Friday, June 14, 2024

ಸತ್ಯ | ನ್ಯಾಯ |ಧರ್ಮ

ಶಾಂತಿನಗರ (ರಾಗಿಗುಡ್ಡ) ಬಹುತ್ವ ಭಾರತ, ಗೊತ್ತಾ ನಿಮಗೆ?!

ಗಣಪತಿ ಮೆರವಣಿಗೆಗಳಲ್ಲಿ ಕಂಡು ಬಂದ   ಪ್ರಚೋದನಾಕಾರಿ ಫ್ಲೆಕ್ಸ್‌ಗಳು, ಪ್ರತಿಮೆಗಳು, ಸಾಂಕೇತಿಕ ರೂಪಗಳಿಗೆ ಪ್ರತಿ ಎಂಬಂತೆ ಈದ್‌ ಮಿಲಾದ್ ಮೆರವಣಿಗೆಯಲ್ಲೂ ಅಂತಹುದೇ ಪ್ರಚೋದನಾಕಾರಿ ರೂಪಗಳನ್ನು  ವಿಜೃಂಭಿಸಿರುವುದು  ಕ್ರಿಯೆಗೆ ಪ್ರತಿಕ್ರಿಯೆಯಂತೆ ಪ್ರತಿಫಲಿಸುತ್ತವೆ. ಕಣ್ಣಿಗೆ ಕಣ್ಣೆ ಪ್ರತಿಕಾರ ಎನ್ನುವುದೇ ಆದರೆ ಇಡೀ ಸಮಾಜವೇ ಕುರುಡಾಗಿ ಬಿಡುತ್ತದೆ.  ಹೀಗೆ ಕ್ರಿಯೆಗೆ ಪ್ರತಿಕ್ರಿಯೆಯ ಸೇಡಿಗೆ ಬಿದ್ದು ಇಡೀ ಬಡಾವಣೆಯ ಶಾಂತಿಯನ್ನು ದ್ವೇಷದ ಕುಲುಮೆಗೆ ನೂಕುವ ಸಂಚನ್ನು ಸರ್ಕಾರ  ಪಕ್ಷ ರಾಜಕಾರಣವನ್ನು ಬದಿಗಿಟ್ಟು ಗುರುತಿಸಿ ಹತ್ತಿಕ್ಕಬೇಕು – ಎನ್‌ ರವಿಕುಮಾರ್‌, ಪತ್ರಕರ್ತರು.

ಅ. 1 ರಂದು ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳ ಪುಂಡಾಟದಿಂದ ರಾಜ್ಯವ್ಯಾಪಿ ಖ್ಯಾತಿಗೊಳಗಾಗಿರುವ ಶಿವಮೊಗ್ಗದ ರಾಗಿಗುಡ್ಡ ಬಡಾವಣೆಗೆ ಇನ್ನೊಂದು ಹೆಸರಿದೆ. ಅದು ’ಶಾಂತಿನಗರ’. ಈ ಶಾಂತಿನಗರ ಎಂದು ಹೆಸರಿಡುವುದರ ಹಿಂದೆ ಈ ಭಾಗದ ಜನರ ಸೌಹಾರ್ದತೆ-ಸಹಬಾಳ್ವೆಯ ಮಹೋನ್ನತ ಆಶಯವೂ ಇದೆ.

ಶಿವಮೊಗ್ಗ ನಗರದ ಪೂರ್ವ ಮತ್ತು ಉತ್ತರದ ಪಕ್ಕೆಗೆ ಆತುಕೊಂಡಿಂತಿರುವ ಶಾಂತಿನಗರ ಬಡಾವಣೆ ಆಡಳಿತಾತ್ಮಕವಾಗಿ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ. ನವುಲೆ, ಮಲ್ಲಿಕಾರ್ಜುನ ನಗರ, ಕೃಷಿನಗರಗಳನ್ನೊಳಗೊಂಡ  ವಾರ್ಡು ನಂ 3 ಮತ್ತು 4 ರ ನಡುವೆ ಹಂಚಿಕೊಂಡಿರುವ  ಶಾಂತಿನಗರ  ವಾರ್ಡುನಂಬರ್ 3 ರ  ವಾರ್ಡಿನ 10 ಸಾವಿರ ಮತದಾರರಲ್ಲಿ5 ಸಾವಿರ ಮತದಾರರು ಶಾಂತಿನಗರ ಒಂದೇ  ಬಡಾವಣೆಯಲ್ಲಿದೆ.

