ಕೊಪ್ಪಳ: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಸುಳ್ಳು ಆರೋಪಗಳು ಮತ್ತು ಏಕವಚನದ ಮಾತುಗಳ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅತ್ಯಂತ ಕಟು ಶಬ್ದಗಳಲ್ಲಿ ತಿರುಗೇಟು ನೀಡಿದ್ದು, ನೇರ ರಾಜೀನಾಮೆ ಸವಾಲು ಎಸೆದಿದ್ದಾರೆ. “ನಿನಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ; ನೀನು ರಾಜೀನಾಮೆ ಕೊಟ್ಟ 24 ಗಂಟೆಯೊಳಗೆ ನಾನೂ ರಾಜೀನಾಮೆ ನೀಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧವೇ ಉಪಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು. ಜನಾದೇಶ ಲೂಟಿಕೋರನಿಗೋ ಅಥವಾ ಜನಸೇವಕನಿಗೋ ಎಂಬುದು ಅಲ್ಲೇ ತೀರ್ಮಾನವಾಗಲಿ” ಎಂದು ತಂಗಡಗಿ ಘರ್ಜಿಸಿದ್ದಾರೆ.
ರೆಡ್ಡಿಯ ನಾಲಿಗೆ ಹರಿಬಿಡುವ ಚಾಳಿಯನ್ನು ಹಿಗ್ಗಾಮುಗ್ಗಾ ಝಾಡಿಸಿದ ಸಚಿವರು, “ಲೇ ಜನಾರ್ದನ ರೆಡ್ಡಿ, ಲೇ ಚಂಚಲಗೂಡ ಕೈದಿ ನಂ. 697, ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ ಎಂದೆಲ್ಲಾ ನಾನೂ ಕರೆಯಬಲ್ಲೆ. ಆದರೆ ನನ್ನ ಹಿರಿಯರು ಕಲಿಸಿದ ಸಂಸ್ಕಾರದಿಂದಾಗಿ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ. ಗಣಿ ಲೂಟಿಯ ಅಕ್ರಮ ಸಂಪತ್ತು ತಲೆಗೇರಿ ಈ ರೀತಿ ಬೊಗಳುವ ವೀರನಾಗಿದ್ದೀಯಾ? ಗಣಿ ಲೂಟಿ ಕಳ್ಳ ಎಂದಕೂಡಲೇ ಉರಿದು ಬೀಳಲು ನೀನೇನು ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದೆಯಾ? ಇಲ್ಲವೇ ‘ಫೀಲ್ ದಿ ಜೈಲ್’ ಪ್ಯಾಕೇಜ್ ಮೇಲೆ ಹೋಗಿದ್ದೆಯಾ? ಕೃಷ್ಣ ಜನ್ಮಾಷ್ಟಮಿಯ ದಿನ ಭಜನೆ ಮಾಡಿದ್ದಕ್ಕೆ ನಿನ್ನನ್ನು ಕೃಷ್ಣ ಜನ್ಮಸ್ಥಾನಕ್ಕೆ ಕಳಿಸಿದರಾ? ಜೈಲಿನಿಂದ ಹೊರಬರಲೂ ಕಳ್ಳಾಟ ನಡೆಸಿದ ಭೂಪ ನೀನು” ಎಂದು ಚಾಟಿ ಬೀಸಿದ್ದಾರೆ.
