Thursday, June 13, 2024

ಸತ್ಯ | ನ್ಯಾಯ |ಧರ್ಮ

ಆಘಾತದ ನೆಲ

ಆಘಾತದ ನೆಲದೊಳು
ನೈತಿಕ ಚಿಂತನೆಯ ಕಣ್ಣೀರಿಗೆ
ಅತಂತ್ರದ ಗಲಭೆ
ಪಟಾಕಿಯ ಸಿಡಿಲಿನೊಳು
ತಲೆಯ ಕೆಡಿಸುತಿದೆ….

ಕವಚದ ಬೇಲಿಗೆ
ಹುಡುಕಾಡುತ್ತಿದೆ ಆಶ್ವಾಸನೆಯ
ವೇದಿಕೆ,ಬಣ್ಣ ಬಾವುಟದಿ
ಮೇಲೇರಿಸಿದೆ….

ಬಲಿಯಾಗುತ್ತಿವೆ
ಬುಡ್ಡಿ ದೀಪಗಳು..
ಕತ್ತಲೆಯ ಆವೇಗಕೆ
ರೋಷಗೊಂಡಿವೆ ದಳ್ಳುರಿಗಳು..

ಪುಗಸಟ್ಟೆಯ ನಾಲಿಗೆ
ರಾಜಕೀಯದ ಮಲಿನತೆಯೊಳು
ಬೆಸೆದು ಆಟವಾಡುತಿದೆ…

ಸ್ವತ್ತಿನ ಸಮಾಜದ
ಸಿದ್ಧಾಂತದ ಸಂವೇದನೆ
ಯಾವುದನ್ನೂ ಸ್ವೀಕರಿಸದೆ
ಹೊರಗಣ್ಣ ರೆಪ್ಪೆಯಲಿ
ಸ್ವಾಸ್ಥ್ಯ ಸಂಘರ್ಷದ
ಹೋರಾಟವ ಹಿಡಿಯಲು
ಸೂಚಿಸುತಿದೆ…

ಆದರೂ, ಭುಗಿಲೆಬ್ಬಿಸುತಿದೆಯಲ್ಲಾ
ಅಖಂಡತೆಯಿಲ್ಲದ ಬೇರುಗಳು..

ಬಯಲು ಆಲಯದಿ
ಸಿಕ್ಕಿ ಬೀಳುತ್ತಿದೆಯಲ್ಲಾ
ಕಾಡಿನೊಳು ಅಡಗಿದ

ನ್ಯಾಯದ ಬೆಂಕಿ

ಇದರ ಹೋರಾಟಕೆ
ಫಲವಿಲ್ಲದ ಪದಕ
ಕುತ್ತಿಗೆಯೊಳು ಅಲ್ಲಾಡುತಿದೆ….

ಕಸಿದುಕೊಂಡ ಹಕ್ಕಿಗೆ
ಹೆಣವಾಗಿವೆ ಆರಕ್ಷಕ ಕಂಬಿ…

ಯಾವುದನ್ನು ನಿರೀಕ್ಷಿಸೋಣ?
ಚರಿತ್ರೆಯ ಶಿಲುಬೆಯನೋ,
ಸಿದ್ಧಾಂತದ ಅವಗಣನೆಯನೋ?…

ಪರಚಾಡುತ್ತಿದೆ ಮನ:
ಅಹಿಂಸೆಯೊಳು ಹಿಂಸೆಯ
ಸ್ವೀಕರಿಸಲು.

ಕೊನೆಗೂ ಪ್ರಕೃತಿ ಬೇಡುತಿದೆ
ಧರ್ಮದ ಜಯಭೇರಿಯ ಭಾರಿಸಲು…

ಡಾ. ಕೃಷ್ಣವೇಣಿ ಆರ್‌ ಗೌಡ,

ಹೊಸಪೇಟೆ, ವಿಜಯನಗರ ಜಿಲ್ಲೆ.

Related Articles

ಇತ್ತೀಚಿನ ಸುದ್ದಿಗಳು