Monday, June 17, 2024

ಸತ್ಯ | ನ್ಯಾಯ |ಧರ್ಮ

ಶಿಕಾರಿ ದಿನಗಳು : ಹಕ್ಕಿಗಳ ಬೇಟೆ ಕುರಿತು..

‘ಕೊನೆಯ ಬಿಳಿ ಬೇಟೆಗಾರ’ನಿಂದ ಆಯ್ದ ಅಧ್ಯಾಯ

ʼಕೊನೆಯ ಬಿಳಿ ಬೇಟೆಗಾರ’ – ಇದು  ಶಿಕಾರಿ ಡೊನಾಲ್ಡ್ ಅಂಡರ್ಸನ್ ಅವರ ಇಂಗ್ಲಿಷ್‌ ಮೂಲದ ಕಥೆ ʼದಲಾಸ್ಟ್ ವೈಟ್‌ ಹಂಟರ್ʼನ ಕನ್ನಡಾನುವಾದ ಕೃತಿ.  ಇಂಗ್ಲಿಷ್‌ನಲ್ಲಿ  ಇದನ್ನು ಜೋಷುವಾ ಮ್ಯಾಥ್ಯೂ ನಿರೂಪಿಸಿದ್ದರೆ ಖ್ಯಾತ ಲೇಖಕಿ ಎಲ್‌ ಜಿ ಮೀರಾ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರಿನ ಆಕೃತಿ ಪುಸ್ತಕ ಪ್ರಕಟಿಸಿರುವ ಈ ಕೃತಿಯು ಇದೇ ನವೆಂಬರ್‌ 11 ರಂದು ಬಿಡುಗಡೆಯಾಗಲಿದೆ. ಈ ಪುಸ್ತಕದ ಅಯ್ದ ಒಂದು ಅಧ್ಯಾಯ ಇಲ್ಲಿದೆ.

