಡಾಗಳೂ, ಕಳ್ಳಸಂತೆಕೋರರೂ, ಕಳ್ಳಸಾಗಣಿಕೆಯ ಖದೀಮರೂ, ಚಾರಿತ್ರ್ಯಹೀನರೂ, ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ’’.

ಕುವೆಂಪು ಭವಿಷ್ಯತ್ತನ್ನು ಹೊಕ್ಕು ನೋಡುವ ಪ್ರವಾದಿಯಂತೆ ಎಚ್ಚರಿಸಿದ್ದರ ಬಗೆಗೆ ಆಲೋಚಿಸಿ ನಾವು ಜಾಗೃತರಾಗದೇ ಹೋದದ್ದರಿಂದಲೇ ಅವರು ಹೇಳಿದ್ದ ಎಲ್ಲ ಅನಿಷ್ಟ ಅಧ್ವಾನಗಳೂ ಸಂಭವಿಸಿ ಪ್ರಜಾಪ್ರಭುತ್ವ ತತ್ತರಿಸತೊಡಗಿದೆ. ಗೂಂಡಾರಾಜ್ಯ ತಲೆ ಎತ್ತುತ್ತಿದೆ, ಸರ್ವಾಧಿಕಾರದ ವಿಷ ಸರ್ಪ ವಿರೋಧಿಗಳ ದಮನವೇ ಏಕೈಕ ಗುರಿಯಾಗಿ ಹೆಡೆಯೆತ್ತಿ ಫೂತ್ಕರಿಸುತ್ತಿದೆ. ರಾಜಕಾರಣಿಗಳ ಅಬ್ಬರ ಆರ್ಭಟ ಅಟ್ಟಹಾಸದೆದುರು ಅವರನ್ನು ಬಿಟ್ಟು, ಇವರನ್ನು ಬಿಟ್ಟು, ಮತ್ತೆ ಯಾರು ಎಂದು ಭ್ರಷ್ಟರನ್ನೇ ಆಯ್ಕೆ ಮಾಡಿ ಮತ್ತೆ ವಿಪತ್ತನ್ನು ತಂದುಕೊಳ್ಳ ಬೇಕಾಗಿದೆಯಲ್ಲ ಎಂದು ಜನ ನಿಟ್ಟುಸಿರು ಬಿಡುತ್ತಿದ್ದಾರೆ. ಸರ್ಕಾರ ರಚನೆ ಮಾಡುವಷ್ಟು ಸಂಖ್ಯೆಯ ಶಾಸಕರು ಪಕ್ಷದಿಂದ ಆಯ್ಕೆಯಾಗದಿದ್ದರೂ ಅಧಿಕಾರದಿಂದ ಪ್ರಾಪ್ತವಾಗುವ ಅನಂತ ಸುಖಗಳನ್ನು ಅನುಭವಿಸುವುದಕ್ಕಾಗಿಯೇ ಅನ್ಯಪಕ್ಷಗಳ ಶಾಸಕರನ್ನು ನಾನಾ ರೀತಿಯ ಆಮಿಷಗಳೊಡ್ಡಿ, ಆಪರೇಷನ್ ಮಾಡಿ ಹೇಗಾದರೂ ಸರ್ಕಾರ ರಚಿಸುವುದರ ಮೂಲದಲ್ಲಿಯೇ ಭ್ರಷ್ಟಾಚಾರವಿದೆ. ಹಾಗೆ ಸರ್ಕಾರ ರಚನೆಗೆ ಕಾರಣರಾದವರನ್ನು ಭಿನ್ನಾಭಿಪ್ರಾಯ ಭೇದಗಳು ಉಂಟಾಗದಂತೆ ಸದಾಕಾಲ ಸಂತೃಪ್ತರಾಗಿರುವಂತೆ ನೋಡಿಕೊಳ್ಳಬೇಕು. ರಹಸ್ಯ ಒಪ್ಪಂದದಂತೆ ಅವರಿಗೆ ಅಪೇಕ್ಷಿತ ಮಂತ್ರಿ ಪದವಿಯಲ್ಲದೆ ಕೇಳಿದ್ದೆಲ್ಲವನ್ನೂ ಕೊಡಬೇಕು, ಅದಕ್ಕೆ ಪ್ರತಿಯಾಗಿ ಅವರೆಲ್ಲ ಯಾವ ಪಕ್ಷದಿಂದ ಹಾರಿಬಂದರೋ, ಯಾವ ಸಿದ್ಧಾಂತಗಳಿಗೆ ನಿಷ್ಠರಾಗಿದ್ದರೋ ಅದನ್ನೇ ತೀಕ್ಷ್ಣವಾಗಿ ಟೀಕಿಸುವ, ಆ ಪಕ್ಷದ ನಾಯಕರ ಮೇಲೆಯೇ ಕೆಸರೆರಚುವ, ತೇಜೋವಧೆ ಮಾಡುವ ಕೆಲಸಕ್ಕೆ ಬಳಸಿಕೊಂಡು ಋಣಭಾರ ತೀರಿಸುವಂತೆ ಮಾಡುವುದು ಅತ್ಯಂತ ಹೇಯವಾದದ್ದು.