 ಶಾಂತಿನಗರದಲ್ಲಿನ  ಹಿಂದೂ, (ಶೇ.99 ರಷ್ಟು ದಲಿತರು, ಹಿಂದುಳಿದವರ್ಗಗಳು), ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳ ಬಡಕುಟುಂಬಗಳು ಗಾರೆಕೆಲಸ, ಟೈಲ್ಸ್  ಕೆಲಸ,  ಹಮಾಲಿ, ಆಟೋ ಚಾಲನೆ, ಗ್ಯಾರೇಜ್,  ಆಸ್ಪತ್ರೆಗಳಲ್ಲಿ ಆಯಾ,   ಮನೆಗೆಲಸ….ಹೀಗೆ ದಿನಗೂಲಿಯನ್ನೆ ನಂಬಿ ಬದುಕುತ್ತಿದ್ದಾರೆ. 

 ಎಲ್ಲಾ ಧರ್ಮದ ಜನರೂ  ನೆರಹೊರೆಯ ಮನೆಯ ಗೋಡೆಗಳನ್ನೆ ತಬ್ಬಿಕೊಂಡು ಪರಸ್ಪರ ಸೌಹಾರ್ದತೆಯನ್ನು ಕಟ್ಟಿಕೊಂಡವರು. ಸ್ತ್ರೀಶಕ್ತಿ ಸಂಘಗಳು ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಎಂಬ ಧರ್ಮದ ಗೋಡೆಗಳನ್ನು  ಒಡೆದು ಹಾಕಿವೆ, ಅಂಗಡಿ ಮುಂಗಟ್ಟುಗಳು ಎಲ್ಲಾ ಧರ್ಮದವರನ್ನು  ಪರಸ್ಪರ ಅವಲಂಬಿಸಿವೆ.  ದೇವಸ್ಥಾನ, ಚರ್ಚು, ಮಸೀದಿಗಳಲ್ಲಿನ ದೇವರು, ಪಾದ್ರಿ – ಪ್ರವಾದಿಗಳು ಪಿಸುಮಾತಿನಲ್ಲೇ ಒಬ್ಬರನ್ನೊಬ್ಬರು ಮಾತಾಡಿಕೊಳ್ಳುವಷ್ಟು ಸಾಮೀಪ್ಯದ ಸಂಬಂಧವನ್ನು ಹೊಂದಿದ್ದಾರೆ.   ಎಲ್ಲಾ ಧರ್ಮಗಳ  ಹಬ್ಬ, ಉತ್ಸವಗಳು   ಎಲ್ಲರನ್ನೂ ಒಳಗೊಂಡಂತೆ ನಡೆದ ಇತಿಹಾಸವಿದೆ. 

