Monday, August 25, 2025

ಸತ್ಯ | ನ್ಯಾಯ |ಧರ್ಮ

ಶಿವಾಜಿ ಪ್ರತಿಮೆ ಕುಸಿತ ; “ಭ್ರಷ್ಟಾಚಾರದ ಪರಿಣಾಮ” ಎಂದ ಶಿವಸೇನೆ ಮುಖಂಡ ಸಂಜಯ್ ರಾವುತ್

ಮಹಾರಾಷ್ಟ್ರದ ಸಿಂಧುದುರ್ಗದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣದ ವೇಳೆ ನಡೆದ ಭ್ರಷ್ಟಾಚಾರದಿಂದಲೇ ಅದು ಕುಸಿದಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವುತ್ ಗುರುವಾರ ಆರೋಪಿಸಿದ್ದಾರೆ.

ಗುತ್ತಿಗೆದಾರರಿಂದ ಕಮಿಷನ್ ಪಡೆದವರು ಯಾರು ಎಂಬ ಬಗ್ಗೆ ಹೆಸರು ಎತ್ತದೇ ಪ್ರಸ್ತಾಪಿಸಿದ ಸಂಜಯ್ ರಾವುತ್ ಶಿವಾಜಿ ಪ್ರತಿಮೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

“ಪ್ರತಿಮೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ, ಇದು ಅತ್ಯಂತ ಗಂಭೀರ ವಿಚಾರ. ಭ್ರಷ್ಟಾಚಾರದ ಪರಿಣಾಮವಾಗಿಯೇ ಪ್ರತಿಮೆ ಕುಸಿದಿದೆ. ಯಾರು ಎಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ ಎಂಬುದು ತಿಳಿಯಬೇಕು. ಈ ನಡುವೆ ಅಜಿತ್ ಪವಾರ್ ಅವರು ಆಂದೋಲನ ಮಾಡುವುದಾಗಿ ಹೇಳಿದ್ದಾರೆ … ಅದರಿಂದ ಏನು ಸಾಧಿಸಬಹುದು? ಅವರು ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,’’ ಎಂದು ಸಂಜಯ್ ರಾವುತ್ ಆಗ್ರಹಿಸಿದ್ದಾರೆ.

ಈ ಪ್ರತಿಮೆಯನ್ನು ಭಾರತೀಯ ನೌಕಾಪಡೆಯ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಗಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ವಾರದ ಆರಂಭದಲ್ಲಿ ಹೇಳಿದ್ದಾರೆ. ಪ್ರತಿಮೆಯ ನಿರ್ಮಾಣದ ಮೇಲ್ವಿಚಾರಣೆ ಮಾಡುವವರು ಹವಾಮಾನ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.

ಥಾಣೆ ಮೂಲದ ಕಂಪನಿಯೊಂದು ಪ್ರತಿಮೆಗೆ ಸಂಬಂಧಿಸಿದ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ. 35 ಅಡಿಯ ಪ್ರತಿಮೆಯನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page