“ಲೆಕ್ಕ ಕೊಡಿ ಅಭಿಯಾನ”: ವಚನಾನಂದ ಶ್ರೀಗಳಿಗೆ ಶಾಕ್, ಪಂಚಮಸಾಲಿ ಪೀಠದಿಂದ ಉಚ್ಚಾಟನೆ!

ದಾವಣಗೆರೆ, ಏಪ್ರಿಲ್ 13: ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. “ಲೆಕ್ಕ ಕೊಡಿ” ಅಭಿಯಾನ ತಾರಕಕ್ಕೇರಿದ ಬೆನ್ನಲ್ಲೇ, ಮಠದ ಟ್ರಸ್ಟ್ ಮಂಡಳಿಯು ಸೋಮವಾರ ತುರ್ತು ಸಭೆ ಕರೆದು ವಚನಾನಂದ ಸ್ವಾಮೀಜಿಯವರನ್ನು ಪೀಠದಿಂದ ಉಚ್ಚಾಟಿಸಲು ಐತಿಹಾಸಿಕ ನಿರ್ಣಯ ಕೈಗೊಂಡಿದೆ.

ಟ್ರಸ್ಟಿಗಳ ಸಭೆಯಲ್ಲಿ ಮಹತ್ವದ ತೀರ್ಮಾನ
ಮಠದ ಒಟ್ಟು 15 ಟ್ರಸ್ಟಿಗಳ ಪೈಕಿ 13 ಮಂದಿ ಭಾಗವಹಿಸಿದ ಸಭೆಯಲ್ಲಿ ಸ್ವಾಮೀಜಿಯವರ ಉಚ್ಚಾಟನೆಗೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಯಿತು. ಟ್ರಸ್ಟಿ ಬಸವರಾಜ್ ದಿಂಡೂರು ಅವರು ಮಾಧ್ಯಮಗಳ ಮುಂದೆ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದರು.

ಟ್ರಸ್ಟಿ ಬಾವಿ ಬೆಟ್ಟಪ್ಪ ಅವರು “ಸ್ವಾಮೀಜಿಯವರಿಗೆ ಮಾರ್ಚ್ 24ರ ಒಳಗಾಗಿ ನಿರ್ಣಯ ತಿಳಿಸುವಂತೆ ಗಡುವು ನೀಡಲಾಗಿತ್ತು. ನೀವು ಶ್ವಾಸ ಪೀಠದಲ್ಲಿ ಉಳಿಯಬೇಕೋ ಅಥವಾ ಹರಿಹರ ಪಂಚಮಸಾಲಿ ಪೀಠದಲ್ಲಿ ಮುಂದುವರಿಯಬೇಕೋ ಎಂದು ಸ್ಪಷ್ಟಪಡಿಸಿ ಎಂದಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಉಚ್ಚಾಟನೆ ನಿರ್ಣಯ ಅನಿವಾರ್ಯವಾಯಿತು” ಎಂದು ಸ್ಪಷ್ಟಪಡಿಸಿದರು. ಸ್ವಾಮೀಜಿಯವರು ಗೌರವಯುತವಾಗಿ ಮಠ ತ್ಯಜಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.

ಆರೋಪದ ಹಿನ್ನೆಲೆ ಏನು?
2008ರಿಂದ ಕರ್ನಾಟಕ ಸರ್ಕಾರ ನೀಡಿದ ಅನುದಾನ ಹಾಗೂ ಭಕ್ತರ ದೇಣಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಮಠದ ವಿರುದ್ಧ ಕೇಳಿಬಂದಿದೆ. ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ ಮತ್ತು ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವು ಪ್ರಮುಖರ ವಿರುದ್ಧ ಆರ್ಥಿಕ ಅಕ್ರಮದ ಆರೋಪ ಹೊರಿಸಲಾಗಿದೆ.

ಕೆಲ ದಿನಗಳ ಹಿಂದೆ ನಡೆದ ಟ್ರಸ್ಟಿಗಳ ಸಭೆಯಲ್ಲಿ ಆಡಳಿತಾಧಿಕಾರಿ ರಾಜ್‌ಕುಮಾರ್ ಅವರ ಮೇಲೆ ಟ್ರಸ್ಟಿಗಳೇ ಹಲ್ಲೆ ನಡೆಸಿದ್ದರು. ಲೆಕ್ಕ ಕೇಳಿದ್ದಕ್ಕೆ ಹಲ್ಲೆ ಮಾಡಲಾಯಿತು ಎಂದು ರಾಜ್‌ಕುಮಾರ್ ಆರೋಪಿಸಿದ್ದರು. ಈ ಘಟನೆ ನಂತರ “ಲೆಕ್ಕ ಕೊಡಿ” ಅಭಿಯಾನ ಬಲವಾಗಿ ಆರಂಭಗೊಂಡಿತು.

ಮಠದ ಮುಂದೆ ಬೃಹತ್ ಪ್ರತಿಭಟನೆ, ನೂರಕ್ಕೂ ಹೆಚ್ಚು ಬಂಧನ
ಸೋಮವಾರ ಹರಿಹರ ಪಂಚಮಸಾಲಿ ಪೀಠದ ಮುಂದೆ ಸಾವಿರಾರು ಭಕ್ತರು ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಲಿಂಗಾಯತ ಗುರುಪೀಠದ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನಾಕಾರರು ಮುಗಿಬಿದ್ದ ಪರಿಣಾಮ ಮಠದ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಪರಿಸ್ಥಿತಿ ಹತೋಟಿಗೆ ತರಲು ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಮಠದ ಆವರಣ ಸುತ್ತಲೂ ಕಲಂ 163 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದರು. ಆದರೂ ಗೇಟ್ ಬಳಿ ಭಕ್ತರು ಪ್ರತಿಭಟನೆ ಮುಂದುವರಿಸಿದ್ದರಿಂದ ಪೊಲೀಸರು 100ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದರು.

Related Articles

ಇತ್ತೀಚಿನ ಸುದ್ದಿಗಳು