Monday, June 17, 2024

ಸತ್ಯ | ನ್ಯಾಯ |ಧರ್ಮ

ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹಲ್ಲೆ ; ಕೋಮು ಸಂಘರ್ಷದ ಬಣ್ಣ!

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೋಮು ಸಂಬಂಧಿತ ಗಲಭೆಗಳು ಹೆಚ್ಚಾಗಿವೆ. ಸದ್ಯ ಶಿವಮೊಗ್ಗ ನಗರದಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ಮತ್ತೆ ಗಲಭೆ, ಘರ್ಷಣೆಯ ಮುನ್ಸೂಚನೆ ನೀಡುತ್ತಿದೆ.

ಶಿವಮೊಗ್ಗ ನಗರದ ಭರಮಪ್ಪ ನಗರದ ನಿವಾಸಿ ಪ್ರಕಾಶ್ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿದ ಪರಿಣಾಮ ಪ್ರಕಾಶ್ ರನ್ನು ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಪ್ರಕಾಶ್ ಬಸ್ ಸ್ಟಾಂಡ್ ನಿಂದ ಸ್ನೇಹಿತರೊಂದಿಗೆ ಮನೆಗೆ ವಾಪಸ್ಸಾಗಿದ್ದಾರೆ. ಮನೆಯ ಬಳಿ ಸ್ನೇಹಿತರು ಬಿಟ್ಟು ಹೊರಟ ತಕ್ಷಣವೇ ಬೈಕಿನಲ್ಲಿ ಬಂದ ಮೂರು ಮಂದಿ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

ಇದೇ ವೇಳೆ ಕೆಳಕ್ಕೆ ಬಿದ್ದ ಪ್ರಕಾಶ್ ರನ್ನು ದುಷ್ಕರ್ಮಿಗಳು ತುಳಿದಿದ್ದಾರೆ. ಅವರಿಂದ ತಪ್ಪಿಸಿಕೊಂಡ ಪ್ರಕಾಶ್ ಮನೆಯ ಕಡೆಗೆ ಓಡಿ ಹೋಗಿದ್ದಾರೆ. ಪ್ರಕಾಶ್ ಮನೆಯವರು ಅವರ ಕೂಗಾಟ ಕೇಳಿ ಹೊರ ಬಂದ ತಕ್ಷಣ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಹಿಂದೂಪರ ಸಂಘಟನೆಗಳು ನಡೆಸಿದ್ದ ಪಥ ಸಂಚಲನ ವೀಕ್ಷಿಸಲು ಹೋಗಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಈಗ ಬಿಜೆಪಿ ಮತ್ತು ಕೆಲವು ಹಿಂದೂಪರ ಸಂಘಟನೆಗಳು ಇದಕ್ಕೆ ಕೋಮು ಸಂಘರ್ಷದ ಬಣ್ಣ ಬಳಿಯಲು ಮುಂದಾಗಿವೆ. ಆದರೆ ಸ್ವತಃ ಪ್ರಕಾಶ್ ತಾನು ಯಾವ ಸಂಘಟನೆಗೂ ಸೇರಿದವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಶಿವಮೊಗ್ಗ ನಗರ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕೂಡಾ ಇದಕ್ಕೆ ಕೋಮು ಧ್ವೇಷದ ಕಾರಣ ಎಂಬಂತೆ ಹೇಳಿಕೆ ನೀಡಿದ್ದಾರೆ. ಜೊತೆಗೆ “ಪಿಎಫ್ಐ ಬ್ಯಾನ್ ಆದರೂ ಮುಸಲ್ಮಾನ ಗೂಂಡಾಗಳಿಗೆ ಬುದ್ಧಿ ಬಂದಿಲ್ಲ” ಎನ್ನುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದೊಂದು ಕೋಮು ಪ್ರಚೋದನಕಾರಿ ಹೇಳಿಕೆ ಆಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರು ಜವಾಬ್ದಾರಿ ಮರೆತು ವರ್ತಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಸುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ಜೊತೆಗೆ ಪ್ರಕಾಶ್ ಮನೆಗೆ ಪೊಲೀಸ್ ಬಂದೋಬಸ್ತ್ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು