Home ದೇಶ 850 ಸಂಸದರಿದ್ದರೆ ಚರ್ಚೆ ಅಸಾಧ್ಯ, ಅದೊಂದು ಜೋಕ್: ಕ್ಷೇತ್ರ ಮರುವಿಂಗಡಣೆ ಬಗ್ಗೆ ಶಶಿ ತರೂರ್ ಕಿಡಿ

850 ಸಂಸದರಿದ್ದರೆ ಚರ್ಚೆ ಅಸಾಧ್ಯ, ಅದೊಂದು ಜೋಕ್: ಕ್ಷೇತ್ರ ಮರುವಿಂಗಡಣೆ ಬಗ್ಗೆ ಶಶಿ ತರೂರ್ ಕಿಡಿ

0

ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಕೇಂದ್ರದ ಪ್ರಸ್ತಾವನೆಯನ್ನು ಸಂಸದ ಶಶಿ ತರೂರ್ ಕಟುವಾಗಿ ಟೀಕಿಸಿದ್ದಾರೆ. ಸದಸ್ಯ ಬಲವನ್ನು ಇಷ್ಟೊಂದು ಹೆಚ್ಚಿಸುವುದು ಒಂದು ‘ಜೋಕ್’ ಆಗಲಿದ್ದು, ಇದು ಚೀನಾದ ಸಂಸತ್ತಿನ ದೇಸಿ ಆವೃತ್ತಿಯಾಗಲಿದೆ ಎಂದು ಅವರು ವಿಮರ್ಶಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಸದಸ್ಯರ ಸಂಖ್ಯೆ 850ಕ್ಕೆ ಏರಿಕೆಯಾದರೆ ಅದು ಚೀನಾ ಸಂಸತ್ತಿನಂತೆ ಕೇವಲ ಮೇಜು ಕುಟ್ಟುವ ವೇದಿಕೆಯಾಗುತ್ತದೆಯೇ ಹೊರತು, ಸಂಸದರಿಗೆ ಅರ್ಥಪೂರ್ಣವಾಗಿ ಮಾತನಾಡಲು ಅಥವಾ ಚರ್ಚಿಸಲು ಯಾವುದೇ ಅವಕಾಶವಿರುವುದಿಲ್ಲ ಎಂದಿದ್ದಾರೆ.

ಅಮೆರಿಕದ ಉದಾಹರಣೆ ನೀಡಿದ ತರೂರ್, ಅಲ್ಲಿ 1929ರಿಂದ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಿದ್ದರೂ ಕೆಳಮನೆಯ ಸದಸ್ಯರ ಸಂಖ್ಯೆಯನ್ನು 435ಕ್ಕೆ ಸೀಮಿತಗೊಳಿಸಲಾಗಿದೆ. 850 ಜನರೊಂದಿಗೆ ಸಂಸತ್ತಿನಲ್ಲಿ ಡಿಬೇಟ್ ನಡೆಸಲು ಸಾಧ್ಯವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಮಹಿಳಾ ಮೀಸಲಾತಿ ಬಿಲ್‌ನೊಂದಿಗೆ ಬೆಸೆಯಬಾರದು. 2027-2029ರ ಅವಧಿಯಲ್ಲಿ ಬಿಡುಗಡೆಯಾಗುವ ಜನಗಣತಿ ಆಧಾರದ ಮೇಲೆ ಮರುವಿಂಗಡಣೆ ನಡೆಯಬೇಕು. 2034ರ ವೇಳೆಗೆ ದೇಶದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಇದೇ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮರುವಿಂಗಡಣೆಯನ್ನು ಬೆಂಬಲಿಸಿದರು. 140 ಕೋಟಿ ಜನಸಂಖ್ಯೆ ಇರುವಾಗ 1971ರ ಜನಗಣತಿಯ ಆಧಾರದ ಮೇಲೆ ಚುನಾವಣೆ ನಡೆಸುವುದು ಸರಿಯಲ್ಲ. ಸಂಸದರ ಸಂಖ್ಯೆಯನ್ನು 543ಕ್ಕೆ ಮಿತಿಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ ಎಂದು ಅವರು ವಾದಿಸಿದರು.

ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರು ಮಾತನಾಡಿ, ಕ್ಷೇತ್ರ ಮರುವಿಂಗಡಣೆಯಿಂದ ಉತ್ತರ ಮತ್ತು ದಕ್ಷಿಣ ಭಾರತದ ರಾಜ್ಯಗಳ ನಡುವೆ ಸಮಸ್ಯೆಗಳು ಏರ್ಪಡಬಹುದು. ಜನಸಂಖ್ಯೆ ನಿಯಂತ್ರಿಸಿರುವ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರದ ರಾಜ್ಯಗಳಿಗೆ ಹೆಚ್ಚು ಸ್ಥಾನಗಳು ಲಭಿಸುವುದು ಕಳವಳಕಾರಿ ಎಂದರು.

You cannot copy content of this page

Exit mobile version