ಬೆಂಗಳೂರಿನ ಅನೇಕ ಕೆರೆಗಳಿಗೆ ಆಗಾಗ ವಲಸೆ ಹಕ್ಕಿಗಳು ಆಗಾಗ ಬರುತ್ತಿದ್ದವು, ಆದರೆ, ಕ್ರಮೇಣ ಮಿತಿಮೀರಿದ ಮತ್ತು ಅನಿರ್ಬಂಧಿತ ಬೇಟೆಯಿಂದಾಗಿ ಅವು ಕಾಣೆಯಾದವು. ನಗರದಾಚೆ ಇರುವ ಪ್ರದೇಶಗಳಿಗೆ ಹೋಗುವುದು ನಮಗೆ ಹೆಚ್ಚು ಫಲಪ್ರದ ಅನ್ನಿಸತೊಡಗಿತು. ಕಣ್ವ ಜಲಾಶಯವು ಅಂತಹ ಒಂದು ಸ್ಥಳ. ಆದರೆ ನನಗೆ ಮದ್ದೂರಿನಲ್ಲಿ, ಹೆದ್ದಾರಿಯ ಆಚೆ ಇದ್ದ ಒಂದು ಕೆರೆ ಹೆಚ್ಚು ಇಷ್ಟವಾಗುತ್ತಿತ್ತು. ಈ ಸ್ಥಳವು ಬೇಟೆಯ ಋತುಗಳನ್ನು ಹೊರತುಪಡಿಸಿ, ಇನ್ನೂ ಒಂದು ನೆನಪನ್ನು ಹೊಂದಿತ್ತು. ವಿಶಿಷ್ಟವಾದ ಒಂದು ವಿಷಯ ಅದು. ಸಾಮಾನ್ಯವಾಗಿ ನನ್ನ ಜೊತೆ ಬರುತ್ತಿದ್ದವರು ನಿಯಮಿತವಾಗಿ ಬರುವವರಾಗಿದ್ದರು, ಆದರೂ ಇಂದು ಬಂದು ನಾಳೆ ಬರದಿರುವ ಕೆಲವರು ನಮ್ಮ ತಂಡದ ಭಾಗವಾಗಿ ಇದ್ದೇ ಇರುತ್ತಿದ್ದರು, ನಮ್ಮ ಸ್ನೇಹಿತರ ಸ್ನೇಹಿತರು. ಇಂತಹ ಒಬ್ಬ ವ್ಯಕ್ತಿ ಅಂದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಪರಿಶೀಲನಾ ವಿಮಾನ ಚಾಲಕ(ಟೆಸ್ಟ್ ಪೈಲೆಟ್)ನಾಗಿದ್ದ ವ್ಯಕ್ತಿ, ಸ್ಕ್ವಾಡ್ರನ್ ಲೀಡರ್ ಮಿಲಿಕೆನ್ಸ್. ಯಾವಾಗಲೂ, ವಿಲಕ್ಷಣವಾದ ಆದರೆ ವಿಶೇಷ ಸ್ವರೂಪದ ಉಪಾಯಗಳನ್ನು ಮುಂದಿಡುತ್ತಿದ್ದ ವ್ಯಕ್ತಿಗಳ ಗುಂಪಿಗೆ ಸೇರಿದ್ದ ವ್ಯಕ್ತಿ ಇವನು. ನಾನು ಕಾಡು ತಿರುಗುವಾಗ ಅನೇಕ ಸಲ ಇವನನ್ನು ಕರೆದುಕೊಂಡು ಹೋಗಿದ್ದೆ. ನಾವು ಮದ್ದೂರಿಗೆ ಕಾಡು ಹಂದಿ ಹೊಡೆಯಲು ಮತ್ತು ಒಂದಿಷ್ಟು ಮೀನುಗಾಳ ಹಾಕಲು ಹೋಗಿದ್ದೆವು. ಆಗ ನಾವು ಈ ಕೆರೆಯನ್ನು ನೋಡಿದ್ದು. ಅಲ್ಲಿ ನೂರಾರು ಕಾಡುಹೆಬ್ಬಾತುಗಳು(ಗೀಸ್) ನೀರಿನ ಮೇಲೆ ಗುಂಪುಸೇರಿದ್ದನ್ನು