 ಇಂತಹ ವೈವಿಧ್ಯಮಯ ಬಡಾವಣೆಯ  ಸಾಮಾಜಿಕ ಸಂರಚನೆ ಹೇಗಿದೆ ಗೊತ್ತಾ? ಸಾಂಸ್ಕೃತಿಕ-ಧಾರ್ಮಿಕ ಒಳಗೊಳ್ಳುವಿಕೆಯ ಅನನ್ಯತೆಯ ಅದೊಂದು ಬಹುಜನರ ಭವ್ಯ ಭಾರತ ಇದ್ದಂತೆ.   ಹೀಗಿರುವ ರಾಗಿಗುಡ್ಡ ಯಾನೆ ಶಾಂತಿನಗರದ ಸಹಬಾಳ್ವೆಯನ್ನು ಕದಡುವ ಕೃತ್ಯಗಳು ಆಗಾಗ ನಡೆಯುತ್ತಲೆ ಇದ್ದು, ಮೊನ್ನೆಯ ಘಟನೆ ಅದರ ಭಾಗವೇ ಆಗಿದೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿಗಳು, ಮತೀಯ ಸಂಘಟನೆಗಳ ಹುನ್ನಾರಗಳು  ಸಕ್ರಿಯವಾಗಿವೆ.   ಇದಕ್ಕೆ ಹಿಂದೂ ಮುಸ್ಲಿಂ ಬೇಧವಿಲ್ಲ. ಇದಲ್ಲದೆ  ಅಪರಾಧ ಕೃತ್ಯಗಳ ರೌಡಿಶೀಟರ್‌ಗಳು,   ಗಾಂಜಾ ದಂಧೆಗಳು ಜನಜೀವನವನ್ನು ಕಾಡುತ್ತಿವೆ. ಇವರುಗಳು ಯಾವುದೇ ಗಲಭೆಗಳಲ್ಲಿ ಪಾತ್ರ ವಹಿಸುವುದನ್ನು ನಿರಾಕರಿಸುವಂತಿಲ್ಲ.

ರಾಜಕೀಯ ಹಿತಾಸಕ್ತಿ

10 ಸಾವಿರ ಮತದಾರರನ್ನು ಹೊಂದಿರುವ ವಾರ್ಡುನಂಬರ್ 3 ರ ವ್ಯಾಪ್ತಿಗೆ ಬಹುಪಾಲು ಬರುವ ಶಾಂತಿನಗರ ಬಡಾವಣೆ ಒಂದರಲ್ಲೇ 5 ಸಾವಿರ ಮತಗಳಿವೆ.  ಈ ಬಡಾವಣೆಯ ಮುಖ್ಯರಸ್ತೆಯ ಎಡಭಾಗ ವಾರ್ಡು ನಂ  4 ಕ್ಕೆ ಸೇರಲಿದ್ದು ಎರಡೂ ಭಾಗಗಳು ಸೇರಿದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರ ಸಂಖ್ಯೆ 4 ಸಾವಿರ ಮುಟ್ಟಿದರೆ ಉಳಿದ ಸುಮಾರು ಒಂದು ಸಾವಿರ ಮತಗಳು ಹಿಂದೂಗಳದ್ದಾಗಿದೆ. ಈ ವಾರ್ಡುಗಳಲ್ಲಿ  ಶಾಂತಿನಗರದ ಮತದಾರರೇ  ಅದರಲ್ಲೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರು  ನಿರ್ಣಾಯಕರಾಗಿರುವುದರಿಂದ ಇಲ್ಲಿ ಕಾಂಗ್ರೇಸ್ ತನ್ನ ರಾಜಕೀಯ ಹಿಡಿತವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಟ್ಟಿಲ್ಲ. ಪಾಲಿಕೆ ಚುನಾವಣೆಯಲ್ಲಿ  ಈ ವಾರ್ಡನ್ನು ಹೇಗಾದರೂ ಮಾಡಿ ಗೆಲ್ಲಬೇಕೆಂಬ ಬಿಜೆಪಿಯ ಪ್ರಯತ್ನ ಈವರೆಗೂ ಕೈಗೂಡಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.

ಅನಕ್ಷರಸ್ಥರು, ಕೃಷಿಕೂಲಿ ಕಾರ್ಮಿಕರು, ದುಡಿಯುವ ವರ್ಗವೆ ಇರುವ ಶಾಂತಿನಗರದಲ್ಲಿ  ಧರ್ಮದ ಮತೀಯ ಭಾವನೆಯನ್ನು ಸುಲಭವಾಗಿ ಬಿತ್ತಲು ಮತೀಯ ಸಂಘಟನೆಗಳು ಸಲೀಸಾಗಿ ಬಳಸಿಕೊಳ್ಳಲೆತ್ನಿಸುತ್ತಲೆ ಬಂದಿವೆ. ಬಜರಂಗದಳ ಸೇರಿದಂತೆ ಹಿಂದೂ ಹೆಸರಿನ ಮತೀಯವಾದ  ಮತ್ತು ಅದಕ್ಕೆ ಪ್ರತಿಯಾಗಿ  ಮುಸ್ಲಿಂರ ಹೆಸರಿನಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಮತೀಯವಾದ  ಸಾಮಾನ್ಯ ಜನರಲ್ಲಿ, ಇಲ್ಲಿನ ಅನಕ್ಷರಸ್ಥ ಯುವಕರಿಗೆ ಧರ್ಮದ್ವೇಷದ ಅಫೀಮನ್ನು ಉಣಿಸುವಲ್ಲಿ ನಿರತವಾಗಿವೆ.  ಇದರಿಂದ ಹೊಗೆಯಾಡುವ ಕೋಮುಸಂಘರ್ಷದ ಬೆಂಕಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರೆಡೂ ಚಳಿ ಕಾಯಿಸಿಕೊಳ್ಳುವ ಘಾತುಕ ರಾಜಕಾರಣವನ್ನು ಮಾಡುತ್ತಲೆ ಬಂದಿವೆ.

ಸೇಡಿಗೆ ಬಿದ್ದು ಕುರುಡಾಗುವುದು ಎಂದರೆ ಹೀಗೆಯೇ..

ಶಾಂತಿನಗರಕ್ಕೆ ಹಿಂದೂ ಮತ್ತು ಮುಸ್ಲಿಂರ ಹೆಸರಿನಲ್ಲಿ  ಮತೀಯ ಸಂಘಟನೆಗಳು ಕಾಲಿಟ್ಟ ಕ್ಷಣದಿಂದಲೆ ಇಲ್ಲಿ ಸೌಹಾರ್ದತೆಗೆ ಕೊಳ್ಳಿ ಇಡುವ ಕೆಲಸ ಆರಂಭವಾಗಿತ್ತು. ಇದರಲ್ಲಿ ಯಾರೂ ಹೆಚ್ಚಲ್ಲ. ಯಾರೂ ಕಡಿಮೇಯೇನಲ್ಲ. ಈ ಹಿನ್ನೆಲೆಯಲ್ಲಿಯೇ ಶಾಂತಿನಗರವನ್ನು ಪೊಲೀಸರ ಲಿಸ್ಟ್ ನಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತು ಮಾಡಿ ಸಂದರ್ಭನುಸಾರ ಕಣ್ಗಾವಲಿರಿಸಿದ್ದರು.   ಶಾಂತಿ ನಗರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 16ಗಣಪತಿಗಳನ್ನು ಒಂದೇ ದಿನ ಸೆ. 24 ರಂದು ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲು ಗಣಪತಿ ಸಮಿತಿಗಳ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಅದರಂತೆ ಅಂದು ಇಡೀ ಬಡಾವಣೆಯನ್ನು ಕೇಸರಿ ಬಂಟಿಂಗ್ಸ್, ಸೇರಿದಂತೆ ಶಿವಾಜಿ ಮಹಾರಾಜ ರ ಪ್ರತಿಮೆಗಳೊಂದಿಗೆ ಅಲಂಕಾರ ಮಾಡುವ ಮೂಲಕ ಶಾಂತಿಯುತವಾಗಿ ಗಣಪತಿ ಮೆರವಣಿಗೆ  ಮುಕ್ತಾಯಗೊಂಡಿತ್ತು.