ತಮ್ಮ ರಾಜಕೀಯ ಇತಿಹಾಸವನ್ನು ನೆನಪಿಸಿದ ತಂಗಡಗಿ, “ನಾನು ಮೊದಲ ಬಾರಿಗೆ ಪಕ್ಷೇತರನಾಗಿ ಗೆದ್ದಾಗ ನನ್ನ ಮನೆ ಮುಂದೆ ಕಾದು ಕುಳಿತು, ಕಾಲಿಗೆ ಚಪ್ಪಲಿ ಹಾಕಿಕೊಳ್ಳಲೂ ಬಿಡದೆ ‘ತಮ್ಮುಡು ತಮ್ಮುಡು’ ಎಂದು ಗೋಗರೆದು ಕರೆದೊಯ್ದವನು ನೀನು. ನಮ್ಮಂತಹ ಪಕ್ಷೇತರರ ಬೆಂಬಲದ ಭಿಕ್ಷೆಯಿಂದಲೇ ಯಡಿಯೂರಪ್ಪ ಅವರನ್ನು ಬ್ಲಾಕ್‌ಮೇಲ್ ಮಾಡಿ ನೀನು ಮತ್ತು ನಿನ್ನ ಅಣ್ಣ ಇಬ್ಬರೂ ಸಚಿವರಾಗಿದ್ದು. ಶಾಸಕನಾಗಲೂ ಯೋಗ್ಯತೆ ಇಲ್ಲದ ನಿನ್ನ ಕುಟುಂಬಕ್ಕೆ ಎರಡು ಮಂತ್ರಿ ಸ್ಥಾನ ಸಿಕ್ಕಿದ್ದು ನಾನು ಮತ್ತು ನನ್ನ ಕನಕಗಿರಿ ಕ್ಷೇತ್ರದ ಜನತೆ ಹಾಕಿದ ಭಿಕ್ಷೆ. ಅಡ್ಡಾದಿಡ್ಡಿ ದಾರಿಯಲ್ಲಿ ಹಣ ಸಂಪಾದಿಸಿದ ನಿನ್ನಂತಹ ಅಡ್ನಾಡಿ ಬಳಿ ಹಣ ಪಡೆಯುವ ದುರ್ದೈವ ನನಗಿಲ್ಲ. ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಸುಳ್ಳು ಹಬ್ಬಿಸುತ್ತಿದ್ದೀಯಾ? ನಾನು ಬಾಯಿಬಿಟ್ಟರೆ ನಿನ್ನ ಕತ್ತಲೆ ಲೋಕದ ಕರಾಳ ಮುಖ ಬಯಲಾಗುತ್ತದೆ, ಹುಷಾರ್” ಎಂದು ಎಚ್ಚರಿಸಿದ್ದಾರೆ.
ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ರೆಡ್ಡಿಯ ಪಕ್ಷವಿರೋಧಿ ನಡವಳಿಕೆಯನ್ನು ಎತ್ತಿಹಿಡಿದ ಸಚಿವರು, “ನಿನಗೆ ತಾಕತ್ತಿದ್ದರೆ ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ನೀನು ನನಗೆ ಎಷ್ಟು ಬಾರಿ ಕರೆ ಮಾಡಿದ್ದೆ ಮತ್ತು ಯಾರಿಗೆ ವೋಟ್ ಹಾಕಿದೆ ಎಂಬ ಕಾಲ್ ಲಿಸ್ಟ್ ಬಹಿರಂಗಪಡಿಸು. ಆಗ ನಿನ್ನ ಯೋಗ್ಯತೆ ಮತ್ತು ಬೂಟಾಟಿಕೆ ಇಡೀ ರಾಜ್ಯದ ಜನತೆಗೆ ಹಾಗೂ ನಿನ್ನ ಬಿಜೆಪಿ ಪಕ್ಷದವರಿಗೆ ಗೊತ್ತಾಗುತ್ತದೆ. ಸುಂಕಲಮ್ಮ ದೇವಸ್ಥಾನ ಒಡೆದ ಅವಿವೇಕಿ ನೀನು, ಗಂಗಾವತಿಯಲ್ಲಿ ಮನೆ, ಕ್ರಿಕೆಟ್ ಸ್ಟೇಡಿಯಂ ಕಟ್ಟಿಸುತ್ತೇನೆ ಎಂದು ಕೊಟ್ಟ ಭರವಸೆಗಳನ್ನು ಈಡೇರಿಸದೆ ಕೇವಲ ಸುಳ್ಳು ಹೇಳಿಕೊಂಡೇ ಬದುಕುತ್ತಿದ್ದೀಯಾ. ಕಿಂಚಿತ್ ಮಾನ-ಮರ್ಯಾದೆ ಇದ್ದರೆ ನನ್ನ ಸವಾಲು ಸ್ವೀಕರಿಸಿ ಗಂಗಾವತಿ ಅಖಾಡಕ್ಕೆ ಬಾ” ಎಂದು ಸವಾಲು ಹಾಕಿದ್ದಾರೆ.
