Friday, June 14, 2024

ಸತ್ಯ | ನ್ಯಾಯ |ಧರ್ಮ

ಅವಳು ಸುಲಭಳಲ್ಲ

ಹೆಣ್ಣನ್ನು ಮತ್ತು ಶೋಷಿತ ಸಮುದಾಯಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಮನುಸ್ಮೃತಿಯನ್ನು ಜೀವಂತವಾಗಿಡುವ ಪ್ರಯತ್ನವಿದು. ಕುಂಕುಮ, ತಾಳಿ, ಬಳೆ, ಹೂವು ಮುತ್ತೈದೆತನ ಹೀಗೇ ಮುಂದುವರಿದು ವಿಧವೆಗೆ ಕೆಂಪು ಸೀರೆ-ಕೇಶ ಮುಂಡನ ಅದಲ್ಲದೆ ಸತಿ ಪದ್ಧತಿ ಎಂಬೆಲ್ಲವನ್ನೂ ಪುಷ್ಟೀಕರಿಸುವ ದಿನಗಳು ಹತ್ತಿರ ಬಂದವೇ? ಕುಂಕುಮ ಯಾಕೆ ಇಟ್ಟಿಲ್ಲ ಎಂಬ ಸಂಸದ ಮುನಿಸ್ವಾಮಿಯವರ ಧಮ್ಕಿಯ ಸುತ್ತ ಸೂಕ್ಷ್ಮ ಸಂವೇದನೆಯ ಕವಿ ವಿಜಯಶ್ರೀಯವರಿಂದ  ಹೀಗೊಂದು  ಚಿಂತನೆ.

ಕುಂಕುಮ ಮತ್ತೊಮ್ಮೆ ಚರ್ಚೆಯಲ್ಲಿದೆ. “ಬೊಟ್ಟು ಯಾಕೆ ಇಟ್ಟಿಲ್ಲ, ಗಂಡ ಇದ್ದಾನೆ ತಾನೇ?” ಎಂಬ ನಿಂದನೆಯನ್ನು ಸಾರ್ವಜನಿಕವಾಗಿ ಕೇಳಿಸಿಕೊಂಡು ಒಬ್ಬರು ಶ್ರೀಸಾಮಾನ್ಯ ಮಹಿಳೆ ಮುಜುಗರಕ್ಕೆ ಒಳಗಾಗಿದ್ದಾರೆ!

ರಾಜಕಾರಣಿಗಳಿರಲಿ, ಅಧಿಕಾರಿಗಳಿರಲಿ ಸಾರ್ವಜನಿಕರೊಂದಿಗೆ ಹಿತವಾಗಿ, ಸಭ್ಯವಾಗಿ ವ್ಯವಹರಿಸುವುದು ಕರ್ತವ್ಯವಾಗಿದೆ. ‘ಅದರಲ್ಲೂ ಕುಂಕುಮ ಇಡುವುದು-ಬಿಡುವುದು ಮಹಿಳೆಯ ಖಾಸಗಿ ವಿಷಯ. ಹಾಗಾದರೆ ಗಂಡನಿಲ್ಲದ ಹೆಣ್ಣು ಕುಂಕುಮ ಇಡಬಾರದೆ?ʼ ಎಂದು ಅನೇಕ ಪ್ರಜ್ಞಾವಂತ ಹೆಣ್ಣುಮಕ್ಕಳು ಪ್ರತಿಭಟಿಸಿದ್ದಾರೆ.