ನೋಡಿದೆವು. ಅಲ್ಲಿ ಸುತ್ತಮುತ್ತಲ ಜನರನ್ನು ಕೇಳಿನೋಡಿದಾಗ ಆ ಬಾತುಕೋಳಿಗಳ ಗುಂಪು ಈ ಕಡೆ ದಡಕ್ಕೆ ಬರುವುದೇ ಇಲ್ಲ, ಏಕೆಂದರೆ ಈ ಕಡೆ ಬಂದರೆ ಜನರು ತಮ್ಮ ಕೋವಿಗಳಿಂದ ಅವುಗಳನ್ನು ಹೊಡೆಯುತ್ತಾರೆ ಎಂಬುದನ್ನು ತಮ್ಮ ಕಹಿ ಅನುಭವದಿಂದ ಅವು ಕಲಿತಿವೆ ಎಂದು ನಮಗೆ ಗೊತ್ತಾಯಿತು. ಕೆರೆಯ ಆಚೆ ದಡದಲ್ಲಿ ದುರ್ಗಮವಾದ ಕಾಡಿತ್ತು ಹಾಗೂ ಅಲ್ಲಿ ಜನಸಂಚಾರ, ನಾಗರಿಕತೆ ಇಲ್ಲವೇ ಇಲ್ಲ ಎನ್ನಬಹುದು. ಪಕ್ಷಿಗಳ ಲೆಕ್ಕಾಚಾರವೇನೋ ಸರಿಯಾಗಿಯೇ ಇತ್ತು. ಆದರೆ ನಾವು ಅವುಗಳನ್ನು ಹಿಡಿಯುವುದು, ಪಡೆಯುವುದು ಹೇಗೆ? ಆಗ ನೋಡಿ, ಮಿಲಿಕನ್ಸ್ ತಲೆಯಲ್ಲಿ ಒಂದು ಹೊಸ ವಿಚಾರದ ಅಲೆ ಎದ್ದಿತು. ಆ ಅಲೆ ಎಷ್ಟು ವಿಚಿತ್ರ ಹಾಗೂ ವಿಲಕ್ಷಣವಾಗಿತ್ತೆಂದರೆ ಅವನು ತಮಾಷೆ ಮಾಡುತ್ತಿರಬಹುದೇನೋ ಎಂದುಕೊಂಡೆ ನಾನು. ಆದರೆ ಅವನ ಮುಖದಲ್ಲಿದ್ದ ಶ್ರದ್ಧೆಯ ಭಾವವು ಅವನು ತಮಾಷೆ ಮಾಡುತ್ತಿಲ್ಲ, ಗಂಭೀರವಾಗಿ ಹೇಳುತ್ತಿದ್ದಾನೆ ಎಂದು ನನಗೆ ಖಾತ್ರಿ ಪಡಿಸಿತು. ಇವನ ಈ ಸೊಗಸಾದ, ಆದರೂ ಅಡ್ಡಂಬಡ್ಡ ವಿಚಾರವನ್ನು ನಾವು ಎರಡು ವಾರದಲ್ಲಿ ಕಾರ್ಯರೂಪಕ್ಕೆ ತರಲಿದ್ದೆವು; ನಾನು ಬಾತುಕೋಳಿ ಬೇಟೆಯನ್ನು ಇಷ್ಟ ಪಡುತ್ತಿದ್ದ ಟೈನಿ ಸೆಡ್ಡಾನ್ ಮತ್ತು ಬಾಬಾ ಕಾರಿಯಪ್ಪರನ್ನು ನಮ್ಮ ಜೊತೆಗೆ ಬರುವಂತೆ ಒಪ್ಪಿಸಿದೆ. ನಾವು ನಿಗದಿಯಾದ ದಿನಾಂಕದಂದು ನಸುಕಿಗೆ ಮುಂಚೆಯೇ ಕೆರೆಯನ್ನು ತಲುಪಿ ನಮ್ಮ ಬಂದೂಕುಗಳೊಡನೆ ಹತ್ತಿರದ ದಡದ ಆಳವಿಲ್ಲದ ಜಾಗಗಳಿಗೆ ಎಷ್ಟು ಸಾಧ್ಯವೋ ಅಷ್ಟು ಮೌನವಾಗಿ ನೀರಿನೊಳಗೆ ನಡೆದುಹೋದೆವು. ಆಗ ಘಟಿಸಿತು ನೋಡಿ ಒಂದು ದೊಡ್ಡ ಆಶ್ಚರ್ಯ.