ಪಕ್ಷಾಂತರಗಳು ಮೊದಲಿನಿಂದಲೂ ಇವೆಯಾದರೂ ಅವುಗಳಿಗೆ ನೈತಿಕವಾದ, ಸೈದ್ಧಾಂತಿಕವಾದ, ಸಮರ್ಥನೀಯವಾದ ಒಂದು ಹಿನ್ನೆಲೆ ಇರುತ್ತಿತ್ತು. ಆದರೆ ಹೇಗಾದರೂ ಅಧಿಕಾರಕ್ಕೆ ಬರಲು ಅನುಸರಿಸಲೇಬೇಕಾದ ಒಂದು ನೀತಿ ಎನ್ನುವ ಮಟ್ಟಕ್ಕೆ ತೆಗೆದುಕೊಂಡು ಹೋದದ್ದು ಮಾತ್ರ ಆಪರೇಷನ್ ಕಮಲದ ಹೆಸರಿನಲ್ಲಿ ಬಿಜೆಪಿಯೇ. ಅದು ಹಾಗೆ ಮಾಡುವುದಕ್ಕೆ ಬೇಕಾದ ಎಲ್ಲ ಬಲಗಳೂ ಅದಕ್ಕಿತ್ತು, ಮೇಲಾಗಿ ಮಹಾನಾಯಕರ ಆಶೀರ್ವಾದ, ಕೃಪೆ, ಮಾರ್ಗದರ್ಶನವೂ ಇದ್ದುದರಿಂದ ಅದು ಪಾಪವನ್ನು ಪುಣ್ಯವೆಂದು ನಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿತು. ಜನರ ಅಪೇಕ್ಷೆಗೆ ವಿರುದ್ಧವಾಗಿ ಅಲ್ಪ ಮತವನ್ನು ಬಹುಮತವಾಗಿ ಪರಿವರ್ತಿಸಿಕೊಂಡು ಸರ್ಕಾರ ರಚಿಸಿ, ಅದರ ಎಲ್ಲ ಲಾಭವನ್ನು ತಾವೇ ಪಡೆದುಕೊಂಡು, ಪಾಲುದಾರರಿಗೂ ಹಂಚಿಕೊಂಡು, ಜನರ ಸಂಕಟ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮುಂದಿನ ಚುನಾವಣೆಯಲ್ಲಿ ಯಾರ ನೆರವೂ ಇಲ್ಲದ ಸರ್ಕಾರ ರಚಿಸಿ ಮೆರೆಯುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಸೀಮಿತವಾಯಿತು. ಈಗ ಅದು ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ಚುನಾವಣೆಗೆ ಟಿಕೇಟ್ ಹಂಚಿಕೆಯ ಸಂದರ್ಭದಲ್ಲಿ ಒಂದೊಂದು ಪಕ್ಷವೂ ಅನುಸರಿಸುತ್ತಿರುವ ತಂತ್ರಗಾರಿಕೆಯನ್ನು ನೋಡಿ ಅರ್ಥ ಮಾಡಿಕೊಳ್ಳಬಹುದು. ಈಗ ನಡೆಯುತ್ತಿರುವುದು ನಾಚಿಕೆಗೆಟ್ಟ ರಾಜಕಾರಣ ಎಂದು ಹೇಳುವುದಕ್ಕೆ ಬೇಸರ, ಸಂಕಟ ಎಲ್ಲವೂ ಆಗುತ್ತದೆ ಆದರೆ ಅದಕ್ಕೆ ಕಾರಣವಾದ ಕೆಲವು ಸಂಗತಿಗಳನ್ನು ಉಲ್ಲೇಖಿಸಿದರೆ ಅದನ್ನು ಬೇರೆ ಯಾವುದೇ ಹೆಸರಿನಿಂದ ಕರೆಯಲು