ಈ ಸಂದರ್ಭದಲ್ಲಿ ಒಂದು ಘಟನೆ ನೆನಪಾಗುತ್ತದೆ. ಕೆಲವರ್ಷಗಳ ಹಿಂದೆ ನಮ್ಮ ಪರಿಚಯದ ವಿದ್ಯಾವಂತ ದಂಪತಿಯ ಮನೆಗೆ ಭೇಟಿ ನೀಡಿದ್ದೆವು. ಆಗ ಅವರ ಮನಸ್ಸಿನ ಬೇಗುದಿಯನ್ನು ತಿಳಿಸಿದರು. ಅದು ಹೀಗಿತ್ತು. ಹಿಂದಿನ ರಾತ್ರಿ ಆ ಮನೆಯ ಮಹಿಳೆಗೆ ತನ್ನ ಗಂಡನಿಗೆ ಏನೋ ಆಗಬಾರದ್ದು ಆದಂತೆ ಕನಸು ಬಿತ್ತಂತೆ. ಬೆಳಿಗ್ಗೆ ಎದ್ದು ನೋಡಿದರೆ ಅವರ ಹಣೆಯ ಸ್ಟಿಕ್ಕರ್ (ಬಿಂದಿ) ಬಿದ್ದೇ ಹೋಗಿತ್ತಂತೆ. ಆಮೇಲೆ ಅದನ್ನು ಹುಡುಕಿ ಅವರ ಗಂಡ ತಮ್ಮ ಕೈಯ್ಯಾರೆ ಹಣೆಗೆ ಇಟ್ಟ ಮೇಲೆ ಆ ಮಹಿಳೆಗೆ ಸ್ವಲ್ಪ ನೆಮ್ಮದಿಯೆನಿಸಿತು. ನಮ್ಮೊಂದಿಗೆ ಮಾತಾಡುವಾಗಲೂ ಬಹಳ ಉದ್ವೇಗದಿಂದಿದ್ದರು. ತನ್ನ ಗಂಡ ಹೆಚ್ಚು ಕಾಲ ಬದುಕಲಾರರು ಎಂಬ ದುಗುಡ ಹೊತ್ತಿದ್ದರು!

ಒಂದು ಸಣ್ಣ ಸಹಜ ಘಟನೆ ಅವರಲ್ಲಿ ಆತಂಕದ ಮಹಾಪೂರವನ್ನೇ ಹುಟ್ಟುಹಾಕಿತ್ತು! ಆಗ ನನಗೆ ತಿಳಿದ ಆಶ್ಚರ್ಯಕರ ವಿಷಯವೆಂದರೆ, ಹಣೆಗೆ ಹಚ್ಚಿದ ಸ್ಟಿಕ್ಕರನ್ನು ಸ್ನಾನ ಮಾಡುವಾಗಲೂ ಅವರು ತೆಗೆಯುವುದಿಲ್ಲ ಎನ್ನುವುದು! ಡಬ್ಬಲ್ ಡಿಗ್ರಿ ಮಾಡಿದವರಾದರೂ ಅವರಲ್ಲಿ ಎಂತಹಾ ಮೂಢನಂಬಿಕೆಯಿತ್ತು, ಮತ್ತದು ಎಷ್ಟು ಹಿಂಸೆ ಕೊಡುತ್ತಿತ್ತು! ಇದು ಅವರೊಬ್ಬರ ಕತೆಯೇನಲ್ಲ!