ಅದೇ ರೀತಿ ಅ. 1ರಂದು  ಈದ್ ಮಿಲಾದ್ ಮೆರವಣಿಗೆಯನ್ನೂ ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದ ಮುಸ್ಲಿಂ ಸಮಿತಿಯು ಇಡೀ ಬಡಾವಣೆಯಲ್ಲಿ ಹಸಿರು ಬಂಟಿಂಗ್ಸ್ , ಲೈಟಿಂಗ್ಸ್ ಗಳಿಂದ ಅಲಂಕರಿಸಲಾಯಿತಲ್ಲದೆ ಟಿಪ್ಪು ಸುಲ್ತಾನ್ ಪ್ರತಿಮೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಟಿಪ್ಪು ಕಾಲಿನಿಂದ ಮೆಟ್ಟಿ ಕೊಲ್ಲುತ್ತಿರುವ  ಆ ವ್ಯಕ್ತಿಗಳಿಗೆ ಕೇಸರಿ ಬಣ್ಣವಿದ್ದದ್ದು , ಶಾಂತಿನಗರದ ಕೆಲವು ತಿರುವುಗಳಲ್ಲಿ ಸಾಬ್ರು ಸಾಮ್ರಾಜ್ಯ,  ಮುಸ್ಲಿಂ ಸಾಮ್ರಾಜ್ಯ ಎಂಬ  ಕಮಾನುಗಳನ್ನು ಕಟ್ಟಲಾಗಿತ್ತು. ಅಲ್ಲದೆ ಮುಸ್ಲಿಂ ಎಂಪೈರ್  ಔರಂಗಜೇಬ್  ಎಂದು ಅಖಂಡ ಭಾರತದ ಚಿತ್ರವನ್ನು ಹಸಿರು ಬಣ್ಣದೊಂದಿಗೆ ಔರಂಗ್‌ಜೇಬನ  ಕಟೌಟ್ ಹಾಕಿದ್ದು ಹಿಂದೂ ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಯಿತು.

ಪೊಲೀಸರು ಈ ಆಕ್ಷೇಪಾರ್ಹ ಚಿತ್ರಗಳನ್ನು ತೆರವುಗೊಳಿಸಲು  ಮುಂದಾಗಿದ್ದರಿಂದಲೇ  ಮತೀಯ ಮತ್ತಿನಲ್ಲಿದ್ದ ಕೆಲವು ಯುವಕರ ಗುಂಪು ಅಡ್ಡಿಪಡಿಸಲಾರಂಭಿಸಿತು. ಇದು ಮುಂದುವರೆದು  ಅ. 1ರಂದು ಗಲಭೆ ಸ್ವರೂಪವನ್ನು ಪಡೆದುಕೊಂಡಿತು.

 ಇಲ್ಲಿ ಮುಖ್ಯವಾದ ವಿಷಯವೆಂದರೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಈ ಹಿಂದೆಂದೂ ಕಾಣಿಸಿಕೊಳ್ಳದ ’ಔರಂಗಜೇಬ್’ , ’ಮುಸ್ಲಿಂ ಸಾಮ್ರಾಜ್ಯ’ ಎಂಬುದು ಕಾಣಿಸಿಕೊಂಡಿದ್ದೇಕೆ? ಶಾಂತಿ ನಗರದ ಬಹುತೇಕ ಮುಸ್ಲಿಂರಿಗೆ ಔರಂಗಜೇಬ್ ಯಾರು ಎಂಬುದು ಸರಿಯಾಗಿ ತಿಳಿದಿಲ್ಲ.  ಒಂದು ತಿರುವಿನಲ್ಲಿ ಹಿಂದೂ-ಮುಸ್ಲಿಂ ಕ್ರಿಶ್ಚಿಯನ್‌ರು ನೆರೆಹೊರೆಯಂತೆ ಬಾಳುತ್ತಿರುವಾಗ ಸಾಬ್ರ ಸಾಮ್ರಾಜ್ಯ ಎಂಬ ಕಮಾನು ಕಟ್ಟುವ ಉದ್ದೇಶದ ಹಿಂದೆ ಏನಿತ್ತು ? ಇಂತಹ ಪ್ರಚೋದನೆಯ ಹಿಂದೆ ಯಾರಿದ್ದಾರೆ?, ಅವರ ಉದ್ದೇಶವೇನು? ಅಮಾಯಕ ಮುಸ್ಲಿಂರನ್ನು ಅಪರಾಧಿಗಳನ್ನಾಗಿಸುವ ಮೂಲಕ ಸಾಧಿಸುವುದಾದರೂ ಏನು?