ಅದೊಂದು ಸಿನಿಮಾ ದೃಶ್ಯದಂತೆ ಇತ್ತು. ನಸುಕು ತಲೆದೋರುತ್ತಿದ್ದಂತೆ ಮೊದಲು ನಮಗೆ ಒಂದು ಸಣ್ಣ ವಿಮಾನದ ಸದ್ದು ಕೇಳಿಸಿತು ನಂತರ ಅದು ಕೆರೆಯ ಆಚೆ ದಡದ ಹತ್ತಿರ ಬರುವುದು ನಮಗೆ ಕಾಣಿಸಿತು. ಓಹ್ ಮಿಲಿಕೆನ್ಸ್! ಅದು ಅವನ ಯೋಜನೆ! ತನ್ನ ಮೇಲಧಿಕಾರಿಗಳ ಮುಂದೆ ಅವನು ಯಾವ ಕಥೆ ಕಟ್ಟಿದ್ದನೋ ಗೊತ್ತಿಲ್ಲ, ಆದರೆ ಅವನು ಎಚ್.ಎ.ಎಲ್.ನಿಂದ ಮದ್ದೂರಿಗೆ ಒಂದು ವಿಮಾನವನ್ನು ಹಾರಿಸಿಕೊಂಡು ಬರುವುದರಲ್ಲಿ ಸಮರ್ಥನಾಗಿದ್ದಂತೂ ಹೌದು. ಕೆರೆಯ ಆಚೆ ಬದಿಯಲ್ಲಿ ವಿಮಾನವನ್ನು ಹಾರಾಡಿಸಿ, ಹಕ್ಕಿಗಳನ್ನು ಹೆದರಿಸಿ ನಮ್ಮ ಕಡೆಗೆ ಹಾರುವಂತೆ ಬಲವಂತಿಸುವುದು ಅವನ ಯೋಜನೆಯಾಗಿತ್ತು! ಒಬ್ಬ ಕಾಮಿಕೇಝ್ ವಿಮಾನ ಚಾಲಕ (ಆತ್ಮಹತ್ಯಾ ದಾಳಿ ಮಾಡುವ ವಿಮಾನ ಚಾಲಕ)ನಂತೆ ಅವನು ಕೆಳಮಟ್ಟದಲ್ಲಿ ನೇರವಾಗಿ ಹಕ್ಕಿಗೂಡುಗಳ ತಾಣವನ್ನು ಗುರಿಯಾಗಿಸಿಕೊಂಡು ಹಾರಾಟ ನಡೆಸಿದ. ನಮಗೆ ಆಗ ಅರ್ಥವಾಯಿತು, ಕೆಲವು ಸಲ ನಮ್ಮ ಅತ್ಯುತ್ತಮ ಯೋಜನೆಗಳೂ ಸಹ ನಾವು ಬಯಸಿದಂತೆ ನಡೆಯುವುದಿಲ್ಲ ಎಂದು. ನಮ್ಮ ಹತ್ತಿರ ಬಂದಿದ್ದು ಒಂದು ರೀತಿಯ ಕೊಕ್ಕರೆಗಳು ಅಷ್ಟೇ. ಅವು ಎಷ್ಟು ತೆಳ್ಳಗೆ, ವಿಕಾರವಾಗಿದ್ದವು ಅಂದರೆ ಅವುಗಳಿಗೆ ಗುಂಡು ಹೊಡೆಯುವುದರಿಂದ ಏನೂ ಪ್ರಯೋಜನವಿರಲಿಲ್ಲ! ನಾವು ನಮ್ಮ ಕೈಯಾಡಿಸಿ ಈ ಹಕ್ಕಿಗಳಿಂದ ಏನೂ ಪ್ರಯೋಜನವಿಲ್ಲ ಎಂದು ಅವನಿಗೆ ಸೂಚನೆ ನೀಡಲು ಪ್ರಯತ್ನಿಸಿದೆವು, ಆದರೆ, ಸಂಜ್ಞೆಯ ಭಾಷೆಯಲ್ಲಿ ಹೆಬ್ಬಾತಿಗೂ ಸಣಕಲ ಕೊಕ್ಕರೆಗೂ ಏನಾದರೂ ವ್ಯತ್ಯಾಸವಿತ್ತು ಎಂದು ನನಗನ್ನಿಸಲಿಲ್ಲ. ಪಾಪ ಮಿಲಿಕನ್ಸ್! ಅವನಿಗೆ ನಾವಿದ್ದ ಕೆರೆಯ ಬದಿಯಿಂದ ಬಂದೂಕಿನ ಶಬ್ದ ಕೇಳಿಸದೆ ಇದ್ದದ್ದು ಗೊಂದಲ ಹುಟ್ಟಿಸಿರಬೇಕು. ಅವನು ಇನ್ನಷ್ಟು ಕೆಳಗಡೆ ಹಾರುತ್ತಾ ತನ್ನ ತಂತ್ರೋಪಾಯವನ್ನು ಪುನರಾವರ್ತಿಸಿದ. ಆದರೂ ಅವನಿಗೆ ಮತ್ತದೇ ಅಹಿಂಸಾತ್ಮಕ ಪ್ರತಿಕ್ರಿಯೆಯೇ ಸಿಕ್ಕಿತು. ಬೇಸರ ಹುಟ್ಟಿ ಅವನು ತನ್ನ ವೈಮಾನಿಕ ನೆಲೆಗೆ ವಾಪಸ್ ಹಾರಿದ. ಖಂಡಿತ ನಮಗೆ ಅವನು ಶಾಪ ಹಾಕುತ್ತಿದ್ದಿರಬೇಕು. ಮಾರನೆಯ ದಿನ ನಮ್ಮ ಮೇಲೆ ಅದರಲ್ಲೂ ನನ್ನ ಮೇಲೆ ಅವನಿಗೆ ಬಂದಿದ್ದ ಸಿಟ್ಟು ವ್ಯಕ್ತವಾಯಿತು. ತಾನು ತಲೆದಂಡ ಕೊಡುವಂತಹ ಅಪಾಯವನ್ನು ಮೈ ಮೇಲೆಳೆದು ಕೊಂಡಿದ್ದರೂ ನಾವು ಅವನನ್ನು ಒಂದು ತಮಾಷೆ ಎಂದು ನೋಡಿದೆವೆಂದು ನಮ್ಮನ್ನು ಬಯ್ದ. ಅವನ ಉಜ್ವಲ ವಿಚಾರವು ಅಂದುಕೊಂಡಂತಹ ಫಲಿತಾಂಶವನ್ನು ಕೊಡದೆ ಹೋದದ್ದು ಅವನಿಗೆ ಎಲ್ಲಕ್ಕಿಂತ ಹೆಚ್ಚು ಬೇಸರವುಂಟು ಮಾಡಿತು ಎಂದು ನನಗನ್ನಿಸುತ್ತೆ.

ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಹೋಗುವುದು ನಮಗೆ ಇಷ್ಟವಾದ ಕಾಲಹರಣದ ಚಟುವಟಿಕೆಯಾಗಿತ್ತು. ನಾವಿದನ್ನು ಸಾಮಾನ್ಯವಾಗಿ ಮಂಡ್ಯ ಜಿಲ್ಲೆಯಲ್ಲಿ ಮಾಡುತ್ತಿದ್ದೆವು, ಏಕೆಂದರೆ ಅಲ್ಲಿ ಡಝನುಗಟ್ಟಲೆ ಕೆರೆ, ಹೊಂಡಗಳಿದ್ದವು. 1950ರ ವರ್ಷಗಳ ಮಧ್ಯಭಾಗ ಮತ್ತು ಕೊನೆಯ ಭಾಗಗಳಲ್ಲಿ ಈ ಸ್ಥಳಗಳಲ್ಲಿನ ಹಕ್ಕಿಗಳ ವೈವಿಧ್ಯವು ನಂಬಲಸಾಧ್ಯವಾಗಿತ್ತು. ಸ್ಪಾಟ್‌ಬಿಲ್ಸ್ (ಚುಕ್ಕೆಯುಳ್ಳ ಕಂದು ಬಾತುಕೋಳಿ), ಮಲ್ಲಾರ್ಡ್ಸ್ (ಹಸುರು ಕತ್ತುಳ್ಳ ಒಂದು ರೀತಿಯ ಬಾತುಕೋಳಿ), ಪಿನ್ ಟೈಲ್ಸ್ (ಚೂಪಾದ ತುಂಬ ಉದ್ದನೆಯ ಬಾಲವುಳ್ಳ ಹಕ್ಕಿ), ವೆಜನ್ಸ್ (ಗುಂಡುಗುಂಡಗೆ ಮುದ್ದಾಗಿರುವ ಒಂದು ರೀತಿಯ ಬಾತುಕೋಳಿ), ವಿಸ್‌ಲಿಂಗ್ ಟೀಲ್ಸ್ (ಸಿಳ್ಳು ಹಾಕುವ ಬಾತುಕೋಳಿ), ಮತ್ತು ಬ್ರಾಹ್ಮಿನಿ ಡಕ್ಸ್ (ಕಂದು ಬಣ್ಣದ ಕಪ್ಪು ಕೊಕ್ಕಿನ ಬಾತುಕೋಳಿ)– ಇವು ನಮ್ಮ ಬಂದೂಕಿಗೆ ಸಿಕ್ಕಿ ಕೆಳಗುರುಳುತ್ತಿದ್ದ ಕೆಲವು ಹಕ್ಕಿಗಳು. ಕೆರೆಗಳು ಮಾಯವಾಗುತ್ತಿದ್ದಂತೆ ಇವೆಲ್ಲವೂ ಈಗ ಮಾಯವಾಗಿವೆ. ನಾವು ಬೇರೆಬೇರೆ ಸ್ಥಾನಬಿಂದುಗಳಲ್ಲಿ ಸಿದ್ಧವಾಗಿ ನಿಲ್ಲುತ್ತಿದ್ದೆವು. ಯಾರಾದರೊಬ್ಬರು ಮೊದಲ ಹೊಡೆತ ಹೊಡೆಯುತ್ತಿದ್ದರು, ಆಮೇಲೆ ಉಳಿದವರು. ಸುಮ್ಮನೆ ಕುರುಡಾಗಿ ಹೊಡೆಯುತ್ತಿರಲಿಲ್ಲ, ಪ್ರತಿಯೊಂದು ಹೊಡೆತವನ್ನೂ ಲೆಕ್ಕ ಹಾಕಿ, ಜಾಗ್ರತೆಯಿಂದ ಆದರೆ ವೇಗವಾಗಿ ಹೊಡೆಯಬೇಕಿತ್ತು, ಏಕೆಂದರೆ ಒಂದು ಕ್ಷಣದಲ್ಲಿ ಕೆರೆ ಖಾಲಿಯಾಗಿಬಿಡುತ್ತಿತ್ತು. ನಾವು ನಮ್ಮ ಬೇಟೆ ಗೆಲುವು ಕಾಣಿಕೆಗಳನ್ನು ಸಂಗ್ರಹಿಸಿಕೊಂಡು ಮುಂದಿನ ಕೆರೆಯ ಕಡೆ ಮುಖ ಮಾಡುತ್ತಿದ್ದೆವು. ಒಳ್ಳೆಯ ದಿನಗಳಲ್ಲಿ ನಾವು ಮೂವತ್ತು ಅಥವಾ ಅದಕ್ಕಿಂತ ಹೆಚ್ಚು ಪಕ್ಷಿಗಳನ್ನು ಕೊಂಡೊಯ್ಯುವಲ್ಲಿ ಸಮರ್ಥರಾಗುತ್ತಿದ್ದೆವು. ಯಾರು ಎಷ್ಟು ಹಕ್ಕಿಗಳನ್ನು ಹೊಡೆದರು ಎಂಬುದನ್ನು ಪರಿಗಣಿಸದೆ ಬೇಟೆಕೊಳ್ಳೆಯನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದೆವು. ಉದಾಹರಣೆಗೆ, ನೀವು ಹದಿನೈದು ಬಾತುಕೋಳಿ ಹೊಡೆದಿದ್ದರೂ, ಕೊನೆಯಲ್ಲಿ ನಿಮ್ಮ ಪಾಲಿಗೆ ಐದು ಬಾತುಕೋಳಿ ಮಾತ್ರ ಸಿಗಬಹುದು. ಇದು ನ್ಯಾಯಯುತವಾಗಿಲ್ಲದಿರಬಹುದು ಆದರೆ ಈ ಅಲಿಖಿತ ನಿಯಮ ನಮ್ಮಲ್ಲಿತ್ತು.