ಸಾಧ್ಯವಾಗುವುದಿಲ್ಲ ಎಂದು ಅರ್ಥವಾಗುತ್ತದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಎಲ್ಲ ಪಕ್ಷಗಳಿಗೂ ಅವುಗಳದೇ ಆದ ನೀತಿ ಸಿದ್ಧಾಂತ ಧ್ಯೇಯ ಧೋರಣೆಗಳಿವೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಹೇಗಾದರೂ ಗೆಲ್ಲಬೇಕು, ಅಧಿಕಾರ ಪಡೆಯಬೇಕು ಎನ್ನುವ ಹಠದಲ್ಲಿ ಆ ನೀತಿ ಸಿದ್ಧಾಂತಗಳನ್ನೆಲ್ಲ ಗಾಳಿಗೆ ತೂರಿವೆ. ಯುದ್ಧದಲ್ಲಿ, ಪ್ರೇಮದಲ್ಲಿ ಎಲ್ಲವೂ ಸರಿ ಎನ್ನುವಂತೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಏನಾದರೂ ಸರಿ ಎನ್ನುವ ಕೆಳಮಟ್ಟಕ್ಕೆ ಅವು ಇಳಿದಿವೆ. ಬಿಜೆಪಿಯ ಜುಟ್ಟು ಹಿಡಿದುಕೊಂಡು ನನ್ನ ಮಾರ್ಗದರ್ಶನ ಆಶೀರ್ವಾದ ಇದ್ದರೆ ಮಾತ್ರ ನಿಮಗೆ ಅಧಿಕಾರ ಎಂದು ನಂಬಿಸಿ ಅದನ್ನು ಗುಲಾಮನನ್ನಾಗಿ ಮಾಡಿಕೊಂಡು ಸೂತ್ರಚಾಲಕ ಶಕ್ತಿಯಾಗಿರುವ, ವರ್ತಮಾನದ ಸಂದರ್ಭದಲ್ಲಿ ಅಮಾನವೀಯ ಎನ್ನಿಸುವಂಥ ಮನುವಾದ ಪ್ರತಿಪಾದಕ ಸಂಘಕ್ಕೆ ಅದರ ಬೆಳವಣಿಗೆ, ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದು, ಶಕ್ತಿಯನ್ನು ವರ್ಧಿಸಿಕೊಳ್ಳುವುದು, ಅವಕಾಶಗಳನ್ನು ಸೃಷ್ಟಿಸಿಕೊಂಡು ಅಧಿಕಾರಕ್ಕೆ ಲಗ್ಗೆ ಹಾಕುವುದು, ತಾನು ಮಾಡುತ್ತಿರುವ ಅನ್ಯಾಯ, ಶೋಷಣೆಗಳ ವಿರುದ್ಧ ಸಾಮಾನ್ಯ ಜನ ಸೊಲ್ಲೆತ್ತದಂತೆ, ತಿರುಗಿ ಬೀಳದಂತೆ ಧರ್ಮ ದೇವರುಗಳ ಹೆಸರಿನಲ್ಲಿ ಮೌಢ್ಯವನ್ನು ಬಿತ್ತನೆ ಮಾಡಿ, ಅದನ್ನೇ ನಿಜವೆಂದು ನಂಬಿಸಿ, ಅವರೆಲ್ಲ ಸದಾ ಭಯದಲ್ಲೇ ಬದುಕುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ದೇಶಾಭಿವೃದ್ಧಿ, ಜನತೆಯ ಉದ್ಧಾರದಲ್ಲಿ ಅದಕ್ಕೆ ಯಾವ ಆಸಕ್ತಿಯೂ ಇಲ್ಲ.