ಗಣಪತಿ ಮೆರವಣಿಗೆಗಳಲ್ಲಿ ಕಂಡು ಬಂದ   ಪ್ರಚೋದನಾಕಾರಿ ಫ್ಲೆಕ್ಸ್‌ಗಳು, ಪ್ರತಿಮೆಗಳು, ಸಾಂಕೇತಿಕ ರೂಪಗಳಿಗೆ ಪ್ರತಿ ಎಂಬಂತೆ ಈದ್‌ ಮಿಲಾದ್ ಮೆರವಣಿಗೆಯಲ್ಲೂ ಇಂತಹ ಅಂತಹುದೇ ಪ್ರಚೋದನಾಕಾರಿ ರೂಪಗಳನ್ನು  ವಿಜೃಂಭಿಸಿರುವುದು  ಇವೆಲ್ಲವೂ ಕ್ರಿಯೆಗೆ ಪ್ರತಿಕ್ರಿಯೆಯಂತೆ ಪ್ರತಿಫಲಿಸುತ್ತವೆ. ಕಣ್ಣಿಗೆ ಕಣ್ಣೆ ಪ್ರತಿಕಾರ ಎನ್ನುವುದೇ ಆದರೆ ಇಡೀ ಸಮಾಜವೇ ಕುರುಡಾಗಿಬಿಡುತ್ತದೆ.  ಹೀಗೆ ಕ್ರಿಯೆಗೆ ಪ್ರತಿಕ್ರಿಯೆಯ ಸೇಡಿಗೆ ಬಿದ್ದು ಇಡೀ ಬಡಾವಣೆಯ ಶಾಂತಿಯನ್ನು ದ್ವೇಷದ ಕುಲುಮೆಗೆ ನೂಕುವ ಸಂಚನ್ನು ಸರ್ಕಾರ  ಪಕ್ಷ ರಾಜಕಾರಣವನ್ನು ಬದಿಗಿಟ್ಟು ಗುರುತಿಸಿ ಹತ್ತಿಕ್ಕಬೇಕು.

ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆಯು ಸಮೀಪದಲ್ಲೆ ಇರುವುದರಿಂದ  ರಾಜಕೀಯ ಪಕ್ಷಗಳು  ಮತ್ತದರ ಸಂಘಟನೆಗಳ ಮತೀಯ ರಾಜಕಾರಣವನ್ನು ಜೀವಂತವಾಗಿಡುವ ಪ್ರಯತ್ನಗಳಿಗೆ ಶಾಂತಿನಗರದ ಗಲಭೆ ವರದಾನವಾದಂತಾಗಿದೆ.  ಹಿಂದೂ-ಮುಸ್ಲಿಂರ ರಕ್ಷಣೆಯ, ಸತ್ಯಶೋಧನೆಯ ಹೆಸರಿನ ಪೊಲಿಟಿಕಲ್ ಅಜೆಂಡಾಗಳಿಂದ   ಉರಿವ ಮನೆಯ ಗಳ ಇರಿಯುವ ತಹ…ತಹಿಕೆಗೆ ಶಾಂತಿನಗರ ಎಂಬ ಸೌಹಾರ್ದ ಭಾರತ ನಲುಗಿ ಹೋಗದಿರಲಿ.

ಎನ್.ರವಿಕುಮಾರ್

ಪತ್ರಕರ್ತರು

ಇದನ್ನೂ ಓದಿ-ಶಿವಮೊಗ್ಗದ ಕೋಮುಹಿಂಸೆಗೆ ಕಾರಣ ಯಾರು? ಸೌಹಾರ್ದತೆ ಕದಡಲು  ಕಾಯುತ್ತಿದ್ದಾರೆ ಮತಾಂಧರು !

Related Articles

ಇತ್ತೀಚಿನ ಸುದ್ದಿಗಳು