ನೀರಿಗಿಳಿದು ಹಕ್ಕಿಗಳನ್ನು ಹೊಡೆಯುವ ಋತುಮಾನ ಮುಗಿದ ನಂತರ ಬಟೇರ (ಕ್ವೈಲ್)ಗಳ ಕಾಲ ಬರುತ್ತಿತ್ತು. ಬಟೇರ ಬೇಟೆಯನ್ನು ಡಿಸೆಂಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ ಮಾಡುವುದು ಒಳ್ಳೆಯದು. ಈ ವಿಷಯದಲ್ಲಿ ಅತ್ಯುತ್ತಮ ಜಾಗಗಳೆಂದರೆ ಬೆಳೆ ಬೆಳೆದ ಹೊಲಗದ್ದೆಗಳು. ಈ ವಿಷಯದಲ್ಲಿ ನನ್ನ ಇಷ್ಟದ ಜಾಗವೆಂದರೆ ಮೈಸೂರು ಹೆದ್ದಾರಿಯ ಪಕ್ಕದಲ್ಲಿ ಉದ್ದಕ್ಕೆ ಹುಲ್ಲು ಬೆಳೆದಿದ್ದ ಕೆಲವು ತುಂಡುಭೂಮಿಗಳು. ಈ ದಿನಗಳಲ್ಲಿ ಯಾರಾದರೂ ಕಾಡಿಗೆ ಹೋದಾಗ ಬಟೇರಗಳನ್ನು ನೋಡುವುದು ಅಸಾಧ್ಯವೆಂದರೆ ತಪ್ಪಾಗಲಾರದು. ಆದರೆ 1950ರಲ್ಲಿ ಇಡೀ ವರ್ಷ ಕುರಿಮೇಕೆ ಮಾಂಸ ಮತ್ತು ದನದ ಮಾಂಸವನ್ನು ತಿಂದಿದ್ದ ಬೆಂಗಳೂರಿಗರು ಕಾಡು ಬಟೇರದ ಮಾಂಸವನ್ನು ತಿನ್ನಲು ಕಾತರದಿಂದ ಇದಿರು ನೋಡುತ್ತಿದ್ದರು. ಆಮೇಲಾಮೇಲೆ ಸ್ಥಳೀಯ ಬೇಡಿಕೆಯ ಪೂರೈಕೆಗೆ ಅಲ್ಲಲ್ಲೇ ಬಟೇರದ ಅಂಗಡಿಗಳನ್ನು ತೆರೆಯಲಾಯಿತು. ಹಕ್ಕಿಗಳನ್ನು ಬೇಟೆಯಾಡುತ್ತಾ ಕಾಲ ಕಳೆಯುವಂತಹ ಅನೇಕ ಸ್ಥಳಗಳನ್ನು ನಾನು ಅನ್ವೇಷಿಸಲು ಶುರುಮಾಡಿದೆ. ತಿಪ್ಪಗೊಂಡನಹಳ್ಳಿ, ಸಾವನದುರ್ಗ, ಮಂಚಿನಬೆಲೆಗಳಿಗೆ ನಾನು ಗೌಜಿಗನ ಹಕ್ಕಿ (ಪ್ಯಾಟ್ರಿಡ್ಜ್)ಗಳಿಗಾಗಿ ಪದೇ ಪದೇ ಹೋಗುತ್ತಿದ್ದೆ. ಇನ್ನು ಕಾಡುಕೋಳಿಗಳ ಮಾತು ಬಂದರೆ ನಾನು ಎರಡನೆ ಯೋಚನೆಯಿಲ್ಲದೆ ಯಾವಾಗಲೂ ಹೋಗುತ್ತಿದ್ದ ಸ್ಥಳ ಅಂದರೆ ಹುಲಿಯೂರು ದುರ್ಗ.

ಬೇಟೆಗೆ ಹಾಕಿಕೊಳ್ಳುವ ಬಟ್ಟೆಗಳ ಬಗ್ಗೆ ಬಹುತೇಕ ಎಲ್ಲ ಶಿಕಾರಿಗಳಂತೆ ನಾನು ಕೂಡ ಮೂಢ ನಂಬಿಕೆಗಳನ್ನು ಹೊಂದಿದವನೇ. ನನ್ನ ಹತ್ತಿರ ಕೆಲವು ಅದೃಷ್ಟದ ಪ್ಯಾಂಟು ಮತ್ತು ಶರಟುಗಳು ಸಹ ಇದ್ದವು. ಸಿನಿಮಾಗಳಲ್ಲಿ ತೋರಿಸುವಂತೆ ನಾನು ಯಾವತ್ತೂ ತಿಳಿ ಖಾಕಿ ಬಣ್ಣದ ಬಟ್ಟೆಗಳನ್ನಾಗಲೀ, ಬೆಂಡಿನಿಂದ(ಪಿತ್) ಮಾಡಿದ ತಲೆಕಾಪನ್ನಾಗಲೀ ಧರಿಸಿದವನಲ್ಲ. ನಾನು ಬೂದು ಬಣ್ಣ, ಹಸುರು, ನೀಲಿ ಬಟ್ಟೆಗಳನ್ನು ಅದರಲ್ಲೂ ಅವುಗಳಲ್ಲಿ ಹಳೆಯದಾಗಿರುವವನ್ನು ಹಾಕಿಕೊಳ್ಳುತ್ತಿದ್ದೆ. ಹಾಕಿ ಹಾಕಿ ಮಾಸಿದಂಥವು ಆದರೆ ನನ್ನ ತೋಳುಗಳನ್ನು ಮತ್ತು ಕಾಲುಗಳನ್ನು ಮುಚ್ಚುವ ಹಾಗೂ,  ಕಚ್ಚುವ ಕೀಟಗಳು ಮತ್ತು ಮುಳ್ಳುಗಳಿಂದ ನನ್ನನ್ನು ರಕ್ಷಿಸುವ ಬಟ್ಟೆಗಳನ್ನು ತೊಟ್ಟುಕೊಳ್ಳುತ್ತಿದ್ದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ವೈಟ್- ಎ-ಬಿಟ್ (ಮೈಸೂರು ಥಾರ್ನ್, ಬೆಕ್ಕಿನ ಪಂಜ ಎಂದೆಲ್ಲ ಕರೆಯುತ್ತಾರೆ) ಮುಳ್ಳುಗಳು ಬಹಳ ಮೋಸದವು. ಗೊತ್ತಿಲ್ಲದೆ ಇವುಗಳ ನಡುವೆ `ಆಗುತ್ತೆ ಬಿಡು, ಹೋಗ್ಬಹುದು’ ಎಂದು ಸಾಗಲು ಪ್ರಯತ್ನಿಸುವ ಅನನುಭವಿಗಳನ್ನು ಚುಚ್ಚಿ ಸಿಗಿದು ಹಾಕುವಂತಹ ಮುಳ್ಳಿದು. ಈ ಮುಳ್ಳಿನ ಉದ್ದ ಒಂದು ಅಂಗುಲದ ಐದನೇ ಒಂದು ಭಾಗ ಅಷ್ಟೆ, ಆದರೆ ತೀರಾ ಗಟ್ಟಿಯಾಗಿರುವ ಮುಳ್ಳಿದು, ತುಂಡಾಗುವುದೇ ಇಲ್ಲ. ಇದರಿಂದ ಪಾರಾಗುವ ಒಂದೇ ದಾರಿ ಅಂದರೆ ತುಂಬ ಅಂದರೆ ತುಂಬಾ ನಿಧಾನವಾಗಿ ಹಿಂದಕ್ಕೆ ಹೋಗುತ್ತಾ ಬಿಡಿಸಿಕೊಳ್ಳಲು ಪ್ರಯತ್ನಿಸುವುದು. ನಾನು ಆಚರಿಸುತ್ತಿದ್ದ ಇನ್ನೊಂದು ಮೂಢನಂಬಿಕೆ ಎಂದರೆ ಶಿಕಾರಿಗೆ ಹೋಗುವಾಗ ಕ್ಯಾಮರಾಗಳನ್ನು ತೆಗೆದುಕೊಂಡು ಹೋಗದಿರುವುದು. ಏಕೆಂದರೆ, ನಾನು ಕೆಲವು ಸಂದರ್ಭಗಳಲ್ಲಿ ಕ್ಯಾಮರಾ ತೆಗೆದುಕೊಂಡು ಹೋದಾಗ ನನಗೆ ಒಂದೇ ಒಂದು ಬೇಟೆ ಪ್ರಾಣಿ ಕೂಡ ಕಾಣಿಸಿಲ್ಲ. ಮೊದಲಿಂದಲೂ ನಾನು ಒಂದೋ ಡೇರೆಯಲ್ಲೇ ಕ್ಯಾಮೆರಾವನ್ನು ಬಿಟ್ಟು ಹೋಗುತ್ತಿದ್ದೆ, ಅಥವಾ ನನ್ನ ಸ್ನೇಹಿತರಿಗೆ ಕ್ಯಾಮೆರಾವನ್ನು ತಮ್ಮೊಂದಿಗೆ ತರುವುದಕ್ಕೆ ಹೇಳುತ್ತಿದ್ದೆ. ಆದರೆ ನಾನು ಮಾತ್ರ ಯಾವತ್ತೂ ಕಾಡಿಗೆ ಆ ವಸ್ತುವನ್ನು ತೆಗೆದುಕೊಂಡು ಹೋಗುತ್ತಿರಲಿಲ್ಲ.

