ಹೊಸ ದೆಹಲಿ: ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿಗೆ (BJP) ದೊಡ್ಡ ಆಘಾತ ಎದುರಾಗಿದೆ.
2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಸೆಮಿಫೈನಲ್ ಎಂದು ಪರಿಗಣಿಸಲಾಗಿದ್ದ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (BTC) ಚುನಾವಣೆಯಲ್ಲಿ ಕಮಲ ಪಕ್ಷಕ್ಕೆ ಭಾರಿ ಸೋಲು ಉಂಟಾಗಿದೆ. 40 ಸ್ಥಾನಗಳ ಪೈಕಿ, ಆ ಪಕ್ಷವು ಕೇವಲ ಐದು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ದಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) 28 ಸ್ಥಾನಗಳಲ್ಲಿ ಗೆದ್ದು ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿದೆ.
ಇದುವರೆಗೆ ಬಿಜೆಪಿ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಒಟ್ಟಾಗಿ ಕೌನ್ಸಿಲ್ ಆಡಳಿತವನ್ನು ನಡೆಸುತ್ತಿದ್ದವು. ಈ ಬಾರಿಯ ಚುನಾವಣೆಯಲ್ಲಿ ಒಂಟಿಯಾಗಿ ಸ್ಪರ್ಧಿಸಿದ್ದ ಬಿಜೆಪಿ, ಅತಿದೊಡ್ಡ ಪಕ್ಷವಾಗಿ ಅಥವಾ ಕಿಂಗ್‌ಮೇಕರ್ ಆಗಿ ಹೊರಹೊಮ್ಮಲು ಬಯಸಿತ್ತು. ಆದರೆ, ಜನರ ತೀರ್ಪು ಆ ಪಕ್ಷದ ಆಕಾಂಕ್ಷೆಗಳಿಗೆ ದೊಡ್ಡ ಹೊಡೆತ ನೀಡಿದೆ.
2020 ರಲ್ಲಿ ನಡೆದ ಬಿಟಿಸಿ ಚುನಾವಣೆಯಲ್ಲಿ ಬಿಪಿಎಫ್ 17 ಸ್ಥಾನಗಳನ್ನು, ಯುಪಿಪಿಎಲ್ 12 ಸ್ಥಾನಗಳನ್ನು ಮತ್ತು ಬಿಜೆಪಿ 9 ಸ್ಥಾನಗಳನ್ನು ಗೆದ್ದಿದ್ದವು. ಚುನಾವಣೆಯ ನಂತರ ಮೈತ್ರಿ ಮಾಡಿಕೊಂಡ ಯುಪಿಪಿಎಲ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಿದ್ದವು. ನಂತರ ಯುಪಿಪಿಎಲ್‌ನೊಂದಿಗಿನ ಮೈತ್ರಿಯನ್ನು ಕಡಿದುಕೊಂಡ ಬಿಜೆಪಿ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಮುಖ್ಯಮಂತ್ರಿ ಹಿಮಂತ ಬಿಸ್ವಶರ್ಮಾ ಅವರು ವ್ಯಾಪಕವಾಗಿ ಪ್ರಚಾರ ನಡೆಸಿದ್ದರೂ ಪಕ್ಷಕ್ಕೆ ಭಾರಿ ಸೋಲುಂಟಾಗಿರುವುದು ಆ ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ.
ಬಿಟಿಸಿ ಎಂಬುದು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಸ್ಥಾಪಿಸಲಾದ ಒಂದು ಸ್ವಾಯತ್ತ ಕೌನ್ಸಿಲ್ (Autonomous Council). ಇದು 2003 ರಲ್ಲಿ ರಚನೆಯಾಯಿತು. ಕೋಕ್ರಾಝಾರ್, ಚಿರಂಗ್, ಬಕ್ಸಾ, ಉದಲ್ಗುರಿ ಮತ್ತು ತಾಮೂಲ್‌ಪುರ್ ಜಿಲ್ಲೆಗಳು ಈ ಕೌನ್ಸಿಲ್‌ನ ವ್ಯಾಪ್ತಿಗೆ ಬರುತ್ತವೆ. ರಾಜ್ಯದಲ್ಲಿ ಒಟ್ಟು 126 ಅಸೆಂಬ್ಲಿ ಸ್ಥಾನಗಳಿದ್ದು, 16 ವಿಧಾನಸಭಾ ಕ್ಷೇತ್ರಗಳು ಬೋಡೋಲ್ಯಾಂಡ್ ಟೆರಿಟೋರಿಯಲ್ ರೀಜನ್ ವ್ಯಾಪ್ತಿಯಲ್ಲಿವೆ. ಇಲ್ಲಿ ಬೋಡೋ ಜನರ ಪ್ರಾಬಲ್ಯ ಅಧಿಕವಾಗಿದೆ.
ಕಾಂಗ್ರೆಸ್‌ಗೆ ಸೊನ್ನೆ
ಒಂದು ಕಾಲದಲ್ಲಿ ಅಸ್ಸಾಂನಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್‌ಗೂ ಈ ಚುನಾವಣೆಗಳು ದೊಡ್ಡ ಹಿನ್ನಡೆಯನ್ನುಂಟು ಮಾಡಿವೆ. 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕೈ ಪಕ್ಷವು ಕನಿಷ್ಠ ಒಂದು ಸ್ಥಾನದಲ್ಲಿಯೂ ಗೆಲುವು ಸಾಧಿಸಲು ವಿಫಲವಾಗಿದೆ. ಅಸ್ಸಾಂ ಪಕ್ಷದ ಮುಖ್ಯಸ್ಥರಾಗಿ ಗೌರವ್ ಗೊಗೋಯ್ ನೇಮಕಗೊಂಡ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ.
ಅಸ್ಸಾಂನಲ್ಲಿ ಅಧಿಕಾರದಲ್ಲಿದ್ದಾಗಲೂ ಕಾಂಗ್ರೆಸ್‌ಗೆ ಈ ಕೌನ್ಸಿಲ್‌ನಲ್ಲಿ ಹಿಡಿತವಿರಲಿಲ್ಲ. ಉದಾಹರಣೆಗೆ, 2015 ಮತ್ತು 2010 ರಲ್ಲಿ ನಡೆದ ಬಿಟಿಸಿ ಚುನಾವಣೆಗಳಲ್ಲಿ ಆ ಪಕ್ಷವು ಒಂದೇ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. 2020 ರಲ್ಲಿ ಮಾತ್ರ ಒಂದು ಸ್ಥಾನವನ್ನು ಗಳಿಸಿತ್ತು.