ಐದು ವರ್ಷಗಳ ಹಿಂದೆ, ನನ್ನಮ್ಮನಿಗೆ ಎಪ್ಪತ್ತೇಳರ ಹರೆಯ ಇರುವ ಹೊತ್ತಿನಲ್ಲಿ ನಮ್ಮ ತಂದೆ ತೀರಿಕೊಂಡರು. ಆ ನೋವು, ದುಃಖದಲ್ಲೂ ತನ್ನ ಗಂಡನ ಸಾವಿನ ಮರುದಿನ “ಕುಂಕುಮ ತಾಳಿ ಎಲ್ಲ ಎಷ್ಟೊತ್ತಿಗೆ ತೆಗೀತಾರೆ, ಯಾರು ಬರುತ್ತಾರೆ, ನನಗೇನೂ ತಿಳಿಯುತ್ತಿಲ್ಲ, ಏನು ಮಾಡಲಿ” ಎಂದು ಪುಟ್ಟ ಮಗುವಿನಂತೆ ಅತ್ತುಕೊಂಡು ಅಮ್ಮ ನಮ್ಮಲ್ಲಿ ಅಂದರೆ ತನ್ನ  ಹೆಣ್ಣುಮಕ್ಕಳ ಮುಂದೆ ಗಾಬರಿ ಗೊಂಡರು. ಅವರ ಕಣ್ಣುಗಳಲ್ಲಿ ಅಪಾರ ವೇದನೆಯಿತ್ತು. ಗಂಡ ಸತ್ತಾಗ ಬಳೆ ಒಡೆಯುವುದು, ಕುಂಕುಮ ಅಳಿಸುವುದು ಎಂಬೆಲ್ಲ ಕ್ರೂರ ಆಚರಣೆಗಳು ಹಲವೆಡೆ ಇಂದಿಗೂ ಜಾರಿಯಲ್ಲಿವೆ. ಆ ಭೀಕರ ಕ್ಷಣಗಳನ್ನು ಅಮ್ಮ ಕಲ್ಪಿಸಿಕೊಂಡಿದ್ದರೆನಿಸುತ್ತದೆ. ನಮ್ಮ ಮನೆಯಲ್ಲಿ ಅಂತಹ ಅಮಾನವೀಯತೆಗೆ ಅವಕಾಶವಿಲ್ಲವೆಂದು ಅಮ್ಮನಿಗೆ ಖಡಾಖಂಡಿತವಾಗಿ ನಾವು ತಿಳಿಹೇಳಿದೆವು. ಅವರು ಹಳೆಯ ಕಾಲದವರಾದ್ದರಿಂದ ಮುಂದೆ ಕರಿಮಣಿ, ಕುಂಕುಮ ಯಾವುದನ್ನು ಬೇಕಾದರೂ ನೀನು ಧರಿಸಬಹುದು ಅಥವಾ ತೆಗೆದಿಡಬಹುದು  ನಿನ್ನಿಷ್ಟ ಎಂದು ಸಮಾಧಾನಿಸಿದೆವು. ಇಷ್ಟು ದಿನ ಹೇಗೆ ಇದ್ದೆಯೋ ಹಾಗೇ ಇದ್ದರೆ ಚಂದ ಎಂದು ಬೆಂಬಲಿಸಿದೆವು. ಅಮ್ಮ ಕರಿಮಣಿ ತೆಗೆದಿಟ್ಟು ಕುಂಕುಮವನ್ನು ಸದಾ ಧರಿಸುವ ನಿರ್ಧಾರ ತೆಗೆದುಕೊಂಡರು.

ಹೆಣ್ಣಿನ ಕೊನೆಯ ಉಸಿರಿನವರೆಗೂ ನಮ್ಮ ಸಮಾಜ ʼಮುತ್ತೈದೆʼ, ʼವಿಧವೆ’ ಮುಂತಾದ ಪಟ್ಟಗಳನ್ನು ನೀಡಿ ಹಣಿಯಲು ನೋಡುತ್ತದೆ. ಮಹಿಳೆಯ ಚೈತನ್ಯವನ್ನು ಅದುಮಿಡಲು ವ್ಯವಸ್ಥೆ ಕಂಡುಕೊಂಡ ಹಲವು ತಂತ್ರಗಳಲ್ಲಿ ಇದು ಮುಖ್ಯವಾದದ್ದು. ಆದರೆ ಹೆಣ್ಣು ಇವೆಲ್ಲವನ್ನು ಮೀರಿ ಬೆಳೆದಿದ್ದಾಳೆ. ಹಾಗಾಗಿಯೇ ಅಂದಿನ ಅಮಾಯಕ ತಾಯಂದಿರ ಮಕ್ಕಳಾದ ನನ್ನಂತವರೆಲ್ಲ ಇಂದು ಇಂತಹ ಬ್ಲಾಕ್‍ಮೇಲ್‍ಗಳಿಗೆ ಮಣಿಯಲಾರದ ಸ್ಥಿತಿಯನ್ನು ತಲುಪಿ ಕೊಂಡಿದ್ದೇವೆ. ಇದಕ್ಕೆ ಶಿಕ್ಷಣ, ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮುಖ್ಯ ಕಾರಣಗಳು ಎನ್ನದಿದ್ದರೆ ಖಂಡಿತಾ ತಪ್ಪಾಗುತ್ತದೆ.

ಮದುವೆ, ಆರತಕ್ಷತೆ ಮುಂತಾದ ಕಾರ್ಯಕ್ರಮಗಳು ನಡೆದಾಗ ಅರಿಶಿನ ಕುಂಕುಮ ಹೂವು ಕೊಡುವ ಕ್ರಮವನ್ನು ರೂಢಿಸಿಕೊಂಡು ಬರಲಾಗಿದೆ. ಇವುಗಳು ಸಲ್ಲುವುದು ಎಳೆಯ ಹುಡುಗಿಯರು ಮತ್ತು ಮುತ್ತೈದೆಯರಿಗೆ ಮಾತ್ರ! ಗಂಡನಿಲ್ಲದ ಮಹಿಳೆಗೆ ಇವೆಲ್ಲ ಇಲ್ಲ! ನೊಂದವರನ್ನು ಮತ್ತೂ ಮಾನಸಿಕ ಹಿಂಸೆಗೆ ಒಳಗು ಮಾಡುವ ಇಂತಹ ಆಚರಣೆಗಳನ್ನು ‘ಶುಭ’ ಎಂಬ ಹೆಸರಿನಲ್ಲಿ ನಿರಂತರವಾಗಿ ನಡೆಸಿಕೊಂಡೆ ಬರಲಾಗುತ್ತಿದೆ! ಮನೆಗೆ ಬಂದ ನೆಂಟರು ತೆರಳುವಾಗಲೂ ಇದೇ ರೂಢಿಗತ ನಡೆವಳಿಕೆ! ನಾನಂತೂ ಇಂತಹವುಗಳನ್ನೆಲ್ಲ ಆಚರಿಸದೆ ‘ಹಠಮಾರಿ’ ಮುಂತಾದ ಬಿರುದು ಬಾವಲಿಗಳಿಗೆ ಒಳಗಾಗಿರುವುದು ನನಗೆ ಎಳ್ಳಷ್ಟೂ ಬೇಸರವಿಲ್ಲ. ಪ್ರಜ್ಞಾವಂತ ಮಹಿಳೆಯರು ಇವನ್ನೆಲ್ಲ ಮೀರುವ ಗಟ್ಟಿತನವನ್ನು ಬೆಳೆಸಿಕೊಳ್ಳಬೇಕಾಗಿದೆ.

ಇಂತಹ ʼಬೊಟ್ಟʼನ್ನು ಯಾಕೆ ಇಡಲಿಲ್ಲ ಎಂದು ಗದರಿಸಿರುವುದು ಆಕಸ್ಮಿಕ ಸಂಗತಿಯೆಂಬಂತೆ ಕಾಣುತ್ತಿಲ್ಲ. ಹೆಣ್ಣನ್ನು ಮತ್ತು ಶೋಷಿತ ಸಮುದಾಯಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಮನುಸ್ಮೃತಿಯನ್ನು ಜೀವಂತವಾಗಿಡುವ ಪ್ರಯತ್ನವಿದು. ಕುಂಕುಮ, ತಾಳಿ, ಬಳೆ, ಹೂವು ಮುತ್ತೈದೆತನ ಹೀಗೇ ಮುಂದುವರಿದು ವಿಧವೆಗೆ ಕೆಂಪು ಸೀರೆ-ಕೇಶ ಮುಂಡನ ಅದಲ್ಲದೆ ಸತಿ ಪದ್ಧತಿ ಎಂಬೆಲ್ಲವನ್ನೂ ಪುಷ್ಟೀಕರಿಸುವ ದಿನಗಳು ಹತ್ತಿರ ಬಂದವೇ ಎಂದು ಆತಂಕವಾಗುವುದು ಸಹಜ. ಆದರೆ ಇವತ್ತಿನ ಹೆಣ್ಣು ಅಷ್ಟು ಸುಲಭಳಲ್ಲ. ಅವಳು ಸಾಗಿಬಂದ ಶತ ಶತಮಾನಗಳ ಹಾದಿ ಗಟ್ಟಿಯಾದದ್ದು. ತುಸು ನಿಧಾನವೇ ಆದರೂ ದೃಢವಾಗಿ ನಡೆದು ಬಂದಿದ್ದಾಳೆ.