ನಗರಗಳಲ್ಲಿನ ಬಹುತೇಕ ಜನ ತಿಳಿದುಕೊಂಡಿರುವಂತೆ ಭಾರತದ ಕಾಡುಗಳು ನಿಜವಾಗಿ ಅಷ್ಟೊಂದೇನೂ ಅಪಾಯಕರವಲ್ಲ. ನನಗನ್ನಿಸುತ್ತದೆ, ಅನೇಕ ಗ್ರಹಿಕೆಗಳು ಆರಾಮ ಕುರ್ಚಿಯ ಪ್ರವಾಸಿಗರ ಕಲ್ಪನೆಯನ್ನು ಆಧರಿಸಿದಂಥವು. ಹಾಗೂ ಇನ್ನುಳಿದವು ಕಥೆ ಹೇಳುವವನು ತಾನು ದಿಗ್ವಿಜಯೀ ನಾಯಕ ಅನ್ನಿಸಿಕೊಳ್ಳಲು ಸುಳ್ಳು ಸುಳ್ಳು ವರ್ಣನೆ, ಅಲಂಕಾರಗಳನ್ನು ತುಂಬಿದ ಉತ್ಪ್ರೇಕ್ಷಿತ ಕಥೆಗಳು.

ಕೊನೆಯ ಬಿಳಿ ಬೇಟೆಗಾರ (ವಸಾಹತು ಶಿಕಾರಿಯೊಬ್ಬನ ನೆನಪುಗಳು)

ಇಂಗ್ಲಿಷ್‌ ಮೂಲ : ‘ದ ಲಾಸ್ಟ್ ವೈಟ್‌ ಹಂಟರ್’ ,ಡೊನಾಲ್ಡ್ ಆಂಡರ್ಸನ್ (ಕೆನ್ನೆತ್ ಆಂಡರ್ಸನ್ ಮಗ)

ಇಂಗ್ಲಿಷ್ ನಿರೂಪಣೆ: ಜೋಷುವಾ ಮ್ಯಾಥ್ಯೂ

ಕನ್ನಡಕ್ಕೆ: ಎಲ್ ಜಿ ಮೀರಾ

ಪ್ರಕಟನೆ: ಆಕೃತಿ ಪುಸ್ತಕ, ರಾಜಾಜಿನಗರ

ಬೆಲೆ: 395/- ಪುಟಗಳು: 384

Related Articles

ಇತ್ತೀಚಿನ ಸುದ್ದಿಗಳು