ಯಡಿಯೂರಪ್ಪ, ಬೊಮ್ಮಾಯಿ ಜಾತಿಯಿಂದ ಲಿಂಗಾಯಿತರಾದರೂ ಅವರ ಕಾರ್ಯಾಚರಣೆಯ ವಿಧಿ ವಿಧಾನದಲ್ಲಿ ಬಸವಣ್ಣ ಆದರ್ಶವಾಗಬೇಕಾಗಿತ್ತಾದರೂ ಅದೇನನ್ನೂ ಮಾಡಲಾಗದೆ ಕೇವಲ ಅಧಿಕಾರಕ್ಕಾಗಿ ಪುರೋಹಿತಶಾಹಿಯ ಕೈಗೊಂಬೆಗಳಾಗಿ ನಡೆದುಕೊಳ್ಳಬೇಕಾಯಿತು. ಅವಕಾಶಕ್ಕಾಗಿ ಯಾವಾಗಲೂ ಹೊಂಚುಹಾಕುವ, ಅವಕಾಶ ಸಿಕ್ಕಾಗ ಪಟ್ಟುಹಾಕಿ ಹಿಡಿದುಕೊಂಡು ಬಿಡುವ ಪುರೋಹಿತಶಾಹಿ ಮುಂದಿನ ಚುನಾವಣೆಯಲ್ಲಿ ಶೂದ್ರರ ಹಂಗಿಲ್ಲದೆ ತಾನೇ ಅಧಿಕಾರದ ಉನ್ನತ ಪೀಠಕ್ಕೆ ಲಗ್ಗೆ ಹಾಕುವ ಯೋಜನೆ ತಯಾರಿಸಿದ್ದು, ಅದಕ್ಕೆ ಅಡ್ಡಿಯಾಗಬಹುದಾದವರೇ ಪಕ್ಷನಿಷ್ಠರಾಗಿದ್ದರೂ ಏನೇನೋ ನೆಪಗಳನ್ನು ಮುಂದೆ ಮಾಡಿ ಪಕ್ಷಕ್ಕೆ ತಳ್ಳುತ್ತಿದ್ದಾರೆ. ಈಶ್ವರಪ್ಪ, ಯಡಿಯೂರಪ್ಪ ಮುಂತಾದವರಿಗೆ ಒಡ್ಡಿರುವ ಆಮಿಷಗಳು ಅವರನ್ನು ತೆಪ್ಪಗಾಗಿಸಿವೆಯಾದರೂ ಜಗದೀಶ್ ಶೆಟ್ಟರ್ ಸಿಡಿದು ನಿಂತಿದ್ದು ಪುರೋಹಿತಶಾಹಿ ಕುತಂತ್ರಗಾರಿಕೆಗೆ ಬಿದ್ದ ಬಲವಾದ ಪೆಟ್ಟು. ಪುರೋಹಿತಶಾಹಿಯ ಜಾತಿ ಅಭಿಮಾನ ಎಷ್ಟು ತೀವ್ರವಾಗಿರುತ್ತದೆ ಎಂದರೆ, ಈ ಬಾರಿ ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ರಚಿಸುವಂತಾದರೆ ಆಗ ಮುಖ್ಯಮಂತ್ರಿಗಳಾಗುವವರು ಪುರೋಹಿತಶಾಹಿಯ ಪ್ರಬಲ ಸಮರ್ಥಕರಾದ ಪ್ರಲ್ಹಾದ್ ಜೋಷಿ ಅಥವಾ ಸಂತೋಷ್ ಅವರಲ್ಲಿ ಒಬ್ಬರಾಗಿರುತ್ತಾರೆ ಎನ್ನುವುದು ಈಗ ರಹಸ್ಯವಾಗೇನೂ ಉಳಿದಿಲ್ಲ. ಇಂಥ ಸಮಯದಲ್ಲಿ ತಮ್ಮ ಪಕ್ಷದಿಂದ  ಬಿಜೆಪಿಗೆ ಹಾರಿದವರಿಂದ ಆದ ನಷ್ಟವನ್ನು ತುಂಬಿಕೊಳ್ಳಲು ಅಲ್ಲಿ ತಿರಸ್ಕೃತರಾದವರನ್ನು, ಟಿಕೆಟ್ ಸಿಗದೇ ಹೋದವರನ್ನು ರತ್ನಗಂಬಳಿ ಹಾಸಿ, ಮುಂದಾಗುವ ಅನಾಹುತಗಳ ಬಗೆಗೆ ಆಲೋಚಿಸದೆ ತಮ್ಮ ಪಕ್ಷಗಳಿಗೆ ಬರಮಾಡಿಕೊಂಡು ಅವರು ಬಯಸಿದ ಕ್ಷೇತ್ರಗಳಿಂದ ಸ್ಪರ್ಧಿಸಲು ಟಿಕೇಟ್ ಕೂಡ ಕೊಡುತ್ತಿರುವುದನ್ನು ವಿವೇಕದ ತೀರ್ಮಾನ ಎಂದು ಹೇಳಲು ಸಾಧ್ಯವೇ? ಒಂದು ಪಕ್ಷದಲ್ಲಿದ್ದಾಗ ಇನ್ನೊಂದು ಪಕ್ಷವನ್ನು, ಅದರ ನಾಯಕರನ್ನು ಬೈಯುತ್ತಿದ್ದ ಟೀಕಿಸುತ್ತಿದ್ದ ಜನ ಅದೇ ಪಕ್ಷಕ್ಕೆ ಹಾರಿ ಆ ಪಕ್ಷವನ್ನೂ, ನಾಯಕರನ್ನ ಹೊಗಳಿ ಓಲೈಸಿ, ಬಿಟ್ಟು ಬಂದ ಪಕ್ಷವನ್ನು ಟೀಕಿಸುತ್ತಾರಲ್ಲ! ಹೀಗೆ ಅಧಿಕಾರಕ್ಕಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವುದು, ಅಂಥವರ ಇತಿಹಾಸ ಮರೆತು ಪಕ್ಷಕ್ಕೆ ಸಂತೋಷದಿಂದ ಬರ ಮಾಡಿಕೊಳ್ಳುವುದು – ಇದು ನಾಚಿಕೆಗೆಟ್ಟ ರಾಜಕಾರಣ ಅಲ್ಲವೇ?!…..

ಡಾ. ಬೈರಮಂಗಲ ರಾಮೇಗೌಡ

ಹಿರಿಯ ಸಾಹಿತಿ

ಇದನ್ನೂ ಓದಿರಾಜಕಾರಣದಲ್ಲಿ ಮಹಿಳೆಯರ ಮುಖಾಮುಖಿ

ರಾಹುಲ್ ಗಾಂಧಿಯ ಭಾರತ ಯಾತ್ರೆ

Related Articles

ಇತ್ತೀಚಿನ ಸುದ್ದಿಗಳು