ಇದನ್ನೇ ನನ್ನ ಈಚಿನ ಲೇಖನವೊಂದರಲ್ಲಿ ಪ್ರಸ್ತಾಪಿಸಿರುವೆ. ಹಿಂದಿನ ತಲೆಮಾರಿನವರಿಗಿಂತ ನನ್ನ ಸಮಕಾಲೀನರು ಒಂದಷ್ಟು ತೊಡಕುಗಳನ್ನು ಮೆಟ್ಟಿ ನಿಂತಿದ್ದರೆ, ಇಂದಿನ ಹೆಣ್ಮಕ್ಕಳು ತಮ್ಮ ಇಷ್ಟದ ಬದುಕನ್ನು ಸಾಧಿಸಿಕೊಂಡಿದ್ದಾರೆ. ಇವತ್ತು ನನ್ನ ಸಮಕಾಲೀನ ಮಹಿಳೆಯರು ಕರಿಮಣಿ, ಬಿಂದಿ, ಬಳೆ ಧರಿಸಿಯೇ ತಾವು ಅಂದುಕೊಂಡ ಬದುಕನ್ನು ಸಾಧ್ಯವಾಗಿಸಿ ಕೊಂಡಿದ್ದಾರೆ. ಯಾವುದನ್ನು ಎಷ್ಟು ಮೀರಬೇಕೆನ್ನುವುದೂ ಅವರಿಗೆ ತಿಳಿದಿದೆ. ಕುಂಕುಮ, ಕರಿಮಣಿಯನ್ನು ಸೌಂದರ್ಯ, ಜೀವನಪ್ರೀತಿಯ ದ್ಯೋತಕವಾಗಿ ಬಳಸುತ್ತಿದ್ದಾರೆ. ಹಾಗೆಯೇ ‘ಧರಿಸಲೇಬೇಕು’ ಎಂದು ಕಡ್ಡಾಯಪಡಿಸಿದರೆ ‘ಆಗುವುದಿಲ್ಲ’ ಎಂದು ಅಸಡ್ಡೆ ತೋರುವುದೂ ಅವರಿಗೆ ಗೊತ್ತು. ಬದುಕನ್ನು ಜಗ್ಗಾಡಿ ಮುರಿದು ಕೊಳ್ಳುವುದಕ್ಕಿಂತ ಇದ್ದಲ್ಲೇ ಎಲ್ಲವನ್ನೂ ಮೀರಿ ಹೊಸ ಸಾಹಸಗಳತ್ತ ತುಡಿಯುವುದೇ ಅವರ ನಿಜವಾದ ಶಕ್ತಿ!

ಕುಂಕುಮ ಇಡುವುದೂ, ಬಿಡುವುದೂ ಇಂದಿನ ಮಹಿಳೆಯ ಖಾಸಗಿ ವಿಷಯ. ಅದನ್ನು ಪ್ರಶ್ನಿಸುವವರು ಈ ಸಂಗತಿಯನ್ನು ಅರಿಯಬೇಕಾಗಿದೆ. ಅದಲ್ಲದೆ ಇಂತಹ ಸಂಪ್ರದಾಯಗಳಿಗಿಂತ ಸಮಾಜದ ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ, ವಸತಿ, ಶಿಕ್ಷಣ, ನಾಗರಿಕ ಸೌಲಭ್ಯಗಳು, ನೆಮ್ಮದಿ ದೊರಕುತ್ತಿದೆಯೇ ಎನ್ನುವತ್ತ ಸರ್ಕಾರಗಳು ಯೋಚಿಸಬೇಕಾಗಿದೆ.

ಈಗ ನಮ್ಮ ದೇಶದಲ್ಲಿ ಪ್ರತೀ ಹದಿನೈದು ನಿಮಿಷಕ್ಕೆ ಒಬ್ಬಳು ಹೆಣ್ಣುಮಗಳ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ! ಇಂತಹ ಆಘಾತಕಾರಿ ವಿಷಯಗಳತ್ತ ನಮ್ಮ ರಾಜಕಾರಣಿಗಳು ಮೊದಲು ಗಮನ ಹರಿಸಲಿ.

ವಿಜಯಶ್ರೀ ಎಂ.

ಕುಂದಾಪುರದ ಹಾಲಾಡಿಯ ವಿಜಯಶ್ರೀ ಇವರು ಕನ್ನಡ ಭಾಷಾ ಶಿಕ್ಷಕಿಯಾಗಿದ್ದು ಕವಿಯಾಗಿ ಹೆಸರು ಮಾಡಿದವರು. ಮಕ್ಕಳ ಸಾಹಿತ್ಯ ಇವರ ಆಸಕ್ತಿಯ ಬರವಣಿಗೆಯ ಕ್ಷೇತ್ರ. ಸಾಮಾಜಿಕ ಕಳಕಳಿಯಿಂದ ಬರೆಯುವ ಇವರು ಅಂಕಣ ಬರಹಗಾರರು ಕೂಡಾ ಆಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು